ಕಳೆದ ವಾರದಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಜೀಬ್ಲೀ ಶೈಲಿಯ ಎಐ ಚಿತ್ರಗಳ ಸಂಚಲನ. ಈ ಟ್ರೆಂಡ್ ಹೇಗೆ ಹುಟ್ಟಿತು? ನಿಮ್ಮ ಚಿತ್ರವನ್ನು ಜೀಬ್ಲೀ ಶೈಲಿಗೆ ಹೇಗೆ ಪರಿವರ್ತಿಸಬಹುದು?
ಕಳೆದೊಂದು ವಾರದಿಂದ ಸಾಮಾಜಿಕ ಮಾಧ್ಯಮಗಳಲ್ಲೆಲ್ಲಾ ವಿನೂತನ ಚಿತ್ರಗಳದ್ದೇ ಸದ್ದು. ತಮ್ಮ ತಮ್ಮ ಸೆಲ್ಫಿ ಚಿತ್ರಗಳನ್ನು, ಕುಟುಂಬದ ಚಿತ್ರಗಳನ್ನೆಲ್ಲ ಸುಂದರವಾದ, ಮೃದು ಭಾವ ಹೊಮ್ಮಿಸುವ ಆ್ಯನಿಮೇಷನ್ ರೂಪಕ್ಕೆ ಪರಿವರ್ತಿಸಿ ಹಂಚಿಕೊಂಡಿದ್ದಾರೆ. ಅಷ್ಟೇಕೆ, ದೇಶದ ಪ್ರಧಾನಿಯೂ ತಮ್ಮ ಆಡಳಿತದ ಪ್ರಮುಖ ಘಟ್ಟಗಳನ್ನು ಬಿಂಬಿಸುವ ಚಿತ್ರಗಳನ್ನು ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್, ಅಮಿತಾಭ್ ಬಚ್ಚನ್ ಮುಂತಾದ ಸೆಲೆಬ್ರಿಟಿಗಳಿಗೂ ಈ ಚಿತ್ರದ ಮೋಹದ ಜಾಲದಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಇದುವೇ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಹೊಸ ಟ್ರೆಂಡ್ - ಜೀಬ್ಲೀ!
ಏನಿದು ಜೀಬ್ಲೀ ಅಥವಾ ಘಿಬ್ಲೀ?
Ghibli ಪದವನ್ನು ಜಪಾನೀ ಭಾಷೆಯಲ್ಲಿ ಜೀಬ್ಲೀ ಎಂದೂ, ಅಮೆರಿಕನ್ ಇಂಗ್ಲಿಷ್‌ನಲ್ಲಿ ಘಿಬ್ಲೀ ಎಂದೂ ಉಚ್ಚರಿಸಲಾಗುತ್ತದೆ. ಜೀಬ್ಲೀ ಸ್ಟುಡಿಯೋ ಎಂಬುದು ಜಪಾನ್‌ನ ಜನಪ್ರಿಯ ಮತ್ತು ಪ್ರಸಿದ್ಧ ಆ್ಯನಿಮೇಶನ್ ಸ್ಟುಡಿಯೋ. ಜೀಬ್ಲೀ ಶೈಲಿಯ ವಿಕಟ ಚಿತ್ರಗಳು ಅಥವಾ ವಿಡಂಬನಾತ್ಮಕ ಚಿತ್ರಗಳ ಮೂಲಕವೇ ಈ ಸ್ಟುಡಿಯೋ ಹಲವಾರು ಆ್ಯನಿಮೇಟೆಡ್ ಚಲನಚಿತ್ರಗಳನ್ನು ನಿರ್ಮಿಸಿದೆ. ಜೀಬ್ಲೀ ಶೈಲಿಯ ಚಿತ್ರಗಳು ಹಯಾವೊ ಮಿಯಾಝಕಿ ಎಂಬ ಚಿತ್ರ ನಿರ್ದೇಶಕನ ಸುದೀರ್ಘ ಪರಿಶ್ರಮದ ಫಲ. ಇತರ ಹೈಟೆಕ್ ಶೈಲಿಯ ಆ್ಯನಿಮೇಟೆಡ್ ಚಿತ್ರಗಳಿಗಿಂತ ನೋಡಲು ಸರಳವಾಗಿಯೂ, ಹೆಚ್ಚು ಆಪ್ತವಾಗಿಯೂ, ಆಕರ್ಷಕವಾಗಿಯೂ, ಅದಕ್ಕೂ ಹೆಚ್ಚಿನದಾಗಿ ಜೀವಂತಿಕೆಯ ಕಳೆಯೊಂದಿಗೆ ಜೀಬ್ಲೀ ಗಮನ ಸೆಳೆಯುತ್ತದೆ. ಒಂದರ್ಥದಲ್ಲಿ ಕನಸಿನ ಪಾತ್ರಗಳಂತೆ ಕಣ್ಣಿಗೆ ಕಟ್ಟುತ್ತವೆ. ಒಂದೊಂದು ಚಿತ್ರವನ್ನು ತಯಾರಿಸಬೇಕಿದ್ದರೆ ಕಲಾವಿದರು ಹಲವಾರು ಗಂಟೆಗಳನ್ನೇ ವ್ಯಯಿಸಬೇಕಾಗುತ್ತಿತ್ತು. ಈಗ ಎಐ ಬಂದಿದೆ, ಕೆಲವೇ ಕ್ಷಣಗಳು ಸಾಕು. ಇದು ಕಲಾವಿದರ ಬೌದ್ಧಿಕ ಆಸ್ತಿಯ ರಕ್ಷಣೆಗೆ ಬಂದ ಅತಿದೊಡ್ಡ ಅಪಾಯವೂ ಹೌದು. ವರ್ಷಾನುಗಟ್ಟಲೆ ಮಾಡಿದ ಪರಿಶ್ರಮವನ್ನು ಕೆಲವೇ ಸೆಕೆಂಡುಗಳಲ್ಲಿ ಈ ಕೃತಕ ಬುದ್ಧಿಮತ್ತೆ ನಿರ್ಮಿಸಿಕೊಡುತ್ತದೆ ಎಂಬುದು ಮೂಲ ಕಲಾವಿದರ ಆತಂಕಕ್ಕೂ ಕಾರಣವಾದ ಸಂಗತಿ.
ಜೀಬ್ಲೀ - ದಿಢೀರ್ ಟ್ರೆಂಡ್ ಆಗಿದ್ದೇಕೆ?
ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಯುಗ ಇದು. ಅದರಲ್ಲಿಯೂ ಓಪನ್ ಎಐ ಕಂಪನಿ ರೂಪಿಸಿರುವ ಚಾಟ್‌ಜಿಪಿಟಿ ಎಂಬ ಮಾಯಾಜಾಲದಲ್ಲಿ ಏನೆಲ್ಲ ದೊರೆಯುತ್ತದೆ ಎಂಬುದು ನಿಕಷಕ್ಕೊಳಗಾಗುತ್ತಲೇ ಇದೆ. ತತ್ಪರಿಣಾಮವಾಗಿ, ನಾವು ಹೇಳಿದ್ದನ್ನು ಹೇಳಿದಂತೆಯೇ ಚಿತ್ರ ತಯಾರಿಸಿಕೊಡಬಲ್ಲ ಚಾಟ್‌ಜಿಪಿಟಿಯ ಚಿತ್ರ ರಚನಾ ತಂತ್ರಜ್ಞಾನದ ವಿಭಾಗದಲ್ಲಿ ಹೊಸದಾಗಿ ಜೀಬ್ಲೀ ಶೈಲಿಯ ಚಿತ್ರ ರಚನೆಯ ವೈಶಿಷ್ಟ್ಯವನ್ನು ಪರಿಚಯಿಸಲಾಯಿತು. ಅಷ್ಟೇ. ಅದನ್ನು ತಕ್ಷಣ ಬಳಸಿದವರು ತಮಗಾದ ಸಂತೋಷವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚುತ್ತಾ ಹೋದರು.
ಮೊದಲ ಮೂರ್ನಾಲ್ಕು ದಿನ ಪಾವತಿ ಮಾಡಿದ ಚಂದಾದಾರರಿಗಷ್ಟೇ (ಪ್ರೀಮಿಯಂ ಆವೃತ್ತಿ) ಚಾಟ್‌ಜಿಪಿಟಿ ಮೂಲಕ ಲಭ್ಯವಿದ್ದ ಈ ವೈಶಿಷ್ಟ್ಯವನ್ನು, ಜನಪ್ರಿಯತೆ ಹೆಚ್ಚಾದಂತೆ ಮತ್ತು ಇದಕ್ಕೆ ಪ್ರತಿಸ್ಫರ್ಧಿಗಳೂ ಹುಟ್ಟಿಕೊಂಡಿದ್ದನ್ನು ಗಮನಿಸಿದ ಓಪನ್ಎಐ, ಉಚಿತವಾಗಿ ನೀಡಲಾರಂಭಿಸಿತು. ಎಕ್ಸ್ (ಹಿಂದಿನ ಟ್ವಿಟರ್) ತಾಣದ ಗ್ರಾಕ್ (Grok) ಚಾಟ್‌ಬಾಟ್, ಫೇಸ್‌ಬುಕ್‌ನ ಮೆಟಾ ಎಐ ಕೂಡ ಈ ವೈಶಿಷ್ಟ್ಯವನ್ನು ಉಚಿತವಾಗಿ ನೀಡಿತು. ಗೂಗಲ್‌ನ ಜೆಮಿನಿ ಕೂಡ ತನ್ನ ಚಂದಾದಾರರಿಗೆ ಈ ವೈಶಿಷ್ಟ್ಯ ನೀಡಲು ಮುಂದಾಯಿತು. ಹೀಗಾಗಿ, ಬಳಕೆದಾರರ ಸಂಖ್ಯೆಯೂ ಹೆಚ್ಚಾಯಿತು. ಜನರಂತೂ ತಮ್ಮದೇ ಸೆಲ್ಫಿ, ಸ್ನೇಹಿತರ ಚಿತ್ರಗಳು, ಕುಟುಂಬಿಕರ, ನಾಯಿ ಬೆಕ್ಕುಗಳ ಚಿತ್ರಗಳನ್ನೂ ಈ ಶೈಲಿಯಲ್ಲಿ ತಯಾರಿಸಿ, ತಮ್ಮ ಪ್ರೊಫೈಲ್, ಸ್ಟೇಟಸ್‌ಗೆ ಅಳವಡಿಸಿಕೊಳ್ಳುತ್ತಾ ಹೋದರು. ಅಷ್ಟೇ ಅಲ್ಲ, ಕೆಲವು ಬ್ರ್ಯಾಂಡ್‌ಗಳು ಜಾಹೀರಾತಿಗಾಗಿಯೂ ಈ ಜೀಬ್ಲೀ ಶೈಲಿಗೆ ಮಾರ್ಪಾಟುಗೊಳಿಸಿದ ಚಿತ್ರಗಳನ್ನು ಬಳಸಿಕೊಳ್ಳತೊಡಗಿದವು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನ ಅಗಾಧ ಸಾಧ್ಯತೆಗಳ ಕಿರು ಅಂಶವನ್ನು ತೆರೆದಿಟ್ಟಿರುವ ಈ ಟ್ರೆಂಡ್, ಜೀಬ್ಲೀ ಶೈಲಿಯನ್ನೂ ಜನಸಾಮಾನ್ಯರಿಗೂ ಪರಿಚಯಿಸಿದಂತಾಯಿತು.
ಹೇಗೆ ಮಾಡುವುದು?
ತೀರಾ ತೀರಾ ಸುಲಭ. ಓಪನ್ ಎಐ ಹೊರತಂದಿರುವ ಚಾಟ್‌ಜಿಪಿಟಿ, ಎಕ್ಸ್ ತಾಣದ ಗ್ರಾಕ್, ಫೇಸ್‌ಬುಕ್/ವಾಟ್ಸ್ಆ್ಯಪ್‌ನಲ್ಲಿರುವ ಮೆಟಾ ಎಐ ಅಥವಾ ಗೂಗಲ್‌ನ ಜೆಮಿನಿ (ಪಾವತಿ) ಚಾಟ್‌ಬಾಟ್‌ಗಳನ್ನು ತೆರೆದು (ಇಮೇಲ್ ಮೂಲಕ ನೋಂದಾಯಿಸಿಕೊಂಡಿರಬೇಕು), ಅದರಲ್ಲಿ Convert this image in to Ghibli style art ಅಂತ 'ಪ್ರಾಂಪ್ಟ್' ಟೈಪ್ ಮಾಡಿ, ನಮ್ಮ ಚಿತ್ರವನ್ನು ಅಲ್ಲೇ ಅಪ್‌ಲೋಡ್ ಮಾಡಿದರಾಯಿತು. ಕೆಲವೇ ಕ್ಷಣಗಳಲ್ಲಿ ಜೀಬ್ಲೀ ಶೈಲಿಗೆ ಪರಿವರ್ತನೆಗೊಂಡ ಆ ಚಿತ್ರವು ಲಭಿಸುತ್ತದೆ. ಏನಾದರೂ ಮಾರ್ಪಾಟುಗಳಿದ್ದರೆ ಅದನ್ನೂ ಚಾಟ್‌ಬಾಟ್‌ಗೆ ಹೇಳಿದರೆ, ಮಾರ್ಪಡಿಸಿದ ಚಿತ್ರವೂ ದೊರೆಯುತ್ತದೆ. ಹಾಗಿದ್ದರೆ, ತಡವೇಕೆ? ನಿಮ್ಮ ಜೀಬ್ಲೀ ಶೈಲಿಯ ಚಿತ್ರ ತಯಾರಿಸಿ, ಹಂಚಿಕೊಂಡು ಖುಷಿಪಡಿ.
ಆದರೆ...
ಅಂತರ್ಜಾಲದಲ್ಲಿದ್ದೇವೆ ಎಂದರೆ ನಮ್ಮ ಖಾಸಗಿತನದ ಬಗ್ಗೆ ಚಿಂತಿಸುವುದನ್ನು ಬಿಟ್ಟುಬಿಡಬೇಕು ಎಂಬಷ್ಟರ ಮಟ್ಟಿಗೆ ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ನಡೆಯುತ್ತಿವೆ. ಇದುವರೆಗೆ ತಮ್ಮ ಹೆಸರು, ಊರು, ಇಮೇಲ್ ವಿಳಾಸ, ಫೋನ್ ನಂಬರ್ ಮುಂತಾದವನ್ನಷ್ಟೇ ಎಲ್ಲರೂ ಅಂತರ್ಜಾಲದಲ್ಲಿ ಹಂಚಿಕೊಳ್ಳುತ್ತಿದ್ದರು. ಈಗ ತಮ್ಮ ಚಿತ್ರಗಳನ್ನೂ ಈ ಕೃತಕ ಬುದ್ಧಿಮತ್ತೆಯ ದತ್ತಾಂಶ ಸಂಚಯಕ್ಕೆ (ಡೇಟಾಬೇಸ್) ಸೇರಿಸಿದೆವು. ಇದೆಲ್ಲ ತಕ್ಷಣಕ್ಕೆ ರಂಜನೀಯ ಎನಿಸಿದರೂ, ನಮ್ಮ ಮುಖದ ಗುರುತನ್ನು ಪೂರ್ತಿಯಾಗಿ ತಂತ್ರಜ್ಞಾನದ ಕೈಗೆ, ಅವರ ಡೇಟಾಬೇಸ್‌ಗೆ ಒಪ್ಪಿಸಿಬಿಟ್ಟಂತಾಗಿದೆ. ಒಂದು ಕಡೆಯಿಂದ ಪ್ರೈವೆಸಿ ಬಗ್ಗೆ ಧ್ವನಿ ಎತ್ತುತ್ತೇವೆ; ನಾವಾಗಿಯೇ ಪ್ರೈವೆಸಿಯನ್ನು ಬಿಟ್ಟುಕೊಡುತ್ತೇವೆ! ಬೇರೆಯವರನ್ನು ದೂರಿ ಪ್ರಯೋಜನ ಇಲ್ಲ. 'ನಮ್ಮ ಎಐ ಮಾಡೆಲ್‌ಗಳ ತರಬೇತಿಗಾಗಿ, ಬಳಕೆದಾರರು ಒದಗಿಸುವ ವೈಯಕ್ತಿಕ ಮಾಹಿತಿಯನ್ನು ಕಂಪನಿಯು ಸಂಗ್ರಹಿಸುತ್ತದೆ' ಎಂಬ ಪ್ರೈವೆಸಿ ಪಾಲಿಸಿಯಲ್ಲಿರುವ ಅಂಶಗಳನ್ನು ಓದದೆಯೇ ನಮ್ಮ ಖಾಸಗಿ ಮಾಹಿತಿಯನ್ನು ನಾವಾಗಿ ಧಾರೆ ಎರೆದಿರುತ್ತೇವೆ. ಚಿತ್ರದ ಮೂಲಕ ನಮ್ಮ ಮುಖಚಹರೆ, ಬಯೋಮೆಟ್ರಿಕ್ ಮಾಹಿತಿ, ನಮ್ಮ ಮುಖಾಭಿವ್ಯಕ್ತಿ, ಚಿತ್ರ ಸೆರೆಹಿಡಿದ ಸ್ಥಳ, ಅದರ ಪರಿಸರ, ನಿಮ್ಮ ಮಾನಸಿಕ ಭಾವಗಳು ಮುಂತಾದವನ್ನು ನಾವು ಅಂತರ್ಜಾಲಕ್ಕೆ ಕೊಟ್ಟಂತಾಗುತ್ತದೆ. ಹೀಗಾಗಿ, ನಮ್ಮ ಪ್ರೈವೆಸಿ ನಮ್ಮ ಕೈಯಲ್ಲೇ ಇದೆ ಎಂಬ ಎಚ್ಚರಿಕೆ ಅತ್ಯಗತ್ಯ.
ಮೋದಿಯ ಜೀಬ್ಲೀ ಶೈಲಿಯ ಚಿತ್ರಗಳು
ಸಚಿನ್ ತೆಂಡೂಲ್ಕರ್ ಚಿತ್ರಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.