ಸಾಂದರ್ಭಿಕ ಚಿತ್ರ
ನವದೆಹಲಿ: ನ್ಯಾಯಸಮ್ಮತವಲ್ಲದ ದರ ನಿಗದಿಯಲ್ಲಿ ತೊಡಗಿರುವ ಆರೋಪದ ಮೇರೆಗೆ ಆ್ಯಪ್ ಆಧರಿತ ಕ್ಯಾಬ್ ಸೇವೆ ಒದಗಿಸುವ ಓಲಾ ಮತ್ತು ಉಬರ್ ಕಂಪನಿಗೆ, ಕೇಂದ್ರ ಗ್ರಾಹಕ ಹಿತರಕ್ಷಣಾ ಪ್ರಾಧಿಕಾರವು (ಸಿಸಿಪಿಎ) ನೋಟಿಸ್ ನೀಡಿದೆ.
ಬಳಕೆದಾರರು ಐಫೋನ್‌ನಲ್ಲಿ ಬುಕಿಂಗ್ ಮಾಡುತ್ತಿದ್ದಾರೆಯೇ ಅಥವಾ ಆ್ಯಂಡ್ರಾಯ್ಡ್ ಫೋನ್‌ನಲ್ಲಿ ಬುಕಿಂಗ್ ಮಾಡುತ್ತಿದ್ದಾರೆಯೇ ಎಂಬ ಆಧಾರದ ಮೇಲೆ ಈ ಕಂಪನಿಗಳು ಒಂದೇ ಸ್ಥಳಕ್ಕೆ ವಿಭಿನ್ನ ದರ ನಿಗದಿಪಡಿಸುತ್ತಿವೆ ಎಂದು ದೂರಲಾಗಿದೆ.
ಆ ಮೂಲಕ ಕಂಪನಿಗಳು ಗ್ರಾಹಕರ ಹಕ್ಕುಗಳಿಗೆ ಧಕ್ಕೆ ತರುತ್ತಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರು ಮಾಹಿತಿ ಹಂಚಿಕೊಂಡಿದ್ದರು.
‘ಗ್ರಾಹಕರಿಂದ ಕೇಳಿಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಸಿಸಿಪಿಎ ವಿಚಾರಣೆ ಆರಂಭಿಸಿದ್ದು, ಎರಡು ಕಂಪನಿಗಳಿಂದ ವಿವರಣೆ ಕೇಳಿ ನೋಟಿಸ್ ನೀಡಿದೆ’ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಗುರುವಾರ ತಿಳಿಸಿದ್ದಾರೆ.
ಗ್ರಾಹಕರಿಗೆ ಆಗುತ್ತಿರುವ ಶೋಷಣೆ ತಪ್ಪಿಸಲು ಕೇಂದ್ರ ಸರ್ಕಾರ ಬದ್ಧವಿದೆ. ಮೇಲ್ನೋಟಕ್ಕೆ ದರ ವ್ಯತ್ಯಾಸ ಇರುವುದು ಕಂಡುಬರುತ್ತಿದೆ ಎಂದು ಇತ್ತೀಚೆಗೆ ಪ್ರತಿಕ್ರಿಯೆ ನೀಡಿದ್ದರು.
ಆ್ಯಪಲ್‌ಗೂ ನೋಟಿಸ್ ಜಾರಿ
ಐಫೋನ್ ಬಳಕೆಯಲ್ಲಿ ಕಂಡುಬಂದಿರುವ ತಾಂತ್ರಿಕ ಸಮಸ್ಯೆಗೆ ಸಂಬಂಧಿಸಿದಂತೆ ಆ್ಯಪಲ್ ಕಂಪನಿಗೂ ಸಿಸಿಪಿಎ ನೋಟಿಸ್ ಜಾರಿಗೊಳಿಸಿದೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ. ಆ್ಯಪಲ್ ಕಂಪನಿಯು ಐಒಎಸ್ 18 ಪ್ಲಸ್ ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿಕೊಳ್ಳಲು ಬಳಕೆದಾರರಿಗೆ ಅವಕಾಶ ಕಲ್ಪಿಸಿತ್ತು. ಇದರ ಅಪ್‌ಡೇಟ್ ವೇಳೆ ಬಳಕೆದಾರರು ತೊಂದರೆ ಎದುರಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಸಮೀಕ್ಷೆ ನಡೆಸಿದ್ದ ಲೋಕಲ್ ಸರ್ಕಲ್ ಸಂಸ್ಥೆಯು ಶೇ 60ರಷ್ಟು ಐಫೋನ್ ಬಳಕೆದಾರರು ತೊಂದರೆ ಅನುಭವಿಸುತ್ತಿರುವ ಕುರಿತು ಬೆಳಕು ಚೆಲ್ಲಿತ್ತು. ‘ಗ್ರಾಹಕರು ಎದುರುತ್ತಿರುವ ಸಮಸ್ಯೆ ಸಂಬಂಧ ವಿವರಣೆ ನೀಡುವಂತೆ ಕಂಪನಿಗೆ ಸೂಚಿಸಲಾಗಿದೆ’ ಎಂದು ಸಚಿವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.