
ರವಿಚಂದ್ರನ್ ಅಶ್ವಿನ್
ಕೃಪೆ: ಪಿಟಿಐ
ಚೆನ್ನೈ: ದಕ್ಷಿಣ ಆಫ್ರಿಕಾ ಆತಿಥ್ಯದಲ್ಲಿ 2027ರಲ್ಲಿ ನಡೆಯುವ ವಿಶ್ವಕಪ್ ಟೂರ್ನಿಯ ಬಳಿಕ ಏಕದಿನ ಕ್ರಿಕೆಟ್ ಮಾದರಿ ಉಳಿಯುವುದೇ ಅನುಮಾನ ಎಂದು ಭಾರತದ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ಕಳವಳ ವ್ಯಕ್ತಪಡಿಸಿದ್ದಾರೆ.
ವಿಶ್ವದಾದ್ಯಂತ ಟಿ20 ಕ್ರಿಕೆಟ್ ಲೀಗ್‌ಗಳು ನಾಯಿಕೊಡೆಗಳಂತೆ ಹೆಚ್ಚಾಗುತ್ತಲೇ ಇವೆ. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯೂ (ಐಸಿಸಿ) ಅಂತಹ ಆಕರ್ಷಕ ಟೂರ್ನಮೆಂಟ್‌ಗಳ ಆಯೋಜನೆಗೆ ಒತ್ತು ನೀಡುತ್ತಿರುವುದರಿಂದ ಏಕದಿನ ಮಾದರಿಯ ಉಳಿವಿಗೆ ಆತಂಕ ಎದುರಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಟಿ20 ಲೀಗ್‌ಗಳು ಹಾಗೂ ಟೆಸ್ಟ್ ಕ್ರಿಕೆಟ್‌ಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿರುವುದರಿಂದ ಏಕದಿನ ಪಂದ್ಯಗಳು ಬಹುತೇಕ ಅನಗತ್ಯ ಎನ್ನುವಂತಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ಯುಟ್ಯೂಬ್ ಚಾನೆಲ್ 'Ash Ki Baat'ನಲ್ಲಿ ಮಾತನಾಡಿರುವ ಅಶ್ವಿನ್, '2027ರ ವಿಶ್ವಕಪ್ ನಂತರ ಏಕದಿನ ಪಂದ್ಯಗಳಿಗೆ ಭವಿಷ್ಯವಿದೆಯೇ ಎಂಬ ಬಗ್ಗೆ ನನಗಂತೂ ಖಾತ್ರಿ ಇಲ್ಲ. ಆ ಬಗ್ಗೆ ಸ್ವಲ್ಪ ಚಿಂತೆ ಇದೆ' ಎಂದಿದ್ದಾರೆ.
ಮುಂದುವರಿದು, 'ದೇಶೀಯ ಕ್ರಿಕೆಟ್ ಟೂರ್ನಿ ವಿಜಯ್ ಹಜಾರೆ ಟ್ರೋಫಿ ಏಕದಿನ ಪಂದ್ಯಗಳನ್ನು ನೋಡುತ್ತಿದ್ದೇನೆ. ಆದರೆ, ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಪಂದ್ಯಗಳನ್ನು ನೋಡುವಂತೆ ಏಕದಿನ ಪಂದ್ಯಗಳನ್ನು ನೋಡಲು ಆಗುತ್ತಿಲ್ಲ' ಎಂದಿದ್ದಾರೆ. ಆ ಮೂಲಕ, ಚುಟುಕು ಕ್ರಿಕೆಟ್ ಭರಾಟೆಯಲ್ಲಿ ಏಕದಿನ ಪಂದ್ಯಗಳ ಮೇಲಿನ ಆಸಕ್ತಿ ಕುಸಿಯುತ್ತಿದೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
'ಪ್ರೇಕ್ಷಕರೂ ಅದನ್ನೇ (ಟಿ20) ನೋಡಲು ಇಷ್ಟಪಡುತ್ತಾರೆ ಎಂಬುದು ಗೊತ್ತಿರಬೇಕು. ಟೆಸ್ಟ್ ಕ್ರಿಕೆಟ್‌ಗೆ ಸಾಕಷ್ಟು ಅವಕಾಶಗಳಿವೆ ಅಂದುಕೊಂಡಿದ್ದೇನೆ. ಆದರೆ, ಏಕದಿನ ಮಾದರಿಗೆ ಅಷ್ಟು ಪ್ರಾಧಾನ್ಯತೆ ಉಳಿದಿಲ್ಲ ಅನಿಸುತ್ತದೆ' ಎಂದು ಹೇಳಿದ್ದಾರೆ.
'ಸ್ಟಾರ್‌ಗಳು ಬೇಕು'
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಪರ ಅತಿಹೆಚ್ಚು (765) ವಿಕೆಟ್ ಪಡೆದವರ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿರುವ ಅಶ್ವಿನ್, ಅಭಿಮಾನಿಗಳನ್ನು ಏಕದಿನ ಮಾದರಿಯತ್ತ ಆಕರ್ಷಿಸಲು ತಾರಾ ಆಟಗಾರರ ಅಗತ್ಯವಿದೆ ಎಂದು ಹೇಳಿದ್ದಾರೆ. ಅನುಭವಿಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಇತ್ತೀಚೆಗೆ ವಿಜಯ್ ಹಜಾರೆ ಟೂರ್ನಿಯಲ್ಲಿ ಆಡಿದ ಪಂದ್ಯಗಳನ್ನು ಹೆಚ್ಚು ಜನರು ವೀಕ್ಷಿಸಿದ್ದನ್ನು ಉಲ್ಲೇಖಿಸಿ ಈ ಮಾತನ್ನು ಹೇಳಿದ್ದಾರೆ.
'ರೋಹಿತ್ ಹಾಗೂ ವಿರಾಟ್ ಅವರು ವಿಜಯ್ ಹಜಾರೆ ಟ್ರೋಫಿಗೆ ವಾಪಸ್ ಆಗುತ್ತಿದ್ದಂತೆ, ಜನರೂ ಆ ಪಂದ್ಯಗಳನ್ನು ನೋಡಲಾರಂಭಿಸಿದರು. ಕ್ರೀಡೆ, ಆಟಗಾರರಿಗಿಂತ ದೊಡ್ಡದು ಎಂಬುದು ನಮಗೆಲ್ಲ ಗೊತ್ತು. ಆದರೆ, ಆಟಕ್ಕೆ ಪುನಶ್ಚೇತನ ನೀಡಲು ಇಂತಹ ಆಟಗಾರರು ವಾಪಸ್ ಆಗುವುದು ಮುಖ್ಯ' ಎಂದು ಪ್ರತಿಪಾದಿಸಿದ್ದಾರೆ.
'ವಿಜಯ್ ಹಜಾರೆ ಟ್ರೋಫಿ ದೇಶೀಯ ಕ್ರಿಕೆಟ್ ಸ್ಪರ್ಧೆಯಾಗಿರುವುದರಿಂದ ಹೆಚ್ಚು ಜನರು ನೋಡುವುದಿಲ್ಲ. ಆದರೆ, ಈ ಬಾರಿ ವಿರಾಟ್ ಮತ್ತು ರೋಹಿತ್ ಆಡುತ್ತಿದ್ದಾರೆ ಎಂಬ ಕಾರಣಕ್ಕೇ ಸಾಕಷ್ಟು ಮಂದಿ ನೋಡುತ್ತಿದ್ದಾರೆ. ಒಂದು ವೇಳೆ ಅವರಿಬ್ಬರೂ ಏಕದಿನ ಮಾದರಿಯಲ್ಲಿ ಆಡುವುದನ್ನು ನಿಲ್ಲಿಸಿದರೆ, ಏನಾಗಬಹುದು?' ಎಂದು ಪ್ರಶ್ನಿಸಿದ್ದಾರೆ.
ಅಂತರರಾಷ್ಟ್ರೀಯ ಏಕದಿನ ಮಾದರಿಯಲ್ಲಿ ವಿರಾಟ್ ಹಾಗೂ ರೋಹಿತ್ ಸಾಧನೆ
| ಅಂಕಿ–ಅಂಶ | ರೋಹಿತ್ ಶರ್ಮಾ | ವಿರಾಟ್ ಕೊಹ್ಲಿ |
|---|---|---|
| ಪ್ರಸ್ತುತ ರ‍್ಯಾಂಕ್ | 1 | 2 |
| ಪಂದ್ಯ | 279 | 308 |
| ಇನಿಂಗ್ಸ್ | 271 | 296 |
| ರನ್ | 11,516 | 14,557 |
| ಸರಾಸರಿ | 49.21 | 58.46 |
| ಸ್ಟ್ರೈಕ್‌ರೇಟ್ | 92.86 | 93.66 |
| ಶತಕ | 33 | 53 |
| ಅರ್ಧಶತಕ | 61 | 76 |
| ಗರಿಷ್ಠ | 264 | 183 |
| ಬೌಂಡರಿ | 1,080 | 1,356 |
| ಸಿಕ್ಸ್ | 355 | 165 |
| ಶೂನ್ಯ | 16 | 18 |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.