
2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿ ವೇಳೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್
ಕೃಪೆ: ಪಿಟಿಐ
ಭಾರತದ ಆತಿಥ್ಯದಲ್ಲೇ 2023ರಲ್ಲಿ ನಡೆದ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ಮುಗಿದು ಎರಡು ತಿಂಗಳು ಕಳೆಯುವುದರೊಳಗೆ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ಐಸಿಸಿ) 2024ರ ಟಿ20 ವಿಶ್ವಕಪ್ ವೇಳಾಪಟ್ಟಿಯನ್ನು ಪ್ರಕಟಿಸಿತ್ತು. ಟೀಂ ಇಂಡಿಯಾ ಅಭಿಮಾನಿಗಳು, ವಿಶ್ವಕಪ್ ಫೈನಲ್ ಸೋಲಿನ ಬೇಸರದಿಂದ ಇನ್ನೂ ಹೊರಬಂದಿರಲಿಲ್ಲ. ಸೋಲಿಗಿಂತಲೂ, ಗೆದ್ದ ತಂಡ ಆಸ್ಟ್ರೇಲಿಯಾದ ಆಟಗಾರ ಮಿಚೇಲ್ ಮಾರ್ಶ್ ಅವರು ಟ್ರೋಫಿ ಮೇಲೆ ಕಾಲಿಟ್ಟು ಸಂಭ್ರಮಿಸಿದ್ದು, ಹೆಚ್ಚು ನೋವು ನೀಡಿತ್ತು.
ಕೊಹ್ಲಿಯಂತಹ ಬ್ಯಾಟರ್‌ಗಳು ಬೆನ್ನುಬೆನ್ನಿಗೆ ಶತಕ ಗಳಿಸಬೇಕು. ರೋಹಿತ್ ಶರ್ಮಾ ಅಂಥವರ ಬ್ಯಾಟ್‌ಗಳು ಪ್ರತಿ ಎಸೆತವನ್ನೂ ಸಿಕ್ಸರ್‌ಗೇ ಅಟ್ಟಬೇಕು. ಬೌಲರ್‌ಗಳು ನಿರಂತರವಾಗಿ ವಿಕೆಟ್ ಉದುರಿಸಬೇಕು. ಭಾರತ ತಂಡವಿರುವುದೇ ಗೆಲ್ಲಲಿಕ್ಕೆ ಎಂಬಿತ್ಯಾದಿ ನಿರೀಕ್ಷೆಗಳು ಅಭಿಮಾನಿಗಳಲ್ಲಿವೆ. ಹಾಗಾಗಿ, ಟಿ20 ವಿಶ್ವಕಪ್ ವೇಳಾಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಯಾರಿಗಷ್ಟೇ ಅವಕಾಶ ನೀಡಬೇಕು ಎಂಬ ಚರ್ಚೆ ನಡೆದಿತ್ತು.
ಏಕದಿನ ವಿಶ್ವಕಪ್‌ನಲ್ಲಿ ಆಡಿದ್ದ 11 ಇನಿಂಗ್ಸ್‌ಗಳಲ್ಲಿ 95.62ರ ಸರಾಸರಿಯೊಂದಿಗೆ ದಾಖಲೆಯ 765 ರನ್ ಗಳಿಸಿದ್ದರೂ, ʼಕೊಹ್ಲಿಗೆ ಅವಕಾಶ ನೀಡಬಾರದು. ಅವರ ಬದಲು ಇಶಾನ್ ಕಿಶನ್‌ಗೆ ಸ್ಥಾನ ನೀಡಬೇಕುʼ ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದ್ದರು. ಇನ್ನೂ ಕೆಲವರು ವೆಸ್ಟ್ ಇಂಡೀಸ್ ಮತ್ತು ಯುಎಇ ಆತಿಥ್ಯದಲ್ಲಿ ನಡೆಯುವ ಚುಟುಕು ವಿಶ್ವಕಪ್‌ನಲ್ಲಿ ಕೊಹ್ಲಿ ಯಶಸ್ವಿಯಾಗಲಾರರು. ಪವರ್ ಹಿಟ್ಟರ್ ಅಲ್ಲದ ಕಾರಣ, ನಿಧಾನಗತಿಯ ಪಿಚ್‌ನಲ್ಲಿ ರನ್ ಗಳಿಸಲು ಅವರಿಗೆ ಸಾಧ್ಯವಾಗದು ಎಂಬ ಕಾರಣ ನೀಡಿ ವಾದಿಸಿದ್ದರು.
ಆದಾಗ್ಯೂ ಕೊಹ್ಲಿಗೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ದಕ್ಕಿತ್ತು. ಆದರೆ, ಮೊದಲೇ ವ್ಯಕ್ತವಾಗಿದ್ದ ಟೀಕೆಗಳಿಗೆ ಪುಷ್ಟಿ ನೀಡುವಂತೆ, ಟೂರ್ನಿಯುದ್ದಕ್ಕೂ ಅವರ ಬ್ಯಾಟ್ ಸದ್ದು ಮಾಡಲಿಲ್ಲ. ಸೆಮಿಫೈನಲ್ ಸೇರಿದಂತೆ ಮೊದಲ 7 ಪಂದ್ಯಗಳಿಂದ ಅವರು ಗಳಿಸಿದ್ದು 75 ರನ್ ಮಾತ್ರ. ಅದರಲ್ಲೂ 2 ಬಾರಿ ಸೊನ್ನೆ ಸುತ್ತಿದ್ದರು. ಆದರೆ, ನಾಯಕ ರೋಹಿತ್ ಮಾತ್ರ ಕೊಹ್ಲಿ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿರಲಿಲ್ಲ. ತಮಗೆ ಪ್ರಶ್ನೆಗಳು ಎದುರಾದಾಗಲೆಲ್ಲ ಕೊಹ್ಲಿ ಬೆನ್ನಿಗೆ ನಿಂತಿದ್ದ ಅವರು, 'ಶ್ರೇಷ್ಠ ಪ್ರದರ್ಶನವನ್ನು ಫೈನಲ್‌ಗಾಗಿ ಕಾಯ್ದಿರಿಸಿಕೊಂಡಿದ್ದಾರೆʼ ಎಂದು ಸಮರ್ಥಿಸಿಕೊಂಡಿದ್ದರು.
ರೋಹಿತ್ ಮಾತನ್ನು ಫೈನಲ್‌ನಲ್ಲಿ ನಿಜವಾಗಿಸಿದ್ದರು ಕೊಹ್ಲಿ. ದಕ್ಷಿಣ ಆಫ್ರಿಕಾ ದಾಳಿ ಎದುರು 34 ರನ್ ಆಗುವಷ್ಟರಲ್ಲೇ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಭಾರತಕ್ಕೆ ಮತ್ತೊಮ್ಮೆ ಆಪದ್ಬಾಂಧವನಾದ ಅವರು 76 ರನ್ ಗಳಿಸಿದ್ದರು. ಆ ಪಂದ್ಯವನ್ನು 7 ರನ್ ಅಂತರದಿಂದ ಗೆದ್ದ ಭಾರತ, ಟಿ20 ಮಾದರಿಯಲ್ಲಿ ಎರಡನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿತು. ಅದರ ಬೆನ್ನಲ್ಲೇ ರೋಹಿತ್, ಕೊಹ್ಲಿ ಹಾಗೂ ಮತ್ತೊಬ್ಬ ಅನುಭವಿ ರವೀಂದ್ರ ಜಡೇಜ, ಅಂತರರಾಷ್ಟ್ರೀಯ ಚುಟುಕು ಮಾದರಿಗೆ ವಿದಾಯ ಘೋಷಿಸಿದ್ದರು.
ಕೊಹ್ಲಿ ಬ್ಯಾಟಿಂಗ್ 'ದೇವರು ಹಾಡಿದಂತಿತ್ತು' ಎಂದ ಚಾಪೆಲ್
2024ರ ವಿಶ್ವಕಪ್ ಗೆದ್ದ ಮರುದಿನ ಹಲವು ಮಾಧ್ಯಮಗಳು ಕೊಹ್ಲಿಯ ಗುಣಗಾನ ಮಾಡಿದ್ದವು. 'ಭಾರತ ಇನ್ನು ಮುಂದೆ ಏನನ್ನು ಮಿಸ್ ಮಾಡಿಕೊಳ್ಳಲಿದೆ ಎಂಬುದನ್ನು ತಮ್ಮ ಕೊನೇ ಇನಿಂಗ್ಸ್‌ನಲ್ಲಿ ತೋರಿಸಿಕೊಟ್ಟಿದ್ದಾರೆ' ಎಂದು ಉಲ್ಲೇಖಿಸಿದ್ದವು. ಇದನ್ನು ನೆನಪಿಸಿಕೊಳ್ಳುವುದಕ್ಕೆ ಕಾರಣವಿದೆ.
ಟೀಂ ಇಂಡಿಯಾ ಪಾಲಿಗೆ ಕೊಹ್ಲಿ ಅಂತಹ ಆಟವನ್ನು ಸಾಕಷ್ಟು ಬಾರಿ ಆಡಿದ್ದಾರೆ. ತಂಡ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲ ಕೈ ಮೇಲೆತ್ತಿ ನಾನಿದ್ದೇನೆ ಎಂದು ಮುನ್ನಡೆಸಿದ ಉದಾಹರಣೆಗಳು ಲೆಕ್ಕವಿಲ್ಲದಷ್ಟಿವೆ. 2022ರ ಟಿ20 ವಿಶ್ವಕಪ್ ವೇಳೆ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಮೆಲ್ಬರ್ನ್‌ನಲ್ಲಿ ಅವರು ಕಟ್ಟಿದ ಇನಿಂಗ್ಸ್, ಅದಕ್ಕೊಂದು ನಿದರ್ಶನ. 160ರ ಸ್ಪರ್ಧಾತ್ಮಕ ಗುರಿ ಎದುರು ಕೇವಲ 34 ರನ್ನಿಗೇ ಪ್ರಮುಖ 4 ಬ್ಯಾಟರ್‌ಗಳು ಪೆವಿಲಿಯನ್ ಸೇರಿಕೊಂಡಿದ್ದ ಹೊತ್ತಲ್ಲಿ, ಬೀಸು ಹೊಡೆತಗಾರ ಹಾರ್ದಿಕ್ ಪಾಂಡ್ಯ ಜೊತೆಗೂಡಿ ಸಮಾಧಾನದಿಂದ ಇನಿಂಗ್ಸ್ ಕಟ್ಟಿದ್ದ ಕೊಹ್ಲಿ, 17ನೇ ಓವರ್‌ವರೆಗೆ ವಿಕೆಟ್ ಕೈಚೆಲ್ಲದೆ ಸ್ಥಿರತೆ ನೀಡಿದ್ದರು. ಆದರೆ, ಅಷ್ಟರಲ್ಲಿ ಗೆಲ್ಲಲು ಬೇಕಿದ್ದ ಮೊತ್ತ ಶಿಖರಕ್ಕೇರಿತ್ತು. ದೊಡ್ಡ ಹೊಡೆತಗಳಿಗೆ ಹೆಸರಾಗಿದ್ದ ಹಾರ್ದಿಕ್ ಬ್ಯಾಟ್, ಕೊನೇ ಕ್ಷಣದಲ್ಲಿ ಕೈಕೊಟ್ಟಿದ್ದರಿಂದ 8 ಎಸೆತಗಳಲ್ಲಿ 28 ರನ್ ಗಳಿಸುವ ಸವಾಲು ಇತ್ತು.
ವೇಗಿ ಹ್ಯಾರಿಸ್ ರೌಫ್ ಎಸೆದ 19ನೇ ಓವರ್‌ನ 5ನೇ ಎಸೆತದಲ್ಲಿ 'ಶತಮಾನದ ಹೊಡೆತ' ಪ್ರಯೋಗಿಸಿ ಸಿಕ್ಸರ್ ಸಿಡಿಸಿದ ʼಕಿಂಗ್ʼ, ಕೊನೇ ಎಸೆತವನ್ನು ಫೈನ್ ಲೆಗ್‌ನತ್ತ ಬೌಂಡರಿ ಗೆರೆ ದಾಟಿಸಿ, ಪಂದ್ಯವನ್ನು ಅಕ್ಷರಶಃ ಪಾಕ್ ಕೈಯಿಂದ ಕಸಿದುಕೊಂಡಿದ್ದರು.
ತಾವೆದುರಿಸಿದ ಮೊದಲ 42 ಎಸೆತಗಳಲ್ಲಿ 46 ರನ್ ಮಾತ್ರ ಗಳಿಸಿದ್ದ ಕೊಹ್ಲಿ, ನಂತರದ 11 ಎಸೆತಗಳಲ್ಲಿ ದೋಚಿದ್ದು 36 ರನ್‌ಗಳನ್ನು. ಹೀಗೆ, ಪರಿಸ್ಥಿತಿಗೆ ತಕ್ಕಂತೆ ಒಂದೊಂದೇ ರನ್ ಹೆಕ್ಕುವುದು ಅಥವಾ ಅಗತ್ಯವಿದ್ದಾಗ ಬೌಲರ್‌ಗಳ ಮೇಲೆ ಬಿರುಗಾಳಿಯಂತೆ ಎರಗುವ ಕಲೆ ಕೊಹ್ಲಿಗೆ ಸಿದ್ಧಿಸಿದೆ.
ಅಂದು ಪಾಕ್ ವಿರುದ್ಧ ಕೊಹ್ಲಿ ಆಡಿದ್ದ ಆಟಕ್ಕೆ ಮನಸೋಲದವರಿಲ್ಲ. ಆ ಬ್ಯಾಟಿಂಗ್ ವೈಖರಿಯು 'ದೇವರೇ ಹಾಡಿದಂತಿತ್ತು' ಎಂದು ಆಸ್ಟ್ರೇಲಿಯಾದ ದಿಗ್ಗಜ ಗ್ರೇಗ್ ಚಾಪೆಲ್ ಶ್ಲಾಘಿಸಿದ್ದರು. 2016ರ ಚುಟುಕು ವಿಶ್ವಕಪ್ ವೇಳೆ, ಆಸ್ಟ್ರೇಲಿಯಾ ವಿರುದ್ಧ ಮೊಹಾಲಿಯಲ್ಲೂ ಅಂಥದೇ ಇನಿಂಗ್ಸ್ ಕಟ್ಟಿದ್ದರು ಕೊಹ್ಲಿ. ಸಮಕಾಲೀನ ಬ್ಯಾಟರ್‌ಗಳಿಗೆ ಸಿಂಹಸ್ವಪ್ನವಾಗಿದ್ದ ಶ್ರೀಲಂಕಾ ವೇಗಿ ಲಸಿತ್ ಮಲಿಂಗ ಎಸೆತಗಳನ್ನು 2012ರಲ್ಲಿ ಬೆನ್ನು ಬೆನ್ನಿಗೆ ಬೌಂಡರಿ, ಸಿಕ್ಸರ್‌ಗೆ ಅಟ್ಟಿದ್ದ ʼಯುವ ವಿರಾಟʼನ ಲೀಲಾಜಾಲ ಹೊಡೆತಗಳು ಈಗಲೂ ಕ್ರಿಕೆಟ್ ಪ್ರಿಯರಿಗೆ ಮುದ ನೀಡುತ್ತವೆ.
2023ರ ವಿಶ್ವಕಪ್ ನಂತರ ಕೊಹ್ಲಿ ಸಾಧನೆ ಹೇಗಿದೆ?
ಮೇಲಿನ ಪ್ರದರ್ಶನಗಳನ್ನೆಲ್ಲ ಪಕ್ಕಕ್ಕಿಟ್ಟು ನೋಡಿದರೆ, 2027 ಏಕದಿನ ವಿಶ್ವಕಪ್‌ನಲ್ಲಿ ಕೊಹ್ಲಿಗೆ ಸ್ಥಾನ ಸಿಗುವುದು ಇನ್ನೂ ಖಾತ್ರಿಯಾಗಿಲ್ಲ. ಕಳೆದ ವರ್ಷ ಮೇ ತಿಂಗಳಲ್ಲಿ ಟೆಸ್ಟ್‌ಗೂ ಗುಡ್‌ಬೈ ಹೇಳಿ, ಏಕದಿನ ಮಾದರಿಯಲ್ಲಷ್ಟೇ ಟೀ ಇಂಡಿಯಾವನ್ನು ಪ್ರತಿನಿಧಿಸುತ್ತಿರುವ ಅವರಿಗೀಗ 37 ವರ್ಷ. 2023ರ ವಿಶ್ವಕಪ್ ನಂತರ ಆಡಿರುವುದು 16 ಪಂದ್ಯಗಳನ್ನು ಮಾತ್ರ. 2024ರಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಅವರು ಗಳಿಸಿದ್ದು ಕೇವಲ 58 ರನ್.
2025ರಲ್ಲಿ ಆಡಿದ ಮೊದಲ 10 ಪಂದ್ಯಗಳಲ್ಲಿ ಒಂದು ಶತಕ ಹಾಗೂ ಎರಡು ಅರ್ಧಶತಕ ಸಹಿತ 484 ರನ್ ಗಳಿಸಿದ್ದರೂ, ಈ ಮೊತ್ತ ಅವರ ಸಾಮರ್ಥ್ಯಕ್ಕೆ ತಕ್ಕುದಲ್ಲ. ಏಕೆಂದರೆ, ಆ ಪಂದ್ಯಗಳಲ್ಲಿ ಎರಡು ಸಲ ಸೊನ್ನೆ ಸುತ್ತಿರುವ 'ಕಿಂಗ್', ಇನ್ನೆರಡು ಬಾರಿ ಎರಡಂಕಿಯನ್ನೇ ಮುಟ್ಟಿಲ್ಲ. ಮತ್ತೆರೆಡು ಇನಿಂಗ್ಸ್‌ಗಳಿಂದ ಬಂದದ್ದು 33 ರನ್. ಹೀಗಾಗಿ, ಇತ್ತೀಚೆಗೆ ನಡೆದ ದಕ್ಷಿಣ ಆಫ್ರಿಕಾ ಸರಣಿ ಹಾಗೂ 2026ರ ಆರಂಭದಲ್ಲೇ ಆಡುವ ಆಸ್ಟ್ರೇಲಿಯಾ ಟೂರ್ನಿ ಕೊಹ್ಲಿಯ 'ವಿಶ್ವಕಪ್' ಭವಿಷ್ಯ ನಿರ್ಧರಿಸಲಿವೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಅವೆಲ್ಲವನ್ನೂ ಮರೆಸುವಂತಹ ಆಟವನ್ನು, ಆಫ್ರಿಕಾ ಸರಣಿಯಲ್ಲಿ ಆಡಿದ್ದಾರೆ. ಕಣಕ್ಕಿಳಿದ ಮೂರು ಪಂದ್ಯಗಳಲ್ಲಿ ಸತತ ಎರಡು ಶತಕ ಹಾಗೂ ಒಂದು ಅಜೇಯ ಅರ್ಧಶತಕದೊಂದಿಗೆ 302 ರನ್ ಕಲೆಹಾಕಿ ಸಾಮರ್ಥ್ಯ ಸಾಬೀತು ಮಾಡಿದ್ದಾರೆ. ತಂಡದ ಗೆಲುವಿಗೆ ಕಾರಣವಾಗುವ ಮೂಲಕ ಸರಣಿ ಶ್ರೇಷ್ಠ ಎನಿಸಿದ್ದಷ್ಟೇ ಅಲ್ಲದೆ, ಫಿಟ್‌ನೆಸ್ ಕಾರಣಕ್ಕೂ ಸುದ್ದಿಯಾಗಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲ ನೀರು ಕುಡಿದಷ್ಟು ಸಲೀಸಾಗಿ ಮೂರು ರನ್ ಓಡುವ ಕೊಹ್ಲಿಯ ಚಾಕಚಕ್ಯತೆಗೆ ಸಾಟಿಯಾಗಬಲ್ಲ ಮತ್ತೊಬ್ಬ ಆಟಗಾರನನ್ನು ತಂಡದಲ್ಲಿ ಕಾಣಲಾಗದು. ಹಾಗಾಗಿ, ವಯಸ್ಸಾಯಿತು, ಏಕದಿನ ಕ್ರಿಕೆಟ್‌ನಿಂದಲೂ ನಿರ್ಗಮಿಸಿ ಯುವ ಪ್ರತಿಭೆಗಳಿಗೆ ಅವಕಾಶ ನೀಡಲಿ ಎಂದು ಹೇಳಿದವರೆಲ್ಲ ಬಾಯಿ ಮೇಲೆ ಬೆರಳಿಟ್ಟಕೊಳ್ಳುವಂತಾಗಿದೆ.
ಏಕದಿನ ಮಾದರಿಗೆ ಬೇಕಿದೆ ಕೊಹ್ಲಿ ಔರಾ!
ಟೆಸ್ಟ್ ಹಾಗೂ ಟಿ20 ಕ್ರಿಕೆಟ್‌ನ ಭರಾಟೆಯಲ್ಲಿ ಏಕದಿನ ಕ್ರಿಕೆಟ್ ಕಳೆದುಹೋಗುತ್ತಿದೆ ಎಂದು ಹಲವು ಹಿರಿಯ ಕ್ರಿಕೆಟಿಗರು ಕಳವಳ ವ್ಯಕ್ತಪಡಿಸಿದ್ದಾರೆ. ಆ ಸಾಲಿಗೆ ಇದೀಗ ಭಾರತದ ಮಾಜಿ ಆಟಗಾರರಾದ ಆರ್.ಅಶ್ವಿನ್ ಮತ್ತು ಇರ್ಫಾನ್ ಪಠಾಣ್ ಹೊಸ ಸೇರ್ಪಡೆ.
'ಕ್ರೀಡೆ, ವ್ಯಕ್ತಿಗಳಿಗಿಂತ ದೊಡ್ಡದು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಆಟದ ಮಹತ್ವ ಉಳಿಯಬೇಕಾದರೆ, ಕೊಹ್ಲಿ, ರೋಹಿತ್ ಅವರಂತಹ ದಿಗ್ಗಜರು ಆಡಲೇಬೇಕಾಗುತ್ತದೆ. ವಿಜಯ್ ಹಜಾರರೆ ಟ್ರೋಫಿ ದೇಶೀಯ ಕ್ರಿಕೆಟ್; ಅದನ್ನು ಹೆಚ್ಚು ಜನರು ನೋಡುವುದಿಲ್ಲ. ಆದರೆ, ಈ ಬಾರಿ 'ರೋ–ಕೊ' ಆಡಿದ್ದರಿಂದ, ಆ ಟೂರ್ನಿಯನ್ನೂ ಹೆಚ್ಚು ಮಂದಿ ವೀಕ್ಷಿಸಿದರು. ಒಂದು ವೇಳೆ ಇವರಿಬ್ಬರೂ ಏಕದಿನ ಕ್ರಿಕೆಟ್ ಆಡುವುದನ್ನು ನಿಲ್ಲಿಸಿದರೆ, ಮುಂದೆ (ಈ ಮಾದರಿಯ ಭವಿಷ್ಯ) ಏನಾಗುವುದೋ ಗೊತ್ತಿಲ್ಲ' ಎಂದಿದ್ದಾರೆ ಅಶ್ವಿನ್.
'ಏಕದಿನ ಮಾದರಿಗೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ವಿರಾಟ್ ಹಾಗೂ ರೋಹಿತ್ ಶರ್ಮಾ ಅವರ ಜನಪ್ರಿಯತೆಯನ್ನು ಬಳಸಿಕೊಳ್ಳಬೇಕು' ಎಂದು ಪಠಾಣ್ ಅವರು ಐಸಿಸಿ ಹಾಗೂ ಬಿಸಿಸಿಐಗೆ ಸಲಹೆ ನೀಡಿದ್ದಾರೆ. ಇವರಿಬ್ಬರ ಮಾತುಗಳು, ಏಕದಿನ ಕ್ರಿಕೆಟ್ ಮಟ್ಟಿಗೆ ಕೊಹ್ಲಿ ಮತ್ತು ರೋಹಿತ್ ಅವರ ಪಾತ್ರ ಎಷ್ಟು ಮುಖ್ಯ ಎಂಬುದನ್ನು ಒತ್ತಿ ಹೇಳುತ್ತವೆ.
50ನೇ ವಯಸ್ಸಿನ ವರೆಗೂ ಆಡಬಲ್ಲರೇ ಕೊಹ್ಲಿ?
ತಮ್ಮ ಅವಧಿಯಲ್ಲಿ ಟೀಂ ಇಂಡಿಯಾದಲ್ಲಿ ವೈಯಕ್ತಿಕ ಸೂಪರ್‌ಸ್ಟಾರ್ ಸಂಸ್ಕೃತಿ ಕೊನೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಗೌತಮ್ ಗಂಭಿರ್ ಅವರು ಮುಖ್ಯ ಕೋಚ್ ಆದ ಆರಂಭದ ದಿನಗಳಲ್ಲಿ ಹೇಳಿದ್ದರು. ತಂಡದಲ್ಲಿ ಆಟಗಾರರ ಸ್ಥಾನವನ್ನು ಅವರ ಪ್ರದರ್ಶನ ನಿರ್ಧರಿಸುತ್ತದೆಯೇ ಹೊರತು, ಅವರಿಗೆ ಇರುವ ಹೆಸರು, ಸೂಪರ್‌ಸ್ಟಾರ್ ಗಿರಿ ಅಲ್ಲ ಎಂದಿದ್ದ ಗೌತಮ್, ಎಲ್ಲರೂ ಸಮಾನರು. ರಾಷ್ಟ್ರೀಯ ತಂಡದಲ್ಲಿ ಆಡುವ ಅನುಭವಿಗಳೂ ದೇಶೀಯ ಕ್ರಿಕೆಟ್‌ನಲ್ಲಿ ಆಡಬೇಕು ಎಂಬಿತ್ಯಾದಿ ನಿಯಮಗಳನ್ನೂ ಜಾರಿಗೊಳಿಸಿದ್ದರು. ಆದರೆ, ಈ ನಿಯಮಗಳ ಮೂಲಕ ಕೊಹ್ಲಿ ಹಾಗೂ ರೋಹಿತ್ ಅವರನ್ನು ಹಣಿಯುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಅಭಿಪ್ರಾಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು.
ಹಾಗೆ ನೋಡಿದರೆ, ಕೊಹ್ಲಿಯನ್ನು ಟೀಂ ಇಂಡಿಯಾದಿಂದ ಹೊರಗಿಡುವುದು ಸದ್ಯದ ಪರಿಸ್ಥಿತಿಯಲ್ಲಿ ಅಷ್ಟು ಸುಲಭವೂ ಅಲ್ಲ. ಮೂರನೇ ಕ್ರಮಾಂಕದಲ್ಲಿ ಅವರ ಸ್ಥಾನ ತುಂಬಬಲ್ಲ ಮತ್ತೊಬ್ಬ ಆಟಗಾರ ಟೀಂ ಇಂಡಿಯಾದಲ್ಲಿ ಇನ್ನಷ್ಟೇ ತಯಾರಾಗಬೇಕಿದೆ.
ಕೊಹ್ಲಿಯ ಫಾರ್ಮ್ ಹಾಗೂ ಫಿಟ್‌ನೆಸ್ ಕುರಿತು ವೆಸ್ಟ್ ಇಂಡೀಸ್ ದಿಗ್ಗಜ ವಿವಿಯನ್ ರಿಚರ್ಡ್ಸನ್ ಅವರು, 'ಕೊಹ್ಲಿ ತಮ್ಮ 50ನೇ ವಯಸ್ಸಿನ ವರೆಗೂ ಆಡಬಲ್ಲರು' ಎಂದು ಅಭಿಪ್ರಾಯಪಟ್ಟಿದ್ದಾರೆ.
'ಆಡುವ ಹಾಗೂ ರನ್ ಗಳಿಸುವ ವಿಚಾರದಲ್ಲಿ ಕೊಹ್ಲಿಗಿರುವ ಹಸಿವನ್ನು ಬೇರೆಯವರಲ್ಲಿ ಕಾಣುವುದು ಕಷ್ಟಸಾಧ್ಯ. ಅಂತಹ ಮನಸ್ಥಿತಿ ಇರುವವರನ್ನು ಹೊರಗಿಡಲು ಹೇಗೆ ಸಾಧ್ಯ. ಕ್ರಿಕೆಟ್ ಜಗತ್ತಿನ ಅತ್ಯಂತ ಫಿಟ್ ಆಟಗಾರನಾಗಿರುವ ಅವರು, ಮುಂಬರುವ ವಿಶ್ವಕಪ್‌ನಲ್ಲಿ ಆಡುವರೇ ಎನ್ನುವ ಅನುಮಾನಗಳೇ ಬೇಡ' ಎಂದು ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ವಿಶ್ಲೇಷಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಡೇಲ್ ಸ್ಟೇಯ್ನ್ ಅವರು, 'ಸದ್ಯದ ಮಟ್ಟಿಗೆ ವಿರಾಟ್ ಕೊಹ್ಲಿ ಅವರ ಸ್ಥಾನ ತುಂಬುವುದು ಯಾರಿಗೂ ಸಾಧ್ಯವಿಲ್ಲ. ಏಕದಿನ ಮಾದರಿಯಲ್ಲಿ ಅವರ ಸಾಧನೆಯನ್ನು ಅಂಕಿ-ಅಂಶಗಳೇ ಹೇಳುತ್ತವೆ' ಎಂದಿದ್ದರೆ, ಮೊಹಮ್ಮದ್ ಕೈಫ್ ಅವರು, 'ಕೊಹ್ಲಿಯಂತಹ ಆಟಗಾರರನ್ನು ತಂಡದಿಂದ ಕೈಬಿಡುವುದು ಕಷ್ಟ. ಅವರು ಇದ್ದರೆ, ಇಡೀ ತಂಡದ ಉತ್ಸಾಹ ಇಮ್ಮಡಿಯಾಗುತ್ತದೆ. ಗುರಿ ಬೆನ್ನತ್ತುವ ವಿಚಾರದಲ್ಲಿ ಕೊಹ್ಲಿಯನ್ನು ಮೀರಿಸುವ ಆಟಗಾರರು ಇಲ್ಲ' ಎಂದು ಪ್ರತಿಪಾದಿಸಿದ್ದಾರೆ.
ಕೊಹ್ಲಿಯನ್ನು ಟೀಕಿಸುವ ಮೂಲಕ ಹಲವು ಬಾರಿ ಸುದ್ದಿಯಾಗಿದ್ದ ಅಂಬಟಿ ರಾಯುಡು ಕೂಡ, '3ನೇ ಕ್ರಮಾಂಕದಲ್ಲಿ ಕೊಹ್ಲಿಯ ಸ್ಥಾನ ತುಂಬಬಲ್ಲ ಇನ್ನೊಬ್ಬ ಆಟಗಾರನಿಲ್ಲ. ಏಕದಿನ ಮಾದರಿಗೆ ವಿಶ್ವದಲ್ಲೇ ಅತ್ಯುತ್ತಮ ಆಟಗಾರ. ಪರಿಸ್ಥಿತಿಗೆ ತಕ್ಕಂತೆ ಆಡುವ ಅವರಂತಹ ಆಟಗಾರ ತಂಡದಲ್ಲಿ ಇರಲೇಬೇಕು' ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನೂ ಅನೇಕರು ಇಂತಹವೇ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಏಕದಿನ ಮಾದರಿಯಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಸಾಧನೆ
| ಐಸಿಸಿ ರ‍್ಯಾಂಕ್ | 2 |
|---|---|
| ಪಂದ್ಯ | 308 |
| ಇನಿಂಗ್ಸ್ | 296 |
| ರನ್ | 14,557 |
| ಸರಾಸರಿ | 58.46 |
| ಸ್ಟ್ರೈಕ್‌ರೇಟ್ | 93.66 |
| ಶತಕ | 53 |
| ಅರ್ಧಶತಕ | 76 |
| ಗರಿಷ್ಠ | 183 |
| ಬೌಂಡರಿ | 1,356 |
| ಸಿಕ್ಸ್ | 165 |
| ಶೂನ್ಯ | 18 |
| ಶೂನ್ಯ | 18 |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.