ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡದ ಅಭಿಮಾನಿಗಳು
ಪಿಟಿಐ ಚಿತ್ರ
ನವದೆಹಲಿ: ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ವೇಳೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಎಲ್ಲ ಪಂದ್ಯಗಳನ್ನು ಬೇರೆ ನಗರಗಳಿಗೆ ಸ್ಥಳಾಂತರಿಸಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ), ಪರಿಷ್ಕೃತ ವೇಳಾಪಟ್ಟಿಯನ್ನು ಇಂದು (ಶುಕ್ರವಾರ) ಪ್ರಕಟಿಸಿದೆ.
ಟೂರ್ನಿಯು ಇದೇ ವರ್ಷ ಸೆಪ್ಟೆಂಬರ್ 30ರಿಂದ ನೆವೆಂಬರ್ 2ರ ವರೆಗೆ ನಡೆಯಲಿದೆ. ಭಾರತದಲ್ಲಿ ಒಟ್ಟು ಐದು ಸ್ಥಳಗಳಲ್ಲಿ ಪಂದ್ಯಗಳನ್ನು ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ, ಇದೀಗ ನಾಲ್ಕೇ ಸ್ಥಳಗಳನ್ನು ಅಂತಿಮಗೊಳಿಸಲಾಗಿದೆ.
ಗುವಾಹಟಿಯ ಬರ್ಸಪರ ಕ್ರಿಕೆಟ್ ಸ್ಟೇಡಿಯಂ, ಇಂದೋರ್‌ನ ಹೋಳ್ಕರ್ ಮೈದಾನ, ವಿಶಾಖಪಟ್ಟಣದ ವೈ.ಎಸ್. ರಾಜಶೇಖರ ರೆಡ್ಡಿ ಕ್ರೀಡಾಂಗಣ ಮತ್ತು ನವಿ ಮುಂಬೈನಲ್ಲಿರುವ ಡಿ.ವೈ. ಪಾಟೀಲ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. ಉಳಿದಂತೆ, ಪಾಕಿಸ್ತಾನ ಆಡಲಿರುವ ಎಲ್ಲ ಪಂದ್ಯಗಳಿಗೆ ಶ್ರೀಲಂಕಾದ ಆರ್. ಪ್ರೇಮದಾಸ ಕ್ರೀಡಾಂಗಣ ವೇದಿಕೆಯಾಗಲಿದೆ.
ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯುವ ಈ ಟೂರ್ನಿಯಲ್ಲಿ 8 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಫೈನಲ್, ಸೆಮಿಫೈನಲ್ ಸೇರಿದಂತೆ 31 ಪಂದ್ಯಗಳು ನಡೆಯಲಿವೆ.
ಭಾಗವಹಿಸುವ ತಂಡಗಳು
1. ಭಾರತ
2. ಶ್ರೀಲಂಕಾ
3. ಬಾಂಗ್ಲಾದೇಶ
4. ಪಾಕಿಸ್ತಾನ
5. ಆಸ್ಟ್ರೇಲಿಯಾ
6. ಇಂಗ್ಲೆಂಡ್
7. ನ್ಯೂಜಿಲೆಂಡ್
8. ದಕ್ಷಿಣ ಆಫ್ರಿಕಾ
ಭಾರತ – ಪಾಕಿಸ್ತಾನ ಸೆಣಸಾಟ ಅಕ್ಟೋಬರ್ 5ರಂದು
ಈ ವರ್ಷದ ಆರಂಭದಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳೆ ಭಾರತ ತಂಡ, ಆತಿಥೇಯ ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸಿತ್ತು. ಹಾಗಾಗಿ, ಪುರುಷರ ಮತ್ತು ಮಹಿಳಾ ವಿಭಾಗದ ಪ್ರಮುಖ ಟೂರ್ನಿಗಳಿಗೆ ಹೈಬ್ರಿಡ್ ಮಾದರಿ ಅನುಸರಿಸಲು ಉಭಯ ತಂಡಗಳು ಒಪ್ಪಿದ್ದವು. ಅದರಂತೆ, ಭಾರತ ಆತಿಥ್ಯ ವಹಿಸಿರುವ ಈ ಟೂರ್ನಿಗೆ ಕೊಲಂಬೊವನ್ನು ತಟಸ್ಥ ತಾಣವಾಗಿ ಆಯ್ಕೆ ಮಾಡಲಾಗಿದೆ.
ಪಾಕ್ ಪಡೆ ಗುಂಪು ಹಂತದಲ್ಲಿ ಒಟ್ಟು 7 ಪಂದ್ಯಗಳನ್ನು ಆಡಲಿದ್ದು, ಎಲ್ಲ ಪಂದ್ಯಗಳೂ ಕೊಲಂಬೊದಲ್ಲೇ ನಡೆಯಲಿವೆ.
ಭಾರತ ಹಾಗೂ ಪಾಕ್ ನಡುವಣ ಪಂದ್ಯವು ಈ ಮೊದಲು ನಿಗದಿಯಾಗಿದ್ದಂತೆ ಅಕ್ಟೋಬರ್ 5ರಂದೇ ನಡೆಯಲಿದೆ.
ಟೀಂ ಇಂಡಿಯಾ ಉಳಿದಂತೆ ಅಕ್ಟೋಬರ್ 9ರಂದು ದಕ್ಷಿಣ ಆಫ್ರಿಕಾ ವಿರುದ್ಧ, ಅಕ್ಟೋಬರ್ 12ರಂದು ಆಸ್ಟ್ರೇಲಿಯಾ ವಿರುದ್ಧ, ಅಕ್ಟೋಬರ್ 19ರಂದು ಇಂಗ್ಲೆಂಡ್ ವಿರುದ್ಧ, ಅಕ್ಟೋಬರ್ 22ರಂದು ನ್ಯೂಜಿಲೆಂಡ್ ವಿರುದ್ಧ, ಅಕ್ಟೋಬರ್ 22ರಂದು ಬಾಂಗ್ಲಾದೇಶ ವಿರುದ್ಧ ಸೆಣಸಾಟ ನಡೆಯಲಿದೆ.
ಬೆಂಗಳೂರಿಗಿಲ್ಲ ಆತಿಥ್ಯ ವಹಿಸುವ ಭಾಗ್ಯ
ವಿಶ್ವಕಪ್ ಟೂರ್ನಿಯ ಉದ್ಘಾಟನೆ ಹಾಗೂ ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸುವ ಅವಕಾಶ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಕೈತಪ್ಪಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 18ನೇ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೂನ್ 4ರಂದು ಕಾಲ್ತುಳಿತ ಸಂಭವಿಸಿತ್ತು. ಆ ವೇಳೆ 11 ಮಂದಿ ಮೃತಪಟ್ಟು, ಸಾಕಷ್ಟು ಜನರು ಗಾಯಗೊಂಡಿದ್ದರು. ಹೀಗಾಗಿ, ಬೆಂಗಳೂರಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಕ್ರಮ ಕೈಗೊಳ್ಳಲಾಗಿದೆ.
ಸೆಪ್ಟೆಂಬರ್ 30ರಂದು ನಡೆಯಬೇಕಿದ್ದ ಭಾರತ ಹಾಗೂ ಶ್ರೀಲಂಕಾ ನಡುವಣ ಉದ್ಘಾಟನಾ ಪಂದ್ಯ, ಅಕ್ಟೋಬರ್ 3ರಂದು ನಿಗದಿಯಾಗಿದ್ದ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ಪಂದ್ಯಗಳು ಅದೇ ದಿನಗಳಲ್ಲಿ ಗುವಾಹಟಿಯಲ್ಲಿ ಆಯೋಜನೆಗೊಳ್ಳಲಿವೆ. ಅಕ್ಟೋಬರ್ 26ರಂದು ನಡೆಯುವ ಭಾರತ ಮತ್ತು ಬಾಂಗ್ಲಾದೇಶ ಪಂದ್ಯ ಹಾಗೂ ಅಕ್ಟೋಬರ್ 30 ನಿಗದಿಯಾಗಿರುವ ಎರಡನೇ ಸೆಮಿಫೈನಲ್ ಪಂದ್ಯ ನವಿ ಮುಂಬೈಗೆ ಹೋಗಿವೆ.
ಒಂದು ವೇಳೆ ಪಾಕಿಸ್ತಾನ ಫೈನಲ್ ತಲುಪದಿದ್ದರೆ, ಅಂತಿಮ ಹಣಾಹಣಿಯೂ ಬೆಂಗಳೂರಿನಲ್ಲೇ (ನವೆಂಬರ್ 2ರಂದು) ನಡೆಯಬೇಕಿತ್ತು. ಆದರೆ, ಇದೀಗ ಆ ಪಂದ್ಯವನ್ನೂ ನವಿ ಮುಂಬೈಗೆ ಸ್ಥಳಾಂತರಿಸಲಾಗಿದೆ. ಪಾಕ್ ಪ್ರಶಸ್ತಿ ಸುತ್ತಿಗೆ ತಲುಪಿದರೆ ಶ್ರೀಲಂಕಾದ ಕೊಲಂಬೊದಲ್ಲಿ ಪಂದ್ಯ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.