ADVERTISEMENT

ISRO-NASA NISAR Satellite: ನಭಕ್ಕೆ ಚಿಮ್ಮಿದ 'ನಿಸಾರ್' ಉಪಗ್ರಹ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜುಲೈ 2025, 12:21 IST
Last Updated 30 ಜುಲೈ 2025, 12:21 IST
<div class="paragraphs"><p>ನಿಸಾರ್ ಉಪಗ್ರಹ</p></div>

ನಿಸಾರ್ ಉಪಗ್ರಹ

   

ಶ್ರೀಹರಿಕೋಟ: ಇಸ್ರೊ ಮತ್ತು ನಾಸಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಭೂಮಿ ಸಮೀಕ್ಷೆಯ ಸಿಂಥೆಟಿಕ್‌ ಅಪರ್ಚರ್ ರೇಡಾರ್ (ನಿಸಾರ್‌) ಉಪಗ್ರಹವನ್ನು ಇಂದು ಯಶಸ್ವಿಯಾಗಿ ಉಡ್ಡಯನ ಮಾಡಲಾಗಿದೆ. ಆ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮಗದೊಂದು ಮೈಲಿಗಲ್ಲು ಸಾಧಿಸಿದೆ.

ನಾಸಾ-ಇಸ್ರೊ ಸಹಯೋಗದಲ್ಲಿ ಸಿಂಥೆಟಿಕ್ ಅಪರ್ಚರ್ ರೇಡಾರ್ (NISAR) ಎಂಬ ವಿಶಿಷ್ಟ ಭೂ ವೀಕ್ಷಣಾ ಉಪಗ್ರಹ ಶ್ರೀಹರಿಕೋಟದ ಬಾಹ್ಯಾಕಾಶ ಕೇಂದ್ರದಿಂದ ಇಂದು ಸಂಜೆ 5.40ಕ್ಕೆ ನಭಕ್ಕೆ ಚಿಮ್ಮಿತು.

ADVERTISEMENT

ಈ ಉಪಗ್ರಹ ಉಡ್ಡಯನದಿಂದ ಭಾರತ, ಅಮೆರಿಕ ಸೇರಿದಂತೆ ಇಡೀ ಜಗತ್ತಿಗೆ ನೆರವಾಗಲಿದೆ. ಬಾಹ್ಯಾಕಾಶ ಎಂಜಿನಿಯರಿಂಗ್ ಕ್ಷೇತ್ರದಲ್ಲಿನ ಭಾರತದ ಸಾಮರ್ಥ್ಯಗಳನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸುವುದಕ್ಕೆ ವೇದಿಕೆಯಾಗಲಿದೆ.

ನೈಸರ್ಗಿಕ ಸಂಪನ್ಮೂಲಗಳ ನಿಗಾ ವಹಿಸಲು ಅತ್ಯಂತ ನಿರ್ಣಾಯಕವಾಗಿದೆ. ದಿನದ 24 ತಾಸು ಭೂಮಿಯ ಚಿತ್ರವನ್ನು ತೆಗೆಯಲು, ಭೂಕುಸಿತ ಪತ್ತೆ, ಹವಾಮಾನ ಬದಲಾವಣೆ, ವಿಪತ್ತು ನಿರ್ವಹಣೆಗೆ ಸಹಾಯ ಮಾಡಲು ನೆರವಾಗಲಿದೆ.

ಈ ಉಪಗ್ರಹದಲ್ಲಿ ಅಳವಡಿಸಲಾಗಿರುವ ಎಲ್‌–ಬ್ಯಾಂಡ್ ಅನ್ನು ನಾಸಾ ಒದಗಿಸಿದ್ದರೆ, ಎಸ್‌–ಬ್ಯಾಂಡ್‌ ಅನ್ನು ಇಸ್ರೊ ಒದಗಿಸಿದೆ. ಎಸ್‌–ಬ್ಯಾಂಡ್‌ ಅನ್ನು ಸಿಂಥೆಟಿಕ್‌ ಅಪರ್ಚರ್ ರೇಡಾರ್‌ನಲ್ಲಿ ಅಳವಡಿಸಲಾಗುತ್ತದೆ. ಇದರಿಂದ ಭೂಮಿಗೆ ಸಂಬಂಧಿಸಿದಂತೆ ವ್ಯಾಪಕ ದತ್ತಾಂಶ ಸಂಗ್ರಹ ಸಾಧ್ಯವಾಗಲಿದೆ.

'ನಿಸಾರ್' ಉಪಗ್ರಹದ ತೂಕ 2392 ಕೆ.ಜಿ ಆಗಿದೆ. ಅವಳಿ ತರಂಗಾಂತರಗಳನ್ನು( ಫ್ರಿಕ್ವೆನ್ಸಿ) ಒಳಗೊಂಡ ಮೊದಲ ಸಿಂಥೆಟಿಕ್‌ ಅಪರ್ಚರ್‌ ರೇಡಾರ್ ಇದಾಗಿದೆ.

ಈ ಉಪಗ್ರಹವು ಇಡೀ ಭೂಮಿಯನ್ನು ಎಲ್ಲ ಋತುಮಾನಗಳು, ಹಗಲು–ರಾತ್ರಿ ವೀಕ್ಷಣೆ ನಡೆಸುತ್ತದೆ. ಭೂಮಿಯ ಮೇಲೆ ಆಗುವ ಸಣ್ಣ ಪುಟ್ಟ ಬದಲಾವಣೆಗಳ ಮಾಹಿತಿ ನೀಡುವ, ನೆಲದ ವಿರೂಪ, ಮಂಜುಗಡ್ಡೆಯ ಪದರದ ಚಲನೆ, ಹಡಗುಗಳ ಪತ್ತೆ, ಮಣ್ಣಿನ ತೇವಾಂಶದಲ್ಲಿನ ಬದಲಾವಣೆ, ಕಡಲಿನ ಮೇಲೆ ಕಣ್ಗಾವಲು, ಮೇಲ್ಮೈ ನೀರಿನ ಸಂಗ್ರಹದ ಮೇಲೆ ನಿಗಾ, ನೈಸರ್ಗಿಕ ವಿಕೋಪದ ಸೇರಿದಂತೆ ಹಲವು ಮಾಹಿತಿಗಳನ್ನು ಸಂಗ್ರಹಿಸಲಿದೆ ಎಂದು ಇಸ್ರೊ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.