ಸಾಂದರ್ಭಿಕ ಚಿತ್ರ
ಐಸ್ಟಾಕ್ ಚಿತ್ರ
2026ರ ಬಜೆಟ್ ನಿಜಕ್ಕೂ ಜನಸಾಮಾನ್ಯರ ಬಜೆಟ್ ಆಗಲಿದೆಯೇ? ಮಧ್ಯಮ ವರ್ಗದವರಿಗೆ ನಿರಾಳತೆ ನೀಡಲಿದೆಯೇ ಅಥವಾ ವಿಸ್ತೃತ ಆರ್ಥಿಕ ಆದ್ಯತೆಗಳತ್ತ ಬಜೆಟ್ ಒಲವು ತೋರಲಿದೆಯೇ ಎಂಬ ಪ್ರಶ್ನೆಗೆ ನಾಳೆ (ಫೆ. 1) ಉತ್ತರ ಸಿಗಲಿದೆ.
ಬೆಂಗಳೂರು: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 9ನೇ ಬಾರಿಗೆ ಬಜೆಟ್ ಮಂಡಿಸಲು ಸಜ್ಜಾಗುತ್ತಿದ್ದಾರೆ. ಅವರು ಯಾವ ಭಾಗದ ಮತ್ತು ಯಾವ ಬಣ್ಣದ ಸೀರೆ ಉಡುತ್ತಾರೆ ಎಂಬುದು ಒಂದೆಡೆ ಚರ್ಚೆಯಾಗುತ್ತಿದ್ದರೆ, ಈ ಬಾರಿ ಮಧ್ಯಮ ವರ್ಗದವರು ಸಂತಸಪಡುವಂತದ್ದು ಏನಾದರೂ ನೀಡಲಿದ್ದಾರೆಯೇ ಎಂಬ ನಿರೀಕ್ಷೆಯೂ ಹೆಚ್ಚಾಗಿದೆ.
ಬೆಲೆ ಏರಿಕೆಯಿಂದ ತತ್ತರಿಸಿರುವ ಮಧ್ಯಮ ವರ್ಗ, ನೌಕರ ವರ್ಗ ಮತ್ತು ಪಿಂಚಣಿದಾರರು ಬಜೆಟ್ ಮೇಲೆ ಭಾರಿ ನಿರೀಕ್ಷೆ ಹೊಂದಿದ್ದಾರೆ. ಬೆಲೆ ಏರಿಕೆಯನ್ನು ನಿಯಂತ್ರಿಸುವ, ತೆರಿಗೆ ರಿಯಾಯಿತಿ ಘೋಷಿಸುವ, ಉದ್ಯೋಗ ಸೃಷ್ಟಿಸುವ, ಆರೋಗ್ಯ, ಶಿಕ್ಷಣ ಮತ್ತು ವಸತಿ ಯೋಜನೆಗಳಿಗೆ ನೆರವಾಗುವ ಬಜೆಟ್ ಆಗಬಹುದೇ ಎಂಬ ಚರ್ಚೆ ಸಾಮಾನ್ಯವಾಗಿದೆ. ಹೀಗಾಗಿ ಜನಸಾಮಾನ್ಯರು ನಿತ್ಯ ಎದುರಿಸುತ್ತಿರುವ ಆರ್ಥಿಕ ಒತ್ತಡವನ್ನು ತಗ್ಗಿಸುವ ಬಜೆಟ್‌ನ ನಿರೀಕ್ಷೆಯಲ್ಲಿದ್ದಾರೆ.
ಅತ್ಯಾವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದಾಗಿ ಮಧ್ಯಮ ಮತ್ತು ಕಡಿಮೆ ಆದಾಯದ ಕುಟುಂಬಗಳು ತೀವ್ರ ಸಂಕಷ್ಟ ಎದುರಿಸುತ್ತಿವೆ. ಆಹಾರ ಧಾನ್ಯ, ತರಕಾರಿ, ಅಡುಗೆ ಅನಿಲ ಮತ್ತು ಇಂಧನ ಬೆಲೆ ಏರಿಕೆ ಜನರ ಜೀವನವನ್ನು ದುಸ್ತರಗೊಳಿಸಿದೆ.
ಪೂರೈಕೆ ವ್ಯವಸ್ಥೆಯನ್ನು ಬಲಪಡಿಸುವುದರ ಜತೆಗೆ, ಅಗತ್ಯ ವಸ್ತುಗಳ ಮೇಲಿನ ಪರೋಕ್ಷ ತೆರಿಗೆ ಕಡಿಮೆ ಮಾಡುವ ಮತ್ತು ಸಾರ್ವಜನಿಕ ವಿತರಣೆ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಮೂಲಕ ಬೆಲೆ ಏರಿಕೆಯನ್ನು ನಿಯಂತ್ರಿಸುವ ಘೋಷಣೆ ಬಜೆಟ್‌ನಲ್ಲಿ ಇರುವ ಕನಸನ್ನು ಜನರ ಕಾಣುತ್ತಿದ್ದಾರೆ ಎಂದು ಮಾರುಕಟ್ಟೆ ಪಂಡಿತರು ಹೇಳಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಬೇಕು ಎಂಬುದು ನಗರ ಪ್ರದೇಶದ ಜನರ ಹಾಗೂ ಸಣ್ಣ ವ್ಯಾಪಾರಿಗಳ ಬೇಡಿಕೆಯಾಗಿದೆ. ಇದು ತಗ್ಗಿದಲ್ಲಿ ಸಹಜವಾಗಿ ಇತರ ವಸ್ತುಗಳ ಬೆಲೆಗಳೂ ತಗ್ಗುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ವೇತನದಾರರು ತೆರಿಗೆ ವಿನಾಯಿತಿ ಮಿತಿಯು ತಗ್ಗುವ ನಿರೀಕ್ಷೆಯಲ್ಲಿದ್ದಾರೆ. ಇದರೊಂದಿಗೆ ಹೆಚ್ಚಿನ ಸ್ಟ್ಯಾಂಡರ್ಡ್ ಡಿಡಕ್ಷನ್ ಮತ್ತು ಸರಳೀಕೃತ ತೆರಿಗೆ ಸ್ಲಾಬ್‌ಗಳ ನಿರೀಕ್ಷೆಯೂ ಅವರದ್ದಾಗಿದೆ. ಪಿಂಚಣಿದಾರರು ತಮ್ಮ ಆದಾಯಕ್ಕೆ ನ್ಯಾಯಸಮ್ಮತ ತೆರಿಗೆ ವ್ಯವಸ್ಥೆಯನ್ನು ಬಯಸುತ್ತಿದ್ದಾರೆ.
ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು ಈಗಿರುವ ₹75 ಸಾವಿರದಿಂದ ₹1ಲಕ್ಷಕ್ಕೆ ಹೆಚ್ಚಿಸಬೇಕು ಎಂಬ ನಿರೀಕ್ಷೆಯೂ ಇದೆ. ಇದರಿಂದ ವೇತನದಾರರು ತುಸುಮಟ್ಟಿಗೆ ನಿರಾಳರಾಗಲಿದ್ದಾರೆ ಎಂದೆನ್ನುತ್ತಾರೆ ಆಪ್ಟಿಮಾ ಮನಿ ಮ್ಯಾನೇಜರ್ಸ್‌ನ ಅಧಿಕಾರಿಗಳು.
‘ಪಿಂಚಣಿದಾರರಿಗೆ ತೆರಿಗೆಯ ಹೊರೆ ಹೆಚ್ಚಾಗಿದೆ. ಪಿಂಚಣಿ ಮೇಲಿನ ತೆರಿಗೆಯನ್ನು ಬಡ್ಡಿ ಅಥವಾ ಲಾಭದ ಭಾಗಕ್ಕೆ ಸೀಮಿತಗೊಳಿಸುವುದರಿಂದ ನಿವೃತ್ತರ ಆದಾಯ ಹೆಚ್ಚಿಸಬಹುದು’ ಎಂಬುದೂ ತೆರಿಗೆ ಸಲಹೆಗಾರರ ಮಾತು.
ಯುವಜನರಲ್ಲಿ ನಿರುದ್ಯೋಗ ಮತ್ತು ಸಿಕ್ಕ ಕೆಲಸವೂ ಅಲ್ಪಾವಧಿಯಾಗುವ ಗಂಭೀರ ಸಮಸ್ಯೆ ಈಗಲೂ ಎದುರಿಸುತ್ತಿದ್ದಾರೆ. ಆದ್ದರಿಂದ ಉದ್ಯೋಗ ಸೃಷ್ಟಿಯೇ ಈ ಬಜೆಟ್‌ನ ಪ್ರಮುಖ ನಿರೀಕ್ಷೆಯಾಗಿದೆ.
ಮೂಲಸೌಕರ್ಯ, ಉತ್ಪಾದನಾ ಕ್ಷೇತ್ರ ಮತ್ತು ಎಂಎಸ್‌ಎಂಇಗಳ ಹೂಡಿಕೆ ಹೆಚ್ಚಳದಿಂದ ಉದ್ಯೋಗಾವಕಾಶ ಹೆಚ್ಚಿಸಬೇಕು. ಸಣ್ಣ ಉದ್ಯಮಗಳಿಗೆ ಸುಲಭ ಸಾಲ, ಸರಳ ನಿಯಮಾವಳಿ ಮತ್ತು ಸರ್ಕಾರದ ನಿರಂತರ ಬೆಂಬಲವನ್ನೂ ಕೈಗಾರಿಕಾ ಕ್ಷೇತ್ರದ ಪ್ರಮುಖರು ಎದುರು ನೋಡುತ್ತಿದ್ದಾರೆ.
ದಿನದಿಂದ ದಿನಕ್ಕೆ ಹೊರೆಯಾಗುತ್ತಿರುವ ವೈದ್ಯಕೀಯ ವೆಚ್ಚಗಳಿಂದಾಗಿ ಅನೇಕ ಕುಟುಂಬಗಳು ಸಾಲದ ಸುಳಿಗೆ ಸಿಲುಕುತ್ತಿವೆ. ಸರ್ಕಾರಿ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಕಡಿಮೆ ದರದ ಔಷಧಗಳಿಗೆ ಹೆಚ್ಚಿನ ಅನುದಾನ ನೀಡಬೇಕೆಂಬುದು ಪ್ರಮುಖ ನಿರೀಕ್ಷೆಯಾಗಿದೆ.
ಶಿಕ್ಷಣ ಕ್ಷೇತ್ರಕ್ಕೂ ಹೆಚ್ಚಿನ ಅನುದಾನ ನೀಡುವ ಮೂಲಕ ಸರ್ಕಾರಿ ಶಾಲೆ-ಕಾಲೇಜುಗಳ ಸುಧಾರಣೆ, ಡಿಜಿಟಲ್ ಕಲಿಕೆ ಮೂಲಸೌಕರ್ಯ ಮತ್ತು ಉನ್ನತ ಶಿಕ್ಷಣಕ್ಕೆ ಲಭಿಸುವ ಸಾಲಗಳು ಇನ್ನಷ್ಟು ಸರಳ ಹಾಗೂ ಅಗ್ಗವಾಗುವತ್ತ ಪೋಷಕರ ಕಣ್ಣು ನೆಟ್ಟಿದೆ.
ನಗರ ಪ್ರದೇಶಗಳಲ್ಲಿರುವ ಮಧ್ಯಮ ವರ್ಗದ ಕುಟುಂಬಗಳ ಸ್ವಂತ ಸೂರಿನ ಕನಸಿಗೆ ನಿರ್ಮಲಾ ಅವರ ಬಜೆಟ್ ನೆರವಾಗುವುದೇ ಎಂಬ ನಿರೀಕ್ಷೆ ಹೆಚ್ಚಾಗಿದೆ. ಗೃಹ ಸಾಲ ಸುಲಭವಾಗಿ ಲಭ್ಯವಾಗುವಂತೆ ಮತ್ತು ಸರಳೀಕರಣದ ನಿರೀಕ್ಷೆ ಬಜೆಟ್ ಮೇಲಿದೆ.
2025ರಲ್ಲಿ ಬಹಳಷ್ಟು ತೆರಿಗೆದಾರರು ಆದಾಯ ತೆರಿಗೆ ಮರುಪಾವತಿಯ ವಿಳಂಬ ಎದುರಿಸಿದ್ದರು. ಇದನ್ನು ಸರಿಪಡಿಸಲು ತೆರಿಗೆ ಪೋರ್ಟಲ್‌ನಲ್ಲಿ ರಿಯಲ್-ಟೈಂ ರಿಫಂಡ್ ಟ್ರ್ಯಾಕಿಂಗ್ ಡ್ಯಾಶ್‌ಬೋರ್ಡ್ ಮತ್ತು ತೆರಿಗೆ ಬಾಕಿಗೆ ವಿಧಿಸುವ ಬಡ್ಡಿಗೆ ಸಮಾನವಾಗಿ ಮರುಪಾವತಿಗೂ ಬಡ್ಡಿ ನೀಡಬೇಕು ಎಂಬ ಬೇಡಿಕೆಯನ್ನು ಬಹಳಷ್ಟು ಪ್ರತಿಷ್ಠಿತ ತೆರಿಗೆ ಸಲಹಾ ಸಂಸ್ಥೆಗಳು ಮಾಡಿರುವುದು ವರದಿಯಾಗಿವೆ.
ಟಿಡಿಎಸ್ ದರಗಳನ್ನು ಸರಳೀಕರಿಸುವ ಬೇಡಿಕೆಯೂ ಇದೆ. ಜತೆಗೆ ಹಾಲಿ ಇರುವ ಆರು ಟಿಡಿಎಸ್ ಸ್ಲಾಬ್‌ಗಳ ಬದಲು, ಶೇ 1 ಮತ್ತು ಶೇ 5 ಎಂಬ ಎರಡೇ ಸ್ಲಾಬ್‌ಗಳಿಗೆ ತಗ್ಗಿಸಬೇಕು ಎಂಬ ಬೇಡಿಕೆಯೂ ಇದೆ.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ದೀರ್ಘಾವಧಿ ನಿವೃತ್ತಿ ಉಳಿತಾಯಕ್ಕೆ ಪ್ರಮುಖ ಸಾಧನವಾಗಿದ್ದರೂ, ಅದರ ತೆರಿಗೆ ಪ್ರೋತ್ಸಾಹಗಳು ಇನ್ನಷ್ಟು ಬಲವಾಗಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ.
ಸೆಕ್ಷನ್ 80ಸಿಸಿಡಿ(1ಬಿ) ಅಡಿಯಲ್ಲಿ ಹೆಚ್ಚುವರಿ ಕಡಿತವನ್ನು ₹1ಲಕ್ಷಕ್ಕೆ ಹೆಚ್ಚಿಸುವುದು, ಹೊಸ ತೆರಿಗೆ ವ್ಯವಸ್ಥೆಯನ್ನು ಎನ್‌ಪಿಎಸ್ ಪ್ರಯೋಜನ ವಿಸ್ತರಿಸುವುದು ಮತ್ತು ವಿತ್‌ಡ್ರಾವಲ್ ತೆರಿಗೆ ಸರಳೀಕರಣಗೊಳಿಸಬೇಕು ಎಂಬ ನಿರೀಕ್ಷೆ ಇದೆ.
ಸದ್ಯ ಫೆ. 1ರಂದು ಬಜೆಟ್ ಮಂಡಿಸಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮೇಲೆ ದೇಶದ ಜನರ ಗಮನ ನೆಟ್ಟಿದೆ. 2026ರ ಬಜೆಟ್ ನಿಜಕ್ಕೂ ಜನಸಾಮಾನ್ಯರ ಬಜೆಟ್ ಆಗಲಿದೆಯೇ? ಮಧ್ಯಮ ವರ್ಗದವರಿಗೆ ನಿರಾಳತೆ ನೀಡಲಿದೆಯೇ ಅಥವಾ ವಿಸ್ತೃತ ಆರ್ಥಿಕ ಆದ್ಯತೆಗಳತ್ತ ಬಜೆಟ್ ಒಲವು ತೋರಲಿದೆಯೇ ಎಂಬ ಪ್ರಶ್ನೆಗೆ ನಾಳೆ (ಫೆ. 1) ಉತ್ತರ ಸಿಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.