ಐಎಸ್‌ಎಸ್‌ನಿಂದ ಭೂಮಿಗೆ ಮಂಗಳವಾರ ಮರಳಿದ ಭಾರತದ ಗಗನಯಾನಿ ಶುಭಾಂಶು ಶುಕ್ಲಾ ಅವರು ಕೈಬೀಸಿದರು
–ಪಿಟಿಐ ಚಿತ್ರ
ನವದೆಹಲಿ/ಚೆನ್ನೈ: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ತೆರಳಿದ್ದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಹಾಗೂ ಇತರ ಮೂವರು ಗಗನಯಾನಿಗಳನ್ನು ಹೊತ್ತ ಬಾಹ್ಯಾಕಾಶ ಕೋಶ ‘ಡ್ರ್ಯಾಗನ್ ಗ್ರೇಸ್’, ಮಂಗಳವಾರ ಮಧ್ಯಾಹ್ನ 3.01ಕ್ಕೆ (ಭಾರತೀಯ ಕಾಲಮಾನ) ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯೆಗೊ ಕರಾವಳಿಯಲ್ಲಿ ಬಂದಿಳಿಯಿತು.
ಈ ಮೂಲಕ, ಭಾರತದ ಗಗನಯಾನಿ ಶುಭಾಂಶು ಶುಕ್ಲಾ ಅವರು ದೇಶದ ಅಂತರಿಕ್ಷ ಯಾನ ಮತ್ತು ಅನ್ವೇಷಣೆ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಸಿದರು. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪಯಣಿಸಿದ ಮೊದಲ ಭಾರತೀಯ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ.
‘ಡ್ರ್ಯಾಗನ್ ಗ್ರೇಸ್’ ಅನ್ನು ಮುನ್ನಡೆಸಿದ ಶುಕ್ಲಾ, ಅದನ್ನು ಪೆಸಿಫಿಕ್ ಸಾಗರದಲ್ಲಿ ಇಳಿಸಿದರು.
ಒಂದು ಗಂಟೆ ನಂತರ, ಶುಕ್ಲಾ ಹಾಗೂ ಇತರ ಗಗನಯಾನಿಗಳಾದ ಕಮಾಂಡರ್ ಪೆಗ್ಗಿ ವಿಟ್ಸನ್, ಹಂಗರಿಯ ಟಿರ್ಬೊಕಾಪು ಹಾಗೂ ಪೋಲೆಂಡ್‌ನ ಸ್ಲಾವೋಸ್‌ಯು. ವಿನ್ಸೀವ್ಸ್‌ಕಿ ಅವರು ಬಾಹ್ಯಾಕಾಶ ಕೋಶದಿಂದ ಹೊರಗೆ ಬರುತ್ತಿದ್ದಂತೆಯೇ, ಕೈಬೀಸಿದರಲ್ಲದೇ, ಮುಗುಳ್ನಗುತ್ತಾ ಕ್ಯಾಮೆರಾಗಳಿಗೆ ಪೋಸು ನೀಡಿದರು.
‘ಆ್ಯಕ್ಸಿಯಂ–4’ ಬಾಹ್ಯಾಕಾಶ ಕಾರ್ಯಕ್ರಮ ಭಾಗವಾಗಿ ಒಟ್ಟು 20 ದಿನಗಳ ಅಂತರಿಕ್ಷ ಯಾನವನ್ನು ಯಶಸ್ವಿಗೊಳಿಸಿದ ಧನ್ಯತಾಭಾವ ಅವರ ಮೊಗದಲ್ಲಿತ್ತು. ಈ ಪೈಕಿ, 18 ದಿನ ಅಂತರ
ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಇದ್ದ ಶುಕ್ಲಾ, ವೈಜ್ಞಾನಿಕವಾಗಿ ಹಲವು
ಪ್ರಯೋಗಗಳನ್ನು ಕೈಗೊಂಡಿದ್ದಾರೆ.
ಬಾಹ್ಯಾಕಾಶ ಕೋಶದಿಂದ ಗಗನಯಾನಿಗಳನ್ನು ಹೊರಗೆ ಕರೆದುಕೊಂಡು ಬರುವುದಕ್ಕಾಗಿ ‘ಶನೋನ್’ ನೌಕೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿತ್ತು. ‘ಡ್ರ್ಯಾಗನ್ ಗ್ರೇಸ್’ ಬಳಿ, ಶನೋನ್ ನೌಕೆ ಹೋಗುತ್ತಿದ್ದಂತೆಯೇ ನಾಲ್ಕೂ ಜನ ಗಗನಯಾನಿಗಳು, ಕೋಶದ ಸಣ್ಣ ದ್ವಾರದ ಮೂಲಕ ಹೊರಗೆ ಬಂದರು.
ಗುರುತ್ವಾಕರ್ಷಣ ಶಕ್ತಿ ಇಲ್ಲದ ಪರಿಸರದಲ್ಲಿ ಮೂರು ವಾರಗಳನ್ನು ಕಳೆದಿದ್ದ ಗಗನಯಾನಿಗಳಿಗೆ, ಬಾಹ್ಯಾಕಾಶ ಕೋಶದಿಂದ ಹೊರಗೆ ಬಂದ ಕೂಡಲೇ ಹಜ್ಜೆ ಇಡಲು ಕಷ್ಟವಾಯಿತು. ಆಗ, ತಮ್ಮ ಕಾಲ ಮೇಲೆ ನಿಲ್ಲುವುದಕ್ಕೆ ಈ ನಾಲ್ವರಿಗೆ ಶನೋನ್ ನೌಕೆಯ ಸಿಬ್ಬಂದಿ ನೆರವಾದರು.
ವೈದ್ಯಕೀಯ ಪರೀಕ್ಷೆ:
ನಾಲ್ವರು ಗಗನಯಾನಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ, ಹೆಲಿಕಾಪ್ಟರ್ ಮೂಲಕ ನಿಗದಿತ ಸ್ಥಳಕ್ಕೆ ಕರೆದೊಯ್ಯಲಾಯಿತು.
ನಾಲ್ಕು ಜನ ಗಗನಯಾನಿಗಳು ಭೂ ಕಕ್ಷೆಯಲ್ಲಿ ಗುರುತ್ವಾಕರ್ಷಣ ಶಕ್ತಿರಹಿತ ಪರಿಸರದಲ್ಲಿ 20 ದಿನಗಳನ್ನು ಕಳೆದಿದ್ದಾರೆ. ಹೀಗಾಗಿ, ಭೂಮಿಯ ಗುರುತ್ವಾಕರ್ಷಣ ಶಕ್ತಿ ಪ್ರಭಾವದ ಪರಿಸರಕ್ಕೆ ಹೊಂದಿಕೊಳ್ಳುವುದಕ್ಕಾಗಿ ಅವರಿಗಾಗಿ ಏಳು ದಿನ ಪ್ರತ್ಯೇಕವಾಸಕ್ಕೆ ವ್ಯವಸ್ಥೆ ಮಾಡಲಾಗಿದೆ.
ವೀಕ್ಷಣೆ: ಶುಭಾಂಶು ಶುಕ್ಲಾ ಅವರ ತವರು, ಲಖನೌದಲ್ಲಿ ಅವರ ಪಾಲಕರು ತಮ್ಮ ಮಗ ಐಎಸ್‌ಎಸ್‌ನಿಂದ ವಾಪಸಾಗುವ ಪ್ರಕ್ರಿಯೆಯನ್ನು ಕಣ್ತುಂಬಿಕೊಂಡರು.
ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಬಾಹ್ಯಾಕಾಶ ಕೋಶ ಇಳಿಯುವ ದೃಶ್ಯಗಳ ನೇರಪ್ರಸಾರವನ್ನು ಶುಭಾಂಶು ಅವರ ತಂದೆ ಶಂಭು ದಯಾಲ್ ಶುಕ್ಲಾ, ತಾಯಿ ಆಶಾ ದೇವಿ, ಸಹೋದರಿ ಸುಚಿ ಮಿಶ್ರಾ ವೀಕ್ಷಿಸಿದರು. ಶುಭಾಂಶು ಅವರು ಬಾಹ್ಯಾಕಾಶ ಕೋಶದಿಂದ ಹೊರಬರುತ್ತಿರುವ ದೃಶ್ಯಗಳನ್ನು ನೋಡಿದ ಅವರ ಕಣ್ಣಾಲಿಗಳು ತುಂಬಿದವು. ಕೈಗಳನ್ನು ಜೋಡಿಸಿ, ಭಾವುಕರಾಗಿದ್ದ ಅವರಲ್ಲಿ ಸಾರ್ಥಕತೆಯ ಭಾವ ಮೂಡಿತ್ತು.
ಕೋಟ್ಯಂತರ ಜನರಿಗೆ ಪ್ರೇರಣೆಯಾದ ಶುಕ್ಲಾ: ಮೋದಿ
‘ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಸಮರ್ಪಣಾಭಾವ, ಧೈರ್ಯ ಹಾಗೂ ಅದಮ್ಯ ಉತ್ಸಾಹದ ಮೂಲಕ ದೇಶದ ಕೋಟ್ಯಂತರ ಜನರಿಗೆ ಹಾಗೂ ಅವರ ಕನಸುಗಳಿಗೆ ಸ್ಫೂರ್ತಿಯಾಗಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.
ಐಎಸ್‌ಎಸ್‌ನಿಂದ ಭೂಮಿಗೆ ಮರಳಿರುವ ಅವರಿಗೆ ಸ್ವಾಗತ ಕೋರುವ ಸಂದೇಶವನ್ನು ಮೋದಿ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಶುಕ್ಲಾ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಭೇಟಿ ನೀಡಿದ ಸಾಧನೆ ಮಾಡಿರುವ ಮೊದಲ ಭಾರತೀಯ. ಭಾರತದ ಮಹತ್ವಾಕಾಂಕ್ಷೆಯ ಮಾನವಸಹಿತ ಗಗನಯಾನ ಕಾರ್ಯಕ್ರಮಕ್ಕೆ ಶುಕ್ಲಾ ಅವರ ಈ ವ್ಯೋಮಯಾನ ಮತ್ತೊಂದು ಮೈಲುಗಲ್ಲಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶುಭಾಂಶು ಶುಕ್ಲಾ ಅವರಿಗೆ ಹೃತ್ಪೂರ್ವಕ ಸ್ವಾಗತ. ಶುಕ್ಲಾ ಸೇರಿ ‘ಆ್ಯಕ್ಸಿಯಂ–4’ ಕಾರ್ಯಕ್ರಮದ ಭಾಗವಾಗಿದ್ದ ಪ್ರತಿಯೊಬ್ಬರಿಗೂ ಅಭಿನಂದನೆಗಳು. ಶುಕ್ಲಾ ಅವರ ಈ ಸಾಧನೆಯು ಭಾರತದ ಬಾಹ್ಯಾಕಾಶ ಅನ್ವೇಷಣೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಸಹಯೋಗದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದೆದ್ರೌಪದಿ ಮುರ್ಮು, ರಾಷ್ಟ್ರಪತಿ
ನಾಲ್ವರು ಗಗನಯಾನಿಗಳಿಗೆ ಮರಳಿ ಭೂಮಿಗೆ ಸ್ವಾಗತ. ಇಂದು ‘ಡ್ರ್ಯಾಗನ್ ಗ್ರೇಸ್’ ಸುರಕ್ಷಿತವಾಗಿ ಇಳಿಯುವ ಮೂಲಕ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕೈಗೊಂಡಿದ್ದ ಅಂತರಿಕ್ಷಯಾನವು ಯಶಸ್ವಿಯಾಗಿ ಕೊನೆಗೊಂಡಿದೆ ಎಂಬುದನ್ನು ಸಾರಿದೆಆ್ಯಕ್ಸಿಮ್ ಸ್ಪೇಸ್, ಬಾಹ್ಯಾಕಾಶ ಸಂಸ್ಥೆ
ವೈಶಿಷ್ಟ್ಯಗಳು
* ನಾಸಾ ಹಾಗೂ ಇಸ್ರೊ ಜಂಟಿಯಾಗಿ ಐದು ಅಂಶಗಳ ಕುರಿತು ವೈಜ್ಞಾನಿಕ ಸಂಶೋಧನೆಗಳನ್ನು ಆಯೋಜಿಸಿದ್ದವು. ಅಲ್ಲದೆ, ಕಕ್ಷೆಯಲ್ಲಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಹಾಗೂ ಗಣಿತಕ್ಕೆ ಎರಡು ಪ್ರಾತ್ಯಕ್ಷಿಕೆ ಹಮ್ಮಿಕೊಂಡಿದ್ದವು
* ‘ಜಾಯ್’ ಹೆಸರಿನ ಚಿಕ್ಕ ಆಟಿಕೆ ಹಂಸವನ್ನು ಗಗನಯಾನಿಗಳು ತಮ್ಮೊಂದಿಗೆ ಒಯ್ದಿದ್ದರು. ಹಂಸ ಪ್ರತಿನಿಧಿಸುವ ಸಾಂಸ್ಕೃತಿಕ ಮಹತ್ವಕ್ಕಾಗಿ ಈ ಆಯ್ಕೆ ಮಾಡಲಾಗಿತ್ತು. ಭಾರತೀಯರು ಸರಸ್ವತಿಯನ್ನು ವಿದ್ಯೆಯ ಅಧಿದೇವತೆ ಎಂದು ಪೂಜಿಸುತ್ತಾರೆ. ಹಂಸ ಪಕ್ಷಿ ಸರಸ್ವತಿಯ ವಾಹನವಾಗಿದ್ದು, ಬುದ್ಧಿವಂತಿಕೆಯನ್ನು ಸೂಚಿಸುತ್ತದೆ. ಪೋಲೆಂಡ್ ಸಂಸ್ಕೃತಿಯಲ್ಲಿ ಇದು ಪರಿಶುದ್ಧತೆ ಹಾಗೂ ಮತ್ತೆ ಪುಟಿದೇಳುವುದರ ದ್ಯೋತಕ. ಇನ್ನು, ಹಂಗರಿ ಜನರ ಪಾಲಿಗೆ ಇದು ನಿಷ್ಠೆ ಹಾಗೂ ಅನುಗ್ರಹದ ಸಂಕೇತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.