ಸಂಗೀತ ಕ್ಷೇತ್ರದಲ್ಲೇ ಏನಾದರೊಂದು ಸಾಧನೆ ಮಾಡಬೇಕೆನ್ನುವ ಕನಸು ಹೊತ್ತ ಹುಡುಗ ಪ್ರವೀಣ್, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮರ್ಕಲ್ ಎಂಬ ಪುಟ್ಟ ಹಳ್ಳಿಯ ಪ್ರತಿಭೆ.
ಬಾಲ್ಯದಿಂದಲೇ ಸಂಗೀತದ ಮೇಲೆ ಅಪಾರ ಆಸಕ್ತಿ ಹೊಂದಿರುವ ಇವರು, ಗಾಯನದಲ್ಲೇ ಹೆಸರು ಮಾಡುವ ಅಭಿಲಾಷೆ ಹೊಂದಿದ್ದಾರೆ. ಈ ಬಗ್ಗೆ ‘ಪ್ರಜಾವಾಣಿ ಡಿಜಿಟಲ್’ನೊಂದಿಗೆ ಪ್ರವೀಣ್ ಒಂದಷ್ಟು ಮಾತುಕತೆ ನಡೆಸಿದ್ದಾರೆ.
ನಿಮ್ಮ ಬಾಲ್ಯ ಮತ್ತು ಕುಟುಂಬ ಹಿನ್ನೆಲೆ
ನಾನು ಮೂಡಿಗೆರೆ ತಾಲೂಕಿನ ಗೋಣಿಬೀಡು ಎಂಬ ಊರಿನ ಸರ್ಕಾರಿ ಶಾಲೆಯಲ್ಲಿ 9ನೇ ತರಗತಿ ವರೆಗೂ ಓದ್ದೇನೆ. ಆದಾದ ಬಳಿಕ ಕೌಟುಂಬಿಕ ಕಾರಣಗಳಿಂದ ಹೆಚ್ಚಿನ ವಿದ್ಯಾಭ್ಯಾಸ ಪಡೆಯಲು ಆಗಲಿಲ್ಲ. ಬಾಲ್ಯದಿಂದ ಆರಂಭವಾದ ಸಂಗೀತದ ಬಗೆಗಿನ ಆಸಕ್ತಿ ಈಗ ಇನ್ನಷ್ಟು ವೃದ್ಧಿಸಿದೆ.
ನಮ್ಮ ಕುಟುಂಬದವರು ಎಲ್ಲರೂ ಕೂಲಿ ಕಾರ್ಮಿಕರು, ನಾನು ಆಟೊ ಡ್ರೈವರ್. ಬಿಡುವಿನ ವೇಳೆಯಲ್ಲಿ ಕಾಫಿ ತೋಟದ ಕೆಲಸವನ್ನು ಮಾಡುತ್ತೇನೆ.
ನಿಮಗೆ ಸಂಗೀತದ ಮೇಲೆ ಆಸಕ್ತಿ ಮೂಡಲು ಕಾರಣವಾದ ಘಟನೆ ಅಥವಾ ವ್ಯಕ್ತಿ ಯಾರು?
ಶಾಲಾ ದಿನಗಳಲ್ಲಿ ಸ್ನೇಹಿತರು ಹಾಡಿನಲ್ಲಿ ಬಹುಮಾನ ಪಡೆಯುತ್ತಿದ್ದಾಗ ನಾನು ಕೂಡ ಹಾಡಬೇಕು ಎಂದುಕೊಳ್ಳುತ್ತಿದ್ದೆ. ಟಿವಿ, ರೆಡಿಯೋದಲ್ಲಿ ರಾಜ್ ಕುಮಾರ್ ಸರ್, ರಾಜೇಶ್ ಕೃಷ್ಣನ್ ಹಾಡುಗಳನ್ನು ತುಂಬಾ ಕೇಳುತ್ತಿದ್ದೆ. ಆಗಿನಿಂದ ನಾನು ಕೂಡ ಗಾಯಕ ಆಗಬೇಕೆಂದು ಪ್ರಯತ್ನ ಪಡುತ್ತಿದ್ದೇನೆ. ಆದಾದ ಬಳಿಕ ಪ್ರತಿದಿನ ಹಾಡನ್ನು ಹಾಡುವ ಬಗೆ ಕಲಿಯುತ್ತಿದ್ದೇನೆ. ಅನೇಕ ಕಾರ್ಯಕ್ರಮಗಳಲ್ಲೂ ಹಾಡಿದ್ದೇನೆ.
ನಿಮ್ಮ ಸಂಗೀತ ಗುರುಗಳು ಯಾರು..?
ನನಗೆ ಸಂಗೀತ ಕಲಿಸುವ ಗುರುಗಳು ಯಾರು ಇಲ್ಲ. ನಾನೇ ಫೋನಿನಲ್ಲಿ ಹಿನ್ನಲೆ ಸಂಗೀತ ಹಾಕಿ ಅಭ್ಯಾಸ ಮಾಡುತ್ತಿದ್ದೇನೆ. ಆದರೆ ನನಗೂ ಒಬ್ಬರು ಸಂಗೀತ ಕಲಿಸುವ ಗುರುಗಳು ಇರಬೇಕು. ಅವರ ಮೂಲಕ ನಾನು ಸಂಗೀತ ಕಲಿಯಬೇಕು ಎನ್ನುವುದು ನನ್ನ ಹಲವು ವರ್ಷಗಳ ಕನಸು.
ದೊಡ್ಡ ದೊಡ್ಡ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದೀರಾ..?
ಹೌದು, ಜೀ ಕನ್ನಡದ ಸರಿಗಮಪ ಆಡಿಷನ್‌ನಲ್ಲಿ ನಾಲ್ಕು ಬಾರಿ ಭಾಗವಹಿಸಿದ್ದೀನಿ. ಅದರಲ್ಲಿ 2 ಬಾರಿ ಸೆಕೆಂಡ್ ರೌಂಡ್‌ನಲ್ಲಿ ಆಯ್ಕೆ ಮಾಡಿದ್ದರು. ಅಂತಿಮ ಸುತ್ತಿನಲ್ಲಿ ಆಯ್ಕೆ ಆಗಲಿಲ್ಲ. ಒಂದು ಬಾರಿಯಾದರೂ ನಾನು ಕೂಡ ದೊಡ್ಡ ವೇದಿಕೆಯಲ್ಲಿ ಹಾಡಲೇಬೇಕು ಎಂಬುವುದು ನನ್ನ ಗುರಿ ಆಗಿದೆ.
ನೀವು ಗಾಯನದ ಕಡೆ ಒಲವು ತೋರಲು ಸ್ಪೂರ್ತಿ ಯಾರು..?
ಗಾಯಕ ಹನುಮಂತ್ ಹಾಗೂ ಚನ್ನಪ್ಪ. ಇವರಿಬ್ಬರು ನನಗೆ ಸ್ಪೂರ್ತಿ.
ನಿಮ್ಮ ಕುಟುಂಬ ಮತ್ತು ಊರಿನವರ ಬೆಂಬಲ ನಿಮಗೆ ಹೇಗಿದೆ?
ನಾನು ದೊಡ್ಡ ಗಾಯಕ ಆಗಬೇಕು ಎನ್ನುವುದು ನನ್ನ ಕುಟುಂಬದವರ ಆಸೆ ಕೂಡ ಹೌದು. ಅನೇಕರು ನನಗೆ ಪ್ರೋತ್ಸಾಹಿಸುತ್ತಿದ್ದಾರೆ. ನಮ್ಮ ಊರಿನ ಸುತ್ತಮುತ್ತ ಕಾರ್ಯಕ್ರಮಗಳು ಇದ್ದಾಗ ನನ್ನನ್ನು ಹಾಡಲು ಆಹ್ವಾನಿಸುತ್ತಾರೆ.
ಹಾಡುಗಳನ್ನು ಕಲಿಯುವಾಗ ಏನಾದರೂ ಸವಾಲುಗಳನ್ನು ಎದುರಿಸಿದ್ದೀರಾ..?
ಗಾಯಕ ಆಗುವ ಕನಸು ಇದೆ ಅದಕ್ಕೆ ತಕ್ಕಂತೆ ಪ್ರಯತ್ನ ನಿರಂತರ ಮಾಡುತ್ತಿದ್ದೇನೆ. ನನ್ನ ಸರಿ ತಪ್ಪುಗಳನ್ನು ತಿದ್ದಲು ಗುರುಗಳು ಇಲ್ಲದಿರುವುದು ದೊಡ್ಡ ಸವಾಲಾಗಿದೆ.
ಯಾವ ಸಮಯದಲ್ಲಿ ಅಭ್ಯಾಸ ಮಾಡುತ್ತೀರಾ?
ನಾನು ಆಟೊ ಡ್ರೈವರ್ ಹಾಗೂ ಕೂಲಿ ಕಾರ್ಮಿಕ ಆಗಿರುವುದರಿಂದ ಕೆಲಸದ ಬಿಡುವಿನ ವೇಳೆಯಲ್ಲಿ ಅಭ್ಯಾಸ ಮಾಡುತ್ತಿರುತ್ತೇನೆ.
ನಿಮ್ಮ ನೆಚ್ಚಿನ ಗಾಯಕರು..?
ರಾಜುಕುಮಾರ್ ಸರ್, ರಾಜೇಶ್ ಕೃಷ್ಣನ್, ಎಸ್ ಬಿ ಬಾಲಸುಬ್ರಮಣ್ಯಂ, ಶ್ರೇಯಾ ಘೋಷಲ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.