ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ (ಎಡದಿಂದ ಮೊದಲನೆಯವರು) ಸೇರಿ ಗಗನಯಾನಿಗಳು
ನಾಸಾ ಎಕ್ಸ್ ಚಿತ್ರ
ನವದೆಹಲಿ: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಲು ಸಜ್ಜಾಗಿರುವ ಭಾರತದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರ ಎಂಟು ತಿಂಗಳ ತರಬೇತಿ ಪೂರ್ಣಗೊಂಡಿದ್ದು, ಮೇ ತಿಂಗಳಲ್ಲಿ ಸ್ಪೇಸ್ ಎಕ್ಸ್‌ನ ಫಾಲ್ಕನ್–9 ರಾಕೇಟ್ ಹಾಗೂ ಸ್ಪೇಕ್ಸ್ಎಕ್ಸ್ ಕ್ರ್ಯೂ ಡ್ರಾಗನ್ ಮೂಲಕ ಪ್ರಯಾಣ ಬೆಳೆಸಲಿದ್ದಾರೆ.
ಹ್ಯೂಸ್ಟನ್ ಮೂಲದ ಖಾಸಗಿ ಬಾಹ್ಯಾಕಾಶ ಕಂಪನಿ ಏಕ್ಸಿಯೊಮ್ ಸ್ಪೇಸ್ ಕಂಪನಿಯ ಏಕ್ಸಿಯೊಮ್ ಮಿಷನ್ 4ನ ಗಗನಯಾನಿಗಳು ನಾಸಾ ನೀಡುವ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ. ತರಬೇತಿ ಪೂರ್ಣಗೊಂಡ ಸಂಭ್ರಮದಲ್ಲಿ ನೌಕೆಯ ಚಿತ್ರವಿರುವ ಕೇಕ್ ಕತ್ತರಿಸಿ ನಾಲ್ವರು ಗಗನಯಾನಿಗಳು ಸಂಭ್ರಮಿಸಿದ್ದಾರೆ.
ಮುಖ್ಯ ಗಗನಯಾನಿಯಾಗಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಹಾಗೂ ಮುಂಜಾಗ್ರತಾ ಕ್ರಮವಾಗಿ ಬದಲಿ ಗಗನಯಾನಿಯಾಗಿ ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ಅವರನ್ನು ಭಾರತ ಆಯ್ಕೆ ಮಾಡಿ ಕಳುಹಿಸಿದೆ. ಬಾಹ್ಯಾಕಾಶ ನಿಲ್ದಾಣದಲ್ಲಿ ಇವರು 15 ದಿನಗಳು ಇರಲಿದ್ದಾರೆ.
ಈ ತರಬೇತಿ ಮತ್ತು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗುವ ನೌಕೆಯ ವೆಚ್ಚವನ್ನು ಭಾರತವೇ ಭರಿಸಿದೆ. ಈ ಖಾಸಗಿ ಯಾನಕ್ಕಾಗಿ ಸುಮಾರು ₹500ರಿಂದ ₹600 ಕೋಟಿಯನ್ನು ಭಾರತ ವ್ಯಯಿಸುತ್ತಿದೆ. ಇದು ಸಂಪೂರ್ಣ ಖಾಸಗಿಯಾಗಿದ್ದು, ತರಬೇತಿ ನೀಡುತ್ತಿರುವ ನಾಸಾ ಕೂಡಾ ಇದರಿಂದ ಲಾಭ ಗಳಿಸಲಿದೆ ಎಂದು ವರದಿಯಾಗಿದೆ.
ಗ್ರೂಪ್ ಕ್ಯಾಪ್ಟನ್ ಶುಕ್ಲಾ ಅವರು ಪೈಲೆಟ್ ಆಗಿದ್ದು, ಅಗ್ನಿ ಅವಘಡ, ತುರ್ತು ಸಂದರ್ಭ ಎದುರಿಸುವಲ್ಲಿ, ಗಾಯಗೊಂಡ ಯೋಧರಿಗೆ ಪ್ರಥಮ ಚಿಕಿತ್ಸೆ ನೀಡುವಲ್ಲಿ ತರಬೇತಿ ಪಡೆದಿದ್ದಾರೆ. ಈ ಗಗನಯಾನಿ ತಂಡವು ಯುರೋಪ್‌ನಲ್ಲೂ ತರಬೇತಿ ಪಡೆದಿದೆ. ಜತೆಗೆ ಕಡಿಮೆ ಗುರುತ್ವಾಕರ್ಷಣ ಶಕ್ತಿ ಇರುವ ಪರಿಸರದಲ್ಲಿ ಹೊಂದಿಕೊಳ್ಳುವ ತರಬೇತಿಯನ್ನೂ ಪಡೆದಿದ್ದಾರೆ ಎಂದು ಏಕ್ಸಿಯೊಮ್ ಸ್ಪೇಸ್ ಹೇಳಿದ್ದಾರೆ.
ಪೆಸಿಫಿಕ್ ಸಾಗರದಲ್ಲಿ ಕಠಿಣ ತರಬೇತಿಯನ್ನು ಈ ತಂಡ ಎದುರಿಸಿದೆ. ಕಕ್ಷೀಯ ಪ್ರಯೋಗಾಲಯದಲ್ಲಿ ಡಿಜಿಟಲ್ ಕ್ಯಾಮೆರಾ ಬಳಸುವ ತರಬೇತಿ ಪಡೆದಿದ್ದಾರೆ. ಬಾಹ್ಯಾಕಾಶದಲ್ಲಿ ಶುಕ್ಲಾ ಅವರು ದಿನನಿತ್ಯದ ಬೆಳವಣಿಗೆಯನ್ನು ದಾಖಲಿಸುವ ಜವಾಬ್ದಾರಿ ಹೊಂದಿದ್ದಾರೆ. ಸಿಮ್ಯುಲೇಟರ್ ಬಳಕೆ, ಬಾಹ್ಯಾಕಾಶದ ಮಾದರಿಯಲ್ಲಿ ತರಬೇತಿ ಸೇರಿದಂತೆ ಹಲವು ಕಠಿಣ ತರಬೇತಿಗಳನ್ನು ಈ ತಂಡ ಕಳೆದ ಎಂಟು ತಿಂಗಳಿಂದ ಅಭ್ಯಸಿಸಿದೆ.
ಭಾರತೀಯ ವಾಯು ಸೇನೆಯಲ್ಲಿ ಅಧಿಕಾರಿಯಾಗಿರುವ ಶುಕ್ಲಾ ಅವರನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಈ ಯೋಜನೆಗೆ ಆಯ್ಕೆ ಮಾಡಿತ್ತು. ನಾಸಾಗೆ ಸೇರುವ ಮೊದಲು ಇವರು ಭಾರತ ಮತ್ತು ರಷ್ಯಾದಲ್ಲೂ ತರಬೇತಿ ಪಡೆದಿದ್ದರು.
1984ರಲ್ಲಿ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಅವರ ನಂತರದಲ್ಲಿ ಬಾಹ್ಯಾಕಾಶ ಯಾನ ನಡೆಸುತ್ತಿರುವವರಲ್ಲಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲ ಮೊದಲಿಗರು. ರಾಕೇಶ್ ಶರ್ಮಾ ಅವರು ರಷ್ಯಾದ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.