ADVERTISEMENT

U19 Asia Cup| ಫೈನಲ್‌ನಲ್ಲಿ ಭಾರತಕ್ಕೆ ಪಾಕ್‌ ಎದುರಾಳಿ

ಯೂತ್ ಏಷ್ಯಾ ಕಪ್ ಏಕದಿನ ಕ್ರಿಕೆಟ್: ಶ್ರೀಲಂಕಾ ತಂಡಕ್ಕೆ ನಿರಾಸೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಡಿಸೆಂಬರ್ 2025, 16:36 IST
Last Updated 19 ಡಿಸೆಂಬರ್ 2025, 16:36 IST
<div class="paragraphs"><p>ವಿಹಾನ್ ಮಲ್ಹೋತ್ರಾ ಮತ್ತು ಆರನ್ ಜಾರ್ಜ್ ಜೊತೆಯಾಟ </p></div>

ವಿಹಾನ್ ಮಲ್ಹೋತ್ರಾ ಮತ್ತು ಆರನ್ ಜಾರ್ಜ್ ಜೊತೆಯಾಟ

   

ದುಬೈ: ಉಪನಾಯಕ ವಿಹಾನ್ ಮಲ್ಹೋತ್ರಾ (ಔಟಾಗದೇ 61;45ಎ) ಮತ್ತು ಆರನ್ ಜಾರ್ಜ್ (ಔಟಾಗದೇ 58;49ಎ) ಅವರ ಅರ್ಧಶತಕಗಳ ನೆರವಿನಿಂದ ಭಾರತ 19 ವರ್ಷದೊಳಗಿನವರ ತಂಡವು ಯೂತ್ ಏಷ್ಯಾ ಕಪ್ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿತು. ಭಾನುವಾರ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ಆಯುಷ್‌ ಮ್ಹಾತ್ರೆ ನಾಯಕತ್ವದ ಭಾರತ ತಂಡವು 8 ವಿಕೆಟ್‌ಗಳಿಂದ ಶ್ರೀಲಂಕಾ ತಂಡವನ್ನು ಸೋಲಿಸಿ, 10ನೇ ಬಾರಿ ಫೈನಲ್‌ ಪ್ರವೇಶಿಸಿತು. ಮತ್ತೊಂದು ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ತಂಡವೂ ಎಂಟು ವಿಕೆಟ್‌ಗಳಿಂದ ಬಾಂಗ್ಲಾದೇಶ ವಿರುದ್ಧ ಜಯಿಸಿತು.

ADVERTISEMENT

11 ವರ್ಷಗಳ ನಂತರ ಫೈನಲ್‌ನಲ್ಲಿ ಭಾರತ ಮತ್ತು ಪಾಕ್‌ ಮುಖಾಮುಖಿಯಾಗಲಿದೆ. 2014ರಲ್ಲಿ ನಡೆದ ಫೈನಲ್‌ನಲ್ಲಿ ಭಾರತ ತಂಡವು ಪಾಕಿಸ್ತಾನವನ್ನು ಮಣಿಸಿತ್ತು. ಅಂದಿನ ತಂಡದಲ್ಲಿ ಶ್ರೇಯಸ್ ಅಯ್ಯರ್, ಸರ್ಫರಾಜ್ ಖಾನ್, ಸಂಜು ಸ್ಯಾಮ್ಸನ್ ಮತ್ತು ಕುಲದೀಪ್ ಯಾದವ್ ಇದ್ದರು. ಭಾರತ ಒಟ್ಟು ಎಂಟು ಬಾರಿ ಪ್ರಶಸ್ತಿ ಗೆದ್ದಿದೆ.

ಟಾಸ್‌ ಗೆದ್ದ ಭಾರತ ಫೀಲ್ಡಿಂಗ್‌ ಆಯ್ದುಕೊಂಡಿತು. ಚಾಮಿಕಾ ಹೀನಟಿಗಲ (42;38ಎ) ಅವರ ಬ್ಯಾಟಿಂಗ್‌ ಬಲದಿಂದ ಲಂಕಾ ಪಡೆ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 138 ರನ್‌ ಗಳಿಸಿತು. ನಾಯಕ ವಿಮತ್ ದಿನಸಾರ (32) ಮತ್ತು ಸೇಥ್ಮಿಕಾ ಸೆನೆವಿರತ್ನೆ (30) ಹೊರತುಪಡಿಸಿ ಉಳಿದವರು ನಿರಾಸೆ ಮೂಡಿಸಿದರು. ಭಾರತದ ಹೆನಿಲ್ ಪಟೇಲ್ ಮತ್ತು ಕನಿಷ್ಕ್ ಚಹಾಣ್ ತಲಾ ಎರಡು ವಿಕೆಟ್‌ ಪಡೆದರು.

ಸಾಧಾರಣ ಮೊತ್ತದ ಗುರಿಯನ್ನು ಬೆನ್ನಟ್ಟಿದ ಭಾರತ 25 ರನ್‌ ಗಳಿಸುವಷ್ಟರಲ್ಲಿ ಆರಂಭಿಕ ಆಟಗಾರರಾದ ಆಯುಷ್‌ (7) ಮತ್ತು ವೈಭವ್‌ ಸೂರ್ಯವಂಶಿ (9) ಅವರನ್ನು ಕಳೆದುಕೊಂಡಿತು. ಈ ಎರಡು ವಿಕೆಟ್‌ಗಳು ರಸಿತ್ ನಿಮ್ಸಾರ ಪಾಲಾದವು. ಐಪಿಎಲ್‌ ಮಿನಿ ಹರಾಜಿನಲ್ಲಿ ಆರ್‌ಸಿಬಿ ಪಾಲಾದ ವಿಹಾನ್ ಮತ್ತು ಆರನ್ ನಂತರದಲ್ಲಿ ಎಚ್ಚರಿಕೆಯ ಆಟವಾಡಿದರು. ಮುರಿಯದ ಮೂರನೇ ವಿಕೆಟ್‌ಗೆ ವಿಕೆಟ್‌ಗೆ 114 (87ಎ) ರನ್‌ ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಭಾರತ ಇನ್ನೂ 12 ಎಸೆತಗಳು ಬಾಕಿ ಇರುವಂತೆ 2 ವಿಕೆಟ್‌ಗೆ 139 ರನ್‌ ಗಳಿಸಿತು.

ಸಂಕ್ಷಿಪ್ತ ಸ್ಕೋರ್‌:

ಶ್ರೀಲಂಕಾ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 138 (ವಿಮತ್ ದಿನಸಾರ 32, ಚಾಮಿಕಾ ಹೀನಟಿಗಲ 42, ಸೇಥ್ಮಿಕಾ ಸೆನೆವಿರತ್ನೆ 30; ಹೆನಿಲ್ ಪಟೇಲ್ 31ಕ್ಕೆ 2,  ಕನಿಷ್ಕ್ ಚಹಾಣ್ 36ಕ್ಕೆ 2).

ಭಾರತ: 18 ಓವರ್‌ಗಳಲ್ಲಿ 2 ವಿಕೆಟ್‌ಗೆ 139 (ಆರನ್‌ ಜಾರ್ಜ್‌ ಔಟಾಗದೇ 58, ವಿಹಾನ್‌ ಮಲ್ಹೋತ್ರಾ ಔಟಾಗದೇ 61; ರಸಿತ್ ನಿಮ್ಸಾರ 31ಕ್ಕೆ 2). ಪಂದ್ಯದ ಆಟಗಾರ: ವಿಹಾನ್‌ ಮಲ್ಹೋತ್ರಾ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.