ಐಪಿಎಲ್
ಚಿತ್ರ: IPL ವೆಬ್‌ಸೈಟ್
ಜೋಹನ್ಸ್‌ಬರ್ಗ್: ದಕ್ಷಿಣ ಆಫ್ರಿಕಾ ತಂಡ ಈ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಫೈನಲ್‌ಗೆ ತಲುಪಿದೆ. ಹೀಗಾಗಿ, ಆ ತಂಡದ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಯ ಪ್ಲೇ ಆಫ್ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.
ಭಾರತ–ಪಾಕಿಸ್ತಾನ ನಡುವಣ ಸಂಘರ್ಷ ಉಲ್ಬಣಿಸಿದ ಕಾರಣ, ಐಪಿಎಲ್ ಟೂರ್ನಿಯನ್ನು ಮೇ 9ರಂದು ಒಂದು ವಾರದ ಅವಧಿಗೆ ಮುಂದೂಡಲಾಗಿತ್ತು. ಇದರ ಬೆನ್ನಲ್ಲೇ, ವಿದೇಶಿ ಆಟಗಾರರು ಭಾರತ ತೊರೆದಿದ್ದರು.
ಇದೀಗ, ಭಾರತ–ಪಾಕ್ ಕದನ ವಿರಾಮ ಘೋಷಿಸಿರುವುದರಿಂದ ಐಪಿಎಲ್ ಅನ್ನು ಪುನರಾರಂಭಿಸಲು ಬಿಸಿಸಿಐ ನಿರ್ಧರಿಸಿದೆ. ಮೇ 17ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಕೋಲ್ಕತ್ತ ನೈಟ್‌ರೈಡರ್ಸ್ (ಕೆಕೆಆರ್) ನಡುವಣ ಸೆಣಸಾಟದೊಂದಿಗೆ ಮತ್ತೆ ಆರಂಭವಾಗಲಿದೆ.
ನಿಗದಿಯಂತೆ ನಡೆದಿದ್ದರೆ, ಐಪಿಎಲ್ ಮೇ 25ರಂದು ಮುಗಿಯುತ್ತಿತ್ತು. ಆದರೆ, ಪರಿಷ್ಕೃತ ವೇಳಾಪಟ್ಟಿಯಂತೆ ಜೂನ್ 3ರಂದು ಫೈನಲ್ ನಿಗದಿಯಾಗಿದೆ. ಆದರೆ ಜೂನ್ 11ರಿಂದ 15ರವರೆಗೆ ಇಂಗ್ಲೆಂಡ್‌ನ ಲಾರ್ಡ್ಸ್‌ನಲ್ಲಿ ಡಬ್ಲ್ಯುಟಿಸಿ ಫೈನಲ್ ನಡೆಯಲಿದೆ.
ದಕ್ಷಿಣ ಆಫ್ರಿಕಾ ತಂಡವು ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.
ತೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡವನ್ನು ಈಗಾಗಲೇ ಪ್ರಕಟಿಸಲಾಗಿದೆ.
ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ಪರ ಆಡುವ ಕಗಿಸೊ ರಬಾಡ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಲುಂಗಿ ಗಿಡಿ, ಡೆಲ್ಲಿ ಕ್ಯಾಪಿಟಲ್ಸ್‌ನ ಟ್ರಿಸ್ಟನ್ ಸ್ಟಬ್ಸ್, ಲಖನೌ ಸೂಪರ್‌ಜೈಂಟ್ಸ್‌ನ ಏಡನ್ ಮಾರ್ಕರಂ, ಮುಂಬೈ ಇಂಡಿಯನ್‌ನಲ್ಲಿ ಆಡುತ್ತಿರುವ ರಿಯಾನ್ ರಿಕೆಲ್ಟನ್, ಕಾರ್ಬಿನ್ ಬಾಷ್, ಪಂಜಾಬ್ ಕಿಂಗ್ಸ್‌ನ ಮಾರ್ಕೊ ಯಾನ್ಸೆನ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿಯಾನ್ ಮಲ್ದರ್ ಅವರಿಗೆ ಸ್ಥಾನ ನೀಡಲಾಗಿದೆ.
ಇವರಷ್ಟೇ ಅಲ್ಲದೆ, ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆದಿರುವ ಆಟಗಾರರೂ ಭಾರತಕ್ಕೆ ಮರಳುವುದು ಅನುಮಾನ.
ಐಪಿಎಲ್ ತಂಡಗಳು ಮತ್ತು ಬಿಸಿಸಿಐ, ಆಟಗಾರರನ್ನು ಕಳುಹಿಸಿಕೊಡುವಂತೆ ವಿದೇಶಿ ಮಂಡಳಿಗಳಿಗೆ ಮನವಿ ಮಾಡಿವೆ.
ಆದರೆ, ತಮ್ಮ ಆಟಗಾರರಿಗೆ ರಾಷ್ಟ್ರೀಯ ತಂಡದ ಕರ್ತವ್ಯಕ್ಕೆ ಆದ್ಯತೆ ನೀಡುವಂತೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ತಾಕೀತು ಮಾಡಿದೆ ಎನ್ನಲಾಗಿದೆ.
ಐಪಿಎಲ್‌ನಲ್ಲಿ ಲೀಗ್, ಕ್ವಾಲಿಫೈನಲ್, ಎಲಿಮಿನೇಟರ್ ಹಾಗೂ ಫೈನಲ್ ಸೇರಿದಂತೆ ಇನ್ನು 17 ಪಂದ್ಯಗಳ ಬಾಕಿ ಇವೆ.
ಚೆನ್ನೈ ಸೂಪರ್ ಕಿಂಗ್ಸ್, ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ ರಾಯಲ್ಸ್ ಈಗಾಗಲೇ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿವೆ. ಉಳಿದ ಏಳು ತಂಡಗಳು (ಗುಜರಾತ್ ಟೈಟನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್, ಲಖನೌ ಸೂಪರ್‌ಜೈಂಟ್ಸ್, ಮುಂಬೈ ಇಂಡಿಯನ್, ಕೋಲ್ಕತ್ತ ನೈಟ್‌ರೈಡರ್ಸ್) ಮುಂದಿನ ಸುತ್ತಿಗೆ ತಲುಪಲು ಪೈಪೋಟಿ ನಡೆಸುತ್ತಿವೆ.
ಆರ್‌ಸಿಬಿ ವಿರುದ್ಧ ಪಂದ್ಯಕ್ಕೆ ಕ್ವಿಂಟನ್ ಡಿಕಾಕ್ ಲಭ್ಯ
ಬೆಂಗಳೂರಿನಲ್ಲಿ ಇದೇ ಶನಿವಾರ ನಡೆಯಲಿರುವ ಮುಂದಿನ ಲೀಗ್ ಪಂದ್ಯಕ್ಕೆ ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ ಆಡಲು ಲಭ್ಯರಿರುವುದಾಗಿ ದಕ್ಷಿಣ ಆಫ್ರಿಕಾದ ಅನುಭವಿ ಬ್ಯಾಟರ್ ಕ್ವಿಂಟನ್ ಡಿಕಾಕ್ ಖಚಿತಪಡಿಸಿದ್ದಾರೆ ಎಂದು ಇಎಸ್‌ಪಿಎಲ್ ಕ್ರಿಕ್‌ಇನ್ಫೊ ವರದಿ ಮಾಡಿದೆ.
ಆದರೆ ರಾಜಸ್ಥಾನ ರಾಯಲ್ಸ್ ಪರ ಆಡುತ್ತಿರುವ ಇಂಗ್ಲೆಂಡ್‌ನ ವೇಗಿ ಜೋಫ್ರಾ ಆರ್ಚರ್ ಅವರು ಉಳಿದ ಪಂದ್ಯಗಳನ್ನು ಆಡಲು ಬರುತ್ತಿಲ್ಲ ಎಂದು ತಿಳಿದುಬಂದಿದೆ. ರಾಯಲ್ಸ್ ಈಗಾಗಲೇ ಪ್ಲೇಆಫ್ ರೇಸ್‌ನಲ್ಲಿಲ್ಲದ ಕಾರಣ ಅವರನ್ನು ಕರೆಸಿಕೊಳ್ಳಲು ಮುಂದಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.