ADVERTISEMENT

ಮೆಸ್ಸಿ ಭೇಟಿ ನಿರಾಕರಿಸಿದ ಭಾರತದ ಫುಟ್‌ಬಾಲ್ ಸ್ಟಾರ್ ಸುನಿಲ್ ಚೆಟ್ರಿ: ಕಾರಣವೇನು?

ಏಜೆನ್ಸೀಸ್
Published 14 ಡಿಸೆಂಬರ್ 2025, 3:05 IST
Last Updated 14 ಡಿಸೆಂಬರ್ 2025, 3:05 IST
<div class="paragraphs"><p>ಲಿಯೋನೆಲ್‌ ಮೆಸ್ಸಿ ಹಾಗೂ ಸುನಿಲ್‌&nbsp;ಚೆಟ್ರಿ</p></div>

ಲಿಯೋನೆಲ್‌ ಮೆಸ್ಸಿ ಹಾಗೂ ಸುನಿಲ್‌ ಚೆಟ್ರಿ

   

ಕೃಪೆ: ಪಿಟಿಐ

ಭಾರತಕ್ಕೆ ಬಂದಿರುವ ಅರ್ಜೆಂಟೀನಾದ ಫುಟ್‌ಬಾಲ್‌ ದಿಗ್ಗಜ ಲಿಯೋನೆಲ್‌ ಮೆಸ್ಸಿ ಅವರನ್ನು ಭೇಟಿಯಾಗಲು ಸುನಿಲ್‌ ಚೆಟ್ರಿ ನಿರಾಕರಿಸಿದ್ದಾರೆ. ಇದು, ಕ್ರೀಡಾ ವಲಯದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ADVERTISEMENT

ಮೆಸ್ಸಿ ಅವರು 'GOAT Tour of India' ಪ್ರವಾಸದ ಭಾಗವಾಗಿ ಮೂರು ದಿನ ಭಾರತದಲ್ಲಿ ಇರಲಿದ್ದಾರೆ. ಡಿಸೆಂಬರ್‌ 13ರಂದು ಕೋಲ್ಕತ್ತ ಹಾಗೂ ಹೈದರಾಬಾದ್‌ ಭೇಟಿ ನೀಡಿರುವ ಅವರು, ಇಂದು ಮುಂಬೈ ಮತ್ತು ನಾಳೆ ನವದೆಹಲಿಗೆ ಭೇಟಿ ನೀಡಲಿದ್ದಾರೆ.

ಅರ್ಜೆಂಟೀನಾದವರೇ ಆದ ರೊಡ್ರಿಗೊ ಡಿ ಪೌಲ್‌ ಹಾಗೂ ಉರುಗ್ವೆಯ ಸೂಪರ್‌ಸ್ಟಾರ್‌ ಲೂಯಿಸ್‌ ಸೂರೆಜ್‌ ಅವರೂ ಭಾರತಕ್ಕೆ ಬಂದಿದ್ದಾರೆ.

ಕೋಲ್ಕತ್ತದ ಸಾಲ್ಟ್‌ ಲೇಕ್‌ ಕ್ರೀಡಾಂಗಣದಲ್ಲಿ ಅವರು ಭಾಗಿಯಾಗಿದ್ದ ಕಾರ್ಯಕ್ರಮದ ವೇಳೆ ನೂಕು ನುಗ್ಗಲು ಉಂಟಾಯಿತು. ವಾಹನದಿಂದ ಇಳಿದು, ಕ್ರೀಡಾಂಗಣ ಪ್ರವೇಶಿಸಿದ ಮೆಸ್ಸಿ ಅವರನ್ನು ಗಣ್ಯರು, ಆಯೋಜಕರು, ರಾಜಕಾರಣಿಗಳು, ಖ್ಯಾತನಾಮರು ಹಾಗೂ ಭದ್ರತಾ ಸಿಬ್ಬಂದಿ ಸುತ್ತುವರಿದರು.

ಕ್ರೀಡಾಂಗಣದಲ್ಲಿ ಕೆಲ ದೂರ ನಡೆದು ಬಂದ ಮೆಸ್ಸಿ, ಅಭಿಮಾನಿಗಳತ್ತ ಕೈಬೀಸಿದರು. ಆದರೆ, ನಿರೀಕ್ಷೆಗಿಂತಲೂ ಮುಂಚಿತವಾಗಿಯೇ ಕ್ರೀಡಾಂಗಣದಿಂದ ನಿರ್ಗಮಿಸಿದರು. ಇದು ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿತು.

ಸಾವಿರಾರು ರೂಪಾಯಿ ಕೊಟ್ಟು ಕ್ರೀಡಾಂಗಣಕ್ಕೆ ಬಂದರೂ ನೆಚ್ಚಿನ ತಾರೆಯನ್ನು ನೋಡಲಾಗಲಿಲ್ಲ ಎಂದು ಆಕ್ರೋಶಗೊಂಡು, ಚೇರು, ಬಾಟಲಿಗಳನ್ನು ಕ್ರೀಡಾಂಗಣದ ಎಸೆದರು. ದಾಂದಲೆಯೇ ನಡೆದುಹೋಯಿತು.

ಬಳಿಕ, ಮೆಸ್ಸಿ ಅವರು 'ಮುತ್ತಿನ ನಗರಿ' ಹೈದಾರಾಬಾದ್‌ನಲ್ಲಿ ಭಾಗವಹಿಸಿದ ಕಾರ್ಯಕ್ರಮವು ಯಾವುದೇ ಗೊಂದಲಗಳಿಲ್ಲದೇ ಸುಸೂತ್ರವಾಗಿ ನೆರವೇರಿತು.

ಮೆಸ್ಸಿ ಭೇಟಿ ನಿರಾಕರಿಸಿದ್ದೇಕೆ ಚೆಟ್ರಿ?
ಜಗತ್ತಿನಾದ್ಯಂತ ಕೋಟ್ಯಂತರ ಜನರು ಮೆಸ್ಸಿ ಅವರನ್ನು ಒಮ್ಮೆಯಾದರೂ ನೋಡಬೇಕು ಎಂದು ಕಾತರಿಸುತ್ತಾರೆ. ಹೀಗಿರುವಾಗ, ದಿಗ್ಗಜನನ್ನು ಭೇಟಿಯಾಗಬೇಕು ಚೆಟ್ರಿ ನಿರಾಕರಿಸಿದ್ದಾರೆ.

ಫುಟ್‌ಬಾಲ್‌ ಸಂಬಂಧಿತ ಯಾವುದೇ ಚಟುವಟಿಕೆಗಳು ಇಲ್ಲದ ಕಾರಣ, ಮೆಸ್ಸಿ ಅವರನ್ನು ಭೇಟಿಯಾಗಲು ಚೆಟ್ರಿ ನಿರಾಕರಿಸಿದ್ದಾರೆ. ಫುಟ್‌ಬಾಲ್‌ ಹೊರತಾಗಿ ತಾವಿಬ್ಬರೂ ಮುಖಾಮುಖಿಯಾಗುವುದರಿಂದ ಭಾರತದಲ್ಲಿ ಈ ಆಟಕ್ಕೆ ಯಾವುದೇ ರೀತಿಯಲ್ಲೂ ಉಪಯೋಗವಾಗುವುದಿಲ್ಲ ಎಂದು ಅವರು ತಿಳಿಸಿರುವುದಾಗಿ ವರದಿಯಾಗಿದೆ.

ಚೆಟ್ರಿ, ತೆಲಂಗಾಣದವರು ಎಂಬುದು ವಿಶೇಷ.

ಮೆಸ್ಸಿ ಅವರು ನಾಲ್ಕು ನಗರಗಳ ಭೇಟಿ ಸಂದರ್ಭದಲ್ಲಿ, ಆಯಾ ರಾಜ್ಯಗಳ ಮುಖ್ಯಮಂತ್ರಿಗಳು, ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ ಗಣ್ಯರನ್ನು ಭೇಟಿಯಾಗಲಿದ್ದಾರೆ.

ಅತಿಹೆಚ್ಚು ಗೋಲ್‌; ನಾಲ್ಕನೇ ಸ್ಥಾನದಲ್ಲಿ ಚೆಟ್ರಿ
ಅಂತರರಾಷ್ಟ್ರೀಯ ಫುಟ್‌ಬಾಲ್‌ ಪಂದ್ಯಗಳಲ್ಲಿ ಅತಿಹೆಚ್ಚು ಗೋಲು ದಾಖಲಿಸಿದ ಆಟಗಾರರ ಪಟ್ಟಿಯಲ್ಲಿ ಸುನಿಲ್‌ ಚೆಟ್ರಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಪೋರ್ಚುಗಲ್‌ನ ಸೂಪರ್‌ಸ್ಟಾರ್‌ ಕ್ರಿಸ್ಟಿಯಾನೊ ರೊನಾಲ್ಡೊ ಅಗ್ರಸ್ಥಾನದಲ್ಲಿದ್ದಾರೆ. 226 ಪಂದ್ಯ ಆಡಿರುವ ಅವರ ಖಾತೆಯ 143 ಗೋಲುಗಳಿವೆ.

ನಂತರದ ಸ್ಥಾನಗಳಲ್ಲಿ ಮೆಸ್ಸಿ (196 ಪಂದ್ಯ, 115 ಗೋಲು), ಇರಾನ್‌ನ ಅಲಿ ದಯಿ (148 ಪಂದ್ಯ, 109 ಗೋಲು) ಹಾಗೂ ಚೆಟ್ರಿ (157 ಪಂದ್ಯ, 95 ಗೋಲು) ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.