ದುಬೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಪಾಕಿಸ್ತಾನ ತಂಡದ ವೇಗದ ಬೌಲರ್ ಹ್ಯಾರಿಸ್ ರವೂಫ್ ಅವರಿಗೆ ತಾವು ಸಹಿ ಹಾಕಿರುವ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಈ ವಿಡಿಯೊವನ್ನು ಬಿಸಿಸಿಐ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಕ್ರಿಕೆಟ್ ಪ್ರೇಮಿಗಳು ಮೆಚ್ಚಿಕೊಂಡಿದ್ದಾರೆ. ಮಾಡಿದೆ.ಕೊಹ್ಲಿ ಜೆರ್ಸಿ ನೀಡಿದ ಬಳಿಕ ಉಭಯ ಆಟಗಾರರೂ ಪರಸ್ಪರ ಹಸ್ತಲಾಘವ ಮಾಡುವ ದೃಶ್ಯ ವಿಡಿಯೊದಲ್ಲಿದೆ.
'ಪಂದ್ಯ ಮುಕ್ತಾಯವಾಗಿರಬಹುದು ಆದರೆ, ಇಂತಹ ಕ್ಷಣಗಳು ಪ್ರಕಾಶಮಾನವಾಗಿ ಹೊಳೆಯುತ್ತಿರುತ್ತವೆ.ಭಾರತ ಮತ್ತು ಪಾಕಿಸ್ತಾನ ಪಂದ್ಯದ ಬಳಿಕ ತಾವು ಸಹಿ ಮಾಡಿದ ಜೆರ್ಸಿಯನ್ನು ಪಾಕಿಸ್ತಾನದ ಹ್ಯಾರಿಸ್ ರವೂಫ್ ಅವರಿಗೆ ನೀಡಿದ ವಿರಾಟ್ ಕೊಹ್ಲಿ ಅವರ ಹೃದಯಸ್ಪರ್ಷಿ ನಡೆ' ಎಂದು ವಿಡಿಯೊ ಜೊತೆಗೆ ಬರೆದುಕೊಂಡಿದೆ.
ಭಾರತ ಮತ್ತು ಪಾಕಿಸ್ತಾನ ತಂಡಗಳು, ದುಬೈನಲ್ಲಿ ಭಾನುವಾರ ರಾತ್ರಿ ನಡೆದ ಪಂಧ್ಯದಲ್ಲಿ ಮುಖಾಮುಖಿಯಾಗಿದ್ದವು.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಾಕಿಸ್ತಾನ ನಿಗದಿತ 19.5 ಓವರ್‌ಗಳಲ್ಲಿ 147 ರನ್ ಗಳಿಸಿ ಸರ್ವಪತನ ಕಂಡಿತ್ತು. ಭುವನೇಶ್ವರ್ ಕುಮಾರ್ 4 ವಿಕೆಟ್ ಉರುಳಿಸಿದರೆ, ಹಾರ್ದಿಕ್ ಪಾಂಡ್ಯ 3, ಅರ್ಷದೀಪ್ ಸಿಂಗ್ 2 ಹಾಗೂ ಆವೇಶ್ ಖಾನ್ 1 ವಿಕೆಟ್ ಪಡೆದು ಮಿಂಚಿದ್ದರು.
ಬಳಿಕ, ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಭಾರತ ಪರವಿರಾಟ್ ಕೊಹ್ಲಿ (35), ರವೀಂದ್ರ ಜಡೇಜಾ (35) ಮತ್ತು ಹಾರ್ದಿಕ್ ಪಾಂಡ್ಯ (ಅಜೇಯ 33) ಉತ್ತಮ ಬ್ಯಾಟಿಂಗ್ ನಡೆಸಿದರು. ಹೀಗಾಗಿ ರೋಹಿತ್ ಶರ್ಮಾ ಪಡೆ 5 ವಿಕೆಟ್ ಕಳೆದುಕೊಂಡು ಇನ್ನೂ ಎರೆಡು ಎಸೆತ ಬಾಕಿ ಇರುವಂತೆಯೇ ಗುರಿ ತಲುಪಿ ಜಯದ ನಗೆ ಬೀರಿತ್ತು.
ಉಭಯ ತಂಡಗಳು 'ಬಿ' ಗುಂಪಿನಲ್ಲಿವೆ. ಭಾರತ ತನ್ನ ಮುಂದಿನ ಪಂದ್ಯದಲ್ಲಿ (ಆಗಸ್ಟ್ 31 ರಂದು) ಹಾಂಗ್‌ಕಾಂಗ್ ವಿರುದ್ಧ ಆಡಲಿದೆ. ಪಾಕಿಸ್ತಾನವೂ ಹಾಂಗ್‌ಕಾಂಗ್ ವಿರುದ್ಧವೇ ಸೆಪ್ಟೆಂಬರ್ 2ರಂದು ಕಣಕ್ಕಿಳಿಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.