ಪೆಟ್ರೋಲ್
– ಗೆಟ್ಟಿ ಚಿತ್ರ
ನವದೆಹಲಿ: ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಸಾಕಷ್ಟು ದಾಸ್ತಾನು ಇದೆ, ಸಾರ್ವಜನಿಕರು ಭಯಭೀತರಾಗುವ ಅಗತ್ಯವಿಲ್ಲ ಎಂದು ತೈಲ ಕಂಪನಿಗಳು ಶುಕ್ರವಾರ ತಿಳಿಸಿವೆ.
ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಈ ಬಗ್ಗೆ ಪ್ರತ್ಯೇಕ ಪ್ರಕಟಣೆ ಹೊರಡಿಸಿದ್ದು, ಸಾಕಷ್ಟು ಸ್ಟಾಕ್ ಲಭ್ಯತೆ ಮತ್ತು ಸುಗಮ ಕಾರ್ಯಾಚರಣೆಯ ಭರವಸೆ ನೀಡಿವೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚಾದಂತೆ ಜನರು ಇಂಧನ ಸಂಗ್ರಹಿಸಲು ಪೆಟ್ರೋಲ್ ಪಂಪ್‌ಗಳಲ್ಲಿ ಸರತಿ ಸಾಲಿನಲ್ಲಿ ನಿಂತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಕಂಪನಿಗಳು ಪ್ರಕಟಣೆ ಹೊರಡಿಸಿವೆ.
‘ಇಂಡಿಯನ್ ಆಯಿಲ್ ದೇಶಾದ್ಯಂತ ಸಾಕಷ್ಟು ಇಂಧನ ದಾಸ್ತಾನು ಹೊಂದಿದೆ. ನಮ್ಮ ಪೂರೈಕೆ ಮಾರ್ಗಗಳು ಸರಾಗವಾಗಿ ಕಾರ್ಯನಿರ್ವಹಿಸುತ್ತಿವೆ’ ಎಂದು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
‘ಭಯದಿಂದ ಖರೀದಿಸುವ ಅಗತ್ಯವಿಲ್ಲ, ಇಂಧನ ಮತ್ತು ಎಲ್‌ಪಿಜಿ ನಮ್ಮ ಎಲ್ಲಾ ಔಟ್‌ಲೆಟ್‌ಗಳಲ್ಲಿ ಸುಲಭವಾಗಿ ಲಭ್ಯವಿದೆ’ ಎಂದು ಅದು ತಿಳಿಸಿದೆ.
ಪಾಕಿಸ್ತಾನದ ಗಡಿ ಸಮೀಪ ಇರುವ ರಾಜ್ಯಗಳಲ್ಲಿ ಜನ ಭಯಭೀತರಾಗಿ ಇಂಧನ ಖರೀದಿ ಮಾಡುವುದು ಕಂಡು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.