ADVERTISEMENT

ಬ್ಯಾಟರಿ ಸೆಲ್, ಮಾಡ್ಯೂಲ್‌ನಲ್ಲಿ ಲೋಪ ಬೆಂಕಿಗೆ ಕಾರಣ?

ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳಲ್ಲಿ ಬೆಂಕಿ ಪ್ರಕರಣ

ರಾಯಿಟರ್ಸ್
Published 6 ಮೇ 2022, 15:38 IST
Last Updated 6 ಮೇ 2022, 15:38 IST
Electric scooter for sharing
Electric scooter for sharing   

ನವದೆಹಲಿ: ವಿದ್ಯುತ್ ಚಾಲಿತ ಸ್ಕೂಟರ್‌ಗಳಿಗೆ ಈಚೆಗೆ ಬೆಂಕಿ ಹೊತ್ತಿಕೊಂಡಿದ್ದಕ್ಕೆ ಬ್ಯಾಟರಿ ಸೆಲ್‌ಗಳಲ್ಲಿ ಹಾಗೂ ಮಾಡ್ಯೂಲ್‌ಗಳಲ್ಲಿ ದೋಷ ಇದ್ದಿದ್ದೇ ಪ್ರಮುಖ ಕಾರಣ ಎಂಬುದು ಆರಂಭಿಕ ತನಿಖೆಯಿಂದ ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.

ಓಲಾ ಎಲೆಕ್ಟ್ರಿಕ್ ಸೇರಿದಂತೆ ಮೂರು ಕಂಪನಿಗಳ ವಿದ್ಯುತ್ ಚಾಲಿತ ಸ್ಕೂಟರ್‌ಗಳಲ್ಲಿ ಬೆಂಕಿ ಹೊತ್ತಿಕೊಂಡ ಪ್ರಕರಣಗಳ ಬಗ್ಗೆ ತನಿಖೆ ನಡೆಸಲಾಗಿದೆ. ‘ಓಲಾ ಸ್ಕೂಟರ್‌ಗೆ ಬೆಂಕಿ ಹೊತ್ತಿಕೊಂಡ ಪ್ರಕರಣದಲ್ಲಿ ಸೆಲ್‌ಗಳಲ್ಲಿ ಮತ್ತು ಬ್ಯಾಟರಿ ನಿರ್ವಹಣಾ ವ್ಯವಸ್ಥೆಯಲ್ಲಿ ಸಮಸ್ಯೆ ಇತ್ತು’ ಎಂದು ಮೂಲವೊಂದು ಹೇಳಿದೆ. ತನಿಖೆಯ ಅಂತಿಮ ವರದಿಯು ಇನ್ನು ಎರಡು ವಾರಗಳಲ್ಲಿ ಸಿದ್ಧವಾಗಬಹುದು ಎನ್ನಲಾಗಿದೆ.

ಬೆಂಕಿಗೆ ಕಾರಣ ಏನು ಎಂಬುದನ್ನು ಪತ್ತೆ ಮಾಡಲು ತಾನು ಹೊರಗಿನ ತಜ್ಞ ಸಂಸ್ಥೆಯೊಂದನ್ನು ನೇಮಿಸಿರುವುದಾಗಿ, ಸರ್ಕಾರದ ಜೊತೆಯೂ ಕೆಲಸ ಮಾಡುತ್ತಿರುವುದಾಗಿ ಓಲಾ ಹೇಳಿದೆ. ‘ತಜ್ಞರ ಪ್ರಾಥಮಿಕ ಪರಿಶೀಲನೆಯ ಪ್ರಕಾರ ಓಲಾದ ಬ್ಯಾಟರಿ ನಿರ್ವಹಣಾ ವ್ಯವಸ್ಥೆಯಲ್ಲಿ ಲೋಪ ಇರಲಿಲ್ಲ’ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.

ADVERTISEMENT

ಕೇಂದ್ರ ಸರ್ಕಾರ ನಡೆಸುತ್ತಿರುವ ತನಿಖೆಯು ಒಕಿನಾವಾ ಮತ್ತು ಪ್ಯೂರ್‌ಇವಿ ಕಂಪನಿಗಳ ಸ್ಕೂಟರ್‌ಗಳನ್ನೂ ಒಳಗೊಂಡಿದೆ. ಒಕಿನಾವಾ ಸ್ಕೂಟರ್‌ ಪ್ರಕರಣದಲ್ಲಿ ಸೆಲ್ ಮತ್ತು ಬ್ಯಾಟರಿ ಮಾಡ್ಯೂಲ್‌ನಲ್ಲಿ ಸಮಸ್ಯೆ ಇತ್ತು. ಪ್ಯೂರ್‌ಇವಿ ಪ್ರಕರಣದಲ್ಲಿ ಬ್ಯಾಟರಿ ಕೇಸಿಂಗ್‌ನಲ್ಲಿ ಸಮಸ್ಯೆ ಇತ್ತು ಎಂದು ಮೂಲಗಳು ತಿಳಿಸಿವೆ. ಪ್ಯೂರ್‌ಇವಿ ಮತ್ತು ಒಕಿನಾವಾ ಕಡೆಯಿಂದ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.