ADVERTISEMENT

ತಾಯಿಯಾಗಲು ವಯಸ್ಸು ಮಾತ್ರ ಮುಖ್ಯವಲ್ಲ ಎನ್ನುತ್ತಾರೆ ವೈದ್ಯರು

ಪಿಟಿಐ
Published 16 ಡಿಸೆಂಬರ್ 2025, 11:03 IST
Last Updated 16 ಡಿಸೆಂಬರ್ 2025, 11:03 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಮದುವೆಯಾದ ಹೆಣ್ಣುಮಕ್ಕಳು ವಯಸ್ಸು 30 ದಾಟಿದರೂ ಮಕ್ಕಳನ್ನು ಮಾಡಿಕೊಂಡಿಲ್ಲ ಎಂದರೆ ಹಲವರು, ಹಲವು ರೀತಿಯಲ್ಲಿ ಮಾತನಾಡುತ್ತಾರೆ. ಮನೆಯವರ ಒತ್ತಡ, ಸಂಬಂಧಿಕರ ಮಾತುಗಳು ಮಹಿಳೆಯನ್ನು ಇನ್ನಷ್ಟು ಒತ್ತಡಕ್ಕೆ ದೂಡಬಲ್ಲದು. 

ಆದರೆ ತಜ್ಞರು ಹೇಳುವ ‍ಪ್ರಕಾರ, ಮಕ್ಕಳನ್ನು ಪಡೆಯವುದು ಮಹಿಳೆಯ ಖಾಸಗಿ ನಿರ್ಧಾರವಾಗಿದೆ. ಪ್ರತಿಯೊಬ್ಬ ಮಹಿಳೆಯ ಒಟ್ಟಾರೆ ಆರೋಗ್ಯ ಮತ್ತು ವೈದ್ಯಕೀಯ ಆರೈಕೆ ಮುಖ್ಯವಾಗಿರುತ್ತದೆಯೇ ಹೊರತು ವಯಸ್ಸು ಮಾತ್ರವಲ್ಲ.

ADVERTISEMENT

ಈ ಕುರಿತು ತಜ್ಞರು ನೀಡಿರುವ ಮಾಹಿತಿ ಮತ್ತು ಅಭಿಪ್ರಾಯಗಳ ಬಗ್ಗೆ ಪಿಟಿಐ ವರದಿ ಮಾಡಿದೆ.

ಇತ್ತೀಚೆಗೆ ನಗರ ಪ್ರದೇಶದಲ್ಲಿ ಮಹಿಳೆಯರು ಕುಟುಂಬವನ್ನು ಬೆಳೆಸುವ ನಿರ್ಧಾರಕ್ಕಿಂತ ಹೆಚ್ಚಿನದಾಗಿ ಓದು, ವೃತ್ತಿ, ಹಣಕಾಸಿನ ಸ್ವಾತಂತ್ರ್ಯ ಮತ್ತು ಮಾನಸಿಕ ಸ್ಥಿರತೆಗೆ ಹೆಚ್ಚು ಗಮನ ನೀಡುತ್ತಿದ್ದಾರೆ. ಇದರಿಂದಾಗಿ ಕುಟುಂಬ ಸದಸ್ಯರು ಮತ್ತು ಸಮಾಜದಲ್ಲಿ ಅನೇಕ ಟೀಕೆಗಳನ್ನು ಕೇಳಬೇಕಾಗಿದೆ. 

ವಯಸ್ಸಾದಂತೆ ಫಲವತ್ತತೆ ಕಡಿಮೆಯಾಗುವುದು ಸಾಮಾನ್ಯ, ಅದರಲ್ಲೂ 30ರ ನಂತರ ನಿಧಾನವಾಗಿ ಹೆಣ್ಣುಮಕ್ಕಳಲ್ಲಿ ಫಲವತ್ತತೆ ಕುಂಠಿತವಾಗಲಿದೆ. ಆದರೆ ಇದೇ ಕಾರಣಕ್ಕೆ ಆತಂಕಗೊಳ್ಳುವ ಅಥವಾ ಒತ್ತಡದಲ್ಲಿ ಗರ್ಭಿಣಿಯಾಗುವ ನಿರ್ಧಾರ ಒಳ್ಳೆಯದಲ್ಲ. ಅದರ ಬದಲು ಸರಿಯಾಗಿ ಯೋಜಿಸಿಕೊಳ್ಳಿ. ಆಗಾಗ ವೈದ್ಯರನ್ನು ಕಂಡು ಆರೋಗ್ಯದ ಪರಿಶೀಲನೆ ಮಾಡಿಸಿಕೊಳ್ಳುತ್ತಿರಿ ಎನ್ನುವುದು ತಜ್ಞರ ಮಾತು.

‘ವಯಸ್ಸು ಮತ್ತು ಫಲವತ್ತತೆಯ ನಡುವೆ ಸ್ಪಷ್ಟವಾದ ವೈದ್ಯಕೀಯ ಸಂಬಂಧವಿದೆ. ಹೀಗಾಗಿ ಸರಿಯಾದ ರೀತಿಯಲ್ಲಿ ಸಂವಹನ ನಡೆಸುವುದು ಮುಖ್ಯವಾಗಿರುತ್ತದೆ. ವಯಸ್ಸನ್ನು ಮುಂದಿರಿಸಿ ಮಹಿಳೆಯ ಮೇಲೆ ಒತ್ತಡ ಹೇರವುದು ನ್ಯಾಯವೂ ಅಲ್ಲ ಅಥವಾ ಯಾವ ಪರಿಣಾಮವನ್ನೂ ಬೀರುವುದಿಲ್ಲ. ಇಂದಿನ ದಿನಮಾನದಲ್ಲಿ ಗರ್ಭಧಾರಣೆಗೆ ಜೀವನಶೈಲಿ, ಪೋಷಕಾಂಶ, ಮಾನಸಿಕ ಆರೋಗ್ಯ ಮತ್ತು ಸಮಯಕ್ಕೆ ಸರಿಯಾಗಿ ವೈದ್ಯಕೀಯ ನೆರವು ಪಡೆಯುವುದು ಮುಖ್ಯವಾಗಿರುತ್ತದೆ’ ಎನ್ನುತ್ತಾರೆ ಸಿಲ್ವರ್‌ಸ್ಟ್ರೀಕ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಸ್ವಪ್ನಿಲ್ ಅಗ್ರಹರಿ.

‘ಮುಂದುವರಿದ ವೈದ್ಯಕೀಯ ಲೋಕದಲ್ಲಿ ಸಂತಾನೋತ್ಪತ್ತಿಗೆ ಅಗತ್ಯವಾದ ಔಷಧ, ಪ್ರಸವ ಪೂರ್ವದಲ್ಲಿ ಆರೋಗ್ಯ ಸಮಸ್ಯೆಗಳನ್ನು ಪತ್ತೆ ಮಾಡುವುದು ಮತ್ತು ಗರ್ಭಧಾರಣೆಯನ್ನು ಸರಿಯಾದ ರೀತಿಯಲ್ಲಿ ಮೇಲ್ವಿಚಾರಣೆ ಮಾಡುವುದು ಸರಳವಾಗಿದೆ. ಅದರಲ್ಲೂ ಗರ್ಭಾವಸ್ಥೆಯ ಮಧುಮೇಹ ಅಥವಾ ಅಧಿಕ ರಕ್ತದೊತ್ತಡದಂತಹ ಪರಿಸ್ಥಿತಿಗಳನ್ನು ಮೊದಲೇ ಗುರುತಿಸಿದರೆ ಪರಿಣಾಮಕಾರಿಯಾಗಿ ನಿರ್ವಹಿಸಬಹುದು’ ಎನ್ನುತ್ತಾರೆ ಡಾ. ಸ್ವಪ್ನಿಲ್.

‘ಆರೋಗ್ಯದ ಮೇಲೆ ಸರಿಯಾದ ಗಮನ ನೀಡಲು ಪ್ರೋತ್ಸಾಹಿಸುವುದರ ಜತೆಗೆ ಗರ್ಭಧಾರಣೆಗೆ ಮಾನಸಿಕವಾಗಿ ಮಹಿಳೆಯನ್ನು ಸಿದ್ಧಪಡಿಸುವುದು ಮುಖ್ಯವಾಗಿರುತ್ತದೆ. ಸರಿಯಾದ ರೀತಿಯಲ್ಲಿ ಕಾಳಜಿವಹಿಸಿದರೆ ಗರ್ಭಾವಸ್ಥೆಯಲ್ಲಿ ಎದುರಾಗಬಹುದಾದ ಅನೇಕ ವಯೋಸಹಜ ಆರೋಗ್ಯ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು’ ಎನ್ನುವುದು ದ್ವಾರಕಾದ ಮ್ಯಾಕ್ಸ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕಿ, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ಘಟಕದ ಮುಖ್ಯಸ್ಥೆ ಡಾ. ಯಶಿಕಾ ಗುಡೆಸರ ಅವರ ಮಾತು.

‘ಪ್ರಬುದ್ಧತೆ ಮತ್ತು ಜೀವನದ ಅನುಭವಗಳು ಪೋಷಕತ್ವದ ಮೇಲೆ ಸಕಾರಾತ್ಮವಾಗಿ ಪರಿಣಾಮ ಬೀರುತ್ತವೆ. ಹೀಗಾಗಿ ಅನೇಕ ಮಹಿಳೆಯರು ತುಸು ತಡವಾಗಿ ಮಕ್ಕಳನ್ನು ಪಡೆಯಲು ಬಯಸುತ್ತಾರೆ. ಮಾನಸಿಕ ದೃಢತೆ, ಹಣಕಾಸಿನ ಭದ್ರತೆ, ಬಲವಾದ ಬೆಂಬಲ ಇವೆಲ್ಲವೂ ಉತ್ತಮ ಕುಟುಂಬವನ್ನು ಕಟ್ಟಲು ನೆರವಾಗಬಲ್ಲದು ಎಂದು ಭಾವಿಸುತ್ತಾರೆ’ ಎನ್ನುವುದು ಡಾ.ಯಶಿಕಾ ಅವರ ಮಾತು.

‘ಗರ್ಭಧಾರಣೆಗೆ ವಯಸ್ಸು ಮುಖ್ಯವಾಗುತ್ತದೆ. ಆದರೆ ಅದು ಒಂದು ಭಾಗ ಅಷ್ಟೇ. ಅನೇಕ ಮಹಿಳೆಯರು 20, 30ರ ವಯಸ್ಸಿನಲ್ಲಿ ಅಷ್ಟೇ ಯಾಕೆ 40ನೇ ವರ್ಷದಲ್ಲಿಯೂ ಆರೋಗ್ಯಕರವಾಗಿ ಗರ್ಭಧರಿಸಿ, ಮಕ್ಕಳನ್ನು ಪಡೆದಿದ್ದಾರೆ. ಹೀಗಾಗಿ ಗಮನದಲ್ಲಿರಬೇಕಾಗಿರುವುದು ಒಟ್ಟಾರೆ ಆರೋಗ್ಯ ಮತ್ತು ವೈಯಕ್ತಿಕ ಆಯ್ಕೆ’ ಎನ್ನುವುದು ಗುರುಗಾಂವ್‌ನ ಸಿಕೆ ಬಿರ್ಲಾ ಆಸ್ಪತ್ರೆಯ ವೈದ್ಯ ಡಾ. ಆಸ್ತಾ ದಯಾಲ್ ಅವರ ಅಭಿಪ್ರಾಯ.

‘ತಡವಾಗಿ ಗರ್ಭ ಧರಿಸಲು ಬಯಸುವವರು ಫಲವತ್ತತೆಯನ್ನು ರಕ್ಷಿಸಿಕೊಳ್ಳುವ ಆಯ್ಕೆಗಳು, ಜೀವನಶೈಲಿಯ ಬದಲಾವಣೆ, ದೀರ್ಘಕಾಲದ ಯೋಜನೆ ಬಗ್ಗೆ ಅಗತ್ಯವಾಗಿ ವೈದ್ಯಕೀಯ ಸಲಹೆಯನ್ನು ಪಡೆದುಕೊಳ್ಳಬೇಕು. ಜತೆಗೆ ಕುಟುಂಬ ಸದಸ್ಯರು ಒತ್ತಾಯಿಸದೆ ದಂಪತಿಯ ನಿರ್ಧಾರವನ್ನು ಬೆಂಬಲಿಸುವಂತೆ ನೋಡಿಕೊಳ್ಳಬೇಕು’ ಎನ್ನುವುದು ತಜ್ಞರ ಸಲಹೆ.

‘ಪೋಷಕರಾಗುವ ನಿರ್ಧಾರ ಸಂಪೂರ್ಣವಾಗಿ ವೈಯಕ್ತಿಕವಾದದ್ದು. ಎಂದಿಗೂ ಒಂದು ಗಡುವಿಗೆ ಸೀಮಿತಗೊಳಿಸಬಾರದು. ವೈದ್ಯಕೀಯ ವಿಜ್ಞಾನವು ವಿಕಸನಗೊಳ್ಳುತ್ತಲೇ ಇರುವುದರಿಂದ, ಸಮಾಜವು ಮಹಿಳೆಯರ ಆಯ್ಕೆಗಳನ್ನು ಗೌರವಿಸಬೇಕು ಮತ್ತು ತಾಯಿಯಾಗಲು ‘ಇದೇ ಸರಿಯಾದ ವಯಸ್ಸು’ ಎಂಬುದಿಲ್ಲ ಎನ್ನುವುದನ್ನು ಅರಿತಿರಬೇಕು’ ಎನ್ನುವುದು ತಜ್ಞರ ಮಾತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.