ADVERTISEMENT

ರವಿಶಾಸ್ತ್ರಿ ಮುಂದುವರಿಕೆಗೆ ಕೊಹ್ಲಿ ಒಲವು

ಪಿಟಿಐ
Published 29 ಜುಲೈ 2019, 19:45 IST
Last Updated 29 ಜುಲೈ 2019, 19:45 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ಮುಂಬೈ: ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ರವಿಶಾಸ್ತ್ರಿ ಮುಂದುವರಿಯುವುದಕ್ಕೆ ನಾಯಕ ವಿರಾಟ್ ಕೊಹ್ಲಿ ಒಲವು ವ್ಯಕ್ತಪಡಿಸಿದ್ದಾರೆ. ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಸೋತ ತಂಡದ ಕೋಚ್ ಸೇರಿದಂತೆ ಎಲ್ಲ ನೆರವು ಸಿಬ್ಬಂದಿ 45 ದಿನ ಮುಂದುವರಿಯಲು ಅವಕಾಶ ನೀಡಲಾಗಿದೆ.

ಆಗಸ್ಟ್ 3ರಿಂದ ಸೆಪ್ಟೆಂಬರ್ 3ರ ವರೆಗೆ ನಡೆಯಲಿರುವ ವೆಸ್ಟ್ ಇಂಡೀಸ್ ಎದುರಿನ ಸರಣಿಯ ಸಂದರ್ಭದಲ್ಲಿ ರವಿಶಾಸ್ತ್ರಿ, ಬೌಲಿಂಗ್ ಕೊಚ್ ಭರತ್ ಅರುಣ್, ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್‌ ಮತ್ತು ಫೀಲ್ಡಿಂಗ್ ಕೊಚ್ ಆರ್‌.ಶ್ರೀಧರ್ ತಂಡದೊಂದಿಗೆ ಇರುತ್ತಾರೆ. ಕಪಿಲ್ ದೇವ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ನಂತರ ಹೊಸ ಕೋಚ್ ಮತ್ತು ಸಿಬ್ಬಂದಿಯನ್ನು ಆಯ್ಕೆ ಮಾಡಲಿದೆ.

‘ಕೋಚ್ ಆಯ್ಕೆ ಬಗ್ಗೆ ಸಿಎಸಿ ನನ್ನೊಂದಿಗೆ ಚರ್ಚಿಸಲಿಲ್ಲ. ಆದರೆ ರವಿಶಾಸ್ತ್ರಿ ಅವರೇ ಆ ಸ್ಥಾನದಲ್ಲಿ ಮುಂದುವರಿದರೆ ನಮಗೆಲ್ಲರಿಗೂ ಖುಷಿಯಾಗಲಿದೆ. ಹೀಗಿದ್ದೂ ನಾನೇನೂ ಹೇಳುವಂತಿಲ್ಲ. ಎಲ್ಲವನ್ನೂ ಸಿಎಸಿ ನಿರ್ಧರಿಸಲಿದೆ’ ಎಂದು ಕೊಹ್ಲಿ ಹೇಳಿದರು.

ADVERTISEMENT

ಧೋನಿಗೆ ಮೆಚ್ಚುಗೆ
ನವದೆಹಲಿ (ಪಿಟಿಐ):
ವಿಕೆಟ್ ಲಭಿಸಿದಾಗ ಸೆಲ್ಯೂಟ್ ಮೂಲಕ ವಿಶಿಷ್ಟವಾಗಿ ಸಂಭ್ರಮಿಸುವ ವೆಸ್ಟ್ ಇಂಡೀಸ್‌ನ ಬೌಲರ್ ಶೆಲ್ಡನ್ ಕಾಟ್ರೆಲ್, ಭಾರತ ಸೇನೆಯ ಗೌರವ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿರುವ ಮಹೇಂದ್ರ ಸಿಂಗ್ ಧೋನಿ ಅವರನ್ನು ಹೊಗಳಿದ್ದಾರೆ. ಸೋಮವಾರ ಸರಣಿ ಟ್ವೀಟ್‌ಗಳನ್ನು ಮಾಡಿರುವ ಅವರು ಧೋನಿ ನಿಜವಾದ ದೇಶಪ್ರೇಮಿ ಎಂದು ಹೇಳಿದ್ದಾರೆ.

‘ಕ್ರಿಕೆಟ್ ಅಂಗಣದಲ್ಲಿ ಧೋನಿ ಎಲ್ಲರಿಗೂ ಪ್ರೇರಕ ಶಕ್ತಿಯಾಗಿರುತ್ತಾರೆ. ಆದರೆ ಅವರು ದೇಶಪ್ರೇಮಿಯೂ ಆಗಿರುವುದರಿಂದ ಅವರ ಮೇಲಿನ ಅಭಿಮಾನ ಹೆಚ್ಚಿದೆ. ಅವರ ಬಗ್ಗೆ ಕುಟುಂಬ ಸದಸ್ಯರು ಮತ್ತು ಗೆಳೆಯರಲ್ಲಿ ಹೇಳಿಕೊಂಡಿದ್ದೇನೆ’ ಎಂದು ಕಾಟ್ರೆಲ್ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.