ADVERTISEMENT

ಇದು US ಅಲ್ಲ ಭಾರತ; ಕಪಾಟಿನಲ್ಲಿ ಹಲವಿದ್ದರೂ AI ಸೀರೆಯೇ ಏಕೆ: ಶಾಂತನು ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಸೆಪ್ಟೆಂಬರ್ 2025, 7:52 IST
Last Updated 19 ಸೆಪ್ಟೆಂಬರ್ 2025, 7:52 IST
<div class="paragraphs"><p>ಗೂಗಲ್ ಜೆಮನಿ ಎಐನ ನ್ಯಾನೊ ಬನಾನಾದಿಂದ ಸಿದ್ಧಪಡಿಸಿದ ಚಿತ್ರ ಹಾಗೂ ಶಾಂತನು ನಾಯ್ಡು</p></div>

ಗೂಗಲ್ ಜೆಮನಿ ಎಐನ ನ್ಯಾನೊ ಬನಾನಾದಿಂದ ಸಿದ್ಧಪಡಿಸಿದ ಚಿತ್ರ ಹಾಗೂ ಶಾಂತನು ನಾಯ್ಡು

   

ಮುಂಬೈ: ಗೂಗಲ್‌ನ ಜೆಮಿನಿ ಕೃತಕ ಬುದ್ಧಿಮತ್ತೆ (AI) ಇತ್ತೀಚೆಗೆ ಪರಿಚಯಿಸಿರುವ ಸೀರೆ ಚಿತ್ರದ ಬಳಕೆಯು ಭಾರತೀಯ ಮಹಿಳೆಯರ ಟ್ರೆಂಡ್ ಆಗಿರುವುದರ ಕುರಿತು ದಿ. ರತನ್ ಟಾಟಾ ಅವರ ಕೊನೆಗಾಲದ ಆಪ್ತ ಶಾಂತನು ನಾಯ್ಡು ನೀಡಿರುವ ಪ್ರತಿಕ್ರಿಯೆ ವ್ಯಾಪಕವಾಗಿ ಹರಿದಾಡುತ್ತಿದೆ.

ಜೆಮಿನಿ ಎಐನ ‘ನ್ಯಾನೊ ಬನಾನಾ’ ಟೂಲ್ ಮೂಲಕ ಪಡೆಯುವ ರೆಟ್ರೊ ಲುಕ್‌ನ ಸೀರೆ ತೊಟ್ಟ ಚಿತ್ರಗಳನ್ನು ಹೆಂಗಳೆಯರು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. 90ರ ದಶಕದ ಟ್ರೆಂಡ್‌ನಲ್ಲಿ ಕಾಣಬಯಸುವವರು, ಸೀರೆ ತೊಡಲು ಬಾರದವರೂ ಯಾವುದೇ ಪರಿಶ್ರಮವಿಲ್ಲದೆ, ಸೀರೆ ಖರೀದಿಸುವ ಹೆಚ್ಚುವರಿ ಖರ್ಚು ಇಲ್ಲದೆ ತಮ್ಮದೊಂದು ಭಾವಚಿತ್ರವನ್ನು ಕೃತಕ ಬುದ್ಧಿಮತ್ತೆ ಬಳಸಿ ಪಡೆಯುವ ಸುಲಭದ ದಾರಿಯನ್ನು ಗೂಗಲ್‌ನ ಜೆಮಿನಿ ನೀಡಿದೆ. 

ADVERTISEMENT

ಗ್ಲಾಮರ್‌ ಲುಕ್‌ನಲ್ಲಿ, ರೆಟ್ರೊ ಬಾಲಿವುಡ್‌ನ ಶೈಲಿಯಲ್ಲಿ ಚಿತ್ತಾಕರ್ಷಕ ಸೀರೆತೊಟ್ಟ ತಮ್ಮದೇ ಚಿತ್ರವನ್ನು ಕಂಡು ಬೆರಗಾಗಿರುವ ಹೆಂಗಳೆಯರು ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚುತ್ತಿರುವ ಈ ಕ್ರೇಜ್‌ನ ಕುರಿತು ಟಾಟಾ ಮೋಟಾರ್ಸ್‌ನ ಜನರಲ್ ಮ್ಯಾನೇಜರ್ ಆಗಿರುವ ಶಾಂತನು ಹಾಸ್ಯದ ನುಡಿಗಳನ್ನಾಡಿದ್ದಾರೆ.

‘ಭಾರತದಲ್ಲಿ ಪ್ರತಿ ಮಹಿಳೆಯ ಕಪಾಟಿನಲ್ಲೂ ಹಲವಾರು ಸೀರೆಗಳಿರುತ್ತವೆ. ಹೀಗಿರುವಾಗ ಎಐ ಅಗತ್ಯವೇ?’ ಎಂದು ಕೇಳಿದ್ದಾರೆ.

‘ನೀವೆಲ್ಲರೂ ಅಮೆರಿಕದಲ್ಲಿಲ್ಲ, ಭಾರತದಲ್ಲಿದ್ದೀರಿ. ಇದು ಸೀರೆಯುಡುವ ಸಂಸ್ಕೃತಿಯ ದೇಶ. ನಿಮ್ಮ ಕಪಾಟಿನಲ್ಲಿ ಕನಿಷ್ಠ 15 ಸೀರೆಗಳಾದರೂ ಇರುತ್ತವೆ. ನೀವು ಏಕೆ ಇಷ್ಟು ಸೋಮಾರಿಗಳಾದಿರಿ... ಕಪಾಟಿನಲ್ಲಿ ನಿಮ್ಮದ ಸೀರೆ ಇರುವಾಗಲೂ ಎಐಗೆ ಚಿತ್ರ ರಚಿಸಲು ಕೇಳಿದ್ದೀರಲ್ಲಾ...’ ಎಂದು ಪ್ರಶ್ನಿಸಿದ್ದಾರೆ. ಜತೆಗೆ ಇದರ ಬದಲು ನಿಮ್ಮದೇ ಸೀರೆಯಲ್ಲಿ ನೀವು ಫೋಟೊ ಕ್ಲಿಕ್ಕಿಸಿ ಹಂಚಿಕೊಂಡರೆ ಉತ್ತಮವಲ್ಲವೇ’ ಎಂದೂ ಸಲಹೆ ನೀಡಿದ್ದಾರೆ.

‘ಪಾಶ್ಚಾತ್ಯರಂತೆ ಶ್ವೇತವರ್ಣದ ಗೌನ್‌ಗಳನ್ನು ತೊಟ್ಟ ಚಿತ್ರವಾದರೆ ಭಾರತೀಯರು ಎಐ ಮೊರೆ ಹೋಗುವುದರಲ್ಲಿ ಅರ್ಥವಿದೆ. ಕೆಲವರು ನಾಯಿಗಳ ಚಿತ್ರ ಹಾಕಿ ಅದಕ್ಕೆ ಸೀರೆ ತೊಟ್ಟ ಚಿತ್ರವನ್ನು ಎಐನಿಂದ ಪಡೆದಿದ್ದಾರೆ. ಅದರ ಪಕ್ಕದಲ್ಲಿ ಕೂತಿರುವಂತೆ ಚಿತ್ರಗಳನ್ನು ಜೆಮನಿಯಿಂದ ಪಡೆದಿದ್ದಾರೆ. ಅದಕ್ಕೂ ಒಂದು ಅರ್ಥವಿದೆ’ ಎಂದು ಶಾಂತನು ಹೇಳಿದ್ದಾರೆ.

ಶಾಂತನು ಅವರ ಈ ಹೇಳಿಕೆಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅವರ ಹಾಸ್ಯಭರಿತ ಮತ್ತು ತಮ್ಮ ಅನಿಸಿಕೆಯನ್ನು ಪ್ರಾಮಾಣಿಕವಾಗಿ ಹಂಚಿಕೊಂಡಿದ್ದಕ್ಕೆ ಶ್ಲಾಘನೆ ವ್ಯಕ್ತವಾಗಿದೆ. 

‘ಈ ವಿಷಯ ನನ್ನೊಳಗಿತ್ತು. ಕೊನೆಗೂ ಯಾರೋ ಒಬ್ಬರು ಹೇಳಿದ್ದಾರೆ’ ಎಂದು ಒಬ್ಬರು ಹೇಳಿದರೆ, ‘ಸತ್ಯವನ್ನು ಸೀಳಿ, ತಣ್ಣಗೆ ಚಹಾ ಹೀರುತ್ತಿದ್ದಾರೆ’ ಎಂದು ಮತ್ತೊಬ್ಬರು ಹೇಳಿದ್ದಾರೆ.

ಜೆಮಿನಿ ನ್ಯಾನೊ ಬನಾನಾ ಎಐ ವಿಡಿಯೊ ಮತ್ತದರ ಜನಪ್ರಿಯತೆ

ಮೂರು ಆಯಾಮಗಳಲ್ಲಿ (3D) ಚಿತ್ರ ನೀಡುವ ತಂತ್ರಜ್ಞಾನದಿಂದ ಜೆಮಿನಿ ಎಐನ ನ್ಯಾನೊ ಬನಾನಾ ವಿನ್ಯಾಸ ಜನಪ್ರಿಯತೆ ಪಡೆಯಿತು. ನಂತರ ಎರಡು ಆಯಾಮಗಳ (2D) ಚಿತ್ರ ಮತ್ತು ಪೋಟ್ರೈಟ್‌ ಸೀರೆ ತೊಟ್ಟು, ಗುಲಾಬಿ ಮುಡಿದ ಚಿತ್ರ ಸಾಕಷ್ಟು ಪ್ರಸಿದ್ಧಿ ಪಡೆಯಿತು. ಬಳಕೆ ಸ್ನೇಹಿಯಾಗಿದ್ದ ಈ ಸೌಲಭ್ಯ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಆಗಿ ಬದಲಾಯಿತು.

ಇಂದಿನ ತಲೆಮಾರಿನ ಬಹಳಷ್ಟು ಯುವತಿಯರು, ಕೃತಕ ಬುದ್ಧಿಮತ್ತೆಯ ಸಹಾಯದಿಂದ ಹಿಂದಿನ ತಲೆಮಾರಿನ ಪೋಷಾಕಿನಲ್ಲಿ ಕಂಗೊಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.