ADVERTISEMENT

ಸುಳ್ಳು ಹೇಳಿದ ಜೊಕೊವಿಚ್ ಅವರನ್ನು ಆಸ್ಟ್ರೇಲಿಯಾ ಹೊರಹಾಕಬಹುದು: ಶೇನ್ ವಾರ್ನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಜನವರಿ 2022, 7:34 IST
Last Updated 14 ಜನವರಿ 2022, 7:34 IST
ಶೇನ್‌ ವಾರ್ನ್‌, ನೊವಾಕ್ ಜೊಕೊವಿಚ್‌
ಶೇನ್‌ ವಾರ್ನ್‌, ನೊವಾಕ್ ಜೊಕೊವಿಚ್‌   

ಮೆಲ್ಬರ್ನ್‌: ಕೋವಿಡ್‌-19 ತಡೆ ಲಸಿಕೆ ಹಾಕಿಸಿಕೊಳ್ಳದೆ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್ ಟೂರ್ನಿಯಲ್ಲಿ ಆಡಲು ಬಂದಿರುವ ಸರ್ಬಿಯಾದ ನೊವಾಕ್ ಜೊಕೊವಿಚ್‌ ಅವರನ್ನು ದೇಶದಿಂದ ಹೊರಹಾಕಲು ಸರ್ಕಾರ ಅರ್ಹವಾಗಿದೆ ಎಂದು ಮಾಜಿ ಕ್ರಿಕೆಟಿಗ ಶೇನ್‌ ವಾರ್ನ್‌ ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್‌ ದೃಢಪಟ್ಟಿದ್ದರ ಹೊರತಾಗಿಯೂ, ಜೊಕೊವಿಚ್‌ ಅವರು ಬೆಲ್‌ಗ್ರೇಡ್‌ನಲ್ಲಿರುವ ತಮ್ಮ ಟೆನಿಸ್‌ ಕೇಂದ್ರದಲ್ಲಿ ಡಿಸೆಂಬರ್ 18 ರಂದು ಮಾಧ್ಯಮಕ್ಕೆ ಸಂದರ್ಶನ ನೀಡಿದ್ದರು. ಈ ವಿಚಾರವನ್ನು ಬುಧವಾರ (ಜ.12) ಬಹಿರಂಗಪಡಿಸಿದ್ದರು.‌

ಆಸ್ಟ್ರೇಲಿಯನ್‌ ಓಪನ್ ಟೂರ್ನಿಯಲ್ಲಿ ಪಾಲ್ಗೊಳ್ಳುವವರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕಿದೆ. ಆದರೆ, ವಿಶ್ವದ ನಂ.1 ಆಟಗಾರ, ಜೊಕೊವಿಚ್ ಲಸಿಕೆ ಹಾಕಿಸಿಕೊಂಡಿರಲಿಲ್ಲ. ಟೂರ್ನಿಯಲ್ಲಿ ಆಡಲು ಅವರಿಗೆ ವೈದ್ಯಕೀಯ ತಂಡ ವಿನಾಯಿತಿ ನೀಡಿತ್ತು. ಆದಾಗ್ಯೂ, ದೇಶಕ್ಕೆ ಕಾಲಿಡುತ್ತಿದ್ದಂತೆ ಅವರನ್ನು ವಶಕ್ಕೆ ಪಡೆದುಕೊಂಡಿದ್ದ ಅಧಿಕಾರಿಗಳು ವೀಸಾ ರದ್ದು ಮಾಡಿ ಪಾರ್ಕ್‌ ಹೋಟೆಲ್‌ನಲ್ಲಿ ಇರಿಸಿದ್ದರು.

ADVERTISEMENT

ವೀಸಾ ರದ್ದು ಮಾಡಿರುವ ಕ್ರಮವನ್ನು ಆಸ್ಟ್ರೇಲಿಯಾ ಫೆಡರಲ್ ಕೋರ್ಟ್ ರದ್ದು ಮಾಡಿದೆ. ಹಾಗೆಯೇ, ಆಸ್ಟ್ರೇಲಿಯಾ ಓಪನ್‌ನಲ್ಲಿ ಆಡಲು ಜೊಕೊವಿಚ್‌ಗೆ ಅನುಮತಿ ನೀಡಿದೆ.

ಇಡೀ ಪ್ರಕರಣದ ಬಗ್ಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾದ ಮಾಜಿ ಸ್ಪಿನ್‌ ಮಾಂತ್ರಿಕ ಶೇನ್‌ ವಾರ್ನ್‌, ‌ʼಜೊಕೊವಿಚ್ ಶ್ರೇಷ್ಠ ಟೆನಿಸ್‌ ಆಟಗಾರ ಮತ್ತು ಸಾರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರು. ಅದರಲ್ಲಿ ಅನುಮಾನವೇ ಇಲ್ಲ. ಆದರೆ, ಅವರು ಪ್ರವೇಶ ಪತ್ರಗಳಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ. ಕೋವಿಡ್‌ ಇರುವುದು ಗೊತ್ತಿದ್ದರೂ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ಕಾನೂನು ಪ್ರಕರಣ ಎದುರಿಸುತ್ತಿದ್ದಾರೆ. ಅವರು ಅರ್ಹರಾಗಿದ್ದೂ ಲಸಿಕೆ ಹಾಕಿಸಿಕೊಂಡಿಲ್ಲ. ಅವರನ್ನು ಹೊರಹಾಕಲು ಆಸ್ಟ್ರೇಲಿಯಾ ಅರ್ಹವಾಗಿದೆ. ಇದನ್ನು ಒಪ್ಪುತ್ತೀರಾ?ʼ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.