ADVERTISEMENT

ಯೂತ್ ವಿಶ್ವಕಪ್: ಪಾಕಿಸ್ತಾನವನ್ನು ಸೋಲಿಸಿ ಸೆಮಿಫೈನಲ್ ತಲುಪಿದ ಭಾರತ

ಸೇಡು ತೀರಿಸಿಕೊಂಡ ಆಯುಷ್ ಬಳಗ: ಕನಿಷ್ಕ್ ಆಲ್‌ರೌಂಡ್ ಆಟ

ಪಿಟಿಐ
Published 1 ಫೆಬ್ರುವರಿ 2026, 18:12 IST
Last Updated 1 ಫೆಬ್ರುವರಿ 2026, 18:12 IST
<div class="paragraphs"><p>ಭಾರತ ತಂಡದ ಆಟಗಾರರು</p></div>

ಭಾರತ ತಂಡದ ಆಟಗಾರರು

   

ಕೃಪೆ: @BCCI

ಬುಲವಾಯೊ: ಆಲ್‌ರೌಂಡರ್ ಕನಿಷ್ಕ್ ಚೌಹಾಣ್ ಅವರ ಅಮೋಘ ಆಟದ ಹಾಗೂ ವೇದಾಂತ್ ತ್ರಿವೇದಿ ಅರ್ಧಶತಕದ ಬಲದಿಂದ ಭಾರತ 19 ವರ್ಷದೊಳಗಿನವರ ತಂಡವು ಐಸಿಸಿ ಯೂತ್ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಎದುರು ಜಯಿಸಿತು. ಇದರೊಂದಿಗೆ ಭಾರತದ ಯುವಪಡೆ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು. 

ADVERTISEMENT

ಭಾನುವಾರ ಇಲ್ಲಿ ನಡೆದ ಸೂಪರ್ ಸಿಕ್ಸ್ ಪಂದ್ಯದಲ್ಲಿ ಭಾರತ ತಂಡವು 58 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿತು. ಸೆಮಿಫೈನಲ್‌ನಲ್ಲಿ ಆಯುಷ್ ಮ್ಹಾತ್ರೆ ನಾಯಕತ್ವದ ಭಾರತ ತಂಡವು ಅಫ್ಗಾನಿಸ್ತಾನ ಎದುರು ಕಣಕ್ಕಿಳಿಯಲಿದೆ. 

ಕನಿಷ್ಕ್ ಅವರು 29 ಎಸೆತಗಳಲ್ಲಿ 35 ರನ್‌ ಗಳಿಸಿದರು. ಅಲ್ಲದೇ ಎಂಟನೇ ವಿಕೆಟ್ ಜೊತೆಯಟದಲ್ಲಿ ಖಿಲಾನ್ ಪಟೇಲ್ (ಅಜೇಯ 21, 15ಎ) ಅವರೊಂದಿಗೆ 50 ರನ್ ಸೇರಿಸಿದರು. ಇದರಿಂದಾಗಿ ತಂಡವು 49.5 ಓವರ್‌ಗಳಲ್ಲಿ 252 ರನ್ ಗಳಿಸಿತು. 

ಪಾಕ್ ತಂಡವು ಸೆಮಿಫೈನಲ್ ಪ್ರವೇಶಿಸಲು ತನ್ನ ರನ್‌ರೇಟ್ ಕೂಡ ಉತ್ತಮಪಡಿಸಿಕೊಳ್ಳಬೇಕಾಗಿತ್ತು. ಅದಕ್ಕಾಗಿ 253 ರನ್‌ ಗುರಿಯನ್ನು 33.3 ಓವರ್‌ಗಳಲ್ಲಿ ಸಾಧಿಸಬೇಕಿತ್ತು. ಆದರೆ ತಂಡದ ಬ್ಯಾಟರ್‌ಗಳು ಅದಕ್ಕೆ ತಕ್ಕಂತೆ ಆಡಲಿಲ್ಲ. ಇದರಿಂದಾಗಿ ಪಾಕ್ ತಂಡವು 33.3 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 167 ರನ್ ಗಳಿಸಿತು. 

ಕನಿಷ್ಕ್ ಬೌಲಿಂಗ್‌ನಲ್ಲಿಯೂ ಮಿಂಚಿದರು. 10 ಓವರ್‌ಗಳಲ್ಲಿ ಕೇವಲ 10 ರನ್ ಕೊಟ್ಟು 1 ವಿಕೆಟ್ ಕೂಡ ಗಳಿಸಿದರು. 40 ಡಾಟ್‌ಬಾಲ್‌ಗಳನ್ನು ಹಾಕಿದರು. 

ಕಳೆದ ಯೂತ್ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಪಾಕ್ ತಂಡದ ಎದುರು ಭಾರತ ತಂಡ ಸೋತಿತ್ತು. ಇಲ್ಲಿ ಆಯುಷ್ ಬಳಗವು ಮುಯ್ಯಿ ತೀರಿಸಿಕೊಂಡಿತು. 

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ (30; 22ಎ)  ತಮ್ಮ ಆಕ್ರಮಣಕಾರಿ ಶೈಲಿಯಲ್ಲಿ ಬ್ಯಾಟ್‌ ಬೀಸಿದರು. ಆದರೆ ಎಡಗೈ ವೇಗಿ ಮೊಹಮ್ಮದ್ ಸಯ್ಯಾಮ್‌ (69ಕ್ಕೆ2) ಬೌಲಿಂಗ್‌ನಲ್ಲಿ ಪುಲ್ ಹೊಡೆತ ಪ್ರಯೋಗಿಸಿ ಔಟಾದರು.

ನಾಯಕ ಆಯುಷ್ ವೈಫಲ್ಯ ಮುಂದುವರಿಯಿತು. ಅವರು ಇಲ್ಲಿಯೂ ಮೊದಲ ಎಸೆತದಲ್ಲಿಯೇ ಔಟಾದರು.  ಇದರಿಂದಾಗಿ 47ಕ್ಕೆ3 ವಿಕೆಟ್ ಕಳೆದುಕೊಂಡ ಸಂಕಷ್ಟಕ್ಕೊಳಗಾಯಿತು.

ಈ ಹಂತದಲ್ಲಿ ವೇದಾಂತ್ ತ್ರಿವೇದಿ (68 ರನ್) ಅರ್ಧಶತಕ ಗಳಿಸಿದರು. 

ಸಂಕ್ಷಿಪ್ತ ಸ್ಕೋರು

ಭಾರತ: 49.5 ಓವರ್‌ಗಳಲ್ಲಿ 252 (ವೈಭವ್ ಸೂರ್ಯವಂಶಿ 30, ವೇದಾಂತ್ ತ್ರಿವೇದಿ 68, ಅಂಬರೀಶ್ 29, ಕನಿಷ್ಕ ಚೌಹಾಣ್ 35, ಖಿಲಾನ್ ಪಟೇಲ್ 21, ಮೊಹಮ್ಮದ್ ಸಯ್ಯದ್ 69ಕ್ಕೆ2, ಅಬ್ದುಲ್ ಸುಬಾನ್ 33ಕ್ಕೆ3)

ಪಾಕಿಸ್ತಾನ: 46.2 ಓವರ್‌ಗಳಲ್ಲಿ 194 (ಹಮ್ಜಾ ಝಹೂರ್ 42, ಉಸ್ಮಾನ್ ಖಾನ್ 66, ಫರ್ಹಾನ್ ಯೂಸುಫ್ 38, ಖಿಲಾನ್ ಪಟೇಲ್ 35ಕ್ಕೆ3, ಆಯುಷ್ ಮ್ಹಾತ್ರೆ 21ಕ್ಕೆ3)

ಫಲಿತಾಂಶ: ಭಾರತ ಯುವಪಡೆಗೆ 58 ರನ್ ಜಯ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.