ADVERTISEMENT

ಹೊಸವರ್ಷದ ಸಂಭ್ರಮ; ದೇವಾಲಯದಿಂದಲೇ ಚಿತ್ರ ಹಂಚಿಕೊಂಡ ಸೂರ್ಯಕುಮಾರ್ ಯಾದವ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಜನವರಿ 2023, 7:35 IST
Last Updated 1 ಜನವರಿ 2023, 7:35 IST
ಸೂರ್ಯಕುಮಾರ್‌ ಯಾದವ್‌ (ಪಿಟಿಐ ಚಿತ್ರ)
ಸೂರ್ಯಕುಮಾರ್‌ ಯಾದವ್‌ (ಪಿಟಿಐ ಚಿತ್ರ)   

ಭಾರತ ಕ್ರಿಕೆಟ್‌ ತಂಡದ ಸ್ಫೋಟಕ ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ ಅವರು ಹೊಸವರ್ಷ 2023ರ ಮೊದಲ ದಿನದಂದು (ಭಾನುವಾರ) ಮುಂಬೈನಲ್ಲಿರುವ ಸಿದ್ಧಿವಿನಾಯಕ ದೇವಾಲಯಕ್ಕೆ ತೆರಳಿ ಆಶೀರ್ವಾದ ಪಡೆದಿದ್ದಾರೆ.

ಇದಕ್ಕೆ ಸಂಬಂಧಿಸಿದ ಚಿತ್ರಗಳನ್ನು ತಮ್ಮ ಇನ್‌ಸ್ಟಾಗ್ರಾಂ ಪುಟದಲ್ಲಿ ಸ್ಟೋರಿಯಾಗಿ ಹಂಚಿಕೊಂಡಿರುವ ಅವರು, ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಆಶೀರ್ವಾದ ಪಡೆದೆ ಎಂದು ಬರೆದುಕೊಂಡಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯ (ಐಸಿಸಿ) ಪುರುಷರ ಟಿ20 ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಏಕೈಕ ಭಾರತೀಯ ಎನಿಸಿದ್ದಾರೆ.

ADVERTISEMENT

ಭಾರತ ಕ್ರಿಕೆಟ್‌ ತಂಡವು ಬುಧವಾರದಿಂದ (ಜನವರಿ 3ರಿಂದ) ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಕಣಕ್ಕಿಳಿಯಲಿದೆ. ಆಲ್‌ರೌಂಡರ್ ಹಾರ್ದಿಕ್‌ ಪಾಂಡ್ಯ ಅವರು ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ.

ಮುಂದಿನ ವರ್ಷ (2024ರಲ್ಲಿ) ನಡೆಯುವ ಚುಟುಕು ಕ್ರಿಕೆಟ್‌ ವಿಶ್ವಕಪ್‌ಗೆ ಈಗಿನಿಂದಲೇ ತಮಡ ಕಟ್ಟುವ ಯೋಜನೆಯಲ್ಲಿರುವ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ರಾಷ್ಟ್ರೀಯ ಆಯ್ಕೆ ಸಮಿತಿಯು ಅನುಭವಿಗಳಾದ ರೋಹಿತ್ ಶರ್ಮ, ವಿರಾಟ್‌ ಕೊಹ್ಲಿ ಮತ್ತು ಕರ್ನಾಟಕದ ವಿಕೆಟ್‌ಕೀಪರ್ ಬ್ಯಾಟರ್‌ ಕೆ.ಎಲ್‌.ರಾಹುಲ್‌ ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ. ಹೀಗಾಗಿ ಸೂರ್ಯ, ಲಂಕಾ ವಿರುದ್ಧದ ಸರಣಿಗೆ ಭಾರತ ತಂಡದಲ್ಲಿರುವ ಪ್ರಮುಖ ಬ್ಯಾಟರ್‌ ಎನಿಸಿದ್ದಾರೆ.

2022ರಲ್ಲಿ ಚುಟುಕು ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ತೋರಿರುವ ಸೂರ್ಯ, 31 ಇನಿಂಗ್ಸ್‌ಗಳಲ್ಲಿ 187.43ರ ಸ್ಟ್ರೈಕ್‌ರೇಟ್‌ನಲ್ಲಿ 1,164 ರನ್‌ ಗಳಿಸಿದ್ದಾರೆ. ಮೈದಾನದ ಮೂಲೆ ಮೂಲೆಗೆ ಚೆಂಡನ್ನು ಬಾರಿಸುವ ಅವರು 'ಭಾರತದ ಮಿಸ್ಟರ್‌ 360' ಎಂದೇ ಖ್ಯಾತಿ ಗಳಿಸಿದ್ದಾರೆ. ಈ ವರ್ಷ ನೂರಕ್ಕಿಂತ (106) ಹೆಚ್ಚು ಬೌಂಡರಿ ಮತ್ತು ಅತಿಹೆಚ್ಚು (68) ಸಿಕ್ಸರ್‌ ಸಿಡಿಸಿದ ಬ್ಯಾಟರ್‌ ಎಂಬ ಶ್ರೇಯವೂ ಅವರದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.