ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಬಾಹ್ಯಾಕಾಶ ದಿನದಂದು ಭಾರತದ ಭಾರತೀಯ ಅಂತರಿಕ್ಷ ಸ್ಟೇಷನ್‌ನ (ಬಿಎಎಸ್) ಮಾದರಿಯನ್ನು ಅನಾವರಣಗೊಳಿಸಿದರು. ಇದು ಜಗತ್ತಿಗೆ ಒಂದು ಸ್ಪಷ್ಟ ಸಂದೇಶವನ್ನು ರವಾನಿಸಿತು. ಅದೇನೆಂದರೆ... ಭಾರತ ಜಾಗತಿಕ ಸಹಯೋಗ ಹೊಂದಲು ಬಯಸುತ್ತದೆ. ಆದರೆ ಯಾವುದೇ ಕಿರಿಯ, ಸಹಾಯಕನ ಪಾತ್ರದಲ್ಲಲ್ಲ! ಅಮೆರಿಕಾ ನೇತೃತ್ವದ ಆರ್ಟೆಮಿಸ್ ಒಪ್ಪಂದಕ್ಕೆ ಸೇರ್ಪಡೆಯಾಗುವ ಸಂದರ್ಭದಲ್ಲೂ ಭಾರತ ತನ್ನ ಬಾಹ್ಯಾಕಾಶ ಸಾಮರ್ಥ್ಯ ವೃದ್ಧಿಸುತ್ತಿದೆ. ಇದು ತಾನು ಸಹಕಾರಕ್ಕೆ ಸಿದ್ಧನಾಗಿದ್ದರೂ, ಈಗಿನ ಹೊಸದಾದ ಬಾಹ್ಯಾಕಾಶ ಓಟದ ಸ್ಪರ್ಧೆಯಲ್ಲಿ ಸ್ವತಂತ್ರವಾಗಿ ಉಳಿಯುವುದಾಗಿ ಸೂಚಿಸಿದೆ.
40ಕ್ಕೂ ಹೆಚ್ಚು ದೇಶಗಳನ್ನು ಒಳಗೊಂಡ ಸಮೂಹವಾದ ಆರ್ಟೆಮಿಸ್ ಒಪ್ಪಂದವನ್ನು ಭಾರತವು 2023ರ ಜೂನ್‌ನಲ್ಲಿ ಸೇರಿಕೊಂಡಿತು. ಈ ಗುಂಪಿಗೆ ಅಮೆರಿಕವು ಚಂದ್ರ ಅನ್ವೇಷಣೆಯ ನಿಯಮಗಳನ್ನು ಹಾಕಿಕೊಟ್ಟಿದೆ. ಅದಾದ ಕೇವಲ ಎರಡು ವರ್ಷಗಳ ಒಳಗೆ, ಭಾರತ ಬಿಎಎಸ್‌ನ ಮೊದಲ ಮಾಡ್ಯುಲ್ ಅನ್ನು 2028ರ ವೇಳೆಗೆ ಉಡ್ಡಯನಗೊಳಿಸುವ ಯೋಜನೆಯನ್ನು ಪ್ರಕಟಿಸಿದೆ. ಇದೇನು ಭಾರತದ ವ್ಯತಿರಿಕ್ತವಾದ ನಡೆಯಲ್ಲ. ಬದಲಿಗೆ, ಭಾರತದ ಕಾರ್ಯತಂತ್ರದ ನಡೆಯಾಗಿದೆ. ಆರ್ಟೆಮಿಸ್ ಒಪ್ಪಂದದ ಮೂಲಕ, ಭಾರತಕ್ಕೆ ನಿಸಾರ್‌ನಂತಹ ರಾಡಾರ್ ತಂತ್ರಜ್ಞಾನಗಳು ಮತ್ತು ಭಾರತೀಯ ಗಗನಯಾತ್ರಿಗಳಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್ಎಸ್) ತರಬೇತಿ ಲಭಿಸುತ್ತದೆ. ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರನ್ನು ಒಳಗೊಂಡ ಆಕ್ಸಿಯಮ್-4 ಯೋಜನೆ ಭಾರತಕ್ಕೆ ಸ್ವತಃ ಸಂಪಾದಿಸಲು ಹಲವಾರು ದಶಕಗಳೇ ಬೇಕಾಗುವಂತಿದ್ದ ಅನುಭವಗಳನ್ನು ಒದಗಿಸಿದೆ.
ಇದೇ ವೇಳೆ, ಬಿಎಎಸ್ ಬಾಹ್ಯಾಕಾಶ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವ ಭಾರತದ ಗುರಿಯನ್ನು ಪ್ರತಿನಿಧಿಸುತ್ತಿದೆ. ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಎನ್ನುವುದು ಕೇವಲ ವಿಜ್ಞಾನಕ್ಕೆ ಸೀಮಿತವಾಗದೆ, ಸಾರ್ವಭೌಮತ್ವದ ಪ್ರತೀಕವೂ ಹೌದು. ಭಾರತ ತನ್ನ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸುವ ಮೂಲಕ ಅಮೆರಿಕ, ರಷ್ಯಾ, ಮತ್ತು ಚೀನಾ ರಾಷ್ಟ್ರಗಳ ಸಾಲಿಗೆ ಸೇರಲಿದೆ. ಈ ಮೂಲಕ ಜಾಗತಿಕ ರಾಜಕಾರಣದಲ್ಲಿ ಏನೇ ಬದಲಾವಣೆಗಳಾದರೂ ಭಾರತ ಕಕ್ಷೆಯಲ್ಲಿ ತನ್ನ ಉಪಸ್ಥಿತಿ ಮುಂದುವರಿಸಲಿದೆ.
ಭಾರತಕ್ಕೆ ತನ್ನ ಅನುಭವಗಳಿಂದಲೇ ಇಂತಹ ಆತ್ಮವಿಶ್ವಾಸ ಲಭಿಸಿದೆ. ಶೀತಲ ಸಮರದ ಅವಧಿಯಲ್ಲಿ, ಭಾರತ ಅಮೆರಿಕ ಮತ್ತು ರಷ್ಯಾಗಳೆರಡರಿಂದಲೂ ನೆರವು ಪಡೆದುಕೊಂಡಿತ್ತು. ಆದರೆ, ಭಾರತ ಯಾರ ಮೇಲೂ ಅವಲಂಬಿತವಾಗಿರಲಿಲ್ಲ. 1990ರ ದಶಕದಲ್ಲಿ ಅಮೆರಿಕ ನಿರ್ಬಂಧ ವಿಧಿಸಿದಾಗ, ಭಾರತ ಪಿಎಸ್ಎಲ್‌ವಿ ರಾಕೆಟ್ ನಿರ್ಮಿಸುವ ಮೂಲಕ ಪ್ರತಿಕ್ರಿಯೆ ನೀಡಿತ್ತು. ಈ ಅನುಭವವೇ ಭಾರತದ 'ಎಲ್ಲರೊಡನೆಯೂ ಕಾರ್ಯಾಚರಿಸು, ಆದರೆ ಯಾರನ್ನೂ ಅವಲಂಬಿಸದಿರು' ಎಂಬ ನೀತಿಯನ್ನು ರೂಪಿಸಿದೆ.
ಆದರೆ, ಭಾರತದ ಸಮತೋಲನದ ನಡೆ ದಿನೇ ದಿನೇ ಹೆಚ್ಚು ಕಷ್ಟಕರವಾಗುತ್ತಿದೆ. ಬಹಳಷ್ಟು ಅಭಿವೃದ್ಧಿಶೀಲ ರಾಷ್ಟ್ರಗಳು ಆರ್ಟೆಮಿಸ್ ಅನ್ನು ಶ್ರೀಮಂತ ದೇಶಗಳು ಚಂದ್ರನ ಸಂಪನ್ಮೂಲಗಳನ್ನು ನಿಯಂತ್ರಿಸಲು ಬಳಸುವ ಉಪಕರಣ ಎಂದು ಭಾವಿಸಿವೆ. ಬಾಹ್ಯಾಕಾಶ ಎಲ್ಲ ಮಾನವರ ಅನುಕೂಲಕ್ಕೆ ಸೇರಿದ್ದು ಎಂದು ನಂಬಿರುವ ಭಾರತ, ಜಾಗರೂಕವಾಗಿ ತನ್ನ ಹೆಜ್ಜೆ ಇಡಬೇಕು. ಗ್ಲೋಬಲ್ ಸೌತ್‌ನ ಧ್ವನಿಯಾಗಿರುವ ಭಾರತ, ತಾನು ವಾಷಿಂಗ್ಟನ್ ಜೊತೆಗೆ ಕಾರ್ಯಾಚರಿಸುತ್ತಲೇ, ನ್ಯಾಯಯುತವಾಗಿ ಬಾಹ್ಯಾಕಾಶ ಬಳಕೆಯನ್ನು ತಾನು ಬೆಂಬಲಿಸುವುದನ್ನೂ ಪ್ರದರ್ಶಿಸಬೇಕು. ಭಾರತ ಅಮೆರಿಕದತ್ತ ಹೆಚ್ಚು ವಾಲಿದರೆ, ಅದರಿಂದ ಆಫ್ರಿಕನ್, ಲ್ಯಾಟಿನ್ ಅಮೆರಿಕನ್ ಮತ್ತು ಏಷ್ಯನ್ ಸಹಯೋಗಿಗಳ ನಂಬಿಕೆ ಕಳೆದುಕೊಳ್ಳುವ ಅಪಾಯವೂ ಇದೆ.
ಹಣಕಾಸು ವಿಚಾರ ಭಾರತಕ್ಕೆ ಇನ್ನೊಂದು ಸವಾಲಾಗಿದೆ. ಬಾಹ್ಯಾಕಾಶ ನಿಲ್ದಾಣವನ್ನು ಕಾರ್ಯಾಚರಿಸಲು ಭಾರತಕ್ಕೆ ವಾರ್ಷಿಕವಾಗಿ 3 ಶತಕೋಟಿ ಡಾಲರ್ (₹26,400 ಕೋಟಿ) ಬೇಕಾಗುತ್ತದೆ. ಆದರೆ, ಇಸ್ರೊದ ವಾರ್ಷಿಕ ಬಜೆಟ್ ಕೇವಲ 1.7 ಶತಕೋಟಿ ಡಾಲರ್ (₹14,960 ಕೋಟಿ) ಅಷ್ಟೇ ಆಗಿದೆ. ಸರ್ಕಾರದ ಬೆಂಬಲ ಮತ್ತು ಹೂಡಿಕೆಗೆ ಸಂಬಂಧಿಸಿದಂತೆ ಸಡಿಲ ನಿಯಮಗಳ ಹೊರತಾಗಿಯೂ, 2024ರಲ್ಲಿ ಭಾರತದ ಬಾಹ್ಯಾಕಾಶ ವಲಯದಲ್ಲಿ ಖಾಸಗಿ ಹೂಡಿಕೆ ಶೇ 55ರಷ್ಟು ಕುಸಿತ ಕಂಡಿದೆ. ನಿರಂತರ ಹೂಡಿಕೆ ಮತ್ತು ದೀರ್ಘಾವಧಿಯ ಗುತ್ತಿಗೆಗಳ ಹೊರತಾಗಿಯೂ, ಬಿಎಎಸ್ ಕೇವಲ ಒಂದು ಪ್ರದರ್ಶನದ ವಸ್ತುವಾಗಿ ಉಳಿಯುವ ಅಪಾಯವಿದೆ. ಚಂದ್ರಯಾನ-3 ಯೋಜನೆಯಲ್ಲೂ ಭಾರತದ ಕಡಿಮೆ ವೆಚ್ಚದಲ್ಲಿ ನಡೆಸುವ ನಾವೀನ್ಯತೆಗಳು ಯಶಸ್ವಿಯಾಗಿದ್ದರೂ, ಬಾಹ್ಯಾಕಾಶದ ಕಕ್ಷೆಯಲ್ಲಿ ಮಾನವರನ್ನು ಕಾಪಾಡಿಕೊಳ್ಳುವುದು ಹೊಸ ಸವಾಲಾಗಿದೆ.
ತಂತ್ರಜ್ಞಾನ ಮತ್ತು ಪ್ರತಿಭೆಗಳೂ ಈ ಸವಾಲಿಗೆ ಸೇರ್ಪಡೆಗಳಾಗಿವೆ. ಆರ್ಟೆಮಿಸ್ ಸದಸ್ಯತ್ವದ ಹೊರತಾಗಿಯೂ, ಅಮೆರಿಕದ ರಫ್ತು ನಿಯಮಗಳು ಪ್ರೊಪಲ್ಷನ್ ಮತ್ತು ಏವಿಯಾನಿಕ್ಸ್ ನಂತಹ ಪ್ರಮುಖ ತಂತ್ರಜ್ಞಾನಗಳನ್ನು ಹೊಂದುವುದು ಕಷ್ಟಕರವಾಗಿಸಿವೆ. ಭಾರತ ಒಂದೋ ಈ ತಂತ್ರಜ್ಞಾನಗಳನ್ನು ಸ್ವತಃ ಅಭಿವೃದ್ಧಿಪಡಿಸಬೇಕು, ಅಥವಾ ವಿಶೇಷ ಒಪ್ಪಂದಗಳಿಗಾಗಿ ಮಾತುಕತೆ ನಡೆಸಬೇಕು. ಇದೇ ವೇಳೆ, ಭಾರತಕ್ಕೆ ಕ್ರಯೋಜೆನಿಕ್ಸ್, ರೋಬಾಟಿಕ್ಸ್, ಮತ್ತು ಜೀವ ಬೆಂಬಲ ವ್ಯವಸ್ಥೆಗಳಂತಹ ಕುಶಲ ಮಾನವ ಸಂಪನ್ಮೂಲಗಳ ಕೊರತೆ ಇರುವ ಕ್ಷೇತ್ರಗಳಲ್ಲಿ ಹೆಚ್ಚಿನ ತಜ್ಞರ ಅವಶ್ಯಕತೆ ಇದೆ.
ಭೌಗೋಳಿಕ ರಾಜಕಾರಣದ ಬದಲಾವಣೆಗಳು ಪರಿಸ್ಥಿತಿಯನ್ನು ಇನ್ನಷ್ಟು ಸವಾಲಿನದಾಗಿಸಿವೆ. ಈಗ ಅಮೆರಿಕ ಮತ್ತು ಚೀನಾಗಳು ಚಂದ್ರನ ಸಂಪನ್ಮೂಲಗಳಿಗಾಗಿ ಪರಸ್ಪರ ಸ್ಪರ್ಧೆಗಿಳಿದಿದ್ದು, ಭಾರತವೂ ಯಾವುದಾದರೂ ಪಕ್ಷವನ್ನು ವಹಿಸಿಕೊಳ್ಳುವ ಒತ್ತಡ ಎದುರಾಗಬಹುದು. ಚೀನಾ ಮತ್ತು ರಷ್ಯಾಗಳು ಯೋಜಿಸಿರುವ ಚಂದ್ರನ ನೆಲೆ ಭಾರತಕ್ಕೆ ಒಂದು ಪರ್ಯಾಯ ಆಯ್ಕೆ ಒದಗಿಸಬಹುದಾದರೂ, ಭಾರತ ಈ ಕುರಿತು ತಟಸ್ಥವಾಗಿಯೇ ಉಳಿದಿದೆ. ಆರ್ಟೆಮಿಸ್ ಸಹಭಾಗಿಗಳು ಒಂದು ಸ್ಥಿರ ನಿಲುವು ತಳೆಯಬೇಕೆಂದು ಆಗ್ರಹಿಸಿದರೆ, ಆಗ ಭಾರತಕ್ಕೆ ತನ್ನ ಮಧ್ಯಮ ಪಥವನ್ನು ಮುಂದುವರಿಸುವುದು ಕಷ್ಟಕರವಾಗಲಿದೆ.
ಮುಂದಿನ ದಶಕದಲ್ಲಿ ಭಾರತದ ಭವಿಷ್ಯ ಮೂರು ಮಾರ್ಗಗಳನ್ನು ಅನುಸರಿಸಬೇಕಾಗಿ ಬರಬಹುದು. ಆರ್ಟೆಮಿಸ್ ಒಪ್ಪಂದವನ್ನು ಬಲಪಡಿಸಿಕೊಂಡು, ಬಿಎಎಸ್ ಅಭಿವೃದ್ಧಿಯನ್ನು ನಿಧಾನಗೊಳಿಸುವುದು, ಬಿಎಎಸ್ ಮೇಲೆ ಸಂಪೂರ್ಣ ಗಮನ ಹರಿಸಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಮೂರನೇ ಶಕ್ತಿಯಾಗಿ ಉದಯಿಸುವುದು, ಅಥವಾ ಮೂರನೆಯ ಮತ್ತು ಸಂಭಾವ್ಯ ಆಯ್ಕೆಯಾದ ಆರ್ಟೆಮಿಸ್ ಅನ್ನು ತಂತ್ರಜ್ಞಾನಕ್ಕೆ ಬಳಸಿಕೊಂಡು, ಬಿಎಎಸ್ ಅನ್ನು ತನ್ನ ಸ್ವಾಯತ್ತತೆಯ ಸಂಕೇತವಾಗಿ ಅಭಿವೃದ್ಧಿ ಪಡಿಸುವುದು.
ಬೃಹತ್ ಶಕ್ತಿಗಳ ನಡುವೆ ಸೇತುವೆಯಾಗುವುದರಲ್ಲಿ ಭಾರತದ ನೈಜ ಶಕ್ತಿ ಅಡಗಿದೆ. ಭಾರತ ನಂಬಿಕಸ್ಥ ಮತ್ತು ಸಹಕಾರಿ ರಾಷ್ಟ್ರವಾಗಿದ್ದು, ಇತರ ರಾಷ್ಟ್ರಗಳೊಡನೆ ತನ್ನ ಉಪಗ್ರಹ ಮಾಹಿತಿಗಳನ್ನು ಹಂಚಿಕೊಳ್ಳುತ್ತದೆ. ಕಡಿಮೆ ವೆಚ್ಚದಲ್ಲಿ ಯೋಜನೆಗಳನ್ನು ರೂಪಿಸುವ ಮತ್ತು ಎಲ್ಲರನ್ನೂ ಒಳಗೊಳ್ಳುವ ಭಾರತದ ನೀತಿ ನ್ಯಾಯಯುತ ಬಾಹ್ಯಾಕಾಶ ಆಡಳಿತಕ್ಕೆ ಭಾರತವನ್ನು ನಂಬಿಕಾರ್ಹ ಧ್ವನಿಯಾಗಿಸಿದೆ.
ಅಂತಿಮವಾಗಿ, ಭಾರತದ ಗುರಿ ಯಾವುದೇ ಒಂದು ಪಕ್ಷಕ್ಕೆ ಸೇರದೆ, ಸಹಯೋಗ ಮತ್ತು ಸ್ವಾತಂತ್ರ್ಯವನ್ನು ಬುದ್ಧಿವಂತಿಕೆಯಿಂದ ನಿರ್ವಹಿಸುವುದಾಗಿದೆ. ಭಾರತಕ್ಕೆ ತನ್ನ ಬೆಳವಣಿಗೆಗೆ ಆರ್ಟೆಮಿಸ್ ಅವಶ್ಯಕವಾಗಿದ್ದರೆ, ತನ್ನ ಸ್ವಾತಂತ್ರ್ಯಕ್ಕಾಗಿ ಬಿಎಎಸ್ ಮುಖ್ಯವಾಗಿದೆ. ಬಾಹ್ಯಾಕಾಶ ಭೌಗೋಳಿಕ ರಾಜಕಾರಣದ ಕನ್ನಡಿಯಂತಾಗಿದ್ದು, ಈ ಹಗ್ಗದ ಮೇಲಿನ ನಡಿಗೆಯನ್ನು ಭಾರತ ಹೇಗೆ ನಿರ್ವಹಿಸುತ್ತದೆ ಎನ್ನುವುದು ಅದು ಬಾಹ್ಯಾಕಾಶ ನಿಯಮ ರೂಪಿಸುತ್ತದೆಯೋ ಅಥವಾ ನಿಯಮಗಳನ್ನು ಪಾಲಿಸುವ ಇನ್ನೊಂದು ರಾಷ್ಟ್ರವಾಗುತ್ತದೆಯೋ ಎನ್ನುವುದನ್ನು ನಿರ್ಧರಿಸಲಿದೆ. ರಾಷ್ಟ್ರೀಯ ಬಾಹ್ಯಾಕಾಶ ದಿನದಂದು ಬಿಎಎಸ್ ಮಾದರಿಯ ಅನಾವರಣ ನಡೆಸಿರುವುದು ಕೇವಲ ಇಂಜಿನಿಯರಿಂಗ್ ಸಾಧನೆಯಷ್ಟೇ ಅಲ್ಲ. ಭಾರತ ತನ್ನದೇ ಆದ ವಿಧಾನದಲ್ಲಿ ತಾನು ನಕ್ಷತ್ರಗಳನ್ನು ತಲುಪಬಲ್ಲೆ ಎಂಬ ದೃಢವಾದ ಸಂದೇಶವನ್ನೂ ಈ ಮೂಲಕ ರವಾನಿಸಿದೆ.
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.