
ಸಂಜು ಸ್ಯಾಮ್ಸನ್
ಪಿಟಿಐ ಚಿತ್ರ
ಕೋಲ್ಕತ್ತ: ಸಂಜು ಸ್ಯಾಮ್ಸನ್ ಅವರ ಪ್ರತಿಭೆಯ ಬಗ್ಗೆ ಯಾವುದೇ ಅನುಮಾನಗಳಿರಲಿಲ್ಲ. ಕೇರಳ ಕಿರಿಯರ ತಂಡಕ್ಕೆ ಆಡಿದ ದಿನಗಳಿರಲಿ, ರಾಜಸ್ಥಾನ ರಾಯಲ್ಸ್ ತಂಡಕ್ಕೆ ಆಡಿದ ಸಂದರ್ಭ ವಿರಲಿ ಅಥವಾ ಭಾರತ ತಂಡವನ್ನು ಪ್ರತಿನಿಧಿಸಿದ ಕ್ಷಣಗಳಿರಲಿ... ಅವರ ಪ್ರತಿಭೆ ಏನೆಂಬುದು ಜಾಹೀರಾಗಿದೆ. ಆದರೆ ಸತತ ವೈಫಲ್ಯದಿಂದ ತಮ್ಮ ಆಟದ ಮೇಲೆಯೇ ಅಪನಂಬಿಕೆಯ ಬೀಜಗಳು ಮೊಳೆಯತೊಡಗಿದ್ದು ಅವರನ್ನು ಪೂರ್ಣ ಸಾಮರ್ಥ್ಯಕ್ಕೇರದಂತೆ ಕಟ್ಟಿಹಾಕಿತ್ತು.
ಹಿಂದಿನ ಕೆಲವು ತಿಂಗಳ ಬೆಳವಣಿಯತ್ತ ನೋಟ ಬೀರಿದರೆ, ಅವರು ವಿಫಲರಾಗಲು ಕಾರಣವಾಗಿದ್ದು, ಅವರದ್ದೇ ತಪ್ಪುಗಳ ಜೊತೆಗೆ ತಂಡದ ಆಡಳಿತದ ಅತಾರ್ಕಿಕ ನಿರ್ಧಾರಗಳು. ಇವು ಅವರ ಆಟದ ಮೇಲೆ ಪರಿಣಾಮ ಬೀರಿದವು. ಹೋದ ಸೆಪ್ಟೆಂಬರ್‌ನಲ್ಲಿ ಏಷ್ಯಾಕಪ್ ವೇಳೆ ಆಗಿನ ಉಪನಾಯಕ ಶುಭಮನ್ ಗಿಲ್ ಅವರಿಗೆ ಅವಕಾಶ ಕಲ್ಪಿಸಲು ಸ್ಯಾಮ್ಸನ್ ಅವರ ಬ್ಯಾಟಿಂಗ್ ಕ್ರಮಾಂಕ ಬದಲಾಗುತ್ತಾ ಹೋಯಿತು. ವಿಶ್ವಕಪ್‌ಗೆ ಮೊದಲು, ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಅವರಿಗೆ ಮತ್ತೆ ಅಗ್ರ ಕ್ರಮಾಂಕದಲ್ಲಿ ಆಡುವ ಅವಕಾಶ ದೊರೆಯಿತು.
ವಿಶ್ವಕಪ್ ತಂಡದಿಂದ ಗಿಲ್ ಅವರನ್ನು ಅಚ್ಚರಿಯ ರೀತಿ ಕೈಬಿಡಲಾಯಿತು. ಸ್ಯಾಮ್ಸನ್ ಸ್ಥಾನ ಉಳಿಸಿಕೊಂಡರು. ಗಿಲ್ ಅವರನ್ನು ಕೈಬಿಟ್ಟರೂ, ಆರಂಭ ಆಟಗಾರನ ಜೊತೆ ವಿಕೆಟ್ ಕೀಪರ್ ಸಹ ಆಗಿರುವ ಇಶಾನ್ ಕಿಶನ್ ದಿಢೀರನೇ ಅವಕಾಶ ಪಡೆದರು. ಜಾರ್ಖಂಡ್ ಆಟಗಾರ ದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ಸತತವಾಗಿ ಮಿಂಚಿದ್ದರು. ತಂಡದಲ್ಲಿ ಒಂದುಕಡೆ ಗಟ್ಟಿಯಾಗಿದ್ದ ಅಭಿಷೇಕ್ ಶರ್ಮಾ ಜೊತೆ ಇನಿಂಗ್ಸ್ ಆರಂಭಿಸಲು ಅವರಿಗೆ ‘ಅಸ್ತಿತ್ವದ ಸವಾಲು’ ಎದುರಾಯಿತು.
31 ವರ್ಷ ವಯಸ್ಸಿನ ಆಟಗಾರ ಸಂಜು ಮೇಲೆ ಒತ್ತಡ ಶುರುವಾಯಿತು. ನ್ಯೂಜಿಲೆಂಡ್ ವೇಗಿಗಳ ಎದುರು ಅವರ ತಾಂತ್ರಿಕ ನೈಪುಣ್ಯದ ಕೊರತೆ ಬಯಲಾಯಿತು. 10, 6, 0, 24 ಮತ್ತು 6 ರನ್‌ಗಳು ಅವರ ಗಳಿಕೆ. ತಮ್ಮನ್ನು ಮತ್ತೆ ಮೂಲೆಗುಂಪು ಮಾಡಬಹುದೆಂಬ ಆತಂಕ ಅವರನ್ನು ಕಾಡಿತು. ಅದೇ ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಒಂದು ಶತಕ ಸೇರಿ ಮೂರನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ 215 ರನ್ ಗಳಿಸಿದ್ದು, ಸಂಜುಗೆ ತಮ್ಮ ಸಾಮರ್ಥ್ಯದ ಮೇಲೆ ಇನ್ನಷ್ಟು ಸಂಶಯ ಮೂಡಿಸಿತು.
ಆಡುವ ತಂಡದಲ್ಲಿ ಅವಕಾಶ ನೀಡದಿದ್ದ ಮೇಲೆ ನೆಟ್ಸ್ ವೇಳೆ ಮೊದಲು ಆಡಲು ಕಳುಹಿಸುವುದೇಕೆ ಎಂದು ಅವರು ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್ ಅವರನ್ನು ಪ್ರಶ್ನಿಸಿದ್ದೂ ಇದೆ.
ಕಿಶನ್ ಅವರಿಗೆ ಅದೃಷ್ಟ ಖುಲಾಯಿಸಿದ ರೀತಿ ಸ್ಯಾಮ್ಸನ್ ಅವರಿಗೂ ಇಂಥದ್ದೊಂದು ಅವಕಾಶ ಒದಗಿಬಂತು. ತಂಡದಲ್ಲಿದ್ದ ಸಾಕಷ್ಟು ಎಡಗೈ ಬ್ಯಾಟರ್‌ಗಳು, ಆಫ್ ಸ್ಪಿನ್ನರ್ ಗಳೆದುರು ಪರದಾಡುತ್ತಿದ್ದರು. ದಕ್ಷಿಣ ಆಫ್ರಿಕಾ ಕೈಲಿ ಭಾರತ ಸೋತು ಸುಣ್ಣವಾದ ನಂತರ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಸ್ಯಾಮ್ಸನ್ ಅವರಿಗೆ ಅವಕಾಶ ದೊರೆಯಿತು. ಈ ಅವಕಾಶದಲ್ಲಿ ವಿಫಲ ವಾಗಿದ್ದರೆ, ಸಂಜು ಅವರಿಗೆ ಕಾಯಂ ಆಗಿ ಬಾಗಿಲು ಮುಚ್ಚುತ್ತಿತ್ತೇನೊ?
ಜಿಂಬಾಬ್ವೆ ವಿರುದ್ಧ ಬಿರುಸಿನ 24 ರನ್ ಗಳಿಸಿದ ಅವರು ಇದಕ್ಕಿಂತ ದೊಡ್ಡ ಆಟಕ್ಕೆ ಕಾಯುತ್ತಿದ್ದರು. ಭಾನುವಾರ ಈಡನ್‌ಗಾರ್ಡನ್‌ನಲ್ಲಿ ‘ಅಪಾಯಕಾರಿ’ ವೆಸ್ಟ್ ಇಂಡೀಸ್ ವಿರುದ್ಧ ನಿರ್ಣಾಯಕ ಪಂದ್ಯ ಅವರಿಗೆ ಇಂಥ ಒಂದು ಸಂದರ್ಭ ಒದಗಿಸಿತು. ಅವರು 50 ಎಸೆತಗಳಲ್ಲಿ ಅಜೇಯ 97 ರನ್ ಬಾರಿಸಿದರು. ಏಕಾಂಗಿಯಾಗಿ ತಂಡವನ್ನು ಗೆಲ್ಲಿಸುವ ಹಾದಿಯಲ್ಲಿ ಅವರು ಇನಿಂಗ್ಸ್ ಬೆಳೆಸಿದ ರೀತಿ ಎಲ್ಲರ ಮನಗೆದ್ದಿತು.
ಅವರು ಆ ಒಂದು ಇನಿಂಗ್ಸ್ ಮೂಲಕ ಸ್ವಸಾಮರ್ಥ್ಯದ ಮೇಲಿನ ಸಂದೇಹಗಳನ್ನೆಲ್ಲಾ ತೊಡೆದುಹಾಕಿದ್ದಾರೆ. ಜಾಣ್ಮೆಯಿಂದ ಇನಿಂಗ್ಸ್ ಕಟ್ಟಿ ‘ಹೈರಿಸ್ಕ್’ ಆಟದ ಜೊತೆಗೆ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಒಂದೇ ಇನಿಂಗ್ಸ್‌ನಿಂದ ದಿಢೀರನೆ ಹೀರೊ ಪಟ್ಟ ಕ್ಕೇರಿದರು. ಗೆಲುವಿನ ಬೌಂಡರಿ ಬಾರಿಸಿದ ನಂತರ ಪಿಚ್‌ನಲ್ಲಿ ಮಂಡಿಯೂರಿ ಆಕಾಶದತ್ತ ದಿಟ್ಟಿಸಿ ‘ಸರ್ವಶಕ್ತ’ನಿಗೆ ಕೃತಜ್ಞತೆ ಸಲ್ಲಿಸಿದರು.
‘ಆ ಒಂದು ಇನಿಂಗ್ಸ್‌ಗೆ ಕಾಯುತ್ತಿದ್ದೆ. ಸಾಕಷ್ಟು ಏಳುಬೀಳುಗಳನ್ನು ಕಂಡ ನನ್ನ ಪಯಣ ವಿಶೇಷವಾದುದು. ಆದರೆ, ನನ್ನಿಂದ ಸಾಧ್ಯವೇ ಎಂದು ನನ್ನ ಮೇಲೆ ಸಂದೇಹಗಳು ಮೂಡತೊಡಗಿದವು. ನಿಜ, ಇದು ವಿಶೇಷ ಇನಿಂಗ್ಸ್. ನನ್ನ ಬದುಕಿನ ಅತಿದೊಡ್ಡ ದಿನ’ ಎಂದು ಪಂದ್ಯದ ಬಳಿಕ ಪ್ರತಿಕ್ರಿಯಿಸಿದರು. ನಿರ್ಣಾಯಕ ಪಂದ್ಯದಲ್ಲಿ ಇದು ಅವರಿಗೆ ಜೀವನರೇಖೆಯಾಯಿತು. ಈಗ ಅವರು ಸ್ಥಿರತೆ ಕಾಪಾಡಿಕೊಂಡು ಇನ್ನಷ್ಟು ಎತ್ತರಕ್ಕೇರಲು ಅವಕಾಶವಿದೆ.
ಕ್ರೀಸ್‌ನಲ್ಲಿ ಸಂಜು ಸ್ಯಾಮ್ಸನ್ ಅವರ ಶಾಂತ ಸ್ವಭಾವದ ಆಟ ನೋಡಲು ಅದ್ಭುತವಾಗಿತ್ತು. ಆ ರೀತಿಯ ಆಟವು ತಂಡವನ್ನು ಮೇಲಕ್ಕೆತ್ತುತ್ತದೆ. ಎಲ್ಲರ ಪ್ರಯತ್ನ ಅದ್ಭುತವಾದುದು.– ಸಚಿನ್ ತೆಂಡೂಲ್ಕರ್, ದಿಗ್ಗಜ ಕ್ರಿಕೆಟಿಗ
ಸಂಜು ಎಷ್ಟು ಒಳ್ಳೆಯ ಆಟಗಾರ ಎಂದು ನಮಗೆಲ್ಲರಿಗೂ ತಿಳಿದಿದೆ. ಅವರಿಗೆ ಬೆಂಬಲ ನೀಡುವುದೇ ಮುಖ್ಯವಾಗಿತ್ತು. ಬಹುಶಃ ಅವರು ತಮ್ಮ ನಿಜವಾದ ಸಾಮರ್ಥ್ಯವನ್ನು ತೋರಿಸಿದ್ದಾರೆ.– ಗೌತಮ್ ಗಂಭೀರ್, ಮುಖ್ಯ ಕೋಚ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.