
ಹೊಸ ರೆನೊ ಡಸ್ಟರ್
ಹೊಸ ವರ್ಷದ ಆಗಮನವಾದಂತೆಯೇ ವಾಹನ ಪ್ರೇಮಿಗಳಲ್ಲಿ ಭಾರತೀಯ ಮಾರುಕಟ್ಟೆ ಲಗ್ಗೆ ಇಡಲಿರುವ ನೂತನ ಕಾರುಗಳು ಯಾವುವು ಎಂಬ ಕಾತರ ಮೂಡಿವೆ. ಎಂದಿನಂತೆ ಜನಪ್ರಿಯ ಸಂಸ್ಥೆಗಳಾದ ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಟಾಟಾ ಮೋಟಾರ್ಸ್ ಹಾಗೂ ಮಾರುತಿ ಸುಜುಕಿ ಹೊಸತನದೊಂದಿಗೆ ಆಗಮಿಸುವ ನಿರೀಕ್ಷೆ ಇದೆ. ಮಾರುತಿ ಸುಜಿಕಿಯ ಹೊಸ ವಿದ್ಯುತ್ ಚಾಲಿತ ಕಾರನ್ನು ನಿರೀಕ್ಷೆ ಮಾಡಲಾಗುತ್ತಿದೆ.
ಟಾಟಾ ಹ್ಯಾರಿಯರ್, ಸಫಾರಿ (ಪೆಟ್ರೋಲ್)
ಹೊಸ ಹ್ಯಾರಿಯರ್ ಪೆಟ್ರೋಲ್ ಬೆಲೆ ₹13 ಲಕ್ಷದಿಂದ ₹24.50 ಲಕ್ಷ ಮತ್ತು ಸಫಾರಿ ಪೆಟ್ರೋಲ್ ಬೆಲೆ ₹14 ಲಕ್ಷದಿಂದ ₹25.50 ಲಕ್ಷ ಇರುವ ಸಾಧ್ಯತೆಯಿದೆ. ಶೀಘ್ರದಲ್ಲೇ ಈ ಕಾರುಗಳನ್ನು ನಿರೀಕ್ಷೆ ಮಾಡಬಹುದಾಗಿದೆ. ಹೊಸ ಸಿಯಾರಾದಲ್ಲಿರುವ 1.5 ಲೀಟರ್ 'ಹೈಪರಿಯನ್' ಎಂಜಿನ್ ಆಳವಡಿಸಲಾಗುವುದು. ಇದು 170 ಅಶ್ವಶಕ್ತಿ ಹಾಗೂ 280 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 6 ಸ್ಪೀಡ್ ಮ್ಯಾನುಯಲ್ ಹಾಗೂ 6 ಸ್ಪೀಡ್ ಆಟೋಮ್ಯಾಟಿಕ್ ಗಿಯರ್ ಬಾಕ್ಸ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. 14.5 ಇಂಚುಗಳ ಕ್ಯೂಎಲ್‌ಇಡಿ ಟಚ್‌ಸ್ಕ್ರೀನ್ ಪ್ರಮುಖ ಆಕರ್ಷಣೆಯಾಗಲಿದೆ.
ಟಾಟಾ ಪಂಚ್ ಫೇಸ್‌ಲಿಫ್ಟ್
ಹೊಸ ಅಂದದೊಂದಿಗೆ ಟಾಟಾ ಪಂಚ್ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗುತ್ತಿದೆ. ಇದರ ಬೆಲೆ ₹6 ಲಕ್ಷದಿಂದ ₹9 ಲಕ್ಷಗಳ ಮಧ್ಯೆ ಇರಬಹುದು ಎಂದು ಅಂದಾಜಿಸಲಾಗಿದೆ. ನವೀಕೃತ ನೋಟಕ್ಕಾಗಿ ಪಂಚ್ ಇವಿ ಕಾರಿನ ಕೆಲವು ಅಂಶಗಳನ್ನು ಒಳಗೊಳ್ಳುವ ಸಾಧ್ಯತೆ ಇದೆ. 1.2 ಲೀಟರ್ 3 ಸಿಲಿಂಡರ್ ಎಂಜಿನ್ (88ಎಚ್‌ಪಿ, 115ಎನ್‌ಎಂ) ಮತ್ತು 5 ಸ್ಪೀಡ್ ಮ್ಯಾನುಯಲ್ ಹಾಗೂ 5 ಸ್ಪೀಡ್ ಎಎಂಟಿ ಗಿಯರ್ ಬಾಕ್ಸ್ ಸಿಗಲಿದೆ.
ಹೊಸ ರೆನೊ ಡಸ್ಟರ್
ಹಳೆಯ ಡಸ್ಟರ್ ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಸದ್ದು ಮಾಡಿತ್ತು. ಇದೇ ಯಶಸ್ಸನ್ನು ಮರುಕಳಿಸುವ ಇರಾದೆಯನ್ನು ಫ್ರಾನ್ಸ್ ಮೂಲದ ರೆನೊ ಸಂಸ್ಥೆಯು ಹೊಂದಿದೆ. ಹೊಸ ಡಸ್ಟರ್ ₹10 ಲಕ್ಷದಿಂದ ₹20 ಲಕ್ಷ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಹೊಸ ತಲೆಮಾರಿನ ಡಸ್ಟರ್ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 1.3 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1 ಲೀಟರ್ 3 ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಹೊಂದಿರಲಿದೆ.
ಮಾರುತಿ ಸುಜುಕಿ ಇ-ವಿಟಾರಾ
ದೇಶದ ಜನಪ್ರಿಯ ವಾಹನ ಸಂಸ್ಥೆ ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಇ-ವಿಟಾರಾ ಕಾರು ಶೀಘ್ರದಲ್ಲೇ ಮಾರುಕಟ್ಟೆಗೆ ಅಪ್ಪಳಿಸುವ ನಿರೀಕ್ಷೆ ಇದೆ. ಇದರ ಬೆಲೆ ₹18 ಲಕ್ಷದಿಂದ ₹25 ಲಕ್ಷ ಇರಬಹುದು ಎಂದು ಅಂದಾಜಿಸಲಾಗಿದೆ.
ಈ ಎಲ್ಲ ಕಾರುಗಳನ್ನು ಜನವರಿ ತಿಂಗಳಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಮಹೀಂದ್ರಾ 7XO ಬಿಡುಗಡೆ
ಹೊಸ ವರ್ಷದಲ್ಲಿ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಸಂಸ್ಥೆಯ ಅತಿ ನೂತನ 7XO ಕಾರು ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದರ ಆರಂಭಿಕ ಬೆಲೆ ₹13.66 ಲಕ್ಷ (ಎಕ್ಸ್ ಶೋರೂಂ) ನಿಗದಿಯಾಗಿದೆ. ಕಾರಿನ ಹೊರಭಾಗದ ವಿನ್ಯಾಸ ಹಾಗೂ ಒಳಭಾಗದ ಸೌಲಭ್ಯಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗಿದೆ. 7XO ಕಾರು 2.0 ಲೀಟರ್ ಟರ್ಬೊ ಪೆಟ್ರೋಲ್ ಹಾಗೂ 2.0 ಲೀಟರ್ ಡೀಸೆಲ್ ಎಂಜಿನ್‌ನಲ್ಲಿ ಲಭ್ಯವಿದ್ದು, 6 ಸ್ಪೀಡ್‌ಗಳ ಮ್ಯಾನುಯಲ್ ಅಥವಾ 6 ಸ್ಪೀಡ್‌ಗಳ ಆಟೊಮ್ಯಾಟಿಕ್ ಗಿಯರ್ ಬಾಕ್ಸ್ ಆಯ್ಕೆಯೂ ಇರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.