ADVERTISEMENT

CWC 2023 | ವಿಶ್ವಕಪ್ ಜಯದ ಭಾರತದ ಕನಸು ಭಗ್ನ

ಟ್ರಾವಿಸ್ ಹೆಡ್ ಶತಕದ ಭರಾಟೆ l ಮಿಂಚಿದ ಸ್ಟಾರ್ಕ್‌, ಲಾಬುಷೇನ್ l ಐಸಿಸಿ ಟ್ರೋಫಿ ಬರ ನೀಗಿಸಲು ರೋಹಿತ್‌ ಪಡೆ ವಿಫಲ

ಗಿರೀಶ ದೊಡ್ಡಮನಿ
Published 20 ನವೆಂಬರ್ 2023, 0:30 IST
Last Updated 20 ನವೆಂಬರ್ 2023, 0:30 IST
<div class="paragraphs"><p>ಆಸ್ಟ್ರೇಲಿಯಾ ಆಟಗಾರರ ಸಂಭ್ರಮ</p></div>

ಆಸ್ಟ್ರೇಲಿಯಾ ಆಟಗಾರರ ಸಂಭ್ರಮ

   

(ಪಿಟಿಐ ಚಿತ್ರ)

ಅಹಮದಾಬಾದ್: ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ವಿಶ್ವಕಪ್‌ ಹೊತ್ತು ಮೆರೆಯುವುದನ್ನು ನೋಡುವ ಕೋಟ್ಯಂತರ ಅಭಿಮಾನಿಗಳ ಕನಸಿನ ಗೋಪುರ ಕುಸಿಯಿತು. ಆತಿಥೇಯ ತಂಡವು ಯಶಸ್ಸಿನ ಉತ್ತುಂಗದ ಶಿಖರದಿಂದ ಒಂದೇ ಸಲ ಸೋಲಿನ ಪ್ರಪಾತಕ್ಕೆ ಜಾರಿಬಿತ್ತು.

ADVERTISEMENT

13ನೇ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಅಜೇಯ ಓಟದೊಂದಿಗೆ ಫೈನಲ್‌ಗೆ ಲಗ್ಗೆಯಿಟ್ಟಿದ್ದ  ಭಾರತ ತಂಡವು ಭಾನುವಾರ ಮೊಟೇರಾದ ನರೇಂದ್ರ ಮೋದಿ ಕ್ರಿಕೆಟ್ ಅಂಗಳದಲ್ಲಿ ನಡೆದ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು 6 ವಿಕೆಟ್‌ಗಳಿಂದ ಮಣಿಯಿತು. ಅಮೋಘ ಶತಕ ಗಳಿಸಿದ ಟ್ರಾವಿಸ್ ಹೆಡ್ (137; 120ಎ, 4X15, 6X4) ಗೆಲುವಿನ ರೂವಾರಿಯಾದರು.

ಇದರೊಂದಿಗೆ 12 ವರ್ಷಗಳ ನಂತರ ವಿಶ್ವಕಪ್ ಜಯಿಸುವ ಭಾರತದ ಕನಸು ನನಸಾಗಲಿಲ್ಲ. 2003ರ ವಿಶ್ವಕಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಸೋತಿದ್ದ ಸೇಡು ತೀರಿಸಿಕೊಳ್ಳಲೂ ಸಾಧ್ಯವಾಗಲಿಲ್ಲ. ಕಳೆದೊಂದು ದಶಕದಿಂದ ಅನುಭವಿಸುತ್ತಿರುವ ಐಸಿಸಿ ಟ್ರೋಫಿಯ ಬರವೂ ನೀಗಲಿಲ್ಲ.

ಟೂರ್ನಿಯುದ್ದಕ್ಕೂ ಎಲ್ಲ ವಿಭಾಗಗಳಲ್ಲಿಯೂ ಅಮೋಘ ಆಟವಾಡಿದ್ದ ಆತಿಥೇಯ ಬಳಗಕ್ಕೆ ಫೈನಲ್ ಪಂದ್ಯ ಕಬ್ಬಿಣದ ಕಡಲೆಯಾಯಿತು. ಶಿಸ್ತಿನ ಬೌಲಿಂಗ್, ಚುರುಕಾದ ಫೀಲ್ಡಿಂಗ್‌ ಮತ್ತು ಛಲದ ಆಟದ ಮೂಲಕ ಆಸ್ಟ್ರೇಲಿಯಾ ಆರನೇ ಬಾರಿ ವಿಶ್ವ ಕಿರೀಟ ಧರಿಸಿತು.

ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಕಮಿನ್ಸ್ ಯುದ್ಧವನ್ನು ಅರ್ಧ ಗೆದ್ದಂತೆ ನಸುನಕ್ಕಿದ್ದರು. ಅದರ ಮರ್ಮ ನಂತರದ ಆಟದಲ್ಲಿ ತಿಳಿಯಿತು. ಶುಷ್ಕವಾಗಿದ್ದ ಪಿಚ್‌ ಆರಂಭದಲ್ಲಿ ಬೌಲರ್‌ಗಳಿಗೆ ಮತ್ತು ಮುಸ್ಸಂಜೆಯ ಇಬ್ಬನಿಯಲ್ಲಿ ಮಿಂದು ಬ್ಯಾಟರ್‌ಗಳಿಗೆ ನೆರವು ನೀಡುತ್ತದೆಂಬ ಅವರ ಲೆಕ್ಕಾಚಾರ ಫಲ ನೀಡಿತು. ಮೂರು ವಿಕೆಟ್ ಗಳಿಸಿದ ವೇಗಿ ಮಿಚೆಲ್ ಸ್ಟಾರ್ಕ್‌, ತಲಾ ಎರಡು ವಿಕೆಟ್ ಕಿತ್ತ ಹ್ಯಾಜಲ್‌ವುಡ್ ಮತ್ತು ಕಮಿನ್ಸ್ ಭಾರತ ತಂಡವನ್ನು 240 ರನ್‌ಗಳಿಗೆ ಕಟ್ಟಿಹಾಕಿದರು.

ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡವೂ ಆರಂಭದಲ್ಲಿ ಆಘಾತ ಅನುಭವಿಸಿತು. ಜಸ್‌ಪ್ರೀತ್ ಬೂಮ್ರಾ (43ಕ್ಕೆ2) ಮತ್ತು ಮೊಹಮ್ಮದ್ ಶಮಿ(47ಕ್ಕೆ1) ಅವರ ದಾಳಿಯಿಂದಾಗಿ ಕೇವಲ 47 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು.

ರೋಹಿತ್ ಶರ್ಮಾ

ಆದರೆ ಟ್ರಾವಿಸ್ ಹೆಡ್ ಈ ಆತಂಕವನ್ನು ದೂರ ಮಾಡಿದರು. ಮಾರ್ನಸ್ ಲಾಬುಷೇನ್ (58; 110ಎ) ಅವರೊಂದಿಗೆ ತಾಳ್ಮೆಯ ಜೊತೆಯಾಟವಾಡಿದರು. ನಾಲ್ಕನೇ ವಿಕೆಟ್‌ಗೆ 192 ರನ್‌ ಸೇರಿಸಿ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದರು. 43 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 241 ರನ್ ಗಳಿಸಿ ಗೆದ್ದಿತು.

ಹಾಗೆ ನೋಡಿದರೆ; ಭಾರತ ತಂಡವು ಸಾಧಾರಣ ಮೊತ್ತ ಗಳಿಸಲೂ ಟ್ರಾವಿಸ್ ಹೆಡ್ ಅವರ ಅಮೋಘ ಫೀಲ್ಡಿಂಗ್ ಕಾರಣವಾಗಿತ್ತು.

ಗ್ಲೆನ್ ಮ್ಯಾಕ್ಸ್‌ವೆಲ್ ಹಾಕಿದ್ದ 10ನೇ ಓವರ್‌ನಲ್ಲಿ ರೋಹಿತ್ ಶರ್ಮಾ ಹತ್ತು ರನ್ ಗಳಿಸಿದ್ದರೂ, ಅನಗತ್ಯವಾದ ದೊಡ್ಡ ಹೊಡೆತವಾಡಿದರು. ಪಾಯಿಂಟ್ ಮತ್ತು ಕವರ್ಸ್ ಮಧ್ಯದಲ್ಲಿದ್ದ ಹೆಡ್ ಅವರು ಮಿಡ್‌ ಆನ್‌ನತ್ತ ಓಡಿ ಹೋಗಿ ಡೈವ್ ಮಾಡಿ ಕ್ಯಾಚ್ ಪಡೆದರು. ಇದು ಭಾರತದ ರನ್‌ ಗಳಿಕೆಗೆ ದೊಡ್ಡ ಪೆಟ್ಟುಕೊಟ್ಟಿತು.

ಕಳೆದ ಎಲ್ಲ ಪಂದ್ಯಗಳಂತೆ ಇಲ್ಲಿಯೂ ರೋಹಿತ್ (47 ರನ್) ಉತ್ತಮ ಲಯದಲ್ಲಿದ್ದರು. ಮೂರು ಸಿಕ್ಸರ್ ಮತ್ತು ನಾಲ್ಕು ಬೌಂಡರಿ ಹೊಡೆದು ಬೌಲರ್‌ಗಳ ಬೆವರಿಳಿಸಿದ್ದರು. ಶುಭಮನ್ ಗಿಲ್ ಬೇಗ ಔಟಾದಾಗ ಕೊಹ್ಲಿ ಅವರೊಂದಿಗೆ 46 ರನ್‌ಗಳ ಜೊತೆಯಾಟವಾಡಿದ್ದರು. 151ರ ಸ್ಟ್ರೈಕ್‌ರೇಟ್‌ನಲ್ಲಿ ಅವರು ಆಡಿದರು. ರೋಹಿತ್ ಔಟಾದ ನಂತರ ಭಾರತದ ಇನಿಂಗ್ಸ್‌ನಲ್ಲಿ ಒಂದೂ ಸಿಕ್ಸರ್‌ ದಾಖಲಾಗಲಿಲ್ಲ. ಬೌಂಡರಿಗಳೂ ವಿರಳವಾದವು.

ಕಮಿನ್ಸ್ ತಂತ್ರಗಾರಿಕೆ:’ಈ ಬೃಹತ್ ಕ್ರೀಡಾಂಗಣದಲ್ಲಿ ಸೇರುವ ಅಪಾರ ಸಂಖ್ಯೆಯ ಹೆಚ್ಚು ಪ್ರೇಕ್ಷಕರನ್ನು ಸ್ತಬ್ಧಗೊಳಿಸುವುದು ನಮ್ಮ ಗುರಿ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಹೇಳಿದ್ದರು. ಅದರಂತೆ ತಮ್ಮ ಗುರಿಯನ್ನು ಸಾಧಿಸಿದರು.

ಟೂರ್ನಿಯಲ್ಲಿ ಎರಡು ಶತಕ ಹೊಡೆದು ಅಮೋಘ ಲಯದಲ್ಲಿದ್ದ ಶ್ರೇಯಸ್ ಅಯ್ಯರ್ ಅವರ ವಿಕೆಟ್ ಕಬಳಿಸಿದ ಪ್ಯಾಟ್ ಸಂಭ್ರಮಿಸಿದರು. ರೋಹಿತ್ ಔಟಾಗಿ ಐದು ಎಸೆತಗಳ ಅಂತರದಲ್ಲಿ ಅಯ್ಯರ್ ಔಟಾಗಿದ್ದು ದೊಡ್ಡ ಪೆಟ್ಟಾಯಿತು.

ವಿಕೆಟ್ ಉಳಿಸಿಕೊಳ್ಳಲು ಕೆ.ಎಲ್. ರಾಹುಲ್ ಜೊತೆಗೆ ವಿರಾಟ್ ತಾಳ್ಮೆಯ ಜೊತೆಯಾಟವಾಡಿದರು. ಬೌಲರ್‌ಗಳ ಶಿಸ್ತಿನ ದಾಳಿಯ ಮುಂದೆ ಒಂದು ಮತ್ತು ಎರಡು ರನ್‌ಗಳಿಗೆ ಮಾತ್ರ ಮಹತ್ವ ಕೊಟ್ಟರು. ಒಂದು ಹಂತದಲ್ಲಿ 94 ಎಸೆತಗಳವರೆಗೆ ಬೌಂಡರಿಯನ್ನೇ ಗಳಿಸಿರಲಿಲ್ಲ. ರಾಹುಲ್ ಕೂಡ ತಮ್ಮ ಇನಿಂಗ್ಸ್‌ನಲ್ಲಿ ಕೇವಲ ಒಂದು ಬೌಂಡರಿ ಹೊಡೆದರು.

ತಾಳ್ಮೆಯ ಜೊತೆಯಾಟವಾಡುತ್ತಿದ್ದ ವಿರಾಟ್ ಕೊಹ್ಲಿ ಅವರಿಗೂ ಕಮಿನ್ಸ್ ಆಘಾತ ನೀಡಿದರು. 29ನೇ ಓವರ್‌ನಲ್ಲಿ ಕಮಿನ್ಸ್ ಎಸೆತವು ವಿರಾಟ್ ಸ್ಟಂಪ್ ಎಗರಿಸಿದಾಗ ಇಡೀ ಮೈದಾನವು ಗರಬಡಿದಂತೆ ಸ್ತಬ್ಧವಾಗಿ ಹೋಯಿತು.  ಕ್ರೀಸ್‌ಗೆ ಬಂದ ರವೀಂದ್ರ ಜಡೇಜ 22 ಎಸೆತಗಳಲ್ಲಿ 9 ರನ್ ಗಳಿಸಿದರು. ಅವರು ಔಟಾದ ನಂತರ ಬಂದ ಸೂರ್ಯಕುಮಾರ್ ಯಾದವ್ ಅವರು ರಾಹುಲ್ ಜೊತೆಗೆ ಸೇರಿ ಮೊತ್ತವನ್ನು 200 ರನ್‌ಗಳ ಗಡಿ ದಾಟಿಸಿದರು. ಕೊನೆಯಲ್ಲಿ ಕುಲದೀಪ್ ಯಾದವ್ ಮತ್ತು ಸಿರಾಜ್ ಕೂಡ ಒಂದಿಷ್ಟು ರನ್‌ಗಳ ಕಾಣಿಕೆ ಕೊಟ್ಟರು.

ನಂತರದ ಇನಿಂಗ್ಸ್‌ನಲ್ಲಿಯೂ ಆಸ್ಟ್ರೇಲಿಯಾದ ಮೂರು ವಿಕೆಟ್ ಪತನವಾಗುವವರೆಗೂ ಪ್ರೇಕ್ಷಕರ ವಲಯದಲ್ಲಿ ಸಂಭ್ರಮದ ಅಲೆಯಿತ್ತು. ಆದರೆ ಹೆಡ್ ಆಟ ರಂಗೇರುತ್ತಿದ್ದಂತೆ, ಗ್ಯಾಲರಿಗಳು ನಿಧಾನವಾಗಿ ಖಾಲಿಯಾದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.