
ಮುಂಬೈ: ಇಲ್ಲಿನ ವಾಂಖೇಡೆ ಕ್ರಿಕೆಟ್ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ಹಾಗೂ ಜಿಂಬಾಂಬ್ವೆ ನಡುವಿನ ಸೂಪರ್–8ರ ಪಂದ್ಯದಲ್ಲಿ ಅಮೋಘ ಪ್ರದರ್ಶನ ತೋರಿದ ವಿಂಡೀಸ್ 107 ರನ್ಗಳ ಬೃಹತ್ ಅಂತರದ ಗೆಲುವು ಸಾಧಿಸಿದೆ. ಆ ಮೂಲಕ ಭಾರತದ ಸೆಮಿಫೈನಲ್ ಕನಸನ್ನು ಇನ್ನಷ್ಟು ದೂರ ಮಾಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಶಿಮ್ರಾನ್ ಹೆಟ್ಮೆಯರ್ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 254 ರನ್ಗಳ ಬೃಹತ್ ಮೊತ್ತ ದಾಖಲಿಸಿತ್ತು. ಈ ಗುರಿ ಬೆನ್ನಟ್ಟಿದ ಜಿಂಬಾಂಬ್ವೆ 147 ರನ್ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು.
ವಿಂಡೀಸ್ ಅಗ್ರಸ್ಥಾನಕ್ಕೆ
ಜಿಂಬಾಂಬ್ವೆ ಎದುರಿನ ಗೆಲುವಿನೊಂದಿಗೆ ವೆಸ್ಟ್ ಇಂಡೀಸ್ ತಂಡವು ಸೂಪರ್ 8ರ ಗುಂಪು 1ರಲ್ಲಿ ಅಗ್ರಸ್ಥಾನ ತಲುಪಿದೆ. ಮಾತ್ರವಲ್ಲ, ನೆಟ್ ರನ್‌ರೇಟ್‌ನಲ್ಲಿ (+5.350) ಭಾರಿ ಏರಿಕೆ ಪಡೆದಿದೆ. ಇತ್ತ ದಕ್ಷಿಣ ಆಫ್ರಿಕಾ ಕೂಡ ಬಲಿಷ್ಠವಾಗಿದ್ದು, ನೆಟ್ ರನ್‌ರೇಟ್ (+3.800) ಹೊಂದುವ ಮೂಲಕ ಎರಡನೇ ಸ್ಥಾನದಲ್ಲಿದೆ. ಉಭಯ ತಂಡಗಳ ನೆಟ್ ರನ್‌ರೇಟ್ ಉತ್ತಮವಾಗಿರುವುದರಿಂದ ಬಾಕಿ ಉಳಿದಿರುವ 2 ಪಂದ್ಯಗಳ ಪೈಕಿ ಒಂದನ್ನು ಗೆದ್ದರೂ ಸೆಮಿಫೈನಲ್ ಪ್ರವೇಶ ಪಡೆಯಲಿವೆ.
ಭಾರತದ ಮುಂದಿನ ಹಾದಿ
ಭಾರತಕ್ಕೆ ಇನ್ನೂ ಕೂಡ ಸೆಮಿಫೈನಲ್ ಪ್ರವೇಶಿಸುವ ಅವಕಾಶ ಇದೆ. ಆದರೆ, ಬಾಕಿ ಉಳಿದಿರುವ ಎರಡೂ ಪಂದ್ಯಗಳನ್ನು ಬೃಹತ್ ಅಂತರದಲ್ಲಿ ಗೆಲುವು ಸಾಧಿಸಬೇಕು.
ದಕ್ಷಿಣ ಆಫ್ರಿಕಾ ವಿರುದ್ಧ ವಿಂಡೀಸ್ ಸೋಲು
ಹೌದು, ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿರುವ ದಕ್ಷಿಣ ಆಫ್ರಿಕಾ ತಂಡವು ವೆಸ್ಟ್ ಇಂಡೀಸ್ ತಂಡವನ್ನು ಮಣಿಸಬೇಕು. ಹಾಗೆ ಮಾಡಿದಾಗ ಮಾತ್ರ ಭಾರತ ತಂಡ ಸೆಮಿಫೈನಲ್ ತಲುಪಬಹುದು.
ವೆಸ್ಟ್ ಇಂಡೀಸ್ ತಂಡವು ದ.ಆಫ್ರಿಕಾ ವಿರುದ್ಧ ಗೆದ್ದರೆ!
ಹೌದು, ಟಿ20 ವಿಶ್ವಕಪ್ ಆರಂಭಕ್ಕೆ ಮೊದಲು ಸಾಮಾನ್ಯ ತಂಡ ಎನಿಸಿಕೊಂಡಿದ್ದ ವೆಸ್ಟ್ ಇಂಡೀಸ್ ತಂಡವು ಈ ಬಾರಿಯ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದೆ. ಬಲಿಷ್ಠ ತಂಡಗಳನ್ನು ಮಣಿಸಿ ಅಜೇಯವಾಗಿ ಸೂಪರ್–8ರ ಹಂತ ಪ್ರವೇಶಿಸಿದೆ. ಹೀಗಿರುವಾಗ ದಕ್ಷಿಣ ಆಫ್ರಿಕಾ ಕೂಡ ವಿಂಡೀಸ್ ತಂಡವನ್ನು ಸುಲಭವಾಗಿ ಮಣಿಸುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ.
ಒಂದುವೇಳೆ ವಿಂಡೀಸ್ ತಂಡವನ್ನು ದಕ್ಷಿಣ ಆಫ್ರಿಕಾ ಸೋಲಿಸಲು ವಿಫಲವಾದರೆ, ಭಾರತ ತಂಡ ಇನ್ನುಳಿದ ಎರಡೂ ಪಂದ್ಯಗಳನ್ನು 100 ರನ್‌ಗಳಿಗೂ ಅಧಿಕ ಅಂತರದಲ್ಲಿ ಗೆಲುವು ಸಾಧಿಸಬೇಕಾಗುತ್ತದೆ. ಜಿಂಬಾಂಬ್ವೆ ತಂಡವನ್ನು ಈ ಅಂತರದಲ್ಲಿ ಸೋಲಿಸದರೂ, ವಿಂಡೀಸ್ ತಂಡವನ್ನು ಇಷ್ಟು ದೊಡ್ಡ ಅಂತರದಲ್ಲಿ ಸೋಲಿಸುವುದು ಅಷ್ಟು ಸುಲಭವಲ್ಲ.
ಒಟ್ಟಾರೆಯಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಪ್ರದರ್ಶನ ತೋರಿ ಸೋತಿರುವ ಭಾರತ ತಂಡವು ಸೆಮಿಫೈನಲ್ ಪ್ರವೇಶಿಸಲು ಅನೇಕ ಸವಾಲುಗಳನ್ನ ಮೆಟ್ಟಿನಿಲ್ಲಬೇಕಿದೆ. ಮಾತ್ರವಲ್ಲ, ಅದೃಷ್ಟ ಕೂಡ ಕೈಹಿಡಿಯಬೇಕು. ಹಾಗಾದಾಗ ಮಾತ್ರ ಭಾರತ ಸೆಮಿಫೈನಲ್ ಪ್ರವೇಶಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.