ADVERTISEMENT

ರ‍್ಯಾಪಿಡ್ ಚೆಸ್: ಗ್ರ್ಯಾಂಡ್‌ಮಾಸ್ಟರ್ ಅರ್ಜುನ್ ಇರಿಗೇಶಿ, ಪ್ರಣವ್‌ಗೆ ಜಯ

ಪಿಟಿಐ
Published 14 ಜೂನ್ 2025, 15:50 IST
Last Updated 14 ಜೂನ್ 2025, 15:50 IST
ಅರ್ಜುನ್ ಇರಿಗೇಶಿ
ಅರ್ಜುನ್ ಇರಿಗೇಶಿ   

ಲಂಡನ್: ಗ್ರ್ಯಾಂಡ್‌ಮಾಸ್ಟರ್ ಅರ್ಜುನ್ ಇರಿಗೇಶಿ ಮತ್ತು ಪ್ರಣವ್ ಅವರು ಶನಿವಾರ ನಡೆದ ಮಹತ್ವದ ಪಂದ್ಯಗಳಲ್ಲಿ  ಜಯಿಸಿದ್ದರಿಂದ ಎಂಜಿಡಿ 1 ತಂಡವು ಮೊದಲ ಬಾರಿಗೆ ಫಿಡೆ ವಿಶ್ವ ರ‍್ಯಾಪಿಡ್ ತಂಡ ಚಾಂಪಿಯನ್‌ಷಿಪ್ ಗೆದ್ದುಕೊಂಡಿತು. ಭಾರತದ ತಂಡವೊಂದರ ಚೊಚ್ಚಲ ಸಾಧನೆ ಇದಾಗಿದೆ.

ಆರನೇ ಶ್ರೇಯಾಂಕದ ಎಂಜಿಡಿ 1 ತಂಡವು ಮೂರು ದಿನಗಳಲ್ಲಿ ನಡೆದ 12 ಸುತ್ತುಗಳಲ್ಲಿ 10ರಲ್ಲಿ ಜಯಿಸಿತು. ಶುಕ್ರವಾರ ನಡೆದ ಸುತ್ತಿನಲ್ಲಿ ಟೀಮ್ ಹೆಕ್ಸಾಮೈಂಡ್ ಒಡ್ಡಿದ ಕಠಿಣ ಪೈಪೋಟಿಯನ್ನು ತಂಡವು ಮೀರಿ ನಿಂತಿತು. 

ಕಳೆದ ಎರಡು ಆವೃತ್ತಿಗಳಲ್ಲಿ ಎಂಜಿಡಿ 1 ತಂಡವು ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿತ್ತು. 

ADVERTISEMENT

ಈ ಬಾರಿ ಉತ್ತಮವಾಗಿಯೇ ಅಭಿಯಾನ ಆರಂಭಿಸಿತ್ತು. ಆದರೆ ಈ ಹಾದಿಯಲ್ಲಿ ಟೀಮ್ ಫ್ರೀಡಂ ವಿರುದ್ಧದ ಸುತ್ತಿನಲ್ಲಿ ಡ್ರಾ ಮತ್ತು ಟೀಮ್ ಹೆಕ್ಸಾಮೈಂಡ್ ವಿರುದ್ಧ ಸೋತಿತ್ತು. ಇದರಿಂದಾಗಿ ಕೊನೆಯ ದಿನ ನೇರ ಗೆಲುವು ಅಗತ್ಯವಾಗಿತ್ತು. ಅದಕ್ಕೆ ತಕ್ಕಂತೆ ತಂಡವು ಉತ್ತಮ ರೀತಿಯಲ್ಲಿ ತನ್ನ ಸಾಮರ್ಥ್ಯ ಮೆರೆಯಿತು. ಅಂತಿಮ ದಿನದಂದು ಎಲ್ಲ ನಾಲ್ಕು ಸುತ್ತುಗಳನ್ನೂ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡಿತು. 

ತಂಡದಲ್ಲಿ ಗ್ರ್ಯಾಂಡ್‌ಮಾಸ್ಟರ್ ಅರ್ಜುನ್ ಇರಿಗೇಶಿ, ಪೆಂಟ್ಯಾಲ ಹರಿಕೃಷ್ಣ, ಲಿಯೊನ್ ಮೆಂಡೋನ್ಸಾ, ಅಥರ್ವ್ ತೈಡೆ ಮತ್ತು ನಾಯಕ ಶ್ರೀನಾಥ್ ನಾರಾಯಣನ್ ಅವರಿದ್ದ ಎಂಜಿಡಿ1 ತಂಡವು ಅಂತಿಮ ಸುತ್ತಿನಲ್ಲಿ ಅಮೋಘ ಪ್ರದರ್ಶನ ನೀಡಿತು.  ಅರ್ಜುನ್ ಮತ್ತು ಪ್ರಣವ್ ಅವರು ಮಾಲ್ಕಂ ಮೇಟ್ಸ್‌ ವಿರುದ್ಧ ಸಾಧಿಸಿದ ಗೆಲುವು ನಿರ್ಣಾಯಕವಾಯಿತು.  

ಎಂಜಿಡಿ1 ತಂಡವು ಒಟ್ಟು 21 ಅಂಕಗಳಣ್ನು ಗಳಿಸಿತು. ನಂತರದ ಸ್ಥಾನ ಪಡೆದ ಟೀಮ್ ಹೆಕ್ಸಾಮೈಂಡ್ 20 ಅಂಕ ಗಳಿಸಿತು. ವಿಶ್ವನಾಥನ್ ಆನಂದ್ ಅವರಿದ್ದ ಟೀಮ್ ಫ್ರೀಡಂ ತಂಡವು 17 ಅಂಕ ಗಳಿಸಿತು. 

ಅಂತಿಮ ದಿನದಂದು ವಿಶ್ವ ರ‍್ಯಾಂಕ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ಅರ್ಜುನ್ ಮಿಂಚಿದರು. ಅವರು ನಾಲ್ಕು ಸುತ್ತುಗಳಲ್ಲಿ 3.5 ಅಂಕಗಳನ್ನು ಪಡೆದರು. ಈ ಟೂರ್ನಿಯ ಎರಡನೇ ದಿನದಂದು ಅವರು ಕೇವಲ ಅರ್ಧ ಅಂಕ ಗಳಿಸಿದ್ದರು. ಆದರೆ ಕೊನೆಯ ದಿನ ಪುಟಿದೆದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.