ADVERTISEMENT

ಮಹಿಳಾ ಏಕದಿನ ವಿಶ್ವಕಪ್: ತಂಡಕ್ಕೆ ಮರಳಿದ ರೇಣುಕಾ, ಶಫಾಲಿಗೆ ಕೊಕ್

ವಿಶ್ವಕಪ್ ತಂಡಕ್ಕೆ ಹರ್ಮನ್‌ಪ್ರೀತ್ ಕೌರ್ ನಾಯಕಿ

ಪಿಟಿಐ
Published 19 ಆಗಸ್ಟ್ 2025, 14:47 IST
Last Updated 19 ಆಗಸ್ಟ್ 2025, 14:47 IST
<div class="paragraphs"><p> ರೇಣುಕಾ ಸಿಂಗ್ ಠಾಕೂರ್&nbsp;</p></div>

ರೇಣುಕಾ ಸಿಂಗ್ ಠಾಕೂರ್ 

   

ಮುಂಬೈ: ಫಿಟ್ನೆಸ್‌ ಪಡೆದಿರುವ ವೇಗದ ಬೌಲರ್ ರೇಣುಕಾ ಸಿಂಗ್ ಠಾಕೂರ್ ಅವರನ್ನು ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಆಡುವ ಭಾರತ ತಂಡಕ್ಕೆ ಸೇರ್ಪಡೆ ಮಾಡಲಾಗಿದೆ. ಆದರೆ, ಮಂಗಳವಾರ ಪ್ರಕಟವಾದ ತಂಡದಲ್ಲಿ ಅನುಭವಿ ಬ್ಯಾಟರ್  ಶಫಾಲಿ ವರ್ಮಾ ಅವರಿಗೆ ಸ್ಥಾನ ದೊರೆತಿಲ್ಲ.

ಅಗ್ರ ಸರದಿಯ ಬ್ಯಾಟರ್ ಪ್ರತಿಕಾ ರಾವ್ ಸಹ 15 ಆಟಗಾರ್ತಿಯರ ತಂಡದಲ್ಲಿದ್ದಾರೆ. ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ 15 ಮಂದಿಯ ತಂಡಕ್ಕೆ ಸ್ಮೃತಿ ಮಂದಾನ ಉಪನಾಯಕಿ ಆಗಿದ್ದಾರೆ.

ADVERTISEMENT

ವಿಶ್ವಕ‍ಪ್‌ ಸೆ. 30ರಂದು ಆರಂಭವಾಗಲಿದೆ. ಭಾರತ ಆತಿಥ್ಯ ವಹಿಸಿದ್ದು, ಪಾಕಿಸ್ತಾನ ತನ್ನ ಪಂದ್ಯಗಳನ್ನು ಈ ಹಿಂದಿನ ಉಭಯ ತಂಡಗಳ ಕರಾರಿನಂತೆ ತಟಸ್ಥ ತಾಣ ಶ್ರೀಲಂಕಾದಲ್ಲಿ ಆಡಲಿದೆ.

ಸೆಪ್ಟೆಂಬರ್ 14ರಿಂದ ಆಸ್ಟ್ರೇಲಿಯಾ ವಿರುದ್ಧ ಮೂರು ಏಕದಿನ ಪಂದ್ಯಗಳನ್ನು ಆಡಲಿರುವ ತಂಡವನ್ನೂ ನೀತು ಡೇವಿಡ್‌ ನೇತೃತ್ವದ ಆಯ್ಕೆಸಮಿತಿ ಪ್ರಕಟಿಸಿದೆ.

ವಿಶ್ವಕಪ್ ತಂಡದಲ್ಲಿರುವ ಅಮನ್ಜೋತ್‌ ಕೌರ್‌ ಅವರು ಆಸ್ಟ್ರೇಲಿಯಾ ಪ್ರವಾಸ ಮಾಡುವ ತಂಡದಲ್ಲಿಲ್ಲ. ಅವರ ಬದಲು ಆಲ್‌ರೌಂಡರ್‌ ಸಯಾಲಿ ಸಾತ್ಗರೆ ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ. ಗಾಯದಿಂದ ಪೂರ್ಣವಾಗಿ ಚೇತರಿಸಿಕೊಳ್ಳಲು ಕೌರ್‌ ಅವರಿಗೆ ಹೆಚ್ಚುವರಿ ವಿಶ್ರಾಂತಿ ನೀಡಲಾಗಿದೆ.

ಆಡಿರುವ 14 ಏಕದಿನ ಪಂದ್ಯಗಳಲ್ಲಿ ಗಮನ ಸೆಳೆದಿರುವ ಪ್ರತಿಕಾ ಅವರನ್ನು, ಬಿರುಸಿನ ಹೊಡೆತಗಳ ಆಟಗಾರ್ತಿ ಶಫಾಲಿ ಬದಲು ಆಯ್ಕೆ ಮಾಡಲಾಗಿದೆ. ‘ಶಫಾಲಿ ಅವರನ್ನು ನಾವು ತಂಡದಿಂದ ದೂರ ಮಾಡಿಲ್ಲ. ಅವರು ಆಸ್ಟ್ರೇಲಿಯಾ ‘ಎ’ ಸರಣಿಯಲ್ಲಿ ಆಡಿದ್ದರು. ಅವರ ಮುಂದೆ ದೀರ್ಘ ವೃತ್ತಿಜೀವನವಿದೆ. ಅವರು ಅನುಭವ ಗಳಿಸಿದಲ್ಲಿ ಏಕದಿನ ಮಾದರಿಯಲ್ಲಿ ದೀರ್ಘಕಾಲ ಆಡಲು ಅವಕಾಶವಿದೆ’ ಎಂದು ನೀತು ಹೇಳಿದರು.

ಮಾರ್ಚ್‌ ನಂತರ ರೇಣುಕಾ ಯಾವುದೇ ಟೂರ್ನಿಗಳಲ್ಲಿ ಆಡಿಲ್ಲ. ಅವರು ವೇಗದ ದಾಳಿಯ ನೇತೃತ್ವ ವಹಿಸಲಿದ್ದಾರೆ. ‘ಇದು ಬಲುದೊಡ್ಡ ಟೂರ್ನಿ. ರೇಣುಕಾ ತಂಡದ ಭಾಗವಾಗಿರುವುದು ತಂಡಕ್ಕೆ ಬಲ ತುಂಬಲಿದೆ’ ಎಂದು ಹೇಳಿದರು. ರೇಣುಕಾ ಜೊತೆ ತಂಡದಲ್ಲಿರುವ ಇನ್ನಿಬ್ಬರು ಮಧ್ಯಮ ವೇಗಿಗಳೆಂದರೆ– ಕ್ರಾಂತಿ ಗೌಡ ಮತ್ತು ಅರುಂಧತಿ ರೆಡ್ಡಿ.

ಯುವ ಸ್ಪಿನ್ನರ್ ಶ್ರೀ ಚರಣಿ ಸಹ ಅವಕಾಶ ಪಡೆದಿದ್ದಾರೆ. ಇಂಗ್ಲೆಂಡ್‌ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಅವರು 10 ವಿಕೆಟ್ ಕಬಳಿಸಿದ್ದರು. ಏಪ್ರಿಲ್‌ನಲ್ಲಿ ತಂಡಕ್ಕೆ ಪದಾರ್ಪಣೆ ಮಾಡಿದ ಬಳಿಕ ಅವರು ಎಂಟು ಏಕದಿನ, ಐದು ಟಿ20 ಪಂದ್ಯಗಳನ್ನು ಆಡಿದ್ದಾರೆ.

ವಿಶ್ವಕಪ್‌ಗೆ ತಂಡ (15): ಹರ್ಮನ್‌ಪ್ರೀತ್ ಕೌರ್‌ (ನಾಯಕಿ), ಸ್ಮೃತಿ ಮಂದಾನ (ಉಪ ನಾಯಕಿ), ಪ್ರತಿಕಾ ರಾವಲ್‌, ಹರ್ಲೀನ್‌ ಡಿಯೋಲ್‌, ದೀಪ್ತಿ ಶರ್ಮಾ, ಜೆಮಿಮಾ ರಾಡ್ರಿಗಸ್‌, ರೇಣುಕಾ ಸಿಂಗ್‌ ಠಾಕೂರ್‌, ಅರುಂಧತಿ ರೆಡ್ಡಿ, ರಿಚಾ ಘೋಷ್‌ (ವಿಕೆಟ್‌ ಕೀಪರ್‌), ಕ್ರಾಂತಿ ಗೌಡ್, ಅಮನ್ಜೋತ್ ಕೌರ್‌, ರಾಧಾ ಯಾದವ್‌, ಶ್ರೀಚರಣಿ, ಯಷ್ಟಿಕಾ ಭಾಟಿಯಾ, ಸ್ನೇಹ ರಾಣಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.