
ನವದೆಹಲಿ: ಇತ್ತೀಚೆಗಷ್ಟೇ ಭಾರತಕ್ಕೆ ಭೇಟಿ ನೀಡಿದ್ದ ಫುಟ್‌ಬಾಲ್ ಮಾಂತ್ರಿಕ ಲಯೊನೆಲ್ ಮೆಸ್ಸಿ, ಪ್ರವಾಸದ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಈ ಸಂಬಂಧ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊ ಕ್ಲಿಪ್ ಅನ್ನು ಹಂಚಿಕೊಂಡಿದ್ದು ಅಡಿ ಬರಹದಲ್ಲಿ 'ಭಾರತದಲ್ಲಿ ಫುಟ್ಬಾಲ್ಗೆ ಉಜ್ವಲ ಭವಿಷ್ಯವಿದೆ' ಎಂದು ನಾನು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಗೋಟ್ ಪ್ರವಾಸದಲ್ಲಿ ಅತ್ಯುತ್ತಮ ಆತಿಥ್ಯ ನೀಡಿದ್ದಕ್ಕಾಗಿ ಭಾರತಕ್ಕೆ ಧನ್ಯವಾದ ಅರ್ಪಿಸಿದ್ದ ಮೆಸ್ಸಿ, ಭಾರತದಲ್ಲಿ ಕಳೆದ ಅದ್ಭುತ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
ಈ ವಿಡಿಯೊ ಕ್ಷಿಪ್‌ನಲ್ಲಿ ಭಾರತೀಯ ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್, ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಸೇರಿದಂತೆ ಯುವ ಫುಟ್ಬಾಲ್ ಆಟಗಾರರ ದೃಶ್ಯಗಳು ಸೆರೆಯಾಗಿವೆ.
ಭಾರತದಲ್ಲಿ ಫುಟ್‌ಬಾಲ್ ಕ್ರೀಡೆಯು ಕ್ರಿಕೆಟ್‌ನಷ್ಟು ಪ್ರಾಮುಖ್ಯತೆ ಗಳಿಸಿಲ್ಲ. ಈ ನಡುವೆ ಭಾರತದಲ್ಲಿ ಫುಟ್ಬಾಲ್ಗೆ ಉಜ್ವಲ ಭವಿಷ್ಯವಿದೆ ಎಂಬ ಮೆಸ್ಸಿ ಶುಭ ಹಾರೈಕೆಯೂ ಹೊಸ ಹುರುಪು ತಂದುಕೊಡಲಿದೆ ಎನ್ನಬಹುದು.
‘ಗೋಟ್’ (greatest of all time) ಪ್ರವಾಸದ ಭಾಗವಾಗಿ ಮೆಸ್ಸಿ ಕೋಲ್ಕತ್ತದ ಸಾಲ್ಟ್‌ಲೇಕ್ ಕ್ರೀಡಾಂಗಣಕ್ಕೆ ಮೊದಲು ಭೇಟಿ ನೀಡಿದ್ದರು. ಆ ಬಳಿಕ ಹೈದರಾಬಾದ್, ಮುಂಬೈ, ದೆಹಲಿಗೆ ಭೇಟಿ ನೀಡಿದ್ದರು.
ಭೇಟಿ ವೇಳೆ ನೆಚ್ಚಿನ ಆಟಗಾರನನ್ನು ಅವರ ಅಭಿಮಾನಿಗಳು ಕಣ್ತುಂಬಿ ಕೊಂಡರು. ಕ್ರಿಕೆಟ್ ದಿಗ್ಗಜರು, ಬಾಲಿವುಡ್ ತಾರೆಯರು ಸೇರಿದಂತೆ ರಾಜಕೀಯ ಗಣ್ಯರು ಸಹ ಮೆಸ್ಸಿಯನ್ನು ಭೇಟಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.