ADVERTISEMENT

ಅಂಡರ್ 19 ವಿಶ್ವಕಪ್: ಹೈವೋಲ್ಟೇಜ್ ಭಾರತ–ಪಾಕಿಸ್ತಾನ ಮುಖಾಮುಖಿಗೆ ಬ್ರೇಕ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ನವೆಂಬರ್ 2025, 6:12 IST
Last Updated 20 ನವೆಂಬರ್ 2025, 6:12 IST
<div class="paragraphs"><p>ಭಾರತ ಹಾಗೂ ಪಾಕಿಸ್ತಾನ ತಂಡಗಳ ಅಭಿಮಾನಿಗಳು</p></div>

ಭಾರತ ಹಾಗೂ ಪಾಕಿಸ್ತಾನ ತಂಡಗಳ ಅಭಿಮಾನಿಗಳು

   

–ಪಿಟಿಐ ಚಿತ್ರ

ದುಬೈ: 19 ವರ್ಷದೊಳಗಿನ ಪುರುಷರ ಐಸಿಸಿ ವಿಶ್ವಕಪ್ ಪಂದ್ಯಾವಳಿಯು 2026ರ ಜನವರಿ 15 ರಿಂದ ಪ್ರಾರಂಭವಾಗಲಿದೆ. ಈ ಟೂರ್ನಿ ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿದೆ. ಆದರೆ, ಈ ಬಾರಿ ಪ್ರಕಟವಾಗಿರುವ ವೇಳಾಪಟ್ಟಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಬೇರೆ ಬೇರೆ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿವೆ.

ADVERTISEMENT

ಇತ್ತೀಚಿನ ದಿನಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾದಾಗ ಉಭಯ ತಂಡದ ಆಟಗಾರರು ಕ್ರೀಡಾಸ್ಫೂರ್ತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದರಿಂದ ಈ ನಿರ್ಧಾರ ಕೈಗೊಂಡಿರುವ ಸಾಧ್ಯತೆ ಇರಬಹುದು ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

ಏಷ್ಯಾ ಕಪ್ ಗೊಂದಲ:

ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಬಳಿಕ ನಡೆದ ಏಷ್ಯಾಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮೂರು ಬಾರಿ ಮುಖಾಮುಖಿಯಾಗಿದ್ದವು. ಆದರೆ, ಒಮ್ಮೆಯೂ ಕೂಡ ತಂಡಗಳು ಕ್ರೀಡಾ ಸ್ಫೂರ್ತಿ ಎತ್ತಿ ಹಿಡಿದಿಲ್ಲ. ಬದಲಾಗಿ ಮೈದಾನವನ್ನೇ ಯುದ್ಧ ಭೂಮಿ ಎಂಬಂತೆ ಬಿಂಬಿಸಿ, ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿ ನಡೆದುಕೊಂಡಿವೆ.

ಅಷ್ಟು ಸಾಲದು ಎಂಬಂತೆ ಭಾರತ ತಂಡ ಏಷ್ಯಾಕಪ್ ಫೈನಲ್ ಗೆದ್ದರೂ ಇದುವರೆಗೂ ಟ್ರೋಫಿ ಮಾತ್ರ ಸಿಕ್ಕಿಲ್ಲ. ಏಷ್ಯಾಕಪ್ ಟ್ರೋಫಿ ಸಂದರ್ಭದಲ್ಲಿ ಮೈದಾನದಲ್ಲಿನ ಆಟಗಾರರ ವರ್ತನೆ ಗಮನಿಸಿದ ಐಸಿಸಿ, ಉಭಯ ತಂಡದ ಕೆಲವು ಆಟಗಾರರಿಗೆ ದಂಡ ಕೂಡ ವಿಧಿಸಿತ್ತು.

ಮಹಿಳಾ ವಿಶ್ವಕಪ್‌ನಲ್ಲೂ ಗೊಂದಲ

ಪುರುಷರ ಟಿ20 ಏಷ್ಯಾಕಪ್ ಬಳಿಕ ಭಾರತ ಪಾಕಿಸ್ತಾನ ಮುಖಾಮುಖಿಯಾಗಿದ್ದು ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ. ಇಲ್ಲಿ ಕೂಡ ಭಾರತ ಮಹಿಳಾ ತಂಡದ ಆಟಗಾರ್ತಿಯರು ಹಸ್ತಲಾಘವ ಮಾಡದಿರಲು ನಿರ್ಧರಿಸಿದ್ದರು.

ಏಷ್ಯಾಕಪ್ ಟ್ರೋಫಿ ಗೊಂದಲ ಪರಿಹರಿಸಲು ಬಿಸಿಸಿಐ ಸಾಹಸ

ದುಬೈನಲ್ಲಿ ಇತ್ತೀಚೆಗೆ ನಡೆದ ಐಸಿಸಿ ಸಭೆಯ ಸಂದರ್ಭದಲ್ಲಿ, ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಅಧ್ಯಕ್ಷ ಮೊಹ್ಸಿನ್‌ ನಕ್ವಿ ಅವರೊಂದಿಗೆ ಈ ಕಗ್ಗಂಟು ಪರಿಹರಿಸುವ ಬಗ್ಗೆ ಮಾತುಕತೆ ನಡೆಸಿರುವುದಾಗಿ, ಶೀಘ್ರದಲ್ಲೇ ಏಷ್ಯಾ ಕಪ್ ಟ್ರೋಫಿ ಭಾರತಕ್ಕೆ ತರುವುದಾಗಿ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಕಾರ್ಯದರ್ಶಿ ದೇವಜಿತ್‌ ಸೈಕಿಯಾ ತಿಳಿಸಿದ್ದರು.

ಐಸಿಸಿ ಮಹತ್ವದ ನಿರ್ಧಾರ

ಇತ್ತೀಚಿನ ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದ ಐಸಿಸಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಲೀಗ್‌ನಲ್ಲಿ ಮುಖಾಮುಖಿಯಾಗುವುದೇ ಬೇಡ ಎಂಬ ನಿರ್ಧಾರಕ್ಕೆ ಬಂದಂತಿದೆ. ಹಾಗಾಗಿ ಈ 2026ರ ಜನವರಿ ತಿಂಗಳಲ್ಲಿ ಆರಂಭವಾಗಲಿರುವ 19 ವರ್ಷದೊಳಗಿನ ಐಸಿಸಿ ಏಕದಿನ ವಿಶ್ವಕಪ್‌ನ ಗ್ರೂಪ್‌ ಎ ನಲ್ಲಿ ಭಾರತ, ಅಮೆರಿಕಾ, ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ತಂಡಗಳು ಸ್ಥಾನ ಪಡೆದಿವೆ.

ಇನ್ನೂ ಗ್ರೂಪ್ ಬಿ ನಲ್ಲಿ ಜಿಂಬಾಬ್ವೆ, ಪಾಕಿಸ್ತಾನ, ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ ತಂಡಗಳಿವೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ, ಐರ್ಲೆಂಡ್, ಜಪಾನ್ ಮತ್ತು ಶ್ರೀಲಂಕಾ ‘ಸಿ’ ಗುಂಪಿನಲ್ಲಿವೆ. ತಾಂಜಾನಿಯಾ, ವೆಸ್ಟ್‌ ಇಂಡೀಸ್, ಅಫ್ಗಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ‘ಡಿ’ ಗುಂಪಿನಲ್ಲಿ ಕಾಣಿಸಿಕೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.