ADVERTISEMENT

ಬಾಗ್ದಾದಿ ಬೆನ್ನಟ್ಟಿದ್ದ ಸೇನಾ ನಾಯಿಯ ಚಿತ್ರ ಟ್ವೀಟ್‌ ಮಾಡಿದ ಟ್ರಂಪ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಅಕ್ಟೋಬರ್ 2019, 5:13 IST
Last Updated 29 ಅಕ್ಟೋಬರ್ 2019, 5:13 IST
ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಅಬುಬಕರ್ ಅಲ್ ಬಾಗ್ದಾದಿಯನ್ನು ಬೆನ್ನಟ್ಟಿದ್ದ ಅಮೆರಿಕ ಸೇನೆಯ ನಾಯಿ.
ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಅಬುಬಕರ್ ಅಲ್ ಬಾಗ್ದಾದಿಯನ್ನು ಬೆನ್ನಟ್ಟಿದ್ದ ಅಮೆರಿಕ ಸೇನೆಯ ನಾಯಿ.   

ಸಿರಿಯಾದಲ್ಲಿಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯ ನಾಯಕ ಅಬುಬಕರ್‌ ಅಲ್ ಬಾಗ್ದಾದಿಯನ್ನು ಬೆನ್ನಟ್ಟಿ, ಸುರಂಗವೊಂದರಲ್ಲಿ ಅವನು ಹಿಂದೆ ಬರದಂತೆ ಧೈರ್ಯದಿಂದ ಅಡ್ಡಗಟ್ಟಿದ್ದ ಅಮೆರಿಕ ಸೇನೆಯ ಪ್ರತಿಷ್ಠಿತ ಡೆಲ್ಟಾ ತುಕಡಿಯ ನಾಯಿ ಇದೀಗ ವಿಶ್ವದ ಗಮನ ಸೆಳೆದಿದೆ.

ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ನಾಯಿಯ ಚಿತ್ರ ಟ್ವೀಟ್ ಮಾಡಿ, ‘ಶಹಬ್ಬಾಸ್’ ಎಂದು ಬೆನ್ನುತಟ್ಟಿದ್ದಾರೆ.‘ದಾಳಿ ಕಾರ್ಯಾಚರಣೆಯಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದ್ದ ನಾಯಿಯ ಚಿತ್ರ ಪತ್ತೆಹಚ್ಚಿದ್ದೇವೆ (ಅದರ ಹೆಸರು ತಿಳಿಸಲು ಆಗದು)’ಎಂದು ಟ್ರಂಪ್‌ ಒಕ್ಕಣೆ ಬರೆದಿದ್ದಾರೆ.

ಟ್ರಂಪ್ ಅವರ ಈ ಟ್ವೀಟ್‌ಗೆ37 ಸಾವಿರ ಮಂದಿ ಕಾಮೆಂಟ್,91 ಸಾವಿರ ಮಂದಿ ರಿಟ್ವೀಟ್ ಮಾಡಿದ್ದಾರೆ, 3.8 ಲಕ್ಷ ಮಂದಿ ಲೈಕ್ ಕೊಟ್ಟಿದ್ದಾರೆ. ವಿಶ್ವದ ಹಲವು ದೇಶಗಳಲ್ಲಿ ಟ್ರಂಪ್ ಅವರ ಟ್ವೀಟ್ ಜನರ ಗಮನ ಸೆಳೆದಿದೆ.

ADVERTISEMENT

‘ಅಮೆರಿಕ ಸೇನೆಯ 75ನೇ ರೇಂಜರ್‌ ರೆಜಿಮೆಂಟ್‌ನ ಡೆಲ್ಟಾ ಫೋರ್ಸ್‌ನ ಆಯ್ದ ಕೆಲ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದರು. ಕಾರ್ಯಾಚರಣೆಯಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದ ನಮ್ಮ ನಾಯಿ, ಸುಂದರ ನಾಯಿ, ಬುದ್ಧಿವಂತ ನಾಯಿಗಾಯಗೊಂಡಿತ್ತು. ಅದನ್ನು ವಾಪಸ್ ಕರೆತರಲಾಗಿದೆ’ ಎಂಬ ಟ್ರಂಪ್ ಹೇಳಿಕೆಯನ್ನು ‘ವಾಷಿಂಗ್ಟನ್‌ಪೋಸ್ಟ್‌’ ವರದಿ ಮಾಡಿದೆ.

ಕಾರ್ಯಾಚರಣೆಯ ನಂತರ ದಾಳಿ ನಡೆಸಿದ್ದ ನಾಯಿಯ ಚಿತ್ರ ಮತ್ತು ವಿವರವನ್ನು ಅಮೆರಿಕದ ಸೇನಾ ಕಚೇರಿ ಗೌಪ್ಯವಾಗಿ ಇರಿಸಿತ್ತು.ಆದರೆ ದೇಶದ ಅರ್ಧದಷ್ಟು ಮನೆಗಳಲ್ಲಿ ನಾಯಿ ಸಾಕಿರುವ ಶ್ವಾನಪ್ರಿಯ ದೇಶ ಅಮೆರಿಕ. ಜನರ ಆಸಕ್ತಿ ಎದುರು ಈ ಗೌಪ್ಯತೆ ಹೆಚ್ಚು ಕಾಲ ಉಳಿಯಲಿಲ್ಲ. ಟ್ರಂಪ್ ಅವರುಬೆಲ್ಜಿಯನ್ ಮಾಲಿನೊಯ್ಸ್‌ ತಳಿಯನಾಯಿಯ ಚಿತ್ರ ಟ್ವೀಟ್ ಮಾಡುವುದರೊಂದಿಗೆ ಜನರ ನಿರೀಕ್ಷೆ ತಣಿಸಿದರು.

ಈ ಟ್ವೀಟ್‌ ಸಹ ಟ್ರಂಪ್ ಅವರ ವಿರುದ್ಧ ಮಂಡಿಸಲಾಗಿರುವ ಆರೋಪಗಳ ಹಿನ್ನೆಲೆಯಲ್ಲಿ ವ್ಯಾಪಕ ಚರ್ಚೆಗೆ, ಟೀಕೆ, ಸಮರ್ಥನೆ, ವಾದ ಮತ್ತು ಪ್ರತಿವಾದಗಳಿಗೆ ಗುರಿಯಾಗಿದೆ. ಕೆಲವರಂತೂ ‘ಟ್ರಂಪ್ ಎಂದೂ ನಾಯಿ ಸಾಕಿಲ್ಲ. ಏಕೆಂದರೆ ಅವರಿಗೆ ತನ್ನನ್ನು ಹೊರತುಪಡಿಸಿ ಬೇರೆ ಯಾವುದನ್ನೂ, ಯಾರನ್ನೂಪ್ರೀತಿಸಲು ಬರಲ್ಲ’ ಎಂದು ವ್ಯಂಗ್ಯವಾಡಿದ್ದಾರೆ.

ನಾಯಿಯ ಹೆಸರನ್ನೇಕೆ ಟ್ರಂಪ್ ಉಲ್ಲೇಖಿಸಿಲ್ಲ ಎಂಬ ಬಗ್ಗೆಯೂ ವಾಷಿಂಗ್ಟನ್‌ ಪೋಸ್ಟ್‌ ಬೆಳಕು ಚೆಲ್ಲಿದೆ.‘ನಾಯಿಯ ಹೆಸರು ಬಹಿರಂಗಪಡಿಸಿದರೆ ಅದರಿಂದ ಸೇನಾ ತುಕಡಿಯ ಇತರ ಸದಸ್ಯರ ಗುರುತು ಪತ್ತೆಯಾಗುವ ಅಪಾಯವಿದೆ’ ಎಂದು ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಬಾಗ್ದಾದಿಯ ಬೇಟೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಈ ನಾಯಿಯು ಅಮೆರಿಕದ ಸೇನಾ ಇತಿಹಾಸದ ಪುಟಗಳಲ್ಲಿ ದಾಖಲಾಗುವುದು ಖಚಿತ.2011ರಲ್ಲಿ ಅಮೆರಿಕ ನೌಕಾಪಡೆಯ ಸೀಲ್ ಕಮಾಂಡೊಗಳುಒಸಾಮಾ ಬಿನ್‌ಲಾಡೆನ್‌ನನ್ನು ಪತ್ತೆಹಚ್ಚಿ ಕೊಲ್ಲಲು ನೆರವಾಗಿದ್ದು ಸಹ ಇದೇ ತಳಿಯ ಕೈರೊ. ಅಮೆರಿಕ ಸೇನೆಯಲ್ಲಿ ನಾಯಿಯ ತಳಿಗಳು ಹಲವು ವರ್ಷಗಳಿಂದ ಸೇವೆಯಲ್ಲಿವೆ.

ಈ ಕಾರ್ಯಾಚರಣೆಯಲ್ಲಿ ಧೈರ್ಯದಿಂದ ಪಾಲ್ಗೊಂಡು ಗಾಯಗೊಂಡಿರುವ ನಾಯಿಗೆ ಪರ್ಪಲ್ ಹಾರ್ಟ್‌ ಅಥವಾ ವೇಲೊರ್ ಮೆಡಲ್ (ಅಮೆರಿಕ ಸೇನೆಯ ಶೌರ್ಯ ಪ್ರಶಸ್ತಿ) ಸಿಗುವುದಿಲ್ಲ. ನಾಯಿಗಳಿಗೆ ಶೌರ್ಯ ಪುರಸ್ಕಾರ ನೀಡಿದರೆ ಮನುಷ್ಯರ ಸೇವೆಯನ್ನು ಕಡಿಮೆ ಮಾಡಿದಂತೆ ಆಗುತ್ತೆ ಎನ್ನುವ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಅಮೆರಿಕ ನಾಯಿಗಳನ್ನು ಪುರಸ್ಕರಿಸುವುದರಿಂದ ಹಿಂದೆ ಸರಿಯಿತು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.