ADVERTISEMENT

ಸಾಧನೆಗೆ ಪೂರಕವಲ್ಲದ ತಂತ್ರಜ್ಞಾನ ಬಳಕೆ ಮಾರಕ: ವಿರಾಟ್ ಕೊಹ್ಲಿ

ಕ್ರೀಡೆಗಳ ಕುರಿತ ಶಿಕ್ಷಣದಿಂದ ಬೆಳವಣಿಗೆ ಸಾಧ್ಯ: ವಿರಾಟ್ ಕೊಹ್ಲಿ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2025, 23:30 IST
Last Updated 15 ಮಾರ್ಚ್ 2025, 23:30 IST
<div class="paragraphs"><p>ಬೆಂಗಳೂರಿನಲ್ಲಿ ಶನಿವಾರ ನಡೆದ ಇಂಡಿಯಾ ಸ್ಪೋರ್ಟ್ಸ್ ಸಮಿಟ್‌ನಲ್ಲಿ ನಡೆದ ಸಂವಾದದಲ್ಲಿ ಇಸಾ ಗುಹಾ ಮತ್ತು ವಿರಾಟ್ ಕೊಹ್ಲಿ ಭಾಗವಹಿಸಿದ್ದರು</p></div>

ಬೆಂಗಳೂರಿನಲ್ಲಿ ಶನಿವಾರ ನಡೆದ ಇಂಡಿಯಾ ಸ್ಪೋರ್ಟ್ಸ್ ಸಮಿಟ್‌ನಲ್ಲಿ ನಡೆದ ಸಂವಾದದಲ್ಲಿ ಇಸಾ ಗುಹಾ ಮತ್ತು ವಿರಾಟ್ ಕೊಹ್ಲಿ ಭಾಗವಹಿಸಿದ್ದರು

   

ಬೆಂಗಳೂರು: ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಅವರು ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ
ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ಯಾವುದೇ ಒಂದು ತಾಣದಲ್ಲಿ ಹಾಕುವ ಚಿತ್ರ, ವಿಡಿಯೊ ಅಥವಾ ಸಂದೇಶಕ್ಕೆ ಅಪಾರ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಜೊತೆಗೆ  ಆ ಸಂದೇಶಗಳಿಂದ ಕೊಹ್ಲಿ ಅವರಿಗೆ ಲಭಿಸಿದ ಆದಾಯದ ದಾಖಲೆಗಳೂ ಸುದ್ದಿಯಾಗುತ್ತವೆ.  ಆದರೆ ಈಗ ಅದೇ ವಿರಾಟ್ ಅವರು ಸಾಮಾಜಿಕ ಜಾಲತಾಣ ಬಳಕೆಯಿಂದ ಅಂತರ ಕಾಯ್ದುಕೊಂಡಿದ್ದಾರಂತೆ.

ಶನಿವಾರ ರಾಹುಲ್ ದ್ರಾವಿಡ್ –ಪ್ರಕಾಶ್ ಪಡುಕೋಣೆ ಅಕಾಡೆಮಿಯಲ್ಲಿ ಆರ್‌ಸಿಬಿ ಇನೋವೆಟಿವ್ ಲ್ಯಾಬ್ ಆಯೋಜಿಸಿದ್ದ ಇಂಡಿಯನ್ ಸ್ಪೋರ್ಟ್ಸ್ ಸಮಿಟ್‌ನಲ್ಲಿ ಭಾಗವಹಿಸಿದ್ದ ಅವರು ಈ ಸಂಗತಿ ಬಿಚ್ಚಿಟ್ಟರು. ಈ ಕುರಿತು ವೀಕ್ಷಕ ವಿವರಣೆಗಾರ್ತಿ ಇಸಾ ಗುಹಾ ಅವರೊಂದಿಗೆ ಮಾತುಕತೆ ನಡೆಸಿದರು. 

ADVERTISEMENT

‘ನಾನು ನಿಜಕ್ಕೂ ಅದೃಷ್ಟಶಾಲಿ. ಏಕೆಂದರೆ ನಾನು ಜನಿಸಿದ ಕಾಲಘಟ್ಟದಲ್ಲಿ ಇಷ್ಟೊಂದು ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳು ಇರಲಿಲ್ಲ. ಆಟದ ಮೇಲೆ ಸಂಪೂರ್ಣ ಏಕಾಗ್ರತೆ ಸಾಧಿಸಲು ಅಡೆತಡೆ ಇರಲಿಲ್ಲ. ಸ್ನೇಹಿತರೊಂದಿಗೆ ಬೆರೆಯುತ್ತಿದ್ದೆವು. ಆದರೆ ಈಗ ತಂತ್ರಜ್ಞಾನ ಬಹಳಷ್ಟು ಬೆಳೆದಿದೆ. ಇದು ನಮ್ಮ ಹಾಗೂ ಕ್ರಿಕೆಟ್ ಬೆಳವಣಿಗೆಗೂ ನೆರವಾಗಿದೆ. ಬೆಳವಣಿಗೆಗೆ ಪೂರಕವಾಗುವಷ್ಟು ತಂತ್ರಜ್ಞಾನ ಬಳಸಬೇಕು. ನಮ್ಮ ಗುರಿ ಸಾಧನೆಗೆ ಪೂರಕವಲ್ಲದ ತಂತ್ರಜ್ಞಾನದ ಬಳಕೆ ಮಾಡಬಾರದು. ಪದೇ ಪದೇ ಸಾಮಾಜಿಕ ಜಾಲತಾಣದಲ್ಲಿ ಮುಳುಗಿದರೆ ಅದು ನಮ್ಮ ಶಕ್ತಿಯನ್ನು ಹೀರಿಬಿಡುತ್ತದೆ’ ಎಂದರು. 

‘ಸ್ವಯಂ ಅರಿವು ಮುಖ್ಯ. ಆದ್ದರಿಂದ ಪ್ರತಿದಿನವೂ ಒಂದಷ್ಟು ಹೊತ್ತು ಸ್ವಯಂ ಅವಲೋಕನ ಮಾಡಿಕೊಳ್ಳಬೇಕು. ನಮ್ಮೊಂದಿಗೆ ನಾವೇ ಸಂವಾದ ನಡೆಸ ಬೇಕು. ನಾವು ಏನು ಸಾಧಿಸಿದ್ದೇವೆ. ಏನು ಮಾಡಬೇಕು. ತಪ್ಪುಗಳನ್ನು ತಿದ್ದಿಕೊಳ್ಳು ವುದು ಹೇಗೆ ಎಂಬ ಸಂವಾದ ಅದಾಗಿ ರಬೇಕೆಂದು ಈ ಹಿಂದೆ ನಮಗೆ ಮುಖ್ಯ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಹೇಳಿದ್ದರು. ನಮ್ಮ ಗುರಿಯ ಬಗ್ಗೆ ಸ್ಪಷ್ಟತೆ ಬರಬೇಕಾದರೆ ಸ್ವಯಂ ಸಂವಾದ ಮುಖ್ಯ’ ಎಂದು ವಿರಾಟ್ ಹೇಳಿದರು. 

ಕ್ರೀಡೆ ಕುರಿತ ಶಿಕ್ಷಣ ಮುಖ್ಯ: ಭಾರತದಲ್ಲಿ ಕ್ರಿಕೆಟ್ ಅಲ್ಲದೇ ಬೇರೆ ಕ್ರೀಡೆಗಳ ಅರಿವು ಮತ್ತು ಆಕರ್ಷಣೆ ಹೆಚ್ಚಬೇಕಾದರೆ ಶಿಕ್ಷಣ ಮುಖ್ಯ ಎಂದು ವಿರಾಟ್ ಪ್ರತಿಪಾದಿಸಿದರು. 

‘ಕ್ರೀಡೆಗಳಲ್ಲಿ  ಗೆದ್ದವರನ್ನು ಪ್ರೋತ್ಸಾ ಹಿಸುವುದು ಮತ್ತು ಸಂಭ್ರಮಿಸುವುದು ಒಂದು ಭಾಗವಷ್ಟೇ. ಆದರೆ ಆ ಕ್ರೀಡೆಗಳ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕು. ನಿಯಮಗಳು, ಆಟದ ಮಹತ್ವ, ಫಿಟ್‌ನೆಸ್‌ ಕುರಿತಾದ ಗಂಭೀರ ವಾದ ಶಿಕ್ಷಣ ನೀಡಬೇಕು. ಕೇವಲ ಆಟಗಾರರ ಆಹಾರ, ವಿಹಾರ, ವಸ್ತ್ರವಿನ್ಯಾಸಗಳ ಕುರಿತು ಮಾಹಿತಿಗಳ ಆಕರ್ಷಣೆ ತಾತ್ಕಾಲಿಕ. ಇವತ್ತು ಕ್ರಿಕೆಟ್ ಜನಪ್ರಿಯವಾಗಲು ಅರಿವು ಕಾರಣ. ಆಟದೊಳಗಿನ ತಾಂತ್ರಿಕ ಅಂಶಗಳು, ನಿಯಮಗಳು, ಆಟಗಾರರ ಕುರಿತ ಮಾಹಿತಿ ಇತ್ಯಾದಿಗಳು ಬಹುಪಾಲು ಜನರಿಗೆ ಗೊತ್ತು’ ಎಂದರು. 

‘ಎಲ್ಲ ಕ್ರೀಡೆಗಳ ತರಬೇತಿ  ಮತ್ತು ಶಿಕ್ಷಣ ನೀಡುವ ವಿಶ್ವವಿದ್ಯಾಲಯಗಳು ನಿರ್ಮಾಣಗೊಳ್ಳಬೇಕು. ಉದಾಹರಣೆಗೆ; ಕ್ರಿಕೆಟ್‌ ಆಡುವವರಿಗೆ ಉಳಿದ ಕ್ರೀಡೆಗಳ ಮಾಹಿತಿ ಗೊತ್ತಾಗಬೇಕು. ಬೇರೆ ಕ್ರೀಡಾಪಟುಗಳ ಅಭ್ಯಾಸ, ಪರಿಶ್ರಮ, ಆಹಾರ, ವಿಹಾರ ಮತ್ತು ಮಾನಸಿಕ ಸಾಮರ್ಥ್ಯಗಳ ಕುರಿತು ಅರಿವಾಗಬೇಕು. ಎಲ್ಲ ಕ್ರೀಡೆಗಳೂ ಪೂರಕವಾಗಿ ಬೆಳೆಯಬೇಕು. ಕ್ರೀಡಾಪಟುಗಳನ್ನು ಬಾಲ್ಯದಿಂದಲೇ ಪ್ರೋತ್ಸಾಹಿಸುವ ವ್ಯವಸ್ಥೆ ಬೆಳೆಯಬೇಕು. ಅವರು ಉನ್ನತ ಸಾಧನೆ ಮಾಡಿದಾಗ ಎಲ್ಲರೂ ಬೆನ್ನುತಟ್ಟಲು ಮುಂದಾಗುತ್ತಾರೆ. ಆದರೆ ಬಾಲ್ಯದಿಂದ ಪ್ರತಿಭಾಶೋಧ ಮಾಡಿ, ಮೂಲಸೌಲಭ್ಯ ನೀಡಬೇಕು’ ಎಂದರು. 

ಉದ್ವೇಗಕ್ಕೊಳಗಾಗಬೇಡಿ, ನಿವೃತ್ತಿ ಆಗಲ್ಲ...

‘ಯಾರೂ ಉದ್ವೇಗಕ್ಕೊಳಗಾಗಬೇಡಿ. ನಾನು ಯಾವುದೇ (ನಿವೃತ್ತಿ) ಘೋಷಣೆ ಮಾಡಲು ಬಂದಿಲ್ಲ. ಇನ್ನಷ್ಟು ಕಾಲ ಕ್ರಿಕೆಟ್ ಆಡುತ್ತೇನೆ. ಈ ಆಟವನ್ನು ನಾನು ಬಹಳ ಪ್ರೀತಿಸುತ್ತೇನೆ’ ಎಂದು ವಿರಾಟ್ ಕೊಹ್ಲಿ ಹೇಳಿದರು. 

ಇದರೊಂದಿಗೆ ತಮ್ಮ ನಿವೃತ್ತಿಯ ಕುರಿತು ಕೆಲಕಾಲದಿಂದ ನಡೆಯುತ್ತಿದ್ದ ಚರ್ಚೆಗಳಿಗೆ ತೆರೆ ಎಳೆದರು. ಈಚೆಗೆ ಭಾರತ ತಂಡವು ದುಬೈನಲ್ಲಿ ಚಾಂಪಿಯನ್ಸ್ ಟ್ರೋಫಿ ಜಯಿಸಿದಾಗ ಕೊಹ್ಲಿ ನಿವೃತ್ತಿ ಘೋಷಿಸುವರು ಎಂಬ ಮಾತುಗಳು ಕೇಳಿಬಂದಿದ್ದವು. ಹೋದ ವರ್ಷ ಅಮೆರಿಕದಲ್ಲಿ ಟಿ20 ವಿಶ್ವಕಪ್ ಗೆದ್ದಾಗ ಅವರು ಚುಟುಕು ಮಾದರಿಗೆ ವಿದಾಯ ಹೇಳಿದ್ದರು. 

‘ಮುಂದೆ ನಿವೃತ್ತಿಯಾದಾಗ ಏನು ಮಾಡುವಿರಿ ಎಂದು ಬಹಳ ಜನ ಕೇಳುತ್ತಾರೆ. ಆದರೆ ನಾನು ಏನೂ ಯೋಜಿಸಿಲ್ಲ. ನನಗೂ ಗೊತ್ತಿಲ್ಲ. ಯಾವಾಗಲೂ ಹೃದಯ ಹೇಳುವುದನ್ನು ಕೇಳಿದ್ದೇನೆ. ಮನಸ್ಸಿಗೆ ಸಂತೋಷ ವಾಗುಷ್ಟೇ ಹಣ ಗಳಿಸುತ್ತೇನೆ. ಅದಕ್ಕಾಗಿ ಮೌಲ್ಯ ಬಿಡುವುದಿಲ್ಲ’ ಎಂದರು. 

ಕುಟುಂಬದ ಮಹತ್ವ: ಆಸ್ಟ್ರೇಲಿಯಾದಲ್ಲಿ ಈಚೆಗೆ ಟೆಸ್ಟ್ ಸರಣಿ ಸೋತ ನಂತರ ಆಟಗಾರರಿಗೆ ಕೆಲವು ನಿಬಂಧನೆಗಳನ್ನು ಹಾಕಿತ್ತು. ಅದರಲ್ಲಿ ಆಟಗಾರರು ವಿದೇಶ ಪ್ರವಾಸದ ಸಂದರ್ಭದಲ್ಲಿ ತಮ್ಮ ಕುಟುಂಬ ಸದಸ್ಯರನ್ನು ಕರೆದೊಯ್ಯುವುದಕ್ಕೆ ನಿಬಂಧನೆ ಹಾಕಿತ್ತು.  ಈ ನಿಯಮಕ್ಕೆ ಪರೋಕ್ಷವಾಗಿ ಚಾಟಿ ಬೀಸಿದ ವಿರಾಟ್, ‘ಆಟಗಾರರಿಗೆ ಕುಟುಂಬದ ಸಖ್ಯ ಬಹಳ ಮುಖ್ಯ. ತಮ್ಮ ಪಾಲಿನ ಕರ್ತವ್ಯ ನಿರ್ವಹಿಸಿದ ನಂತರ ಕುಟುಂಬದೊಂದಿಗೆ ನಿರಾಳವಾಗಿ ಕಾಲ ಕಳೆಯುವುದು ಉತ್ತಮ ಅನುಭೂತಿ’ ಎಂದರು.

ಒಲಿಂಪಿಕ್ಸ್ ಚಿನ್ನದ ಆಸೆ..

‘ಮುಂಬರುವ ಒಲಿಂಪಿಕ್ (2028) ಕೂಟದಲ್ಲಿ ಕ್ರಿಕೆಟ್ ಸೇರ್ಪಡೆಯಾಗಿದೆ. ಅದರಲ್ಲಿ ಒಂದೊಮ್ಮೆ ಭಾರತವು ಫೈನಲ್ ತಲುಪಿದರೆ ನಾನು ಟಿ20 ಕ್ರಿಕೆಟ್ ನಿವೃತ್ತಿಯನ್ನು ಹಿಂಪಡೆದು ಆಡುತ್ತೇನೆ. ಪದಕ ಗೆದ್ದು ಮನೆಗೆ ಬಂದು ಮತ್ತೆ ನಿವೃತ್ತನಾಗುತ್ತೇನೆ’ ಎಂದು ವಿರಾಟ್ ಲಘು ಹಾಸ್ಯದ ಧಾಟಿಯಲ್ಲಿ ಹೇಳಿದರು. 

‘ಒಲಿಂಪಿಕ್ಸ್ ಪದಕ ಜಯಿಸುವುದು ಎಂದರೆ ಅದೊಂದು ಅದ್ಭುತ ಸಾಧನೆ. ಒಲಿಂಪಿಕ್ ಪದಕವಿಜೇತ ಎನಿಸಿಕೊಳ್ಳುವುದು ಅಮೋಘವಾದದ್ದು’ ಎಂದರು. 

ಅಮ್ಮ ಮತ್ತು ಫಿಟ್‌ನೆಸ್

‘ನಾವು ಇವತ್ತು ಸ್ಪರ್ಧಾತ್ಮಕ ಯುಗದಲ್ಲಿದ್ದೇವೆ. ವಿದೇಶಿ ಆಟಗಾರರೊಂದಿಗೆ ಸ್ಪರ್ಧಿಸಲು ಅವರಿಗಿಂತ ದೈಹಿಕ ಮತ್ತು ಮಾನಸಿಕ ದೃಢತೆ ಮುಖ್ಯ. ಅದಕ್ಕೆ ತಕ್ಕಂತೆ ವ್ಯಾಯಾಮ, ಆಹಾರ, ವಿಹಾರಗಳು ಮುಖ್ಯವಾಗುತ್ತವೆ. ಫಿಟ್‌ನೆಸ್‌ ಪ್ರಯಾಣದಲ್ಲಿ ಎಲ್ಲವನ್ನೂ ಮಾಡಬಹುದು. ಆದರೆ ನನ್ನ ತಾಯಿಯ ಮನವೊಲಿಸುವುದು ಕಷ್ಟ. ಏಕೆಂದರೆ; ಅವರಿಗೆ ನಾನು ಪರೋಟಾ ತಿನ್ನುವುದನ್ನು ಬಿಟ್ಟಿದ್ದೇಕೆ ಎಂಬ ಚಿಂತೆ. ನಾನು ವೃತ್ತಿಪರವಾಗಿ ಫಿಟ್‌ ಆಗಿದ್ದರೂ ಅವರ ಕಣ್ಣಿಗೆ ಸೊರಗಿದಂತೆ ಕಾಣುತ್ತೇನೆ’ ಎಂದರು. ಸಭಿಕರೂ ನಗೆಗಡಲಲ್ಲಿ ತೇಲಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.