ADVERTISEMENT

ಜಿಎಸ್‌ಟಿ ಮಂಡಳಿಯ ಸಭೆ: ತೆರಿಗೆ ಹಂತ ತಗ್ಗಿಸುವ ಪ್ರಸ್ತಾವಕ್ಕೆ ಒಪ್ಪಿಗೆ

ವರಮಾನ ನಷ್ಟದ ವಿವರ ಕೇಳಿದ ರಾಜ್ಯಗಳು

ಪಿಟಿಐ
Published 21 ಆಗಸ್ಟ್ 2025, 15:38 IST
Last Updated 21 ಆಗಸ್ಟ್ 2025, 15:38 IST
   

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಲ್ಲಿನ ತೆರಿಗೆ ಹಂತಗಳನ್ನು ಕಡಿಮೆ ಮಾಡುವ ಕೇಂದ್ರ ಸರ್ಕಾರದ ಪ್ರಸ್ತಾವಕ್ಕೆ ವಿವಿಧ ರಾಜ್ಯಗಳ ಸಚಿವರ ಗುಂಪು ಗುರುವಾರ ತಾತ್ವಿಕ ಒಪ್ಪಿಗೆ ನೀಡಿದೆ.

ಬಿಜೆಪಿಯನ್ನು ವಿರೋಧಿಸುವ ರಾಜಕೀಯ ಪಕ್ಷಗಳ ನೇತೃತ್ವದ ಸರ್ಕಾರ ಇರುವ ಕೆಲವು ರಾಜ್ಯಗಳು ಈ ಬದಲಾವಣೆಯಿಂದ ಆಗುವ ವರಮಾನ ನಷ್ಟ ಎಷ್ಟು ಹಾಗೂ ಆ ನಷ್ಟವನ್ನು ಹೇಗೆ ಭರ್ತಿ ಮಾಡಿಕೊಳ್ಳುವುದು ಎಂಬ ಪ್ರಶ್ನೆ ಎತ್ತಿವೆ.

ಬಿಹಾರದ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ನೇತೃತ್ವದ ಸಚಿವರ ಗುಂಪು, ಜಿಎಸ್‌ಟಿ ವ್ಯವಸ್ಥೆಯ ಅಡಿ ತೆರಿಗೆ ಹಂತಗಳನ್ನು ಕಡಿಮೆ ಮಾಡುವ ಕೇಂದ್ರದ ಪ್ರಸ್ತಾವದ ಬಗ್ಗೆ ಚರ್ಚಿಸಿತು. ಈಗಿರುವ ನಾಲ್ಕು ಹಂತಗಳ ತೆರಿಗೆ ವ್ಯವಸ್ಥೆಯ ಬದಲು ಎರಡು ಹಂತಗಳ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರುವುದು ಕೇಂದ್ರದ ಪ್ರಸ್ತಾವ. ಕೆಲವು ವಸ್ತುಗಳ ಮೇಲೆ ಶೇ 40ರಷ್ಟು ತೆರಿಗೆ ನಿಗದಿ ಮಾಡುವ ಪ್ರಸ್ತಾವವೂ ಇದರಲ್ಲಿದೆ.

ADVERTISEMENT

ಜನಸಾಮಾನ್ಯರಿಗೆ ಪ್ರಯೋಜನ ಆಗುತ್ತದೆ ಎಂದಾದರೆ ತೆರಿಗೆ ಹಂತಗಳನ್ನು ಕಡಿಮೆ ಮಾಡುವುದು ಒಳಿತು ಎಂದು ಸಚಿವರ ಗುಂಪು ಅಭಿಪ್ರಾಯಪಟ್ಟಿತು. ಐಷಾರಾಮಿ ಕಾರುಗಳಂತಹ ಕೆಲವು ಉತ್ಪನ್ನಗಳಿಗೆ ಶೇ 40ರ ವಿಶೇಷ ತೆರಿಗೆ ಮೇಲೆ ಹೆಚ್ಚುವರಿ ಸುಂಕ ವಿಧಿಸಬೇಕು ಎಂದು ಕೆಲವು ಸದಸ್ಯರು ಹೇಳಿದರು.

ಈ ಗುಂಪಿನಲ್ಲಿ ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ, ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳ ರಾಜ್ಯಗಳ ಪ್ರತಿನಿಧಿಗಳು ಇದ್ದಾರೆ. ಈ ಗುಂಪಿನ ಶಿಫಾರಸು ಈಗ ಉನ್ನತ ಅಧಿಕಾರವಿರುವ ಜಿಎಸ್‌ಟಿ ಮಂಡಳಿಯ ಎದುರು ಬರಲಿದೆ. ಜಿಎಸ್‌ಟಿ ಸುಧಾರಣೆಗಳ ಬಗ್ಗೆ ಮಂಡಳಿಯು ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆ.

ಕೇಂದ್ರದ ಪ್ರಸ್ತಾವದಲ್ಲಿ ಜನಸಾಮಾನ್ಯರ ಹಿತ ಇದೆ ಎಂದು ಎಲ್ಲ ರಾಜ್ಯಗಳು ಅದನ್ನು ಒಪ್ಪಿವೆ ಎಂದು ಉತ್ತರ ಪ್ರದೇಶದ ಹಣಕಾಸು ಸಚಿವ ಸುರೇಶ್ ಕುಮಾರ್ ಖನ್ನಾ ಹೇಳಿದ್ದಾರೆ.

ತೆರಿಗೆ ಹಂತಗಳಲ್ಲಿನ ಇಳಿಕೆಯ ಕಾರಣದಿಂದಾಗಿ ಆಗಬಹುದಾದ ವರಮಾನ ನಷ್ಟದ ಬಗ್ಗೆ ಕೇಂದ್ರದ ಪ್ರಸ್ತಾವದಲ್ಲಿ ಮಾಹಿತಿ ಇರಲಿಲ್ಲ ಎಂದು ‍ಪಶ್ಚಿಮ ಬಂಗಾಳದ ಹಣಕಾಸು ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಹೇಳಿದ್ದಾರೆ. ‘ಜನಪರವಾಗಿ ಇರುವ ಇಂತಹ ಕ್ರಮಗಳಿಗೆ ನಮ್ಮ ಒಪ್ಪಿಗೆ ಇದೆ ಎಂದು ಹೇಳಿದ್ದೇವೆ. ಆದರೆ ಇದರಿಂದಾಗಿ ನಮಗೆ ಆಗುವ ವರಮಾನ ನಷ್ಟ ಎಷ್ಟು ಎಂಬುದು ಕೂಡ ಗೊತ್ತಾಗಬೇಕು ಎಂದಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

ತೆರಿಗೆ ಹಂತಗಳನ್ನು ತಗ್ಗಿಸುವ ಕ್ರಮವು ರಾಜ್ಯಗಳ ವರಮಾನವನ್ನು ರಕ್ಷಿಸುವ ಸಮತೋಲನದ ಕ್ರಮವನ್ನೂ ಒಳಗೊಳ್ಳಬೇಕು. ಅದಿಲ್ಲದಿದ್ದರೆ ಬಡವರಿಗಾಗಿ, ಮಧ್ಯಮ ವರ್ಗದವರಿಗಾಗಿ ರೂಪಿಸಿದ ಅಭಿವೃದ್ಧಿ ಯೋಜನೆಗಳು ಹಾಗೂ ಮೂಲಸೌಕರ್ಯ ಯೋಜನೆಗಳಿಗೆ ಅಡ್ಡಿ ಆಗುತ್ತದೆ ಎಂದು ತೆಲಂಗಾಣದ ಉಪ ಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಹೇಳಿದ್ದಾರೆ.

ತೆರಿಗೆ ಹಂತ ತಗ್ಗಿಸುವ ಪ್ರಸ್ತಾವವನ್ನು ತೆಲಂಗಾಣ ಬೆಂಬಲಿಸುತ್ತದೆ. ಆದರೆ, ಪರಿಹಾರ ವ್ಯವಸ್ಥೆಯೊಂದು ಸೂಕ್ತ ರೀತಿಯಲ್ಲಿ ಜಾರಿಗೆ ಬರಬೇಕು ಎಂದು ಸರ್ಕಾರ ಹೊರಡಿಸಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಜಿಎಸ್‌ಟಿ ಅಡಿಯಲ್ಲಿ ಇರುವ ಶೇ 12 ಹಾಗೂ ಶೇ 28ರ ತೆರಿಗೆ ಹಂತಗಳನ್ನು ಇನ್ನಿಲ್ಲವಾಗಿಸುವ ಕೇಂದ್ರದ ಪ್ರಸ್ತಾವವನ್ನು ಒಪ್ಪಿಕೊಳ್ಳಲಾಗಿದೆ ನಾವು ನಮ್ಮ ಶಿಫಾರಸು ನೀಡಿದ್ದೇವೆ.
– ಸಾಮ್ರಾಟ್ ಚೌಧರಿ ಬಿಹಾರದ ಉಪ ಮುಖ್ಯಮಂತ್ರಿ
ತೆರಿಗೆ ಪ್ರಮಾಣ ಕಡಿಮೆ ಆದ ನಂತರದಲ್ಲಿ ರಾಜ್ಯಗಳಿಗೆ ಆಗುವ ವರಮಾನ ನಷ್ಟಕ್ಕೆ ಪರಿಹಾರ ಕೊಡಬೇಕು ಎಂದು ಕೆಲವು ರಾಜ್ಯಗಳು ಬೇಡಿಕೆ ಇರಿಸಿವೆ. ವರಮಾನ ನಷ್ಟ ಎಷ್ಟು ಎಂಬುದನ್ನು ಲೆಕ್ಕಹಾಕಲಾಗುತ್ತದೆ.
–  ಸುರೇಶ್ ಕುಮಾರ್ ಖನ್ನಾ ಉತ್ತರ ಪ್ರದೇಶದ ಹಣಕಾಸು ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.