ADVERTISEMENT

IPL 2022: ಗುಜರಾತ್ ಟೈಟನ್ಸ್‌ ತಂಡ ಸೇರಲಿರುವ ‘ಮಿಸ್ಟರ್ ಐಪಿಎಲ್’ ಸುರೇಶ್ ರೈನಾ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಮಾರ್ಚ್ 2022, 12:33 IST
Last Updated 2 ಮಾರ್ಚ್ 2022, 12:33 IST
ಸುರೇಶ್ ರೈನಾ -ಎಎಫ್‌ಪಿ ಚಿತ್ರ
ಸುರೇಶ್ ರೈನಾ -ಎಎಫ್‌ಪಿ ಚಿತ್ರ   

ನವದೆಹಲಿ: ಇತ್ತೀಚಿಗಷ್ಟೇ ಮುಕ್ತಾಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ –2022 (ಐಪಿಎಲ್) ಟಿ–20 ಕ್ರಿಕೆಟ್‌ನ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಬಿಕರಿಯಾಗದೆ ಉಳಿದಿದ್ದ ಭಾರತದ ಸುರೇಶ್ ರೈನಾ ಅವರನ್ನು ಖರೀದಿಸಲು ಗುಜರಾತ್ ಟೈಟನ್ಸ್ ಮುಂದಾಗಿದೆ ಎಂದು ವರದಿಯಾಗಿದೆ.

ಗುಜರಾತ್ ಟೈಟನ್ಸ್‌ ಪರ ಕಣಕ್ಕಿಳಿಯಬೇಕಿದ್ದ ಇಂಗ್ಲೆಂಡ್ ತಂಡದ ಬ್ಯಾಟರ್ ಜೇಸನ್ ರಾಯ್ ಅವರು ವೈಯಕ್ತಿಕ ಕಾರಣಗಳಿಂದಾಗಿ ಈ ಬಾರಿ ಐಪಿಎಲ್ ಟೂರ್ನಿಯಿಂದ ಹೊರಗುಳಿಯುವುದಾಗಿ ಪ್ರಕಟಿಸಿದ್ದಾರೆ. ಹಾಗಾಗಿ ಅವರ ಬದಲಿಗೆ ಸುರೇಶ್ ರೈನಾ ಅವರನ್ನು ಖರೀದಿಸುವಂತೆ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಿಸಿದ್ದಾರೆ.

'ಮಿಸ್ಟರ್‌ ಐಪಿಎಲ್‌' ಎಂದೇ ಹೆಸರಾಗಿದ್ದ ರೈನಾ ಅವರಿಗೆ ಮೂಲ ಬೆಲೆ ₹2 ಕೋಟಿ ನಿಗದಿಯಾಗಿತ್ತು. ಚೆನ್ನೈ ಸೂಪರ್ ಕಿಂಗ್ಸ್ ತಂಡ ನಾಲ್ಕು ಬಾರಿ ಚಾಂಪಿಯನ್ ಆಗುವಲ್ಲಿ ಸುರೇಶ್ ರೈನಾ ಪಾತ್ರ ಪ್ರಮುಖವಾಗಿತ್ತು. ಐಪಿಎಲ್‌ ಟೂರ್ನಿಯಲ್ಲಿ ಅವರು ಈವರೆಗೂ 5,528 ರನ್‌ ಗಳಿಸಿದ್ದಾರೆ.

ADVERTISEMENT

2008ರಿಂದ 2021ರ ವರೆಗೂ ಐಪಿಎಲ್‌ ಹರಾಜಿನಲ್ಲಿ ಅತಿ ಹೆಚ್ಚು ಹಣ ಗಳಿಸಿದ ಆಟಗಾರರ ಪೈಕಿ ನಾಲ್ಕನೇ ಸ್ಥಾನದಲ್ಲಿರುವ ಸುರೇಶ್‌ ರೈನಾ ( ಒಟ್ಟು ₹110.7 ಕೋಟಿ) ಅವರನ್ನು ಈ ಬಾರಿ ಯಾವುದೇ ತಂಡ ಆಯ್ಕೆ ಮಾಡಿಲ್ಲ. ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ರೈನಾ ಬಿಕರಿಯಾಗದೆ ಉಳಿದಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ 2020ರ ಐಪಿಎಲ್‌ನಿಂದ ರೈನಾ ಮನೆಗೆ ಮರಳಿದ್ದರು. 2021ರಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಮತ್ತೆ ಸೇರ್ಪಡೆಯಾಗಿದ್ದ ಅವರು ಕೇವಲ 160 ರನ್‌ ಗಳಿಸಿದ್ದರು. ಬ್ಯಾಟಿಂಗ್‌ ಸರಾಸರಿ 17.77 ದಾಖಲಾಗಿತ್ತು.

ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಸುರೇಶ್ ರೈನಾ, ಸ್ಟೀವ್ ಸ್ಮಿತ್, ಶಕೀಬ್ ಅಲ್ ಹಸನ್, ಇಮ್ರಾನ್‌ ತಾಹೀರ್, ಆ್ಯಡಂ ಜಂಪಾ, ಆ್ಯರನ್ ಫಿಂಚ್, ಡೇವಿಡ್ ಮಿಲಾನ್, ಉಸ್ಮಾನ್ ಖ್ವಾಜಾ, ಕೇದಾರ್ ಜಾಧವ್, ಮಾರ್ಟಿನ್ ಗಪ್ಟಿಲ್, ಕಾರ್ಲೊಸ್ ಬ್ರೇಥ್‌ವೇಟ್, ಚೇತೇಶ್ವರ್ ಪೂಜಾರ, ಮುರಳಿ ವಿಜಯ್ ಸೇರಿದಂತೆ ಪ್ರಮುಖ ಆಟಗಾರರು ಮಾರಾಟವಾಗದೆ ಉಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.