ADVERTISEMENT

ಸುಡುಗಾಡು ಸಿದ್ಧರ ಪುಸ್ತಕ ಪ್ರೀತಿ: ಗುಡಿಸಲಿನಲ್ಲಿ ಪುಟ್ಟ ಗ್ರಂಥಾಲಯ!

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 5:15 IST
Last Updated 6 ಫೆಬ್ರುವರಿ 2026, 5:15 IST
<div class="paragraphs"><p>ಹಾವೇರಿಯ ನಾಗೇಂದ್ರಮಟ್ಟಿ ಬಳಿಯ ಶಾಂತಿನಗರದಲ್ಲಿರುವ ಸುಡುಗಾಡು ಸಿದ್ಧರ ಕಾಲೊನಿಯಲ್ಲಿರುವ ಗುಡಿಸಲಿನಲ್ಲಿ&nbsp;&nbsp;‘ಮನೆಗೊಂದು ಗ್ರಂಥಾಲಯ’ ಯೋಜನೆಯಡಿ ಗ್ರಂಥಾಲಯ.</p></div>

ಹಾವೇರಿಯ ನಾಗೇಂದ್ರಮಟ್ಟಿ ಬಳಿಯ ಶಾಂತಿನಗರದಲ್ಲಿರುವ ಸುಡುಗಾಡು ಸಿದ್ಧರ ಕಾಲೊನಿಯಲ್ಲಿರುವ ಗುಡಿಸಲಿನಲ್ಲಿ  ‘ಮನೆಗೊಂದು ಗ್ರಂಥಾಲಯ’ ಯೋಜನೆಯಡಿ ಗ್ರಂಥಾಲಯ.

   

‌ವಿಬಿನ್ನ ಸಾಂಸ್ಕೃತಿಕ ಸೊಗಡಿನ ನೆಲೆಯನ್ನು ಹೊಂದಿರುವ ಸುಡುಗಾಡು ಸಿದ್ದರು ಚಮತ್ಕಾರದ ಆಟಗಳಿಗೆ ಪ್ರಸಿದ್ಧಿ ಪಡೆದಿದ್ದಾರೆ. ಇದೀಗ ಇವರ ಗುಡಿಸಲುಗಳಲ್ಲಿ ಅಕ್ಷರ ಕ್ರಾಂತಿ ಮೊಳಗಿದೆ.

ಸುಡುಗಾಡು ಸಿದ್ಧರು ರಾಜ್ಯದ ಅಲೆಮಾರಿ ಸಮುದಾಯವಾಗಿದೆ. ಪುರಾತನ ಕಾಲದಿಂದಲೂ ವೃತ್ತಿಯಲ್ಲಿ ಸ್ಮಶಾನ ಕಾಯುವುದು, ಚಮತ್ಕಾರದ ಆಟಗಳಿಗೆ ಸುಡುಗಾಡು ಖ್ಯಾತರಾಗಿದ್ದಾರೆ. 

ADVERTISEMENT

ಮುಖಕ್ಕೆ ಕುಂಕುಮ ಮತ್ತು ವಿಭೂತಿ ಬಳಿದುಕೊಂಡು, ಲಿಂಗದಕಾಯಿ, ರುದ್ರಾಕ್ಷಿ ಮಾಲೆ, ತಲೆಗೆ ಸುತ್ತಿರುವ ರುಮಾಲಿಗೆ ಮುತ್ತಿನ ಮಣಿಗಳ ಹಾರದಿಂದ ಸಿಂಗಾರ, ತುದಿಯಲ್ಲಿ ನವಿಲುಗರಿಗಳ ಅಲಂಕಾರ ಮಾಡಿಕೊಂಡು ಬಣ್ಣದ ಬಟ್ಟೆಗಳಿಂದ ಮಾಡಿದ ಪೋಷಾಕು ತೊಡುತ್ತಾರೆ.

ಚಮತ್ಕಾರದ ಆಟಗಳಲ್ಲಿ (ಮೋಡಿ) ಕೊಬ್ಬರಿಯನ್ನು ಮಾತನಾಡಿಸುವುದು, ಕಲ್ಲುಗಳನ್ನು ನುಂಗಿ ಹೊರ ತೆಗೆಯುವುದು, ಜೋಳಿಗೆಯಿಂದ ಆಗಾಗ ವಿಧವಿಧ ಗೊಂಬೆಗಳನ್ನು ಹೊರತೆಗೆದು ಮಕ್ಕಳನ್ನು ಆಕರ್ಷಿಸುವುದು. ಹಾವು, ಚೇಳು, ಕಪ್ಪೆಗಳನ್ನು ಮಾಯ ಮಾಡುವುದು,  ಆಗಾಗ ನಗೆ ಚಟಾಕಿ ಸಿಡಿಸಿ ಜನರನ್ನು ರಂಜಿಸುವರು.

ಜನರ ಕೊಡುವ ಹಣ, ಕಾಳು ಕಡ್ಡಿಗಳ ಮೂಲಕ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ, ಊರಿನ ಹೊರ ಭಾಗದಲ್ಲಿ ಟೆಂಟ್‌ಗಳನ್ನು ಹಾಕಿಕೊಂಡು ಕೆಲ ದಿನಗಳು ಮಾತ್ರ ಅಲ್ಲಿದ್ದು ನಂತರ ಬೇರೆ ಕಡೆಗೆ ತೆರಳುತ್ತಾರೆ. ಈ ರೀತಿ ಅಲೆಮಾರಿ ಜೀವನ ನಡೆಸುವ ಸುಡುಗಾಡು ಸಿದ್ದರು ಪರಿಶಿಷ್ಟ ಜಾತಿಗೆ ಸೇರಿದರೂ ಈಗಲೂ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. 

ಸುಡುಗಾಡು ಸಿದ್ಧರ ಸಮುದಾಯದ ವ್ಯಕ್ತಿ (ಚಿತ್ರ: ಪ್ರಕಾಶ ಕಂದಕೂರ)

ಮಧ್ಯ ಕರ್ನಾಟಕ ಭಾಗದಲ್ಲಿ ಸುಡುಗಾಡು ಸಿದ್ದರು ಕಾಣಸಿಗುತ್ತಾರೆ. ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಹಾವೇರಿ, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಈ ಸಮುದಾಯದ ನಂಟಿದೆ. ಶಿಕ್ಷಣದಿಂದ ದೂರವೇ ಇರುವ ಸಿದ್ಧರ ಸಮುದಾಯಕ್ಕೆ ಕಳೆದೆರಡು ದಶಕಗಳಿಂದ ಅವರ ಟೆಂಟ್‌ಗಳಲ್ಲಿ ಸಾಕ್ಷರತೆ ಯೋಜನೆ ಅಡಿ ಸರ್ಕಾರ ಶಿಕ್ಷಣ ಕೊಡುವ ಕೆಲಸ ಮಾಡಿದೆ. 

ಇದೀಗ ಅವರ ಟೆಂಟ್‌ಗಳಿಗೂ ಪುಟ್ಟ ಪುಟ್ಟ ಗ್ರಂಥಾಲಯಗಳು ಲಗ್ಗೆ ಇಟ್ಟಿವೆ. 

ಜನರಲ್ಲಿ ಓದಿನ ಹವ್ಯಾಸ ಹೆಚ್ಚಿಸುವ ಹಾಗೂ ಪುಸ್ತಕಗಳ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಹಮ್ಮಿಕೊಂಡಿರುವ ‘ಮನೆಗೊಂದು ಗ್ರಂಥಾಲಯ’ ಯೋಜನೆಯಡಿ ಹಾವೇರಿ ನಗರದ ಹೊರ ವಲಯದಲ್ಲಿನ ಸುಡುಗಾಡು ಸಿದ್ಧರ ಟೆಂಟ್‌ಗಳಲ್ಲಿ ಪುಟ್ಟ ಪುಟ್ಟ ಗ್ರಂಥಾಲಯಗಳನ್ನು ಆರಂಭಿಸಲಾಗಿದೆ.

ನಾಗೇಂದ್ರಮಟ್ಟಿ ಬಳಿಯ ಶಾಂತಿನಗರದಲ್ಲಿರುವ ಸುಡುಗಾಡು ಸಿದ್ಧರ ಕಾಲೊನಿಯಲ್ಲಿರುವ ಗುಡಿಸಲಿನಲ್ಲಿ ಒಂದು ಗ್ರಂಥಾಲಯ ಕೆಲ ವರ್ಷಗಳ ಹಿಂದೆ ಆರಂಭವಾಗಿತ್ತು. ಮಂಜುನಾಥ ನಗರದಲ್ಲಿರುವ ವೈ.ಬಿ. ಆಲದಕಟ್ಟಿ ಅವರ ಮನೆಯಲ್ಲಿ ಎರಡನೇ ಗ್ರಂಥಾಲಯ ಪ್ರಾರಂಭ ಮಾಡಲಾಗಿದೆ. ಈ ಮೂಲಕ ಸಿದ್ದರನ್ನು ಶೈಕ್ಷಣಿಕವಾಗಿ ಅಭಿವೃದ್ದಿಗೊಳಿಸುವುದು ಕನ್ನಡ ಪುಸ್ತಕ ಪ್ರಾಧಿಕಾರದ ಮುಖ್ಯ ಉದ್ದೇಶವಾಗಿದೆ.

ಈ ಭಾಗದಲ್ಲಿ ಸುಗಾಡು ಸಿದ್ದರ ಹತ್ತಾರ ಮಕ್ಕಳು ಶಾಲಾ–ಕಾಲೇಜಿಗೆ ಹೋಗುತ್ತಾರೆ. ಈ ಹಿನ್ನೆಲೆಯಲ್ಲಿ ಶಾಲಾ– ಕಾಲೇಜು ಮಕ್ಕಳಿಗೆ ಬೇಕಾಗುವ ಪಠ್ಯ ಪುಸ್ತಕಗಳು, ಕತೆ, ಕವನ, ಕಾದಂಬರಿಗಳು, ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳು ಹಾಗೂ ಸುಡುಗಾಡು ಸಿದ್ಧರ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ಪುಸ್ತಕಗಳು ಟೆಂಟ್‌ಗಳಲ್ಲಿರುವ ಪುಸ್ತಕಾಲಯದಲ್ಲಿ ಸಿಗುತ್ತವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸುಡುಗಾಡು ಸಿದ್ಧರಿಗಾಗಿ ಪುಸ್ತಕ ಪ್ರಾಧಿಕಾರದ ಗ್ರಂಥಾಲಯವನ್ನು ಗುಡಿಸಲಿನಲ್ಲಿ ಆರಂಭಿಸಿದ್ದು ಅತ್ಯಂತ ಕ್ರಾಂತಿಕಾರಿಕ ಹೆಜ್ಜೆ.
ಲಿಂಗಯ್ಯ ಹಿರೇಮಠ,  ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.