ADVERTISEMENT

ರೈತರಲ್ಲಿ ಆತಂಕ, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಸಂತಸ: ಜೀವ್ನಾನಾ? ಏರ್‌ಪೋರ್ಟಾ?

ಬೆಂಗಳೂರು ಸಮೀಪ 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸರ್ಕಾರ ತೀರ್ಮಾನ

ಗುರು ಪಿ.ಎಸ್‌
Published 26 ಜುಲೈ 2025, 23:30 IST
Last Updated 26 ಜುಲೈ 2025, 23:30 IST
<div class="paragraphs"><p>ನಮ್‌ ಹೊಲದಲ್ಲಿ ಏರ್‌ಪೋರ್ಟ್‌ ಆಯ್ತದಾ? ಬಸವೇನಹಳ್ಳಿಯ ರೈತ ಗಂಗಾಧರಯ್ಯನವರಿಗೆ ಇದೇ ಚಿಂತೆ</p></div>

ನಮ್‌ ಹೊಲದಲ್ಲಿ ಏರ್‌ಪೋರ್ಟ್‌ ಆಯ್ತದಾ? ಬಸವೇನಹಳ್ಳಿಯ ರೈತ ಗಂಗಾಧರಯ್ಯನವರಿಗೆ ಇದೇ ಚಿಂತೆ

   
ಬೆಂಗಳೂರು ಸಮೀಪ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸಲು ಸರ್ಕಾರ ತೀರ್ಮಾನಿಸಿದೆ. ಇದಕ್ಕಾಗಿ ಮಾಗಡಿ ಮತ್ತು ಕನಕಪುರ ಸಮೀಪ ಆಯ್ಕೆ ಮಾಡಿದ ಸ್ಥಳವನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಉನ್ನತ ಮಟ್ಟದ ತಂಡವು ಪರಿಶೀಲಿಸಿದೆ. ಇದರಿಂದ ಈ ಭಾಗದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಆದರೆ, ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಖುಷಿಯಾಗಿದ್ದಾರೆ. ಪ್ರಜಾವಾಣಿಯ ಹಿರಿಯ ವರದಿಗಾರ ಈ ಸ್ಥಳಗಳಿಗೆ ಭೇಟಿ ನೀಡಿ ಸಿದ್ಧಪಡಿಸಿದ ಬರಹ...

ರಸ್ತೆ ಪಕ್ಕದ ಹೊಲದಲ್ಲಿ ಎತ್ತುಗಳು ಮೇಯುತ್ತಿದ್ದವು. ಚಡ್ಡಿ, ಬಿಳಿಯ ಬನಿಯನ್‌ ಧರಿಸಿ ಹೆಗಲ ಮೇಲೆ ಚೌಕಳಿ ಟವಲ್‌ ಹಾಕಿದ್ದ ರೈತರೊಬ್ಬರು ಕೆಲಸ ಮಾಡುತ್ತಿದ್ದರು. ಈ ಹೊಲವನ್ನು ತಲತಲಾಂತರಗಳಿಂದ ಉತ್ತು ಬಿತ್ತು ಬೆಳೆ ತೆಗೆದ ಕುರುಹುಗಳು ಢಾಳವಾಗಿ ಕಾಣಿಸುತ್ತಿದ್ದವು. ಈ ರೈತನನ್ನು ಮಾತನಾಡಿಸುವ ಸಲುವಾಗಿಯೇ ಹೊಲಕ್ಕೆ ಹೋದೆ. ಕೂಡಲೇ ಆತಂಕಕ್ಕೆ ಒಳಗಾದಂತೆ ಕಂಡುಬಂದ ಬಸವೇನಹಳ್ಳಿಯ ರೈತ ಗಂಗಾಧರಯ್ಯ ‘ನೀವು ಏರ್‌ಪೋರ್ಟ್‌ನವರಾ’ ಎಂದು ಕೇಳಿದರು. ನಾನು ನನ್ನ ಪರಿಚಯ ಮಾಡಿಕೊಂಡೆ. ಕೊಂಚ ಸಮಾಧಾನವಾದಂತೆ ಕಂಡುಬಂದರೂ, ‘ನಮ್‌ ವಲ್ದಲ್ಲಿ ಏರ್‌ಪೋರ್ಟ್‌ ಆಯ್ತದಾ’ ಎಂದು ದುಗುಡದಿಂದಲೇ ಕೇಳಿದರು. ‘ಇನ್ನೂ ಖಚಿತವಾಗಿಲ್ಲ. ಇಲ್ಲೇ ಆಗಬೇಕು ಅಂತ ನಿಮಗೆ ಆಸೆ ಇದೆಯೇ’ ಎಂದು ನಾನು ನಗುತ್ತಾ ಕೇಳುತ್ತಿದ್ದಂತೆ ಅವರು ಮುಖಕಿವುಚಿಕೊಂಡು ಸಿಟ್ಟಿನಲ್ಲೇ ನೋಡಿದವರು ‘ಯಾಕಪ್ಪ, ನಾವ್‌ ಬದ್ಕೋದು ನಿನ್ಗೆ ಇಷ್ಟ ಇಲ್ವಾ? ರಾಗಿ ಬೆಳೆಯೋದ್ರಲ್ಲಿ ಇಡೀ ಜಿಲ್ಲೆಗೇ ನಮ್ ತಾಲ್ಲೂಕ್‌ ನಂಬರ್‌ ಒನ್‌. ಅರ್ಧ ಬೆಂಗಳೂರನ್ನೇ ಸಾಕ್ತೀವಿ ಗೊತ್ತಾ’ ಎಂದು ಹೆಮ್ಮೆಯಿಂದ ಹೇಳಿದರು. ಕೂಡಲೇ ಏನನ್ನೋ ನೆನಪು ಮಾಡಿಕೊಂಡವರಂತೆ ‘ಆದ್ರೆ, ಇಲ್ಲಿ ಏರ್‌ಪೋರ್ಟ್‌ ಆದ ದಿನವೇ ರೈತ್ರು ಸತ್ವಿ ಅಂದ್ಕೊಳಿ’ ಎಂದು ಕಣ್ಣು ತುಂಬಿಕೊಂಡರು 45 ವರ್ಷದ ಈ ರೈತ.

ನಾನು ಮಾಗಡಿ ರಂಗಪ್ಪನಪಾಳ್ಯಕ್ಕೆ ಭೇಟಿ ಕೊಟ್ಟಾಗ ಜಯಮ್ಮ ಅವರು ಕೊಟ್ಟಿಗೆ ಸ್ವಚ್ಛ ಮಾಡುತ್ತಿದ್ದರು. ನನ್ನನ್ನು ನೋಡುತ್ತಿದ್ದಂತೆ ಕೆಲಸವನ್ನು ಅಷ್ಟಕ್ಕೇ ಬಿಟ್ಟು ದಡದಡನೆ ಓಡಿ ಬಂದರು. ನಾನು ಅವರನ್ನು ಮಾತನಾಡಿಸುವ ಮೊದಲೇ ‘ನಾವ್‌ ಭೂಮ್ತಾಯಿ ಮಕ್ಳು. ನಮ್ಗೆ ಭೂಮಿ ಬೇಕು. ನನಗೆ ಎಪ್ಪತ್ತೆಂಟು ವರ್ಸ. ಲೋನ್‌ ತಕ್ಕಂಡು ಅಸು ಕಟ್ಕೊಂಡು ವಲಕ್ಕೆ ಗೊಬ್ಬರ ಆಕ್ಕೊಂಡು ಯಂಗೋ ಜೀವ್ನಾ ಮಾಡ್ತೀವಿ. ಅದೂನು ಕಿತ್ಕಂಡ್‌ಬುಟ್ರೆ ನಮ್ ಮನೆ ಕತೆ ಏನಪ್ಪ? ಅಲ್ದೆ ಚಿಕ್ದಾಗಿ ಮುನಿಯಪ್ಪನ ಗುಡಿ ಕಟ್ಕೊಂಡೀವಿ, ನಮ್ ಹಿರೀಕರ ಗೋರಿಗಳೆಲ್ಲ ಇಲ್ಲೇ ಅವೆ. ಅವುಕ್ಕೆಲ್ಲ ಎಡೆಯಿಟ್ಟು ಪೂಜೆ ಮಾಡ್ಕೊಂಡೀರ್ತೀವಿ. ಈಗ ಭೂಮಿ ಬೇಕೆಂದ್ರೆ ನಾವ್ ಬಿಟ್ಕೊಡಲ್ಲ. ನಮ್ಮನ್ನ ಪೊಲೀಸ್‌ ಟೇಸನ್‌ಗೆ ಕರ್ಕೊಂಡು ಹೋಗ್ತಾರಾ ಹೋಗಲಿ, ಪರಪ್ಪನ ಜೈಲ್ಗೆ ಆಕ್ತಾರಾ, ಆಕಲಿ, ನಾನಂತೂ ಎದರಲ್ಲ’–ಹೀಗೆ ಒಂದೇ ಉಸಿರಲ್ಲಿ ತನ್ನೊಡಲ ಬೇಗುದಿಯನ್ನು ಹೊರ ಹಾಕಿದರು ಜಯಮ್ಮ.

ADVERTISEMENT
ಹಿಪ್ಪುನೇರಳೆ ಹೊಲದಲ್ಲಿ ಯುವ ರೈತ

ಕೆಂಪಚಿಕ್ಕನಹಳ್ಳಿಯ ನರಸಿಂಹಯ್ಯ ನಾಲ್ಕು ಹಸುಗಳನ್ನು ಸಾಕಿದ್ದಾರೆ. ದಿನಕ್ಕೆ 40 ಲೀಟರ್‌ ಹಾಲು ಕರೆಯುತ್ತಾರೆ. ಇವರ ಬಳಿ ಒಂದು ಎಕರೆ ಹೊಲವಿದ್ದು ಅದರಲ್ಲಿ ಅಡಿಕೆ ಗಿಡಗಳನ್ನು ಬೆಳೆಸಿದ್ದಾರೆ. ‘ಭೂಮಿ ಇದ್ರೆ ಸಾಯೋವರೆಗೂ ನಾನು, ನನ್‌ ಹೆಂಡ್ತಿ ಜೀವ್ನಾ ಮಾಡ್ಕೊಂಡಿರಬಹುದು. ನಮ್‌ ಭೂಮಿ ಕೇಳೋ ಬದಲು ಒಂದು ತೊಟ್ಟು ವಿಸ ಕೊಟ್ಟುಬುಟ್ರೆ ಒಳ್ಳೆದು’ ಎಂದು ಕಣ್ಣೀರು ಹಾಕಿದರು.

ಇದೇ ಊರಿನ ಸುಚಿಕರ ಅವರ ತಾಪತ್ರಯವೇ ಬೇರೆ. ತಾತ–ಮುತ್ತಾತರ ಕಾಲದಿಂದ ತಮ್ಮ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾರೆ. ಇವರ ಬಳಿ ಸರಿಯಾದ ದಾಖಲೆಗಳಿಲ್ಲ. ಹೀಗಾಗಿ ದಾಖಲೆಗಳು ಸರಿಯಿಲ್ಲ ಎಂದು ಪರಿಹಾರ ಕೊಡದೇ ಹೋದರೆ ಹೇಗೆ? ಎನ್ನುವ ದಿಗಿಲು ಇವರದು.

‘ಡ್ರೋನ್‌ ಕ್ಯಾಮ್ರಾ ಬುಟ್ಟಿದ್ರು, ಅಲ್ಲಲ್ಲಿ ಏನೇನೋ ಮಾರ್ಕ್‌ ಮಾಡಿದ್ರು, ಎಲ್ಲರೂ ಹಿಂದಿಲೀ ಮಾತಾಡ್ತಿದ್ರು. ನಾವು ಏನ್‌ ವಿಸಯ ಅಂತ ಕೇಳೋದ್ರೊಳಗೆ ಡುರ್‍ರ್ ಅಂತ ವೋಗೇಬುಟ್ರು’ ಎನ್ನುವ ಮೂಲಕ, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (ಎಎಐ) ಅಧಿಕಾರಿಗಳು ಬಂದು ಹೋದ ಮಾಹಿತಿ ಕೊಟ್ಟರು ಮರಿಕುಪ್ಪೆ ಚಿಕ್ಕಣ್ಣ.

ನೆಲಮಂಗಲದ ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರ ಭೇಟಿ ಮಾಡಲು ಅವರ ಕಚೇರಿಗೆ ಹೋದೆ. ಅದು ಹವಾನಿಯಂತ್ರಿತ ಕಚೇರಿ. ಹಳ್ಳಿಗಳಲ್ಲಿ ಓಡಾಡಿ ಸುಸ್ತಾಗಿದ್ದ ನನಗೆ ಆ ಕೋಣೆಯೊಳಗೆ ಕಾಲಿಡುತ್ತಿದ್ದಂತೆ ಹಿತವೆನಿಸಿತು. ಬಿಳಿ ಬಣ್ಣದ ಉಡುಪಿನಲ್ಲಿ ಕಂಗೊಳಿಸುತ್ತಿದ್ದ ಉದ್ಯಮಿ ಆತ್ಮೀಯವಾಗಿ ಬರಮಾಡಿಕೊಂಡರು. ಆ ಕ್ಷಣಕ್ಕೆ ಹಳ್ಳಿಗಳಲ್ಲಿ ರೈತರ ಮುಖದಲ್ಲಿ ಎದ್ದು ಕಾಣಿಸುತ್ತಿದ್ದ ಆತಂಕ ಕಣ್ಮುಂದೆ ಬಂದಿತು.

ನೆಲಮಂಗಲ ಭಾಗಕ್ಕೇ ಏರ್‌ಪೋರ್ಟ್‌ ಏಕೆ ಬರಬೇಕು ಎನ್ನುವುದನ್ನು ಪ್ರತಿಪಾದಿಸುತ್ತಾ, ‘ಬೆಂಗಳೂರಿಗೆ ನೆಲಮಂಗಲ ಈಗ ಹೃದಯಭಾಗವಿದ್ದಂತೆ. ಕರ್ನಾಟಕದ ಬಹುತೇಕ ಜಿಲ್ಲೆಗಳ ಜನರು ಬೆಂಗಳೂರು ಪ್ರವೇಶಿಸುವುದು ನೆಲಮಂಗಲದ ಮೂಲಕವೇ. ಹಲವು ರಾಷ್ಟ್ರೀಯ ಹೆದ್ದಾರಿಗಳು ಈ ಪ್ರದೇಶದಲ್ಲಿವೆ. ಆದರೆ, ಕನಕಪುರ ರಸ್ತೆಗೆ ಸಂಪರ್ಕ ಅಷ್ಟೊಂದು ಉತ್ತಮವಾಗಿಲ್ಲ’ ಎಂದರು. ಇಷ್ಟಕ್ಕೇ ಅವರ ಪ್ರತಿಪಾದನೆ ನಿಲ್ಲಲಿಲ್ಲ. ‘ಈ ಭಾಗದ ರೈತರಿಗೆ ನಾನು ಸಲಹೆ ಕೊಡುತ್ತಿದ್ದೇನೆ, ಆದಷ್ಟು ಬೇಗ ಎನ್‌ಎ (ಕೃಷಿಯೇತರ ಭೂಮಿ) ಮಾಡಿಸಿಕೊಳ್ಳಿ ಎಂದು. ಏಕೆಂದರೆ, ಈ ಭಾಗದಲ್ಲಿ ಏರ್‌ಪೋರ್ಟ್‌ ಬಂದರೆ, ರೈತರಿಗೆ ಕಂದಾಯ ಭೂಮಿ ಆಧಾರದ ಮೇಲೆ ಪರಿಹಾರ ಕೊಡುತ್ತಾರೆ. ಆಗ ಪರಿಹಾರ ಮೊತ್ತ ಕಡಿಮೆಯಾಗುತ್ತದೆ. ಕೃಷಿಯೇತರ ಭೂಮಿಯಾಗಿ ಪರಿವರ್ತನೆ ಮಾಡಿಸಿದರೆ ಪರಿಹಾರ ಜಾಸ್ತಿ ಬರುತ್ತದೆ’–ಹೀಗೆ ಸಾಗಿತ್ತು ಅವರ ಮಾತಿನ ವರಸೆ!

ಮುಂದೆ ಏನಾಗುತ್ತೋ ಎಂಬ ದುಗುಡದಲ್ಲಿ ಬಸವೇನಹಳ್ಳಿಯ ಗಂಗಯ್ಯ

ರಿಯಲ್‌ ಎಸ್ಟೇಟ್‌ ಉದ್ಯಮಿಯ ಮಾತಿಗೆ ಪೂರಕ ಎನ್ನುವಂತಹ ಜಾಹೀರಾತುಗಳು ಸೋಷಿಯಲ್‌ ಮೀಡಿಯಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದವು. ‘ಬೆಂಗಳೂರಿನ ಸೆಕೆಂಡ್‌ ಏರ್‌ಪೋರ್ಟ್‌ ಈ ಜಾಗದಲ್ಲೇ ಬರೋದು. ನೋಡಿ, ಈ ಲೇಔಟ್‌ನಿಂದ ಹತ್ತೇ ಕಿಲೋಮೀಟರ್‌ ದೂರದಲ್ಲಿ ಹೊಸ ಏರ್‌ಪೋರ್ಟ್‌ ಆಗೋದು ಗ್ಯಾರಂಟಿ…’

‘ಇಲ್ಲಿ ನೀವು ಸೈಟ್‌ ತಗೊಂಡ್ರೆ ಎರಡೇ ವರ್ಷದಲ್ಲಿ ರೇಟ್‌ ಡಬಲ್‌ ಆಗೋದು ಕನ್ಫರ್ಮ್‌. ಇಲ್ಲಿ ಭೂಮಿಗೆ ಚಿನ್ನ, ಚಿನ್ನದ ಬೆಲೆ ಬರುತ್ತೆ. ಈಗಲೇ ಈ ನಂಬರ್‌ಗೆ ಕಾಲ್ ಮಾಡಿ, ಸೈಟ್ ಬುಕ್‌ ಮಾಡಿ…’

ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸೂಕ್ತ ಎನ್ನಬಹುದಾದ ಮೂರು ಸ್ಥಳಗಳಲ್ಲಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (ಎಎಐ) ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ನಾನು ಕುಣಿಗಲ್ ರಸ್ತೆಯ ನೆಲಮಂಗಲ ಬಳಿಯ ಸೋಲೂರು ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ಸುತ್ತಾಡಿದೆ. ಮಾಗಡಿ ತಾಲ್ಲೂಕಿಗೆ ಸೇರುವ ಈ ಹೋಬಳಿಯ ಹಳ್ಳಿಗಳಲ್ಲಿ ವಿಮಾನ ನಿಲ್ದಾಣ ನಿರ್ಮಾಣ ವಿಷಯವೇ ಚರ್ಚೆಯ ವಸ್ತು. ಬಸವೇನಹಳ್ಳಿ ಅಕ್ಕಪಕ್ಕ ಇರುವ ಕೆಂಪಚಿಕ್ಕನಹಳ್ಳಿ, ಮರಿಕುಪ್ಪೆ, ಮಾಗಡಿ ರಂಗಪ್ಪನಪಾಳ್ಯದ ಗ್ರಾಮಗಳಿಗೆ ಭೇಟಿ ಕೊಟ್ಟಾಗ ಇದು ಖಾತರಿ ಆಯಿತು.

***

ಕನಕಪುರ ರಸ್ತೆಯ ಕಗ್ಗಲೀಪುರ ಸಮೀಪ ಮತ್ತು ಹಾರೋಹಳ್ಳಿ ಸುತ್ತಮುತ್ತಲಿನ ಹಳ್ಳಿಗಳಲ್ಲಿಯೂ ಎರಡನೇ ಏರ್‌ಪೋರ್ಟ್‌ ನಿರ್ಮಾಣ ವಿಚಾರ ಜೋರಾಗಿಯೇ ಚರ್ಚೆಯಲ್ಲಿದೆ. ಕೆಂಪು ಮುಕ್ಕಳಿಸುತ್ತಿದ್ದ ಹೊಲದಲ್ಲಿ ಹಿಪ್ಪುನೇರಳೆ ಗಿಡ ಬೆಳೆದಿತ್ತು. ಯುವ ರೈತನೊಬ್ಬ ಬುಟ್ಟಿಯಲ್ಲಿ ಗೊಬ್ಬರವನ್ನು ಹೊತ್ತು ಸಾಗಿಸುತ್ತಿದ್ದ. ಮುಂದೆ ಸಾಗಿದಾಗ ಹಾರೋಹಳ್ಳಿ ಬಳಿಯ ಕಿರಣಗೇರಾದ ನಾಗವೇಣಿ ಸಿಕ್ಕರು.

‘ಏರ್‌ಪೋರ್ಟ್ ಆದ್ರೆ ನಮ್‌ ಮಕ್ಕಳಿಗೆ ಕೆಲ್ಸ ಸಿಕ್ಕುತ್ತೆ ಅಂತಾರೆ. ಕೆಲ್ಸವೂ ಇಲ್ಲ, ಏನೂ ಇಲ್ಲ. ದುಡ್ಡು ಕೈಗೆ ಬಂದ್‌ ನಮ್‌ ಮಕ್ಳು ಪೋಲಿ ಬೀಳ್ತಾವೆ ಅಸ್ಟೆ. ಇಲ್ಲೊಂದ್‌ ದೊಡ್‌ ಆಸ್ಪತ್ರೆ ಆಯ್ತು. ಸ್ಥಳೀಕರಿಗೆ ಕೆಲ್ಸ ಕೊಡ್ತೀವಿ ಅಂದ್ರು. ಈ ಅಕ್ಕಪಕ್ಕ ಹಳ್ಳಿಗಳ ಒಬ್ರಿಗೂ ಅಲ್ಲಿ ಕೆಲ್ಸ ಕೊಡ್ಲಿಲ್ಲ. ಇನ್ನು, ದೇವನಹಳ್ಳಿ ಏರ್‌ಪೋರ್ಟ್‌ಗೆ ಭೂಮಿ ಕೊಟ್ಟವರ ಕತೆ ಏನಾಗದೆ ಅಂತ ನಮ್‌ ಕಣ್‌ ಮುಂದೆ ಅದೆ. ನಮ್‌ ಭೂಮಿನ ನಾವು ಕೊಡಲ್ಲ’ ಎಂದು ಕಡ್ಡಿಮುರಿದಂತೆ ನಾಗವೇಣಿ ಹೇಳಿದರು.

ಮಾಗಡಿ ತಾಲ್ಲೂಕು ಸೋಲೂರು ಹೋಬಳಿಯಲ್ಲೂ ವಿಮಾನ ನಿಲ್ದಾಣ ನಿರ್ಮಾಣದ್ದೇ ಚರ್ಚೆ...

ದಾರಿ ಮಧ್ಯದಲ್ಲಿ ಕಟ್ಟೆ ಮೇಲೆ ಕುಳಿತು ಹರಟುತ್ತಿದ್ದ ರೈತರು ಸಿಕ್ಕರು. ಅವರಲ್ಲಿ ಒಬ್ಬರು ತಮ್ಮ ಬಳಿ ಒಂದು ಎಕರೆ ಹೊಲ ಇರುವುದಾಗಿ ಹೇಳಿ, ‘ಒಂದ್‌ ಕೋಟಿ ಕೊಟ್ರೆ ವಲ ಮಾರ್ತೀನಿ. ಬಂದ್‌ ದುಡ್ಡಲ್ಲಿ ಮಗಳ ಮದ್ವೆ ಮಾಡ್ತೀನಿ. ಆಮ್ಯಾಲೆ ಬಾಡ್ಗೆ ಮನೆ ಮಾಡ್ಕಂಡು ಜೀವ್ನಾ ಸಾಗಿಸ್ತೀನಿ’ ಎಂದರು. ಉಳಿದವರು ‘ನಮ್ಗೇನು ಅರ್ಜೆಂಟ್‌ ಇಲ್ಲ. ಒಳ್ಳೆ ರೇಟ್‌ ಸಿಕ್ರೆ ಆಗ ಯೋಚ್ನೆ ಮಾಡ್ತೀವಿ’ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದರು.

ಬಾನು ಬಣ್ಣ ಬದಲಿಸಿತ್ತು. ನೇಸರ ಇಂಚಿಂಚಾಗಿ ಮರೆಯಾಗುತ್ತಿದ್ದ. ನಾನು ಕನಕಪುರ ರಸ್ತೆಯಲ್ಲಿನ ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರೊಂದಿಗೆ ಮಾತನಾಡಲು ಯತ್ನಿಸಿದಾಗ ಅವರು, ಜಯನಗರದ ಪ್ರತಿಷ್ಠಿತ ಕ್ಲಬ್‌ವೊಂದಕ್ಕೆ ಬರಲು ಆಹ್ವಾನ ನೀಡಿದರು. ಅಲ್ಲಿಗೆ ಹೋದಾಗ ಕತ್ತಲಾಗಿತ್ತು. ಕ್ಲಬ್‌ ಮುಂದಿನ ಕಾರಂಜಿ ಎದುರು ಅವರು ಕುಳಿತಿದ್ದರು. ಹಿನ್ನೆಲೆಯಲ್ಲಿ ಇಂಪಾದ ಸಂಗೀತ. ಆಹ್ಲಾದಕರ ವಾತಾವರಣ. ಮತ್ತೆ ಹಳ್ಳಿಗಳಲ್ಲಿ ಆತಂಕದ ಮುಖ ಹೊತ್ತ ರೈತರು ನೆನಪಾದರು.

ಉದ್ಯಮಿ ಮಾತು ಶುರುವಿಟ್ಟುಕೊಂಡವರು, ‘ನೆಲಮಂಗಲದಲ್ಲಿ ಏರ್‌ಪೋರ್ಟ್‌ ಮಾಡಿದರೆ ಎರಡೂ ಏರ್‌ಪೋರ್ಟ್‌ ಬೆಂಗಳೂರು ಉತ್ತರಕ್ಕೇ ಮಾಡಿದಂತಾಗುತ್ತದೆ. ಅದರ ಬದಲು, ಕನಕಪುರ ರಸ್ತೆಯೇ ಸೂಕ್ತ. ನೈಸ್‌ ರೋಡ್‌ ಇರುವುದರಿಂದ ಕನಕಪುರಕ್ಕೆ ಸಂಪರ್ಕ ಕಷ್ಟ ಆಗಲ್ಲ. ಇದೇ ಭಾಗದಲ್ಲಿ ಎಲೆಕ್ಟ್ರಾನಿಕ್‌ ಸಿಟಿ, ವೈಟ್‌ಫೀಲ್ಡ್‌ನಂತಹ ಐಟಿ ಹಬ್‌ ಇರೋದ್ರಿಂದ ಹೆಚ್ಚು ಬಳಕೆಯೂ ಆಗುತ್ತೆ. ಜೊತೆಗೆ, ಈ ಭಾಗದಲ್ಲಿ ರೈತರು ಹಣ್ಣು, ತರಕಾರಿ ಹೆಚ್ಚು ಬೆಳೆಯೋದರಿಂದ ಅವುಗಳ ರಫ್ತಿಗೂ ಸಹಾಯವಾಗುತ್ತದೆ’ ಎಂದರು.

‘ಕೃಷಿ ಭೂಮಿಯನ್ನೇ ಕಿತ್ತುಕೊಂಡ ಮೇಲೆ ಹಣ್ಣು, ತರಕಾರಿ ಎಲ್ಲಿಂದ ರಫ್ತು ಮಾಡುತ್ತೀರಿ’ ನಾನು ಕೇಳಿದೆ. ‘ಎಲ್ಲ ಭೂಮಿಯೇನೂ ಬೇಕಾಗುವುದಿಲ್ಲ. ಏರ್‌ಪೋರ್ಟ್‌ ಪ್ರದೇಶ ಹೊರತುಪಡಿಸಿ, ಅದರ ಸುತ್ತಮುತ್ತ ಇರುವ ರೈತರಿಗೆ ಅನುಕೂಲ ಆಗುತ್ತೆ’ ಎಂದು ಸಮರ್ಥಿಸಿದರು.

ಕನಕಪುರ ರಸ್ತೆ ಪ್ರದೇಶದಲ್ಲಿಯೇ ಆನೆ ಕಾರಿಡಾರ್‌ ಹಾದು ಹೋಗುತ್ತದೆ. ಸಾಕಷ್ಟು ಅರಣ್ಯ ಪ್ರದೇಶವೂ ಇದೆ. ಇಲ್ಲಿ ವಿಮಾನ ನಿಲ್ದಾಣವಾದರೆ ಪ್ರಾಣಿಪಕ್ಷಿಗಳಿಗೂ ತೊಂದರೆ ಎಂಬ ಮಾತುಗಳ ನಡುವೆಯೇ, ಈ ಪ್ರದೇಶದಲ್ಲಿ ಭೂಮಿ ಬೆಲೆ ಎಕರೆಗೆ ಎಷ್ಟು ಹೆಚ್ಚಾಗಿದೆ ಎಂಬ ಚರ್ಚೆಯನ್ನೂ ನಡೆಸಿದೆವು. ‘ಮುಖ್ಯರಸ್ತೆ ಬದಿಯಲ್ಲಿನ ಜಮೀನಿಗೆ ಎಕರೆಗೆ ಮೂರುವರೆ ಕೋಟಿಯಿಂದ ನಾಲ್ಕು ಕೋಟಿ ರೂಪಾಯಿ’ ಎಂದು ಮುಖ ಅರಳಿಸಿದರು.

ಹೊಲಗಳಲ್ಲೇ ಇದೆ ಪೂರ್ವಜರ ಸಮಾಧಿ 

ರೈತರು–ಮಹಿಳೆಯರ ಆತಂಕ, ದುಃಖ, ಅಸಹಾಯಕತೆಯನ್ನೆಲ್ಲ ಕಂಡು, ಕೇಳಿಸಿಕೊಂಡ ನನಗೆ ಮಾಗಡಿ ರಂಗಪ್ಪನಪಾಳ್ಯದಲ್ಲಿ ಹತ್ತು ವರ್ಷದ ಬಾಲಕ ಎದುರಾದ. ಈತ ನಮ್ಮ ಮಾತುಕತೆಯನ್ನು ಕೇಳಿಸಿಕೊಂಡಿದ್ದ. ನಾನು ಈತನನ್ನು ಅಲ್ಲೆಲ್ಲ ನೋಡಿದ್ದೆ. ಈ ಕಾರಣದಿಂದಲೇ ‘ಇಲ್ಲೇ ಏರ್‌ಪೋರ್ಟ್‌ ಬಂದ್ರೆ ನಿನಗೆ ಖುಷಿ ಆಗುತ್ತಾ?, ತೀರಾ ಹತ್ತಿರದಿಂದಲೇ ಏರೋಪ್ಲೇನ್‌ಗಳನ್ನೆಲ್ಲ ನೋಡಬಹುದು ಅಲ್ವಾ’ ಎಂದೆ. ಆಗ ಆ ಬಾಲಕ ‘ಏರ್‌ಪೋರ್ಟ್‌ ಇಲ್ಲೇ ಆಗಬಹುದು. ಆದರೆ, ನಾವೇ ಇಲ್ಲಿ ಇರಲ್ವಲ್ಲ, ಆಗ ಏನ್ ನೋಡೋದು’ ಎಂದ! ನಾನು ಮೌನಕ್ಕೆ ಜಾರಿದೆ.

‘ಏರ್‌ಪೋರ್ಟ್‌ ಬೇಕೋ, ಬೇಡವೋ ಅಂತ ಕೇಳೋಕೆ ಮೀಡಿಯಾದವ್ರು ಬಂದಿದ್ದಾರೆ. ನೀನು ಬಾ, ಅಕ್ಕಪಕ್ಕದ ಮನೆಯವರನ್ನೂ ಕರ್ಕೊಂಡು ಬಾ’ ಎಂದು ಬಸವೇನಹಳ್ಳಿಯ ಗೋವಿಂದರಾಜ್‌ ಕರೆ ಮಾಡುತ್ತಿದ್ದಂತೆ, ಹತ್ತಾರು ಜನ ಸೇರಿಯೇ ಬಿಟ್ಟರು. ಈ ಗುಂಪಿನಲ್ಲಿದ್ದ ಸುಮಾರು 70 ವರ್ಷದ ಗಂಗಯ್ಯ, ‘ಸರ್ಕಾರದೋರು ದುಡ್‌ ಕೊಡ್ಬೌದು. ಆದ್ರೆ, ಆ ದುಡ್‌ ಕೊನೇತಂಕ ಉಳಿತದಾ? ಆದ್ರೆ ಭೂಮಿ ಉಳಿತದೆ. ಇಮಾನ ನಿಲ್ದಾಣನಾ ಬೇಕಾದ್ರೆ ಬ್ಯಾರೆ ಎಲ್ಲಾದರೂ ಮಾಡ್ಕೊಳ್ಳಿ, ನಾನು ಇದೇ ಊರಲ್ಲಿ ಉಟ್ಟೀವ್ನಿ, ಇದೇ ಊರಲ್ಲೇ ಸಾಯ್ಬೇಕು’ ಎಂದು ನಡುಗುವ ದನಿಯಲ್ಲೂ ದೃಢವಾಗಿಯೇ ಹೇಳಿದರು. ತಮ್ಮ ಸುಕ್ಕುಗಟ್ಟಿದ ಕೈಯಲ್ಲಿ ನನ್ನ ಕೈಯನ್ನ ಒತ್ತಿ ಹಿಡಿದು, ಬಾಗುವಂತೆ ಕಣ್ಸನ್ನೆ ಮಾಡಿ, ವಿನಂತಿ ದನಿಯಲ್ಲಿ ‘ಯಂಗಾರ ಮಾಡಿ ಆ ಇಮಾನ ನಿಲ್ದಾಣ ನಮ್ ಕಡೆ ಬರದಂಗ್ ಮಾಡು ಮಗನೆ’ ಎಂದರು. ನನಗೆ ಅವರ ಕಳೆಗುಂದಿದ ಮುಖವನ್ನು ನೋಡಲು ಧೈರ್ಯವೇ ಸಾಲಲಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.