ಲೌರಾ ವೊಲ್ವಾರ್ಡ್ಟ್ ಕ್ಯಾಚ್ ಹಿಡಿಯುತ್ತಿರುವ ಅಮನ್‌ಜೋತ್ ಕೌರ್
ಚಿತ್ರ ಕೃಪೆ: @CricCrazyJo
‘ಕ್ಯಾಚಸ್ ವಿನ್ಸ್ ಮ್ಯಾಚಸ್’ ಎಂಬ ಮಾತಿದೆ ಅದರಂತೆ ಕೆಲವು ಪಂದ್ಯಗಳು ಉತ್ತಮ ಕ್ಯಾಚ್‌ಗಳಿಂದಾಗಿಯೇ ಗೆದ್ದಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಭಾರತ 1983ರಿಂದ ಇದುವರೆಗೂ ಗೆದ್ದಿರುವ ಪ್ರತೀ ವಿಶ್ವಕಪ್ ಫೈನಲ್ ಪಂದ್ಯದಲ್ಲೂ ಒಂದೊಂದು ಕ್ಯಾಚ್‌ಗಳು ನಿರ್ಣಾಯಕ ಪಾತ್ರ ವಹಿಸಿವೆ. ಅದರಲ್ಲಿ ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮಹಿಳಾ ಏಕದಿನ ವಿಶ್ವಕಪ್ ಪಂದ್ಯ ಹೊರತಾಗಿಲ್ಲ.
ಭಾರತ ತನ್ನ ಚೊಚ್ಚಲ ವಿಶ್ವಕಪ್ ಗೆಲುವು ಸಾಧಿಸಿದ್ದು 1983ರಲ್ಲಿ. ಆ ಪಂದ್ಯದಲ್ಲಿ ಅಂದಿನ ಕಾಲದ ಕ್ರಿಕೆಟ್ ಹೀರೊ ವೆಸ್ಟ್ ಇಂಡೀಸ್ ತಂಡದ ತಾರಾ ಆಟಗಾರ ವಿವಿಯನ್ ರಿಚರ್ಡ್ ಭಾರತ ವಿರುದ್ಧ ಅಮೋಘ ಇನಿಂಗ್ಸ್ ಅಡುತ್ತಿದ್ದರು.
ಆ ವೇಳೆ ಮದನಲಾಲ್ ಬೌಲಿಂಗ್‌ನಲ್ಲಿ ವಿವಿಯನ್ ರಿಚರ್ಡ್ಸ್ ಅವರು ಬಾಲ್ ಅನ್ನು ಡೀಪ್ ಸ್ಕ್ವೇರ್ ಲೆಗ್ ಕಡೆಗೆ ಹೊಡೆಯಲು ಪ್ರಯತ್ನಿಸಿದರು. ಆದರೆ ಅಲ್ಲಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ಕಪಿಲ್ ದೇವ್ ಅವರು ಹಿಂದಕ್ಕೆ ಓಡಿ ಅದ್ಭುತವಾಗಿ ಚೆಂಡನ್ನು ಪಡೆದರು. ಆ ಕ್ಯಾಚ್ ಪಂದ್ಯದ ದಿಕ್ಕನ್ನೇ ಬದಲಿಸಿದ್ದು ಮಾತ್ರವಲ್ಲ. ದೈತ್ಯ ವಿಂಡೀಸ್ ವಿರುದ್ಧ ಭಾರತ 43 ರನ್‌ಗಳ ಜಯ ಸಾಧಿಸಿ ಚೊಚ್ಚಲ ವಿಶ್ವಕಪ್ ಗೆದ್ದು ಬೀಗಿತ್ತು.
2007ರ ಮೊದಲ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಪಾಕಿಸ್ತಾನ ತಂಡದ ನಾಯಕ ಮಿಸ್ಬಾ–ಉಲ್–ಹಕ್ ಏಕಾಂಗಿ ಹೋರಟ ನಡೆಸಿ ಪಂದ್ಯವನ್ನು ಗೆಲುವಿನ ದಡಕ್ಕೆ ತಂದು ನಿಲ್ಲಿಸಿದ್ದರು.
ಗೆಲುವಿಗೆ ಕೇವಲ 5 ರನ್‌ಗಳ ಅಗತ್ಯವಿದ್ದಾಗ ಸ್ಟ್ರೈಕ್‌ನಲ್ಲಿದ್ದ ಮಿಸ್ಬಾ ಅವರು ಜೋಗಿಂದರ್ ಶರ್ಮಾ ಅವರ ಕೊನೆಯ ಓವರ್‌ನಲ್ಲಿ ಶಾರ್ಟ್ ಫೈನ್ ಲೆಗ್‌ನಲ್ಲಿ ಸ್ಕೂಪ್ ಶಾಟ್ ಆಡಲು ಪ್ರಯತ್ನಿಸಿದರು. ಆದರೆ ಅಲ್ಲಿ ಕ್ಷೇತ್ರ ರಕ್ಷಣೆಯಲ್ಲಿದ್ದ ಶ್ರೀಶಾಂತ್ ಆ ಕ್ಯಾಚ್ ಪಡೆದು ತಂಡದ ಗೆಲುವಿಗೆ ಕಾರಣರಾದರು.
2011ರ ಏಕದಿನ ಪುರುಷರ ವಿಶ್ವಕಪ್ ಫೈನಲ್‌ನಲ್ಲಿ ಶ್ರೀಲಂಕಾ ಹಾಗೂ ಭಾರತ ತಂಡಗಳು ಮುಖಾಮುಖಿಯಾಗಿದ್ದವು. ಅಂದಿನ ಪಂದ್ಯದಲ್ಲಿ 48 ರನ್‌ಗಳಿಸಿ ಮುನ್ನುಗ್ಗುತ್ತಿದ್ದ ಸಂಗಕ್ಕರ ಅವರ ಕ್ಯಾಚ್ ಅನ್ನು ಧೋನಿ ಪಡೆಯುವ ಮೂಲಕ ಪಂದ್ಯದ ದಿಕ್ಕನ್ನು ಬದಲಿಸಿದರು.
ಹರ್ಭಜನ್ ಸಿಂಗ್ ಬೌಲಿಂಗ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಸಂಗಕ್ಕರ ಅವರು ಬಾರಿಸಿದ ಬಲವಾದ ಹೊಡೆದ ಬ್ಯಾಟ್‌ಗೆ ತಿಕ್ ಎಡ್ಜ್ ಆಗಿ ಕೀಪರ್ ಧೋನಿ ಕೈಗೆ ಸೇರುತ್ತದೆ. ಧೋನಿ ಕೂಡ ಆ ಕ್ಯಾಚ್ ಅನ್ನು ಅದ್ಭುತವಾಗಿ ಹಿಡಿದು ಶ್ರೀಲಂಕಾದ ಬೃಹತ್ ಮೊತ್ತಕ್ಕೆ ಕಡಿವಾಣ ಹಾಕಿದರು.
2024ರ ವಿಶ್ವಕಪ್ ಎಂದಕ್ಷಣ ತಟ್ಟನೆ ನೆನಪಿಗೆ ಬರುವುದು ಕೊನೆಯಲ್ಲಿ ಸೂರ್ಯಕುಮಾರ್ ಯಾದವ್ ಹಿಡಿದ ಕ್ಯಾಚ್. ದಕ್ಷಿಣ ಆಫ್ರಿಕಾ ಗೆಲುವಿಗೆ ಕೊನೆಯ ಓವರ್‌ನಲ್ಲಿ16 ರನ್‌ಗಳ ಅಗತ್ಯವಿತ್ತು. ಅಂತಿಮ ಓವರ್ ಬೌಲಿಂಗ್ ಮಾಡಲು ಹಾರ್ದಿಕ್ ಪಾಂಡ್ಯ ಮುಂದಾಗುತ್ತಾರೆ. ಈ ವೇಳೆ ಸ್ಟ್ರೈಕ್‌ನಲ್ಲಿದ್ದ ಡೇವಿಡ್ ಮಿಲ್ಲರ್ ಕೊನೆಯ ಓವರ್‌ನ ಮೊದಲ ಎಸೆತದಲ್ಲೇ ದೊಡ್ಡ ಹೊಡೆತಕ್ಕೆ ಮುಂದಾಗುತ್ತಾರೆ.
ಆದರೆ, ಮಿಡ್ ಆನ್ ವಿಭಾಗದ ಬೌಂಡರಿ ಲೈನ್‌ನಲ್ಲಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ಸೂರ್ಯಕುಮಾರ್ ಯಾದವ್ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಭಾರತದ ಗೆಲುವಿಗೆ ಕಾರಣರಾದರು.
ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಇನ್ನೊಂದೆಡೆ ಕೆಚ್ಚೆದೆಯ ಬ್ಯಾಟಿಂಗ್ ಮಾಡುತ್ತಿದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕಿ ಲೌರಾ ವೊಲ್ವಾರ್ಡ್ಟ್ 101 ರನ್ ಸಿಡಿಸಿ ಮುನ್ನುಗ್ಗುತ್ತಿದ್ದರು. ಈ ವೇಳೆ, 42ನೇ ಓವರ್ ಬೌಲಿಂಗ್ ಮಾಡಲು ಬಂದ ದೀಪ್ತಿ ಶರ್ಮಾ ಅವರ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗುತ್ತಾರೆ.
ಆಗ ಬಾಲ್ ಅಮನ್‌ಜೋತ್ ಕೌರ್‌ರತ್ತ ಹೋಗುತ್ತದೆ. ಮೇಲಿಂದ ಬಂದ ಚೆಂಡನ್ನು ಹಿಡಿಯುವ ಪ್ರಯತ್ನದಲ್ಲಿದ್ದಾಗ ಬಾಲ್ ಕೌರ್ ಅವರ ಕೈಯಿಂದ ಹೊರ ಚಿಮ್ಮುತ್ತದೆ. ಪ್ರಯತ್ನ ಬಿಡದ ಅವರು ಮೂರನೇ ಪ್ರಯತ್ನದಲ್ಲಿ ಕ್ಯಾಚ್ ಅನ್ನು ಪೂರ್ಣಗೊಳಿಸುತ್ತಾರೆ. ಒಟ್ಟಾರೆ ಪ್ರತಿಯೊಂದು ವಿಶ್ವಕಪ್ ಗೆಲುವಿನ ಹಿಂದೆ ಕೂಡ ಒಂದೊಂದು ಅದ್ಭುತ ಕ್ಯಾಚ್‌ಗಳು ಪಂದ್ಯದ ಫಲಿತಾಂಶವನ್ನೇ ಬದಲಿಸಿರುವುದನ್ನು ನೋಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.