ADVERTISEMENT

Tokyo Olympics | ಭಾರತ ಮಹಿಳಾ ಹಾಕಿ ತಂಡಕ್ಕೆ ಮತ್ತೊಂದು ಆಘಾತ

ಪಿಟಿಐ
Published 7 ಆಗಸ್ಟ್ 2021, 4:27 IST
Last Updated 7 ಆಗಸ್ಟ್ 2021, 4:27 IST
ಚಿತ್ರ ಕೃಪೆ: ಸ್ಯೋರ್ಡ್ ಮರೈನ್, ಟ್ವಿಟರ್ ಖಾತೆ
ಚಿತ್ರ ಕೃಪೆ: ಸ್ಯೋರ್ಡ್ ಮರೈನ್, ಟ್ವಿಟರ್ ಖಾತೆ   

ಟೋಕಿಯೊ: ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಕೈತಪ್ಪಿರುವ ಭಾರತದ ಮಹಿಳಾ ಹಾಕಿ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಒಲಿಂಪಿಕ್ಸ್‌ನೊಂದಿಗೆ ಭಾರತದ ಮಹಿಳಾ ಹಾಕಿ ತಂಡದೊಂದಿಗಿನ ತಮ್ಮ ಅಭಿಯಾನ ಕೊನೆಗೊಂಡಿದೆ ಎಂಬುದನ್ನು ಮುಖ್ಯ ಕೋಚ್ ಸ್ಯೋರ್ಡ್ ಮರೈನ್ ಸ್ಪಷ್ಟಪಡಿಸಿದ್ದಾರೆ.

ಭಾರತ ಮಹಿಳಾ ಹಾಕಿ ತಂಡದ ಐತಿಹಾಸಿಕ ಸಾಧನೆಯಲ್ಲಿ ವಿದೇಶಿ ಕೋಚ್ ಸ್ಯೋರ್ಡ್ ಮರೈನ್ ಕೊಡುಗೆ ಮಹತ್ತರವಾಗಿದೆ. ಹಾಕಿ ಆಟಗಾರ್ತಿಯರು ಶ್ರೇಷ್ಠ ಪ್ರದರ್ಶನ ನೀಡಲು ಕೋಚ್ ಪ್ರಮುಖ ಪಾತ್ರ ವಹಿಸಿದ್ದರು.

47 ವರ್ಷದ ಸ್ಯೋರ್ಡ್ ತಮ್ಮ ವಿಶಿಷ್ಟ ರೀತಿಯ ತರಬೇತಿ ಶೈಲಿಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಆಟಗಾರ್ತಿಯರ ಪಾಲಿಗೆ ನೆಚ್ಚಿನ ಕೋಚ್ ಆಗಿ ಮೂಡಿಬಂದಿದ್ದರು.

ಮೂರನೇ ಸ್ಥಾನಕ್ಕಾಗಿ ಬ್ರಿಟನ್ ವಿರುದ್ಧ ಸೋಲು ಅನುಭವಿಸಿದರೂ ಆಟಗಾರ್ತಿಯರ ಜೊತೆಗೆ ಕೋಚ್ ಸಾಧನೆಯ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

'ನನ್ನ ಮುಂದೆ ಯಾವುದೇ ಯೋಜನೆಗಳಿಲ್ಲ. ಖಂಡಿತವಾಗಿಯೂ ಭಾರತ ತಂಡದ ಆಟಗಾರ್ತಿಯರನ್ನು ಮಿಸ್ ಮಾಡಿಕೊಳ್ಳಲಿದ್ದೇನೆ. ಅದಕ್ಕಿಂತಲೂ ಮಿಗಿಲಾಗಿ ನನ್ನ ಕುಟುಂಬವನ್ನು ಮಿಸ್ ಮಾಡುತ್ತಿದ್ದೇನೆ. ನನ್ನ ಮಗ, ಮಗಳೊಂದಿಗೆ ಸಮಯ ಕಳೆಯಲು ಬಯಸುತ್ತೇನೆ. ಕಳೆದ ಮೂರುವರೆ ವರ್ಷಗಳಿಂದ ಅವರಿಂದ ದೂರವಾಗಿದ್ದೇನೆ. ಈಗ ಭಾರತ ತಂಡದೊಂದಿಗಿನ ಪಯಣ ಮುಗಿಸುವ ಸಮಯ ಬಂದಿದೆ' ಎಂದು ಡಚ್ ಮೂಲದ ಸ್ಯೋರ್ಡ್ ತಿಳಿಸಿದರು.

ಇದೇ ಸಂದರ್ಭದಲ್ಲಿ ಹಾಕಿ ತಂಡಕ್ಕೆ ಪ್ರಾಯೋಜಕತ್ವ ವಹಿಸುವ ಮೂಲಕ ಎಲ್ಲ ರೀತಿಯ ಬೆಂಬಲ ನೀಡಿರುವ ಒಡಿಶಾ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಹಾಗೂ ಒಡಿಶಾ ಸ್ಪೋರ್ಟ್ಸ್‌ಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.