ADVERTISEMENT

ವರ್ಷಕ್ಕೆರಡು ಬಾರಿ ‘ಟಾಪ್ಸ್‌’ ಅಥ್ಲೀಟುಗಳ ಮೌಲ್ಯಮಾಪನ: ಕ್ರೀಡಾ ಸಚಿವಾಲಯ

ಪಿಟಿಐ
Published 22 ಫೆಬ್ರುವರಿ 2025, 14:19 IST
Last Updated 22 ಫೆಬ್ರುವರಿ 2025, 14:19 IST
<div class="paragraphs"><p>ಒಲಿಂಪಿಕ್‌ </p></div>

ಒಲಿಂಪಿಕ್‌

   

ನವದೆಹಲಿ: ಕ್ರೀಡಾ ಸಚಿವಾಲಯದ ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಂ ಸ್ಕೀಮ್‌ (‘ಟಾಪ್ಸ್‌’) ಯೋಜನೆಯಡಿ ಆಯ್ಕೆಯಾದ ಅಥ್ಲೀಟುಗಳು ವಿದೇಶದಲ್ಲಿ ತರಬೇತಿ ಮತ್ತು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ವೇಳೆ ಹೆಚ್ಚಿನ ಭತ್ಯೆಗೆ ಅರ್ಹರಿರುತ್ತಾರೆ. ಆದರೆ ಅವರು ಮೌಲ್ಯಮಾಪನ ಪ್ರಕ್ರಿಯೆ ಅಂಗವಾಗಿ ಆರು ತಿಂಗಳಿಗೊಮ್ಮೆ ‘ದೈಹಿಕ ಮತ್ತು ಮನೋಬಲ’ ಪರೀಕ್ಷೆಗೆ ಒಳಪಡಬೇಕಾಗುತ್ತದೆ.

ಟಾಪ್ಸ್‌ ಯೋಜನೆಯಡಿ ಆಯ್ಕೆಯಾದ ‘ಕೋರ್‌’ (ಅತಿ ಪ್ರಮುಖ) ಅಥ್ಲೀಟುಗಳ ಸಂಖ್ಯೆಯನ್ನು 179 ರಿಂದ 94ಕ್ಕೆ ಇಳಿಸಲಾಗಿದೆ. ಪ್ರಗತಿ ಕಾಣುತ್ತಿರುವ (ಡೆವಲಪ್‌ಮೆಂಟಲ್‌) ಅಥ್ಲೀಟುಗಳ ಸಂಖ್ಯೆಯನ್ನು 112ಕ್ಕೆ ಪರಿಷ್ಕರಿಸಲಾಗಿದೆ. ಒಲಿಂಪಿಕ್‌ ಕ್ರೀಡೆಗಳ ನಂತರ ಪರಿಷ್ಕರಣೆ ಆಗುವುದು ಸಾಮಾನ್ಯ ಪ್ರಕ್ರಿಯೆ. ಆದರೆ ಈ ಬಾರಿ ‘ಕೋರ್‌ ಗುಂಪಿನಲ್ಲಿ’ ಈಜು, ಸ್ವ್ಕಾಷ್‌, ಗಾಲ್ಫ್‌ ಮತ್ತು ಟೆನಿಸ್‌ ಆಟಗಾರರ ಪ್ರಾತಿನಿಧ್ಯ ಇಲ್ಲದಿರುವುದು ಎದ್ದು ಕಾಣಿಸುತ್ತಿದೆ.

ADVERTISEMENT

ಕೋರ್‌ ಗುಂಪಿನ 94 ಅಥ್ಲೀಟುಗಳಲ್ಲಿ 42 ಮಂದಿ ಬಿಟ್ಟರೆ ಉಳಿದ 52 ಮಂದಿ ಪ್ಯಾರಾ ಅಥ್ಲೀಟುಗಳಾಗಿದ್ದಾರೆ. ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಗಮನಾರ್ಹ ಸಾಧನೆಯ ಕಾರಣ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 2024ರ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಏಳು ಚಿನ್ನ ಸಹಿತ 29 ಪದಕಗಳನ್ನು ಗೆದ್ದುಕೊಂಡಿತ್ತು.

‘ಕೋರ್‌ ಗುಂಪಿನ ಅಥ್ಲೀಟುಗಳು ತಿಂಗಳಿಗೆ 50,000 ಸ್ಟೈಪಂಡ್‌ ಜೊತೆ ₹25 ಡಾಲರ್ ಹೆಚ್ಚುವರಿಯಾಗಿ ಪಡೆಯಲಿದ್ದಾರೆ. ಡೆವಲಪ್‌ಮೆಂಟ್‌ ಗ್ರೂಪ್‌ನಲ್ಲಿರುವ ಅಥ್ಲೀಟುಗಳು ತಿಂಗಳಿಗೆ ₹25,000 ಪಡೆಯಲಿದ್ದಾರೆ. ಜೊತೆಗೆ ತರಬೇತಿ ಮತ್ತು ಸ್ಪರ್ಧೆಗಳ ವೇಳೆ ಹೆಚ್ಚುವರಿ ಭತ್ಯೆಗೆ ಅರ್ಹರಿರುತ್ತಾರೆ’ ಎಂದು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌)ದ ಮಿಷನ್‌ ಒಲಿಂಪಿಕ್ ಸೆಲ್‌ನ (ಎಂಒಸಿ) ಸದಸ್ಯರೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದರು.

ಕೋರ್‌ ಗ್ರೂಪ್‌ ಪುನರ್ರಚನೆಯ ನಂತರ ಒಬ್ಬರೂ ಬಾಕ್ಸರ್‌ ಅಲ್ಲಿ ಸ್ಥಾನ ಪಡೆದಿಲ್ಲ. ಅಥ್ಲೆಟಿಕ್ಸ್‌ನಿಂದ ಕೇವಲ ಮೂವರು ಸ್ಥಾನ ಪಡೆದಿದ್ದಾರೆ. ಲಯ ಕಳೆದುಕೊಂಡಿರುವ ಬ್ಯಾಡ್ಮಿಂಟನ್ ಆಟಗಾರರಾದ ಕೆ.ಶ್ರೀಕಾಂತ್‌, ಅಶ್ವಿನಿ ಪೊನ್ನಪ್ಪ ಅವರೂ ಅಂತಿಮಗೊಂಡ ಪಟ್ಟಿಯಲ್ಲಿಲ್ಲ. ಟೆನಿಸ್‌ನಲ್ಲಿ ಭಾರತದ ಅಗ್ರ ಸಿಂಗಲ್ಸ್‌ ಆಟಗಾರ ಸುಮಿತ್ ನಗಾಲ್ ಕೂಡ ಸ್ಥಾನ ಪಡೆದಿಲ್ಲ.

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ದಯನೀಯ ವೈಫಲ್ಯ ಅನುಭವಿಸಿದ ಆರ್ಚರಿ ಸ್ಪರ್ಧಿ ದೀಪಿಕಾ ಕುಮಾರಿ ಕೋರ್‌ ಗುಂಪಿನಲ್ಲಿ ಸ್ಥಾನ ಉಳಿಸಿಕೊಂಡಿದ್ದು ಅಚ್ಚರಿ ಮೂಡಿಸಿದೆ. ಗಾಯದ ಸಮಸ್ಯೆ ಎದುರಿಸಿದ್ದ ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು ಕೂಡ ಸ್ಥಾನ ಉಳಿಸಿಕೊಂಡಿದ್ದಾರೆ.

‘ದೀಪಿಕಾ ಅವರನ್ನು ಸೋಲಿಸಬಲ್ಲ ಬಿಲ್ಗಾರ್ತಿಯರು ಇನ್ನೂ ಗಮನಕ್ಕೆ ಬಂದಿಲ್ಲ. ಹೀಗಾಗಿ ಅವರನ್ನು ಬದಲಾಯಿಸುವುದಾದರೂ ಹೇಗೆ? ಅವರು ಪ್ಯಾರಿಸ್‌ ಒಲಿಂಪಿಕ್ಸ್‌ಗೂ ಅರ್ಹತೆ ಪಡೆದಿದ್ದರು’ ಎಂದು ಎಂಒಸಿ ಸದಸ್ಯ ತಿಳಿಸಿದರು. ‘ಮೀರಾಬಾಯಿ ಅವರ ಫಿಟ್ನೆಸ್‌ ಮೇಲೆ ಗಮನ ನೀಡಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.