
ಚಿತ್ರ ಕೃಪೆ: ಎಕ್ಸ್ ಖಾತೆ
ಇಂದೋರ್: ಮಧ್ಯಪ್ರದೇಶದ ಇಂದೋರ್‌ನಲ್ಲಿ ಭಿಕ್ಷಾಟನೆ ವಿರೋಧಿ ಕಾರ್ಯಾಚರಣೆಯ ವೇಳೆ, ಕುಷ್ಠರೋಗದಿಂದ ಬಳಲುತ್ತಿದ್ದ ಭಿಕ್ಷುಕನೊಬ್ಬನ ಬಳಿ ಮೂರು ಮಹಡಿ ಮನೆಗಳು, ಒಂದು ಕಾರು ಹಾಗೂ ಮೂರು ಆಟೊ ರಿಕ್ಷಾಗಳಿರುವುದು ಬೆಳಕಿಗೆ ಬಂದಿದೆ.
ಇಂದೋರ್ ನಗರದ ರಸ್ತೆಗಳಲ್ಲಿ ಚಕ್ರಗಳಿರುವ ಬೋರ್ಡ್ ಮೇಲೆ ಕುಳಿತು ದೂಡತ್ತಾ ಭಿಕ್ಷೆ ಬೇಡುತ್ತಿದ್ದ ಮಂಗಿಲಾಲ್ ಎನ್ನುವಾತ ಲಕ್ಷ ಮೌಲ್ಯದ ಆಸ್ತಿ ಹಾಗೂ ಮೂರು ಮಹಡಿಯ ಮನೆ, ಒಂದು ಕಾರು ಹಾಗೂ ಮೂರು ಆಟೊ ರಿಕ್ಷಾಗಳನ್ನು ಹೊಂದಿರುವುದರ ಜೊತೆಗೆ, ಬುಲಿಯನ್ ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಅದರಿಂದ ಪ್ರತಿದಿನ ಉತ್ತಮ ಆದಾಯ ಗಳಿಸುತ್ತಿದ್ದಾನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ದಿನೇಶ್ ಮಿಶ್ರಾ ತಿಳಿಸಿದ್ದಾರೆ.
‘2021ರಿಂದ ಭಿಕ್ಷೆ ಬೇಡುತ್ತಿರುವ ಈ ವ್ಯಕ್ತಿ ಚಿನ್ನ ಹಾಗೂ ಬೆಳ್ಳಿ ಸೇರಿದಂತೆ ಅಮೂಲ್ಯ ಲೋಹಗಳ ವಹಿವಾಟು ನಡೆಯುವ ಬುಲಿಯನ್ ಮಾರುಕಟ್ಟೆಯಲ್ಲಿ ಜನರಿಗೆ ₹4ಲಕ್ಷದಿಂದ ₹5ಲಕ್ಷವರೆಗೆ ಸಾಲ ನೀಡಿದ್ದ ಮತ್ತು ಅದಕ್ಕೆ ಈತ ವಿಧಿಸುತ್ತಿದ್ದ ಬಡ್ಡಿಯಿಂದ ನಿತ್ಯ ₹1000ದಿಂದ ₹1200ವರೆಗೂ ಗಳಿಸುತ್ತಿದ್ದ. ಜತೆಗೆ ಈತ ಪ್ರತಿದಿನ ಭಿಕ್ಷಾಟನೆಯಿಂದ ಕನಿಷ್ಠ ₹400 ರಿಂದ ₹500 ಗಳಿಸುತ್ತಿದ್ದಾನೆ. ಅಲ್ಲದೆ ಭಿಕ್ಷೆ ಬೇಡುವುದಕ್ಕಾಗಿ ಒಂದು ಕಾರನ್ನು ಇಟ್ಟುಕೊಂಡಿದ್ದು, ಅದಕ್ಕೆ ಒಬ್ಬ ಚಾಲಕನೂ ಇದ್ದಾನೆ‘ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಶಿವಂ ವರ್ಮಾ ಅವರು, ‘ಇಂದೋರ್ ಭಿಕ್ಷಾಟನೆ ಮುಕ್ತ ನಗರವಾಗಿದೆ. ಸದ್ಯ, ಈ ವ್ಯಕ್ತಿಯ ಆಸ್ತಿಗಳ ಕುರಿತು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಎಲ್ಲಾ ವಿಚಾರಗಳು ದೃಢಪಟ್ಟ ಬಳಿಕ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೆಲವು ವರ್ಷಗಳ ಹಿಂದೆ ಈ ವ್ಯಕ್ತಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಆದರೆ ಕುಷ್ಠರೋಗದಿಂದ ಬಳಲುತ್ತಿದ್ದ ಕಾರಣ ಕುಟುಂಬ ಸದಸ್ಯರು ಈತನನ್ನು ದೂರ ಇಟ್ಟಿದ್ದಾರೆ. ಹೀಗಾಗಿ ಈತ ಭಿಕ್ಷಾಟನೆಯಲ್ಲಿ ತೊಡಗಿಸಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.