ADVERTISEMENT

ದಾಖಲೆ ಕಂಡ ಷೇರುಪೇಟೆ ಸೂಚ್ಯಂಕ; ಇನ್ಫೊಸಿಸ್‌ ಷೇರು ದಿಢೀರ್‌ ಏರಿಕೆ

ನಿಫ್ಟಿ 12,000 ಸಮೀಪ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 6:40 IST
Last Updated 4 ನವೆಂಬರ್ 2019, 6:40 IST
ಷೇರುಪೇಟೆಯಲ್ಲಿ ಗೂಳಿ ಓಟ
ಷೇರುಪೇಟೆಯಲ್ಲಿ ಗೂಳಿ ಓಟ   

ಮುಂಬೈ: ಸತತ ಏಳನೇ ದಿನವೂ ದೇಶೀಯ ಷೇರುಪೇಟೆಯಲ್ಲಿ ಗೂಳಿ ಓಟ ಮುಂದುವರಿದಿದೆ. ಹೂಡಿಕೆದಾರರು ಸೋಮವಾರ ವಹಿವಾಟು ಆರಂಭದಿಂದಲೇ ಖರೀದಿ ಉತ್ಸಾಹ ತೋರಿದ್ದು, ಷೇರುಪೇಟೆ ಸಂವೇದಿ ಸೂಚ್ಯಂಕ ಹೊಸ ದಾಖಲೆಯನ್ನು ತಲುಪಿದೆ.

ಮುಂಬೈ ಷೇರುಪೇಟೆ(ಬಿಎಸ್‌ಇ) ಸಂವೇದಿ ಸೂಚ್ಯಂಕ, ಸೆನ್ಸೆಕ್ಸ್‌ 40,458 ಅಂಶಗಳನ್ನು ದಾಟುವ ಮೂಲಕ ಹೂಡಿಕೆದಾರರಲ್ಲಿ ಭರವಸೆ ಹೆಚ್ಚಿಸಿದೆ. ರಾಷ್ಟ್ರೀಯ ಷೇರುಪೇಟೆ(ಎನ್‌ಎಸ್‌ಇ) ಸಂವೇದಿ ಸೂಚ್ಯಂಕ ಸಹ ಶೇ 0.73ರಷ್ಟು ಏರಿಕೆ ಮೂಲಕ 12,000 ಅಂಶಗಳ ಸಮೀಪ‍ದಲ್ಲಿದೆ.

ಸಂಸ್ಥೆಯ ಆಡಳಿತ ವ್ಯವಹಾರಗಳ ವಿರುದ್ಧ ದೂರುಗಳು ದಾಖಲಾದ ಬೆನ್ನಲೇ ಇಳಿಮುಖವಾಗಿದ್ದ ಇನ್ಫೊಸಿಸ್‌ ಸಂಸ್ಥೆ ಷೇರುಗಳು ಇಂದು ದಿಢೀರ್‌ ಏರಿಕೆ ಕಂಡಿವೆ. ಪ್ರತಿ ಷೇ ₹681.80 ರಿಂದ ಆರಂಭವಾದ ಪ್ರತಿ ಷೇರಿನ ವಹಿವಾಟು ಬೆಲೆ ಸೂಚ್ಯಂಕದ ಓಟದೊಂದಿಗೆ ಬಹುಬೇಗ ₹700ರ ಗಡಿ ದಾಟಿತು. ಪ್ರಸ್ತುತ ₹720–₹724ರ ಬೆಲೆಯಲ್ಲಿ ವಹಿವಾಟು ನಡೆಯುತ್ತಿದೆ.

ADVERTISEMENT

ದೀರ್ಘಾವಧಿ ಬಂಡವಾಳ ಗಳಿಕೆ ಮೇಲಿನ ತೆರಿಗೆ, ಷೇರು ವಹಿವಾಟು ತೆರಿಗೆ ಹಾಗೂ ಲಾಭಾಂಶ ವಿತರಣೆ ಮೇಲಿನ ತೆರಿಗೆಗಳನ್ನು ಪರಿಷ್ಕರಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರದ ಮುಂದಿಡಲಾಗಿದೆ. ಮೂಲಸೌಕರ್ಯ ಅಭಿವೃದ್ಧಿಗಾಗಿ ಅಧಿಕ ಬಂಡವಾಳ ಹೂಡಿಕೆಗೆ ಸರ್ಕಾರ ಯೋಜನೆ ರೂಪಿಸುತ್ತಿರುವ ಅಂಶಗಳು ದೇಶಿ ಬಂಡವಾಳ ಹೂಡಿಕೆ ಚಟುವಟಿಕೆಯನ್ನು ಉತ್ತೇಜಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇನ್ಫೊಸಿಸ್‌ ಷೇರುಗಳು ಶೇ 4.73ರಷ್ಟು ಹಾಗೂ ವೇದಾಂತ ಲಿಮಿಟೆಡ್‌ ಷೇರುಗಳು ಶೇ 4.15ರಷ್ಟು ಗಳಿಕೆ ದಾಖಲಿಸಿವೆ. ಐದು ವಾರಗಳಲ್ಲಿಯೇ ಒಂದೇ ದಿನದ ವಹಿವಾಟಿನಲ್ಲಿ ಈ ಷೇರುಗಳು ಅತಿ ಹೆಚ್ಚು ಗಳಿಕೆ ಹೊಂದಿವೆ. ಬ್ಯಾಂಕಿಂಗ್‌ ವಲಯ ಹಾಗೂ ಐಟಿ ವಲಯದ ಷೇರುಗಳು ಏರಿಕೆ ಕಂಡಿವೆ.

ಭಾರತೀಯ ರೈಲ್ವೆ ಕೇಟರಿಂಗ್‌ ಮತ್ತು ಪ್ರವಾಸೋದ್ಯಮ ನಿಗಮದ (ಐಆರ್‌ಸಿಟಿಸಿ) ಪ್ರತಿ ಷೇರು ₹895–₹890ರ ನಡುವೆ ವಹಿವಾಟು ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.