ADVERTISEMENT

ಮಹಿಳಾ ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತದ ನಾರಿಯರಿಗೆ ವ್ಯಾಪಕ ಪ್ರಶಂಸೆ

ಪಿಟಿಐ
Published 3 ನವೆಂಬರ್ 2025, 2:42 IST
Last Updated 3 ನವೆಂಬರ್ 2025, 2:42 IST
   

ಮುಂಬೈ: ಭಾರತ ಮಹಿಳಾ ಕ್ರಿಕೆಟ್‌ ತಂಡವು ಚೊಚ್ಚಲ ವಿಶ್ವ‍ಕಪ್‌ ಕಿರೀಟವನ್ನು ತನ್ನಾದಗಿಸಿಕೊಂಡಿದ್ದು, ಈ ನಡುವೆ ರಾಜಕೀಯ ಗಣ್ಯರು ಹಾಗೂ ಕ್ರೀಡಾ ಕ್ಷೇತ್ರದ ದಿಗ್ಗಜರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

ಈ ಚೊಚ್ಚಲ ಗೆಲುವನ್ನು ಭವಿಷ್ಯದ ಪೀಳಿಗೆಗೆ ಸ್ಪೂರ್ತಿಯ ಕ್ಷಣವೆಂದೇ ಕ್ರೀಡಾ ಕ್ಷೇತ್ರದ ಗಣ್ಯರು ಬಣ್ಣಿಸಿದ್ದಾರೆ.

ವರ್ಷಗಳ ಕಠಿಣ ಪರಿಶ್ರಮ, ವಿಫಲತೆಗಳು ಕೊನೆಗೊಂಡು ಭಾನುವಾರ ಭಾರತ ಮಹಿಳಾ ತಂಡ ಐತಿಹಾಸಿಕ ಗೆಲುವಿಗೆ ಸಾಕ್ಷಿಯಾಯಿತು. ಮಹಿಳಾ ವಿಶ್ವಕಪ್‌ ಫೈನಲ್‌ನಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು 52 ರನ್‌ಗಳಿಂದ ಅದ್ಭುತ ಜಯ ದಾಖಲಿಸಿದೆ.

ADVERTISEMENT

'1983ರ ಕಪಿಲ್‌ ದೇವ್‌ ನೇತೃತ್ವದಲ್ಲಿ ಭಾರತ ತಂಡ ವಿಶ್ವಕಪ್‌ ಅನ್ನು ಜಯಸಿತ್ತು. ಆ ಗೆಲುವು ಇಡೀ ಪೀಳಿಗೆಗೆ ದೊಡ್ಡ ಕನಸು ಕಾಣಲು ಹಾಗೂ ಆ ಕನಸುಗಳನ್ನು ಬೆನ್ನಟ್ಟಲು ಸ್ಫೂರ್ತಿ ನೀಡಿತ್ತು. ಮಹಿಳಾ ಕ್ರಿಕೆಟ್‌ ತಂಡವು ಅಂಥಹದ್ದೇ ವಿಶೇಷವಾದ ಗೆಲುವನ್ನು ದಾಖಲಿಸಿದೆ' ಎಂದು ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್ ‘ಎಕ್ಸ್‌‘ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

'ಅವರ ಈ ಗೆಲುವು ದೇಶದ ಅಸಂಖ್ಯಾತ ಮಹಿಳೆಯರಿಗೆ ಬ್ಯಾಟು, ಬೌಲ್‌ ಹಿಡಿಯಲು ಸ್ಫೂರ್ತಿ ನೀಡಿದೆ. ಒಂದು ದಿನ ನಾವು ಕೂಡ ಮೈದಾನದಲ್ಲಿ ಇಂತಹದ್ದೇ ಐತಿಹಾಸಿಕ ಕ್ಷಣ ಸೃಷ್ಟಿಸಲು ಸಾಧ್ಯ ಎಂಬ ಸಂದೇಶ ನೀಡಿದ್ದೀರಿ' ಎಂದೂ ಸಚಿನ್ ಹೇಳಿಕೊಂಡಿದ್ದಾರೆ.

'ಮುಂದಿನ ಪೀಳಿಗೆಗೆ ಸ್ಫೂರ್ತಿ. ನಿರ್ಭೀತಿಯತೆಯಿಂದ ಕೂಡಿದ ನಿಮ್ಮ ಆಟದಿಂದಾಗಿ ಪ್ರತಿಯೊಬ್ಬ ಭಾರತೀಯನನ್ನು ಹೆಮ್ಮೆಪಡುವಂತೆ ಮಾಡಿದ್ದೀರಿ. ನೀವು ಎಲ್ಲಾ ಪ್ರಶಂಸೆಗಳಿಗೆ ಅರ್ಹರು ಮತ್ತು ಈ ಕ್ಷಣವನ್ನು ಆನಂದಿಸಿ' ಎಂದು ವಿರಾಟ್‌ ಕೊಹ್ಲಿ ಹರ್ಮನ್ ತಂಡಕ್ಕೆ ಶುಭಕೋರಿದ್ದಾರೆ.

ಟೂರ್ನಿಯಲ್ಲಿ ಸಂಘಟಿತ ಪ್ರದರ್ಶನ ತೋರಿದ ನಮ್ಮ ಆಟಗಾರ್ತಿಯರಿಗೆ ಅಭಿನಂದನೆಗಳು. ಈ ಐತಿಹಾಸಿಕ ವಿಜಯವು ದೇಶದ ಭವಿಷ್ಯದ ಚಾಂಪಿಯನ್‌ಗಳಿಗೆ ಸ್ಫೂರ್ತಿ ತುಂಬಲಿದೆ ಎಂದು ನರೇಂದ್ರ ಮೋದಿ ಪ್ರಧಾನ ಮಂತ್ರಿ ತಿಳಿಸಿದ್ದಾರೆ.

'ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಕೂಡ ತಂಡವನ್ನು ಶ್ಲಾಘಿಸಿದ್ದು, ಈ ಗೆಲುವು ಅನೇಕರಿಗೆ ಕನಸು ಕಾಣಲು ಮತ್ತು ಜೀವನದಲ್ಲಿ ಏನನ್ನಾದರೂ ಸಾಧಿಸಲು ಸ್ಫೂರ್ತಿ ನೀಡುತ್ತದೆ' ಎಂದು ಎಕ್ಸ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

'ಇದು ಒಂದು ಐತಿಹಾಸಿಕ ಕ್ಷಣ. ಇತಿಹಾಸ ರಚಿಸಲಾಗಿದೆ! ಭಾರತದ ಮಹಿಳಾ ತಂಡದಿಂದ ಎಂಥಹ ಪ್ರದರ್ಶನ. 140 ಕೋಟಿ ಭಾರತೀಯರಿಗೆ ಹೆಮ್ಮೆಯ ಕ್ಷಣ' ಎಂದು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.