
ನವಿ ಮುಂಬೈ: ಆತಿಥೇಯ ಭಾರತ ಮಹಿಳಾ ತಂಡವು ಗುರುವಾರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಏಳು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾದ ಸವಾಲನ್ನು ಎದುರಿಸಲಿದೆ.
ಚೊಚ್ಚಲ ವಿಶ್ವಕಪ್ ಜಯಿಸುವ ಕನಸು ಕಾಣುತ್ತಿರುವ ಹರ್ಮನ್‌ಪ್ರೀತ್ ಕೌರ್ ಬಳಗವು ಈ ಕಠಿಣ ಹಾದಿಯನ್ನು ಮೀರಿ ಫೈನಲ್ ಪ್ರವೇಶಿಸಬೇಕಿದೆ. ಪ್ರಸಕ್ತ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವು ಅಮೋಘ ಆಟವಾಡಿ ನಾಲ್ಕರ ಘಟ್ಟಕ್ಕೆ ಬಂದಿದೆ. ಆದರೆ ಭಾರತ ತಂಡವು ಏಳು,ಬೀಳುಗಳನ್ನು ಕಂಡು ಇಲ್ಲಿಗೆ ಬಂದಿದೆ.
ಎಂಟು ವರ್ಷಗಳ ಹಿಂದೆ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾದ ಎದುರು 115ಎಸೆತಗಳಲ್ಲಿ ಅಜೇಯ 171 ರನ್ ಗಳಿಸಿದ್ದ ಹರ್ಮನ್‌ಪ್ರೀತ್ ಕೌರ್ ಅವರ ಆಟ ಇಂದಿಗೂ ಕ್ರಿಕೆಟ್‌ಪ್ರಿಯರ ಮನದಲ್ಲಿದೆ. ಆ ಪಂದ್ಯದಲ್ಲಿ ಭಾರತ ಗೆದ್ದು ಫೈನಲ್ ಪ್ರವೇಶಿಸಿತ್ತು. ಅಂತಹದೇ ಮ್ಯಾಜಿಕ್ ಈ ಬಾರಿಯೂ ನಡೆಯುವುದೇ ಎಂಬ ನಿರೀಕ್ಷೆ ಗರಿಗೆದರಿದೆ.
ಬಲಾಢ್ಯ ಆಸ್ಟ್ರೇಲಿಯಾ ವಿರುದ್ಧ ಜಯಿಸುವುದೇ ಒಂದು ದೊಡ್ಡ ಸಾಧನೆ. ಲೀಗ್ ಹಂತದಲ್ಲಿ ಭಾರತ ತಂಡಕ್ಕೆ ಸೋಲುಣಿಸಿದ್ದ ಆಸ್ಟ್ರೇಲಿಯಾ ಸರ್ವರೀತಿಯಿಂದಲೂ ಬಲಾಢ್ಯವಾಗಿದೆ.
ಭಾರತ ತಂಡಕ್ಕೆ ಸ್ಮೃತಿ ಮಂದಾನ ಜೊತೆಗೆ ಉತ್ತಮ ಆರಂಭ ನೀಡುತ್ತಿದ್ದ ಪ್ರತೀಕಾ ರಾವಲ್ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರ ಸ್ಥಾನಕ್ಕೆ ಬಂದಿರುವ ಶಫಾಲಿ ವರ್ಮಾ ಅವರ ಮೇಲೆ ಈಗ ಹೆಚ್ಚಿನ ಹೊಣೆಗಾರಿಕೆ ಇದೆ. ಸ್ಮೃತಿ, ಹರ್ಮನ್‌ಪ್ರೀತ್, ಹರ್ಲೀನ್ ಡಿಯೊಲ್, ರಿಚಾ ಘೋಷ್, ಜೆಮಿಮಾ ರಾಡ್ರಿಗಸ್, ಆಲ್‌ರೌಂಡರ್ ದೀಪ್ತಿ ಶರ್ಮಾ, ಅಮನ್ಜೋತ್ ಕೌರ್, ಸ್ನೇಹ ರಾಣಾ ಅವರೆಲ್ಲರಿಗೂ ತಮ್ಮ ಸಾಮರ್ಥ್ಯ ಹಾಗೂ ಅನುಭವವನ್ನು ಪಣಕ್ಕೊಡ್ಡುವ ಪಂದ್ಯ ಇದಾಗಿದೆ.
ಬಹುತೇಕ ಕೊನೆಯ ವಿಶ್ವಕಪ್ ಟೂರ್ನಿಯಲ್ಲಿ ಆಡುತ್ತಿರುವ ತಮ್ಮ ನಾಯಕಿ ಹರ್ಮನ್‌ಪ್ರೀತ್‌ಗೆ ಟ್ರೋಫಿ ಕಾಣಿಕೆ ನೀಡುವ ಛಲದೊಂದಿಗೆ ಆಡಿದರೆ ತಂಡಕ್ಕೆ ಜಯ ಒಲಿಯುವುದು ಕಷ್ಟವೇನಲ್ಲ. ಆದರೆ ಫೀಲ್ಡಿಂಗ್, ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗಗಳಲ್ಲಿ ಒಂದುಸಣ್ಣ ಲೋಪವೂ ದುಬಾರಿಯಾಗಬಹುದು. ಆಸ್ಟ್ರೇಲಿಯಾ ತಂಡದ ನಾಯಕಿ ಅಲೀಸಾ ಹೀಲಿ, ಎಲಿಸ್ ಪೆರಿ, ಬೆತ್ ಮೂನಿ, ಆ್ಯಷ್ಲೆ ಗಾರ್ಡನರ್ ಅವರ ಅಬ್ಬರದ ಬ್ಯಾಟಿಂಗ್‌ಗೆ ಕಡಿವಾಣ ಹಾಕುವುದು ಮುಖ್ಯ. ಅಲ್ಲದೇ ಸ್ಪಿನ್ನರ್ ಅಲನಾ ಕಿಂಗ್, ಸೋಫಿ ಮಾಲಿನ್ ಹಾಗೂ ಕಿಮ್ ಗಾರ್ತ್ ಅವರ ಬೌಲಿಂಗ್ ಎದುರಿಸಿ ನಿಲ್ಲುವ ಸವಾಲು ಕೂಡ ಕೌರ್ ಪಡೆಯ ಮುಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.