'Vinsmera Jewels' ಜಾಹೀರಾತಿನಲ್ಲಿ ಮೋಹನ್‌ಲಾಲ್
ಕೃಪೆ: Vinsmera Jewels
ವಿಭಿನ್ನ ಪ್ರಯತ್ನಗಳು, ಹೊಸ ಬಗೆಯ ನಿರೂಪಣೆ, ಸಹಜ ಶೈಲಿಗೆ ಮಲಯಾಳಂ ಚಿತ್ರರಂಗದ ಕಲಾವಿದರು ಹೆಸರು ವಾಸಿ. ಅಲ್ಲಿನ ಸಿನಿಮಾಗಳು ಭಾರತೀಯ ಚಿತ್ರರಂಗದ ಸಿನಿಕಥನ ಕ್ರಮವನ್ನೇ ಮರುವ್ಯಾಖ್ಯಾನಿಸಿವೆ.
ಕ್ರೈಂ ಥ್ರಿಲ್ಲರ್ ಸಿನಿಮಾಗಳಿರಲಿ, ರೊಮ್ಯಾಂಟಿಕ್ ಕಥೆ ಇರಲಿ ಅಥವಾ ಕೌಟುಂಬಿಕ ಚಿತ್ರಗಳಿರಲಿ 'ಮಾಲಿವುಡ್' ಒಂದು ಹೆಜ್ಜೆ ಮುಂದೆ ಎನ್ನುವಂತೆಯೇ ಚಿತ್ರಗಳು ತಯಾರಾಗುತ್ತವೆ. ಅದೇ ರೀತಿ, ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ನಟಿಸಿರುವ ಕಮರ್ಷಿಯಲ್ ಜಾಹೀರಾತೊಂದು ಕೆಲ ದಿನಗಳಿಂದ ಭಾರಿ ಸದ್ದು ಮಾಡುತ್ತಿದೆ.
ಯಾವುದೇ ಪಾತ್ರವನ್ನು ಸಹಜ ನಟನೆಯ ಮೂಲಕವೇ ಜೀವಿಸುವ ಮೋಹನ್‌ಲಾಲ್ 'Vinsmera Jewels' ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. 109 ಸೆಕೆಂಡುಗಳ ಈ ಜಾಹೀರಾತಿನಲ್ಲಿ ಸಂಭಾಷಣೆ ಇಲ್ಲದೆ, ಕೇವಲ ಭಾವಾಭಿವ್ಯಕ್ತಿಯ ಮೂಲಕವೇ ಗಮನ ಸೆಳೆದಿದ್ದಾರೆ.
ಆಭರಣಗಳ ಜಾಹೀರಾತುಗಳೆಂದರೆ ಸಾಮಾನ್ಯವಾಗಿ ಮಹಿಳೆಯರದ್ದೇ ಕಾರುಬಾರು. ಆದರೆ, ಪ್ರಕಾಶ್ ವರ್ಮಾ ನಿರ್ದೇಶನದ ಈ ಜಾಹೀರಾತಿನಲ್ಲಿ ಹಾಗಾಗಿಲ್ಲ. ಇಲ್ಲಿ ಮೋಹನ್‌ಲಾಲ್ ಅವರೇ ಮುಖ್ಯ ಆಕರ್ಷಣೆ.
ಮೋಹನ್‌ಲಾಲ್ ಕಾರಿನಿಂದ ಇಳಿಯುವ ದೃಶ್ಯದೊಂದಿಗೆ ಜಾಹೀರಾತು ಆರಂಭವಾಗುತ್ತದೆ. ಅವರನ್ನು ಬರಮಾಡಿಕೊಳ್ಳುವ ವರ್ಮಾ, ಮಾಡೆಲ್ ಶಿವಾನಿ ಅವರನ್ನು ಪರಿಚಯಿಸುತ್ತಾರೆ. ನಂತರ, ವರ್ಮಾ, ಶಿವಾನಿ ಹಾಗೂ ಇನ್ನಿತರ ಕಲಾವಿದರು ಶೂಟಿಂಗ್ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ.
ಒಬ್ಬರೇ ಕುಳಿತಿದ್ದ ಮೋಹನ್‌ಲಾಲ್ ಅವರ ಕಣ್ಣು, ಶಿವಾನಿ ಅವರು ಆಗಷ್ಟೇ ಕಳಚಿ ಇಟ್ಟಿದ್ದ ವಜ್ರದ ಆಭರಣದ ಮೇಲೆ ಬೀಳುತ್ತದೆ. ಮರುಕ್ಷಣ ಅವರು ಅಲ್ಲಿಂದ ಎದ್ದು ಸೀದಾ ಕ್ಯಾರವಾನ್‌ಗೆ ತೆರಳುತ್ತಾರೆ. ಇದಾದ ನಂತರ ಅಷ್ಟೊತ್ತಿಗೆ ಆಭರಣ ಕಾಣೆಯಾಗಿರುವುದು ಗೊತ್ತಾಗುತ್ತದೆ. ಹುಡುಕಾಟ ಆರಂಭವಾಗುತ್ತದೆ. ಅಲ್ಲಿದ್ದ ಎಲ್ಲರೂ ಆತಂಕಕ್ಕೊಳಗಾಗುತ್ತಾರೆ.
ಇತ್ತ ಮೋಹನ್‌ಲಾಲ್ ಕ್ಯಾರವಾನ್‌ನಲ್ಲಿ ಎಲ್ಲಾ ಆಭರಣಗಳನ್ನು ತೊಟ್ಟು, ಕನ್ನಡಿ ಎದುರು ನೃತ್ಯದ ಮೂಲಕ ವಿವಿಧ ಭಂಗಿಗಳನ್ನು ಪ್ರದರ್ಶಿಸುತ್ತಾ ಮೈಮರೆಯುತ್ತಾರೆ. ಅಷ್ಟರಲ್ಲಿ, ಒಳಗೆ ಬರುವ ವರ್ಮಾ ಅಚ್ಚರಿಗೊಳ್ಳುತ್ತಾರೆ.
ವರ್ಮಾ ಆಗಮನದಿಂದ ಎಚ್ಚೆತ್ತುಕೊಳ್ಳುವ ಮೋಹನ್‌ಲಾಲ್, ಎದೆ ಮುಚ್ಚಿಕೊಳ್ಳುವಂತೆ ಕೈ ಇಟ್ಟು, ಜೋರಾಗಿ ನಕ್ಕು ಸಂಭ್ರಮಿಸುವ ದೃಶ್ಯ ಮನಸೆಳೆಯುತ್ತದೆ.
'ಆಭರಣದ ಮೋಹ ಸ್ತ್ರೀಯರಿಗಷ್ಟೇ' ಎನ್ನುವ ರೀತಿ ಈವರೆಗೆ ಪ್ರಸಾರವಾಗಿರುವ ಎಲ್ಲ ಜಾಹೀರಾತುಗಳ ಸಿದ್ಧ ಸೂತ್ರವನ್ನು ಮೀರಿ ನಿಲ್ಲುವ ಈ ಜಾಹೀರಾತಿನ ಪರಿಕಲ್ಪನೆ ಬಗ್ಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಇಂತಹದ್ದೊಂದು ವಿಭಿನ್ನ ಪ್ರಯತ್ನ ಮಾಡಿದ್ದಕ್ಕೆ ಮೋಹನ್‌ಲಾಲ್ ಮತ್ತು ವರ್ಮಾ ಅವರ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಸೂಪರ್‌ಸ್ಟಾರ್‌ವೊಬ್ಬರು ಮಹಿಳೆಯರಂತೆ ನಟಿಸಬಾರದಿತ್ತು ಎಂದು ಕೊಂಕು ನುಡಿಯುತ್ತಿರುವವರೂ ಇದ್ದಾರೆ.
ಜುಲೈ 18ರಂದು ಪ್ರಕಟವಾಗಿರುವ ಈ ಜಾಹೀರಾತು ಯೂಟ್ಯೂಬ್‌ನಲ್ಲಿ ಇದುವರೆಗೆ 19 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂನಲ್ಲೂ ಸಾಕಷ್ಟು ಪ್ರೇಕ್ಷಕರನ್ನು ತಲುಪಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.