ADVERTISEMENT

ಮಾರುಕಟ್ಟೆ ಮಹಾಪತನ: ಹೂಡಿಕೆದಾರರಿಗೆ ಕೆಲವೇ ನಿಮಿಷಗಳಲ್ಲಿ ₹20 ಲಕ್ಷ ಕೋಟಿ ನಷ್ಟ

ಪಿಟಿಐ
Published 7 ಏಪ್ರಿಲ್ 2025, 6:29 IST
Last Updated 7 ಏಪ್ರಿಲ್ 2025, 6:29 IST
<div class="paragraphs"><p>ಮಾರುಕಟ್ಟೆಪತನ: ಕೆಂಪಾಗಿ ಕಂಡ ಸೂಚ್ಯಂಕ (ಪ್ರಾತಿನಿಧಿಕ ಚಿತ್ರ)</p></div>

ಮಾರುಕಟ್ಟೆಪತನ: ಕೆಂಪಾಗಿ ಕಂಡ ಸೂಚ್ಯಂಕ (ಪ್ರಾತಿನಿಧಿಕ ಚಿತ್ರ)

   REUTERS/Andrew Kelly

ಮುಂಬೈ: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಸುಂಕ ನೀತಿಯ ಪರಿಣಾಮವಾಗಿ ಅಮೆರಿಕದಲ್ಲಿ ಹಣದುಬ್ಬರ ಹೆಚ್ಚಾಗಬಹುದು, ಅಲ್ಲಿ ಆರ್ಥಿಕ ಹಿಂಜರಿತ ಎದುರಾಗಬಹುದು ಎಂಬ ಲೆಕ್ಕಾಚಾರವು ಭಾರತದ ಷೇರುಪೇಟೆ ಹೂಡಿಕೆದಾರರಲ್ಲಿ ನಡುಕ ಸೃಷ್ಟಿಸಿದೆ.

ದೇಶದ ಷೇರುಪೇಟೆಗಳ ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್‌ ಮತ್ತು ನಿಫ್ಟಿ ಸೋಮವಾರದ ವಹಿವಾಟಿನಲ್ಲಿ ಭಾರಿ ಪ್ರಮಾಣದ ಕುಸಿತ ಕಂಡಿವೆ.

ADVERTISEMENT

ಟ್ರಂಪ್ ಅವರ ಸುಂಕ ನೀತಿ ಹಾಗೂ ಈ ನೀತಿಗೆ ಚೀನಾ ಕೈಗೊಂಡ ಪ್ರತೀಕಾರದ ಕ್ರಮಗಳ ಪರಿಣಾಮವಾಗಿ ಜಾಗತಿಕ ಆರ್ಥಿಕ ಬೆಳವಣಿಗೆಯು ಮಂದಗತಿಗೆ ತಿರುಗುವ ಭೀತಿ ಸೃಷ್ಟಿಯಾಗಿದೆ. ಇದು ಷೇರುಪೇಟೆಗಳಲ್ಲಿ ನಿರಾಶೆಯ ಕರಿಮೋಡಗಳು ಕವಿಯುವಂತೆ ಮಾಡಿದೆ. ದೇಶದ ಷೇರುಪೇಟೆ
ಗಳಲ್ಲಿ ಸೋಮವಾರ ದಾಖಲಾದ ಕುಸಿತವು ಐದು ವರ್ಷಗಳ ವಹಿವಾಟಿನಲ್ಲಿ ಕಂಡ ಭಾರಿ ಕುಸಿತಗಳ ಪೈಕಿ ಒಂದಾಗಿದೆ. ಷೇರು ಹೂಡಿಕೆದಾರರಿಗೆ ಇದೊಂದು ಕೆಟ್ಟ ದಿನವಾಗಿತ್ತು.

ಮುಂಬೈ ಷೇರುಪೇಟೆಯ (ಬಿಎಸ್‌ಇ) ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 10 ತಿಂಗಳ ಅತಿದೊಡ್ಡ ಕುಸಿತವನ್ನು ಸೋಮವಾರ ದಾಖಲಿಸಿತು. 2,226 ಅಂಶಗಳಷ್ಟು (ಶೇ 2.95ರಷ್ಟು) ಕುಸಿದ ಸೆನ್ಸೆಕ್ಸ್ 73,137 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ದಿನದ ವಹಿವಾಟಿನ ನಡುವಿನಲ್ಲಿ ಸೂಚ್ಯಂಕವು 3,939 ಅಂಶಗಳವರೆಗೂ ಇಳಿಕೆ ಕಂಡಿತ್ತು.

ಕಳೆದುಕೊಂಡಿದ್ದು ₹14 ಲಕ್ಷ ಕೋಟಿ

ದೇಶದ ಷೇರುಪೇಟೆಗಳಲ್ಲಿ ಹಣ ತೊಡಗಿಸಿದವರು ಸೋಮವಾರದ ವಹಿವಾಟಿನಲ್ಲಿ ಒಟ್ಟು ₹14 ಲಕ್ಷ ಕೋಟಿ ಕಳೆದುಕೊಂಡಿದ್ದಾರೆ.

ಬಿಎಸ್‌ಇ ನೋಂದಾಯಿತ ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯವು ಸೋಮವಾರದ ವಹಿವಾಟಿನ ಅಂತ್ಯಕ್ಕೆ ₹14.09 ಲಕ್ಷ ಕೋಟಿಯಷ್ಟು ಕಡಿಮೆ ಆಗಿದೆ.

ಅಮೆರಿಕ ಹೇರಿರುವ ಸುಂಕ ಮತ್ತು ಅದಕ್ಕೆ ಪ್ರತಿಯಾಗಿ ಇತರ ದೇಶಗಳು ತಾವೂ ಸುಂಕ ಹೇರುವ ಕ್ರಮವು ವಾಣಿಜ್ಯ ಸಮರಕ್ಕೆ ದಾರಿ ಮಾಡಿಕೊಡಬಹುದು ಎಂಬ ಭೀತಿಯಿಂದಾಗಿ ಮಾರುಕಟ್ಟೆಗಳು ಕುಸಿದಿವೆ. ಅಮೆರಿಕದಲ್ಲಿ ಹಣದುಬ್ಬರ ಹೆಚ್ಚಳ, ಬೆಳವಣಿಗೆ ಕುಂಠಿತವಾಗಿ ಆರ್ಥಿಕ ಹಿಂಜರಿತ ಎದುರಾಗುವ ಸಾಧ್ಯತೆಯ ಕಾರಣದಿಂದಾಗಿ ಐ.ಟಿ ಮತ್ತು ಲೋಹ ವಲಯದ ಷೇರುಗಳು ಹೆಚ್ಚು ಕುಸಿತ ಕಂಡಿವೆ.
-ವಿನೋದ್ ನಾಯರ್, ಜಿಯೋಜಿತ್‌ ಇನ್ವೆಸ್ಟ್‌ಮೆಂಟ್ಸ್‌ ಲಿಮಿಟೆಡ್‌ನ ಸಂಶೋಧನಾ ಮುಖ್ಯಸ್ಥ
ಅಮೆರಿಕ ಷೇರುಪೇಟೆಗಳಲ್ಲಿ ಶುಕ್ರವಾರ ಕಂಡುಬಂದ ಕುಸಿತದ ನಂತರ, ವಿಶ್ವದ ಇತರ ಸೂಚ್ಯಂಕಗಳು ಕುಸಿಯುವುದು ಖಚಿತವಾಗಿತ್ತು. ಇಸ್ಪೀಟಿನ ಕಾರ್ಡ್‌ ಬಳಸಿ ಕಟ್ಟಿದ ಮನೆ ಕುಸಿದುಬಿದ್ದಂತೆ ಅವೂ ಕುಸಿದವು. ಟ್ರಂಪ್ ಘೋಷಿಸಿರುವ ಪ್ರತಿಸುಂಕವು ಆರ್ಥಿಕ ಹಿಂಜರಿತಕ್ಕೆ ಕಾರಣವಾಗಬಹುದು ಎಂಬ ಭೀತಿ ಮನೆಮಾಡಿದೆ.
-ಪ್ರಶಾಂತ್ ತಾಪ್ಸೆ ಮೆಹ್ತಾ ಈಕ್ಟಿಟೀಸ್‌ ಲಿಮಿಟೆಡ್‌ನ ಸಂಶೋಧನಾ ವಿಭಾಗದ ಹಿರಿಯ ಉಪಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.