ADVERTISEMENT

New GST Rates | ನೂತನ ತೆರಿಗೆಯಿಂದ ಬಕೆಟ್ ಪಾಪ್‌ಕಾರ್ನ್ ಬೆಲೆ ಎಷ್ಟಾಗಲಿದೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಸೆಪ್ಟೆಂಬರ್ 2025, 6:13 IST
Last Updated 4 ಸೆಪ್ಟೆಂಬರ್ 2025, 6:13 IST
   

ಬೆಂಗಳೂರು: ಕಳೆದಬಾರಿ ತೆರಿಗೆ ಪರಿಷ್ಕರಣೆ ಸಂದರ್ಭದಲ್ಲಿ ಪಾಪ್‌ಕಾರ್ನ್‌ಗೆ ವಿಧಿಸಿದ್ದ ತೆರಿಗೆಯಿಂದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ನೆಟ್ಟಿಗರು ವ್ಯಾಪಕ ಟೀಕೆ ವ್ಯಕ್ತಪಡಿಸಿದ್ದರು. ಇನ್ನೂ ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಮೀಮ್ಸ್‌ಗಳ ಮೂಲಕ ಪಾಪ್‌ಕಾರ್ನ್‌ ಬೆಲೆ ಏರಿಕೆಗೆ ತಮ್ಮದೇ ರೀತಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಅಂತಿಮವಾಗಿ ಪಾಪ್‌ಕಾರ್ನ್‌ ಮೇಲಿನ ಜಿಎಸ್‌ಟಿ ಕೂಡಾ ಪರಿಷ್ಕರಣೆಗೆ ಒಳಪಟ್ಟಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ 56ನೇ ಜಿಎಸ್‌ಟಿ ಸಮಿತಿ ಸಭೆಯಲ್ಲಿ ಪಾಪ್‌ಕಾರ್ನ್‌ ಮೇಲಿನ ತೆರಿಗೆಯನ್ನು ಸರಳಗೊಳಿಸಲಾಗಿದ್ದು, ಅದು ಸೆ. 22ರಿಂದ ಜಾರಿಗೆ ಬರಲಿದೆ.

ಕಳೆದ ವರ್ಷ ತೆರಿಗೆ ಪರಿಷ್ಕರಣೆ ಸಂದರ್ಭದಲ್ಲಿ ಬಿಡಿಯಾಗಿ ಖರೀದಿಸುವ ಉಪ್ಪು ಸವರಿದ ಪಾಪ್‌ಕಾರ್ನ್‌ಗೆ ಶೇ 5, ಪ್ಯಾಕೇಟ್‌ ಮಾಡಿದ್ದಕ್ಕೆ ಶೇ 12 ಮತ್ತು ಕ್ಯಾರಾಮಲ್‌ ಲೇಪಿಸಿದ್ದರೆ ಶೇ 18ರಷ್ಟು ತೆರಿಗೆ ವಿಧಿಸಲಾಗಿತ್ತು. ಇದೀಗ ಈ ತೆರಿಗೆಯನ್ನು ಇನ್ನಷ್ಟು ಸರಳಗೊಳಿಸಲಾಗಿದೆ.

ADVERTISEMENT

ಉಪ್ಪು ಅಥವಾ ಖಾರ ಹಾಕಿರುವ ಪಾಪ್‌ಕಾರ್ನ್ ಬಿಡಿಯಾಗಿ ಅಥವಾ ಪೊಟ್ಟಣ ರೂಪದಲ್ಲಿದ್ದರೂ ಅದಕ್ಕೆ ಶೇ 5ರಷ್ಟು ಜಿಎಸ್‌ಟಿ ನಿಗದಿಪಡಿಸಲಾಗಿದೆ. ಆದರೆ ಕ್ಯಾರಾಮಲ್‌ ಲೇಪಿಸಿರುವ ಪಾಪ್‌ಕಾರ್ನ್‌ ಮಿಠಾಯಿ ವಿಭಾಗಕ್ಕೆ ಸೇರುವುದರಿಂದ ಅದರ ತೆರಿಗೆ ಶೇ 18ರಲ್ಲೇ ಮುಂದುವರಿಯಲಿದೆ. ಹೀಗಾಗಿ ಸಿಹಿ ಲೇಪಿಸಿದರೆ ಮಾತ್ರ ಪಾಪ್‌ಕಾರ್ನ್‌ ದುಬಾರಿಯಾಗಲಿದೆ.

ಶೇ 5, ಶೇ 12, ಶೇ 18 ಮತ್ತು ಶೇ 28 ಎಂಬ ನಾಲ್ಕು ಹಂತಗಳಲ್ಲಿದ್ದ ಜಿಎಸ್‌ಟಿಯನ್ನು ಶೇ 5 ಮತ್ತು ಶೇ 18 ಎಂಬ ಎರಡೇ ಹಂತಕ್ಕೆ ಇಳಿಸುವ ಮಹತ್ವದ ನಿರ್ಧಾರವನ್ನು 56ನೇ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

ಪೇಸ್ಟ್ರಿ ವಿಭಾಗಕ್ಕೆ ಒಳಪಟ್ಟಿದ್ದರಿಂದ ಈ ಹಿಂದೆ ಕ್ರೀಮ್‌ ಬನ್‌ಗೆ ಶೇ 18ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಆದರೆ ಪ್ರತ್ಯೇಕವಾಗಿ ನೋಡುವುದಾದರೆ ಬನ್‌ ಮತ್ತು ಕ್ರೀಂಗೆ ತಲಾ ಶೇ 5ರಷ್ಟು ತೆರಿಗೆ ವಿಧಿಸಲಾಗಿತ್ತು. ಹೀಗಾಗಿ ಈ ಬಾರಿ ಕ್ರೀಂ ಬನ್‌ಗೂ ಶೇ 5ರಷ್ಟು ತೆರಿಗೆ ವಿಧಿಸಲಾಗಿದೆ.

ಇದರಂತೆಯೇ ಯುಎಚ್‌ಟಿ ಹಾಲು, ಪನ್ನೀರ್‌, ಬೆಣ್ಣೆ, ಚೀಸ್, ಬಿಸ್ಕತ್ತು, ಹಣ್ಣಿನ ರಸ ಮತ್ತು ಒಣ ಹಣ್ಣುಗಳು ಈಗ ಶೇ 5ರ ತೆರಿಗೆ ವ್ಯಾಪ್ತಿಗೆ ತರಲಾಗಿದೆ. ಹಾಗೆಯೇ ಸೇವಾ ವಲಯಗಳಾದ ಜಿಮ್, ಸಲೂನ್, ಯೋಗಾ ಕೇಂದ್ರಗಳಿಗೆ ಈ ಹಿಂದೆ ಶೇ 18ರಷ್ಟು ತೆರಿಗೆ ಇತ್ತು. ಅದನ್ನು ಈಗ ಶೇ 5ಕ್ಕೆ ಇಳಿಸಲಾಗಿದೆ.

ಉಳಿದೆಲ್ಲಾ ದಿನಬಳಕೆ ವಸ್ತುಗಳು ಮತ್ತು ಸೇವಾ ವಲಯಗಳ ತೆರಿಗೆಯ ಜತೆಗೆ, ಪಾಪ್‌ಕಾರ್ನ್‌ ಬೆಲೆ ಏನಾಯಿತು ಎಂಬ ಪ್ರಶ್ನೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿವೆ. ಇದನ್ನು ಹಲವರು ತಮ್ಮದೇ ರೀತಿಯಲ್ಲಿ ಹಾಸ್ಯಭರಿತವಾಗಿ ಪ್ರಶ್ನಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.