ವಿರಾಟ್ ಕೊಹ್ಲಿ
ರಾಯಿಟರ್ಸ್ ಚಿತ್ರ
ಭಾರತ ಕ್ರಿಕೆಟ್ ತಂಡದ 'ರನ್ ಮಷಿನ್' ಖ್ಯಾತಿಯ ಬ್ಯಾಟರ್ ವಿರಾಟ್ ಕೊಹ್ಲಿ, ಪಂದ್ಯದಿಂದ ಪಂದ್ಯಕ್ಕೆ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಳ್ಳುತ್ತಾ ಸಾಗಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ–2025 ಟೂರ್ನಿಯ ಫೈನಲ್ ಪಂದ್ಯದಲ್ಲಿಯೂ ಅದನ್ನು ಮುಂದುವರಿಸಲು ಸಜ್ಜಾಗಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಗರಿಷ್ಠ ರನ್ ಗಳಿಸಿದ ಬ್ಯಾಟರ್ ಎನಿಸಿಕೊಳ್ಳುವ ಹಾಗೂ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಸಾಲಿನಲ್ಲಿ ಎರಡನೇ ಸ್ಥಾನಕ್ಕೇರುವ ಅವಕಾಶ ಕೊಹ್ಲಿಗೆ ಇದೆ.
ಗೇಲ್ ದಾಖಲೆ ಮುರಿಯಲು 46 ರನ್ ಬೇಕು
ಚಾಂಪಿಯನ್ಸ್ ಟ್ರೋಫಿ ಟೂರ್ನಿಗಳಲ್ಲಿ ಅತಿಹೆಚ್ಚು ಮೊತ್ತ ಕಲೆಹಾಕಿದ ಬ್ಯಾಟರ್ ಎಂಬ ದಾಖಲೆ ಇರುವುದು ವೆಸ್ಟ್ ಇಂಡೀಸ್‌ನ ದಿಗ್ಗಜ ಕ್ರಿಸ್ ಗೇಲ್ ಹೆಸರಲ್ಲಿ. ಅವರು 17 ಇನಿಂಗ್ಸ್‌ಗಳಲ್ಲಿ ಮೂರು ಶತಕ ಮತ್ತು ಒಂದು ಅರ್ಧಶತಕ ಸಹಿತ 791 ರನ್ ಗಳಿಸಿದ್ದಾರೆ.
ನಾಲ್ಕು ಆವೃತ್ತಿಗಳಲ್ಲಿ ಒಟ್ಟು 17 ಪಂದ್ಯ ಆಡಿರುವ ಕೊಹ್ಲಿ, 1 ಶತಕ ಮತ್ತು 6 ಅರ್ಧಶತಕ ಸಹಿತ 746 ಗಳಿಸಿದ್ದಾರೆ. ಹೀಗಾಗಿ, ಗೇಲ್ ದಾಖಲೆ ಮುರಿಯಲು ಅವರಿಗೆ ಇನ್ನು 46 ರನ್ ಬೇಕಿದೆ.
ಕುಮಾರನನ್ನು ಹಿಂದಿಕ್ಕಲು ಬೇಕು 55 ರನ್
ಏಕದಿನ ಮಾದರಿಯಲ್ಲಿ ಈವರೆಗೆ 301 ಪಂದ್ಯಗಳ 289 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿರುವ ಕೊಹ್ಲಿ, 14,180 ರನ್ ಗಳಿಸಿದ್ದಾರೆ.
ಈ ಪಟ್ಟಿಯಲ್ಲಿ ಭಾರತದವರೇ ಆದ ಸಚಿನ್ ತೆಂಡೂಲ್ಕರ್ ಮತ್ತು ಶ್ರೀಲಂಕಾದ ಕುಮಾರ ಸಂಗಕ್ಕಾರ ಮಾತ್ರವೇ ಕೊಹ್ಲಿಗಿಂತ ಮುಂದಿದ್ದಾರೆ.
ಸಚಿನ್ 463 ಪಂದ್ಯಗಳ 452 ಇನಿಂಗ್ಸ್‌ಗಳಲ್ಲಿ 18,426 ರನ್ ಕಲೆಹಾಕಿದ್ದರೆ, ಸಂಗಕ್ಕಾರ 404 ಪಂದ್ಯಗಳ 380 ಇನಿಂಗ್ಸ್‌ಗಳಿಂದ 14,234 ರನ್ ಗಳಿಸಿದ್ದಾರೆ.
ಸಂಗಕ್ಕಾರ ಅವರನ್ನು ಹಿಂದಿಕ್ಕಿ ಸಚಿನ್ ನಂತರದ ಸ್ಥಾನಕ್ಕೇರಲು ಕೊಹ್ಲಿಗೆ ಇನ್ನು ಕೇವಲ 55 ರನ್ ಬೇಕಿದೆ.
ಅಂತರರಾಷ್ಟ್ರೀಯ ಕ್ರಿಕೆಟ್‌ನ ಮೂರೂ ಮಾದರಿಯಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿಯೂ ಸಚಿನ್ ಮತ್ತು ಸಂಗಕ್ಕಾರ, ಕೊಹ್ಲಿಗಿಂತ ಮೇಲಿನ ಸ್ಥಾನಗಳಲ್ಲಿ ಇದ್ದಾರೆ.
ಸಚಿನ್, 664 ಪಂದ್ಯಗಳ 782 ಇನಿಂಗ್ಸ್‌ಗಳಲ್ಲಿ 34,357 ರನ್ ರನ್ ಪೇರಿಸಿದ್ದರೆ, ಸಂಗಕ್ಕಾರ 594 ಪಂದ್ಯಗಳ 666 ಇನಿಂಗ್ಸ್‌ಗಳಲ್ಲಿ 28,016 ರನ್ ಕಲೆಹಾಕಿದ್ದಾರೆ. ಮೂರನೇ ಸ್ಥಾನದಲ್ಲಿರುವ ಕೊಹ್ಲಿ, 549 ಪಂದ್ಯಗಳ 616 ಇನಿಂಗ್ಸ್‌ಗಳಿಂದ 27,598 ರನ್ ಕಲೆಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.