ADVERTISEMENT

ಚೆಸ್ ವಿಶ್ವಕಪ್: ಟೈಬ್ರೇಕರ್‌ ಸುತ್ತಿಗೆ ಭಾರತದ ಮೂವರು

ಪಿಟಿಐ
Published 12 ನವೆಂಬರ್ 2025, 22:29 IST
Last Updated 12 ನವೆಂಬರ್ 2025, 22:29 IST
ಪೆಂಟಾಲ ಹರಿಕೃಷ್ಣ
ಫಿಡೆ ವೆಬ್‌ಸೈಟ್ ಚಿತ್ರ
ಪೆಂಟಾಲ ಹರಿಕೃಷ್ಣ ಫಿಡೆ ವೆಬ್‌ಸೈಟ್ ಚಿತ್ರ   

ಪಣಜಿ: ಭಾರತದ ಗ್ರ್ಯಾಂಡ್‌ಮಾಸ್ಟರ್‌ಗಳಾದ ಅರ್ಜುನ್ ಇರಿಗೇಶಿ ಮತ್ತು ಆರ್.ಪ್ರಜ್ಞಾನಂದ ಅವರು ವಿಶ್ವಕಪ್‌ ಚೆಸ್‌ ಟೂರ್ನಿಯ ನಾಲ್ಕನೇ ಸುತ್ತಿನಲ್ಲಿ ಬುಧವಾರ ತಮ್ಮ ಎರಡನೇ ಕ್ಲಾಸಿಕಲ್‌ ಆಟಗಳಲ್ಲಿ ಡ್ರಾ ಸಾಧಿಸಿದರು. ಹಿರಿಯ ಆಟಗಾರ ಪೆಂಟಾಲ ಹರಿಕೃಷ್ಣ ಅವರೂ ಡ್ರಾ ಮಾಡಿಕೊಂಡರೂ, ಹೆಚ್ಚಿನ ಅವಧಿಯಲ್ಲಿ ಒತ್ತಡಕ್ಕೆ ಸಿಲುಕಿದ್ದರು.

ಈ ಮೂವರೂ ಗುರುವಾರ ನಡೆಯುವ ಕಾಲಮಿತಿಯ ಟೈಬ್ರೇಕರ್ ಪಂದ್ಯಗಳಲ್ಲಿ ಗೆದ್ದರೆ 16ರ ಸುತ್ತನ್ನು  ತಲುಪಬಹುದು. ಆದರೆ ಕಣದಲ್ಲಿದ್ದ ಭಾರತದ ಇನ್ನಿಬ್ಬರು ಆಟಗಾರರಾದ ವಿಶ್ವ ಜೂನಿಯರ್ ಚಾಂಪಿಯನ್ ಪ್ರಣವ್ ವೆಂಕಟೇಶ್ ಮತ್ತು ಕಾರ್ತಿಕ್ ವೆಂಕಟರಾಮನ್ ಅವರು ಎರಡನೇ ಕ್ಲಾಸಿಕಲ್ ಪಂದ್ಯದಲ್ಲಿ ಸೋತು ಸವಾಲು ಮುಗಿಸಿದರು.

ಅರ್ಜುನ್‌ ಅವರು 36 ನಡೆಗಳ ನಂತರ ಹಂಗೆರಿಯ ಅನುಭವಿ ಪೀಟರ್ ಲೆಕೊ ಜೊತೆ ಡ್ರಾಕ್ಕೆ ಒಪ್ಪಿದರು. ಅರ್ಜುನ್‌ ದಾಳಿಗೆ ಯತ್ನಿಸಿದರೂ, ಲೆಕೊ ಅವರು ರಕ್ಷಣೆಯ ಆಟದಲ್ಲಿ ಕರಾರುವಾಕ್‌ ಆಗಿದ್ದರು.

ADVERTISEMENT

ಪ್ರಜ್ಞಾನಂದ ಮತ್ತು ರಷ್ಯಾದ ಜಿಎಂ ಡೇನಿಯಲ್ ದುಬೋವ್ ಅವರು 30 ನಡೆಗಳ ಬಳಿಕ ಡ್ರಾ ಕರಾರಿಗೆ ಸಹಿಹಾಕಿದರು. ಹರಿಕೃಷ್ಣ ಮತ್ತು ಸ್ವೀಡನ್‌ನ ನಿಲ್ಸ್‌ ಗ್ರಾಂಡೆಲಿಯಸ್ ಅವರು 38 ನಡೆಗಳ ನಂತರ ಪಾಯಿಂಟ್‌ ಹಂಚಿಕೊಂಡರು. ಮೊದಲ ಕ್ಲಾಸಿಕಲ್ ಆಟವನ್ನೂ ಈ ಆಟಗಾರರು ಡ್ರಾ ಮಾಡಿಕೊಂಡಿದ್ದು ಸ್ಕೋರ್ 1–1 ಸಮಬಲಗೊಂಡಿದೆ.

ಮೆಕ್ಸಿಕೊದ ಗ್ರ್ಯಾಂಡ್‌ಮಾಸ್ಟರ್‌ ಜೋಸ್‌ ಎಡ್ವರ್ಡೊ ಮಾರ್ಟಿನೆಝ್ ಅವರು ಪ್ರಿಕ್ವಾರ್ಟರ್‌ಫೈನಲ್ ತಲುಪಿದ ಮೊದಲ ಆಟಗಾರ ಎನಿಸಿದರು. ಸರ್ಬಿಯಾದ ಜಿಎಂ ಅಲೆಕ್ಸಿ ಸರನ ವಿರುದ್ಧ ಮಂಗಳವಾರ ಕಪ್ಪು ಕಾಯಿಗಳಲ್ಲಿ ಆಡಿ ಜಯಿಸಿದ್ದ ಅವರು ಬುಧವಾರ ಎರಡನೇ ಆಟ ಡ್ರಾ ಮಾಡಿಕೊಂಡು ಪಂದ್ಯವನ್ನು 1.5–0.5ರಲ್ಲಿ ಗೆದ್ದರು. ಅವರು 16ರ ಸುತ್ತಿನಲ್ಲಿ ಹರಿಕೃಷ್ಣ– ಗ್ರಾಂಡೆಲಿಯಸ್‌ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.

ಎರಡು ಬಾರಿಯ ಚಾಂಪಿಯನ್ ಲೆವೊನ್ ಅರೋನಿಯನ್ ಅವರು ಪೋಲೆಂಡ್‌ನ ರಡೊಸ್ಲಾವ್‌ ವೊಜ್ತಾಝೆಕ್ ಜೊತೆ ಡ್ರಾ ಸಾಧಿಸಿ 1.5–0.5ರಲ್ಲಿ ಪಂದ್ಯ ಗೆದ್ದರು.

ಪ್ರಣವ್ ಅವರು ಉಜ್ಬೇಕಿಸ್ತಾನದ ಜಿಎಂ ನದಿರ್ಬೆಕ್ ಯಾಕುಬೊಯೆವ್ ಅವರಿಗೆ ಎರಡನೇ ಆಟದಲ್ಲಿ ಸೋತರು. ಇವರಿಬ್ಬರ ನಡುವಣ ಮೊದಲ ಆಟ ಡ್ರಾ ಆಗಿತ್ತು. ವಿಯೆಟ್ನಾಮಿನ ಜಿಎಂ ಲಿ ಕ್ವಾಂಗ್ ಲೀಮ್‌ ಅವರು 1.5–0.5 ರಿಂದ ಭಾರತದ ಇನ್ನೊಬ್ಬ ಆಟಗಾರ ಕಾರ್ತಿಕ್ ವೆಂಕಟರಾಮನ್ ಅವರನ್ನು ಮಣಿಸಿದರು.

ಜರ್ಮನಿಯ ಅಲೆಕ್ಸಾಂಡರ್‌ ಡೊನ್ಚೆಂಕೊ ಅವರು 1.5–0.5ರಿಂದ ಸ್ವದೇಶದ ಮಥಾಯಸ್ ಬ್ಲುಬಾಮ್ ಅವರನ್ನು ಸೋಲಿಸಿದರು.

ಫ್ರಾನ್ಸ್‌ನ ಮ್ಯಾಕ್ಸಿಂ ವೇಷಿಯರ್ ಲಗ್ರಾವ್‌, ಜರ್ಮನಿಯ ವಿನ್ಸೆಂಟ್ ಕೀಮರ್‌, ಹಂಗೆರಿಯ ರಿಚರ್ಡ್‌ ರ‍್ಯಾಪೋರ್ಟ್‌, ಅಮೆರಿಕದ ಸ್ಯಾಮ್‌ ಶಂಕ್ಲಾಂಡ್‌, ಚೀನಾದ ವೀ ಯಿ, ಇರಾನ್‌ನ ಪರ್ಹಾಮ್‌ ಮಘಸೂಡ್ಲು ಒಂಗೊಂಡಂತೆ 22 ಮಂದಿ ಗುರುವಾರ ಟೈಬ್ರೇಕರ್ ಆಡಲಿದ್ದಾರೆ. ಐದು ಮಂದಿಯಷ್ಟೇ ಕ್ಲಾಸಿಕಲ್ ಆಟದ ಬಳಿಕ ಮುಂದಿನ ಸುತ್ತಿಗೆ ಮುನ್ನಡೆದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.