ADVERTISEMENT

ಬೆಂಗಳೂರು | ಸುಮ್ಮನೇ ವಾಹನ ತಡೆದು ತಪಾಸಣೆ: ಚಾಲಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 23:40 IST
Last Updated 23 ಜನವರಿ 2026, 23:40 IST
ವಿಶೇಷ ಕಾರ್ಯಾಚರಣೆಯ ವೇಳೆ ಮದ್ಯಪಾನ ಮಾಡಿ ಶಾಲಾ ವಾಹನ ಚಾಲನೆ ಮಾಡುತ್ತಿದ್ದವರನ್ನು ತಪಾಸಣೆಗೆ ಒಳಪಡಿಸಲಾಯಿತು   
ವಿಶೇಷ ಕಾರ್ಯಾಚರಣೆಯ ವೇಳೆ ಮದ್ಯಪಾನ ಮಾಡಿ ಶಾಲಾ ವಾಹನ ಚಾಲನೆ ಮಾಡುತ್ತಿದ್ದವರನ್ನು ತಪಾಸಣೆಗೆ ಒಳಪಡಿಸಲಾಯಿತು      

ಬೆಂಗಳೂರು: ನಗರದಲ್ಲಿನ ಜಂಕ್ಷನ್‌ಗಳು, ಅಡ್ಡ ರಸ್ತೆಗಳಲ್ಲಿ ಹಗಲು ಹಾಗೂ ರಾತ್ರಿ ವೇಳೆ ಸಂಚಾರ ಪೊಲೀಸರು ದಿಢೀರ್ ಪ್ರತ್ಯಕ್ಷರಾಗುತ್ತಿದ್ದಾರೆ. ದ್ವಿಚಕ್ರ ವಾಹನದಿಂದ ಕೆಳಗೆ ಇಳಿಯುವಂತೆ ಸವಾರರಿಗೆ ಸೂಚಿಸುತ್ತಾರೆ. ದಾಖಲೆಗಳನ್ನು ಕೇಳುವ ಹಾಗೂ ಮದ್ಯ ಸೇವನೆ ಮಾಡಿದ್ದಾರೆಯೇ ಎಂದು ಪರಿಶೀಲಿಸುವ ನೆಪದಲ್ಲಿ ಸುಮ್ಮನೇ ಕಿರಿಕಿರಿ ಉಂಟು ಮಾಡುತ್ತಿದ್ದಾರೆ ಎಂದು ಸವಾರರು ಹಾಗೂ ವಾಹನ ಚಾಲಕರು ಆರೋಪಿಸಿದ್ದಾರೆ.

ಕಳೆದ ವರ್ಷದ ಮೇನಲ್ಲಿ ಮಂಡ್ಯದಲ್ಲಿ ತಂದೆ ಹಾಗೂ ತಾಯಿ, ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ತಪಾಸಣೆಯ ನೆಪದಲ್ಲಿ ಸಂಚಾರ ಪೊಲೀಸರು ಬೈಕ್ ತಡೆದಿದ್ದರು. ಆ ಗಡಿಬಿಡಿಯಲ್ಲಿ ಬೈಕ್‌, ಸವಾರನ ನಿಯಂತ್ರಣ ತಪ್ಪಿತ್ತು. ಮಗು ಕೆಳಕ್ಕೆ ಬಿದ್ದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಮಗು ಮೃತಪಟ್ಟಿತ್ತು. ಮೈಸೂರು–ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ವಾಹನ ತಡೆದು ನೂರಾರು ಮಂದಿ ಪ್ರತಿಭಟನೆ ನಡೆಸಿದ್ದರು.

ಅದರ ಬೆನ್ನಲ್ಲೇ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಅವರು ‘ಸಕಾರಣವಿದ್ದರಷ್ಟೇ ವಾಹನಗಳ ದಾಖಲೆಗಳನ್ನು ಪೊಲೀಸರು ಪರಿಶೀಲನೆ ನಡೆಸಬೇಕೇ ವಿನಃ, ಅನಗತ್ಯವಾಗಿ ತಪಾಸಣೆ ನಡೆಸಬಾರದು’ ಎಂದು ಆದೇಶ ಹೊರಡಿಸಿದ್ದರು. ಆದರೆ, ಆದೇಶ ಪಾಲನೆ ಆಗುತ್ತಿಲ್ಲ’ ಎಂದು ಸವಾರರು ಆಕ್ರೋಶ ಹೊರಹಾಕಿದ್ದಾರೆ.

ADVERTISEMENT

ಕೀ ಕಸಿದುಕೊಳ್ಳುತ್ತಾರೆ: ‘ತಪಾಸಣೆಯ ನೆಪದಲ್ಲಿ ವಾಹನ ಅಡ್ಡಹಾಕುತ್ತಿದ್ದಾರೆ. ನಾವು ಕಚೇರಿಗೆ ಹೋಗಬೇಕು ಎಂದು ಮನವಿ ಮಾಡಿದ್ದರೂ ಕೇಳುವುದಿಲ್ಲ. ಕೆಲವೊಮ್ಮೆ ಗಾಬರಿಯಿಂದ ದ್ವಿಚಕ್ರ ವಾಹನಗಳಿಂದ ಬೀಳುವ ಅಪಾಯ ಇರುತ್ತದೆ’ ಎಂದು ಸವಾರ ಸೋಮಶೇಖರ್ ಅಳಲು ತೋಡಿಕೊಂಡಿದ್ದಾರೆ.

ಕೆ.ಆರ್‌.ಮಾರುಕಟ್ಟೆ, ಜಾಲಹಳ್ಳಿ ಕ್ರಾಸ್‌, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್‌, ಬಸವೇಶ್ವರ ನಗರ, ಕೆಂಗೇರಿ, ನಾಯಂಡಹಳ್ಳಿ, ಮೈಸೂರು ರಸ್ತೆ ಬಿಎಚ್‌ಇಎಲ್‌, ಹಳೆ ಮದ್ರಾಸ್‌ ರಸ್ತೆಯ ಎನ್‌ಜಿಎಫ್‌ ವೃತ್ತದಿಂದ ಎಡಕ್ಕೆ ತಿರುಗುವ ಬಳಿ, ಎಚ್‌ಇಎಲ್‌ಗೆ ಹೋಗುವ ಬಲ ಭಾಗದ ಜಂಕ್ಷನ್‌, ಬೈಯಪ್ಪನಹಳ್ಳಿ ಪೊಲೀಸ್‌ ಠಾಣೆ ಎದುರು, ನಾಗವಾರ ಪಾಳ್ಯದ ಕೇಂದ್ರೀಯ ವಿದ್ಯಾಲಯದ ಎದುರು, ಯಶವಂತಪುರ ಬಸ್‌ ನಿಲ್ದಾಣದ ಬಳಿ, ರಾಜಕುಮಾರ್ ರಸ್ತೆಗೆ ಸಾಗುವ ಮಾರ್ಗದಲ್ಲಿ, ಸ್ಯಾಂಕಿ ಟ್ಯಾಂಕಿ ಬಳಿ, ಮಲ್ಲೇಶ್ವರದ 18ನೇ ರಸ್ತೆ, ಓಕಳಿಪುರದ ಕೆಲವು ಭಾಗದಲ್ಲಿ ಸಂಚಾರ ಪೊಲೀಸರು ಹೆಚ್ಚಾಗಿ ತಪಾಸಣೆ ನಡೆಸುತ್ತಿದ್ದಾರೆ’ ಎಂದು ಸವಾರರು ಹೇಳಿದ್ದಾರೆ.

‘ಕೆಲವು ಜಂಕ್ಷನ್‌ಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದರೂ ಅತ್ತಗಮನ ಹರಿಸದೇ ಸುಮ್ಮನೇ ವಾಹನ ತಡೆಯುವಲ್ಲಿ ಸಂಚಾರ ಪೊಲೀಸರು ಮಗ್ನರಾಗಿರುತ್ತಾರೆ. ಮಾರ್ಗಸೂಚಿ ಪಾಲಿಸುವಂತೆ ಹಿರಿಯ ಅಧಿಕಾರಿಗಳು ಸಿಬ್ಬಂದಿಗೆ ಸೂಚನೆ ನೀಡಬೇಕು’ ಎಂದು ಸವಾರರು ಮನವಿ ಮಾಡಿದ್ದಾರೆ.  

26 ಚಾಲಕರ ವಿರುದ್ಧ ಪ್ರಕರಣ

ಬೆಂಗಳೂರು: ಮದ್ಯಪಾನ ಮಾಡಿ ಶಾಲಾ ವಾಹನ ಚಾಲನೆ ಮಾಡುತ್ತಿದ್ದ 26 ಚಾಲಕರ ವಿರುದ್ಧ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶುಕ್ರವಾರ ಬೆಳಿಗ್ಗೆ 7ರಿಂದ 10ರ ವರೆಗೆ ವಿಶೇಷ ಕಾರ್ಯಾಚರಣೆ ನಡೆಸಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದವರ ವಿರುದ್ಧ ಐಎಂವಿ ಕಾಯ್ದೆ ಅಡಿ ಪ್ರಕರಣ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಕಾರ್ಯಾಚರಣೆ ವೇಳೆ 5110 ವಾಹನಗಳನ್ನು ತಪಾಸಣೆ ನಡೆಸಲಾಯಿತು. ನಿಯಮ ಉಲ್ಲಂಘಿಸಿದ ಚಾಲಕರ ಡಿಎಲ್‌ ಅಮಾನತು ಮಾಡುವಂತೆ ಆರ್‌ಟಿಒ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು. 5458 ಪ್ರಕರಣ ದಾಖಲು: ರಸ್ತೆ ಅಪಘಾತಗಳನ್ನು ತಡೆಗಟ್ಟುವ ಉದ್ದೇಶದಿಂದ ಏಕಮುಖ ರಸ್ತೆಗಳಲ್ಲಿ ವಿರುದ್ಧವಾಗಿ ವಾಹನಗಳನ್ನು ಚಲಾಯಿಸುವ ಚಾಲಕರು ಹಾಗೂ ಸವಾರರ ವಿರುದ್ಧ ಬುಧವಾರ ಹಾಗೂ ಗುರುವಾರ ವಿಶೇಷ ಕಾರ್ಯಾಚರಣೆ ನಡೆಸಿ 5458 ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

‘ಸುಮ್ಮನೇ ವಾಹನ ತಡೆದರೆ ಅಮಾನತು’

‘ಬೆಳಿಗ್ಗೆ 7ರಿಂದ 11ರ ವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 10ರ ದಟ್ಟಣೆ ಅವಧಿಯಿದೆ. ಆ ಸಮಯದಲ್ಲಿ ವಾಹನಗಳನ್ನು ತಡೆದು ತಪಾಸಣೆ ಮಾಡುವಂತಿಲ್ಲ. ಆ ಅವಧಿ ಹೊರತು ಪಡಿಸಿಯೂ ಉಳಿದ ಸಮಯದಲ್ಲೂ ಸುಮ್ಮನೇ ವಾಹನ ತಡೆದು ತಪಾಸಣೆ ನಡೆಸುವಂತಿಲ್ಲ. ಸುಮ್ಮನೇ ವಾಹನ ತಡೆದವರನ್ನು ಅಮಾನತು ಮಾಡಲಾಗುವುದು’ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್‌ ಕಮಿಷನರ್ ಕಾರ್ತಿಕ್‌ ರೆಡ್ಡಿ ಎಚ್ಚರಿಸಿದ್ದಾರೆ.  ‘ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಕಂಡುಬಂದಾಗ ಮಾತ್ರವೇ ವಾಹನಗಳನ್ನು ನಿಲ್ಲಿಸಿ ಪ್ರಕರಣ ದಾಖಲಿಸಬೇಕು. ಕಡ್ಡಾಯವಾಗಿ ಬಾಡಿವೋರ್ನ್ ಕ್ಯಾಮೆರಾ ಧರಿಸಿರಬೇಕು. ಸಾರ್ವಜನಿಕರ ಜತೆಗೆ ಸೌಜನ್ಯದಿಂದ ವರ್ತನೆ ಮಾಡುವಂತೆಯೂ ಸೂಚನೆ ನೀಡಲಾಗಿದೆ’ ಎಂದು ಹೇಳಿದರು. ‘ಏಕಮುಖ ಸಂಚಾರ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿರುವ ಪ್ರಕರಣಗಳು ನಗರದಲ್ಲಿ ಹೆಚ್ಚಾಗಿವೆ. ಇದರಿಂದ ಅಪಘಾತ ಸಂಭವಿಸುತ್ತಿವೆ’ ಎಂದು ಹೇಳಿದರು.

ಮಾರ್ಗಸೂಚಿ ಏನು?

* ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಕಂಡುಬಂದಾಗ ಮಾತ್ರವೇ ವಾಹನಗಳನ್ನು ನಿಲ್ಲಿಸಿ ಪ್ರಕರಣ ದಾಖಲಿಸಬೇಕು

* ಹೆದ್ದಾರಿಗಳಲ್ಲಿ ಜಿಗ್ ಜಾಗ್ ಬ್ಯಾರಿಕೇಡ್‌ಗಳನ್ನು ಹಾಕಿ ವಾಹನಗಳನ್ನು ತಡೆಯಬಾರದು

* ರಸ್ತೆಮಧ್ಯೆ ದಿಢೀರ್ ಅಡ್ಡ ಬಂದು ವಾಹನ ನಿಲ್ಲಿಸುವಂತೆ ಹೇಳಬಾರದು ಹಾಗೂ ಬೈಕ್‌ನ ಹಿಂಬದಿ ಸವಾರನನ್ನು ಹಿಡಿದು ಎಳೆಯುವುದು ವಾಹನದ ಕೀಲಿ ಕೈ ತೆಗೆದುಕೊಳ್ಳುವುದನ್ನು ಮಾಡಬಾರದು

* ವೇಗವಾಗಿ ವಾಹನ ಚಲಾಯಿಸಿಕೊಂಡು ಬರುವ ಸವಾರರನ್ನು ಬೆನ್ನಟ್ಟದೇ ಆ ವಾಹನಗಳ ನೋಂದಣಿ ಸಂಖ್ಯೆ ಗುರುತು ಮಾಡಿ ವಿವಿಧ ನಿಯಂತ್ರಣ ಕೊಠಡಿಗಳಿಗೆ ಮಾಹಿತಿ ರವಾನಿಸಿ ವಾಹನ ಸವಾರನ ಪತ್ತೆಹಚ್ಚಿ ಪ್ರಕರಣ ದಾಖಲಿಸಬೇಕು

* ವಾಹನಗಳ ತಪಾಸಣೆ ವೇಳೆ ಪೊಲೀಸರು ಸುರಕ್ಷತೆಗಾಗಿ ರಿಫ್ಲೆಕ್ಟಿವ್ ಜಾಕೆಟ್ ಧರಿಸಬೇಕು ಮತ್ತು ಬಾಡಿ ವೋರ್ನ್ ಕ್ಯಾಮೆರಾ ಧರಿಸಬೇಕು

* ರಾಜ್ಯ ರಾಷ್ಟ್ರೀಯ ಹೆದ್ದಾರಿ ಹಾಗೂ ಇತರೆ ರಸ್ತೆಗಳಲ್ಲಿ ಯಾವುದೇ ಕಾರಣಕ್ಕೂ ಅತಿ ವೇಗವಾಗಿ ಚಲಿಸುವ ವಾಹನಗಳನ್ನು ತಡೆಯುವ ಪ್ರಯತ್ನ ಮಾಡಬಾರದು ಹಾಗೂ ಇಂತಹ ವಾಹನಗಳ ವಿರುದ್ಧ ಎಫ್‌ಟಿವಿಆರ್ ದಾಖಲಿಸಲು ತಂತ್ರಜ್ಞಾನ ಆಧಾರಿತ ನಿಯಮಗಳನ್ನು ಅನುಸರಿಸಬೇಕು

* ರಾತ್ರಿ ಮತ್ತು ತಡರಾತ್ರಿಯಲ್ಲಿ ಸಂಚಾರ ಜಂಕ್ಷನ್ ಬದಿಯೇ ವಾಹನ ತಪಾಸಣೆ ಮಾಡಬೇಕು

* ವಾಹನ ವೇಗ ತಗ್ಗಿಸಲು ತಪಾಸಣೆ ಸ್ಥಳದ ಸುಮಾರು 100–150 ಮೀಟರ್‌ ಮೊದಲೇ ರಿಫ್ಲೆಕ್ಟಿವ್ ರಬ್ಬರ್ ಕೋನ್‌ ಮತ್ತು ಸುರಕ್ಷತಾ ಸಲಕರಣೆ ಅಳವಡಿಸಿರಬೇಕು

ದಟ್ಟಣೆ ತಗ್ಗಿಸಲು ತಂತ್ರಜ್ಞಾನದ ಮೊರೆ 

ಲಭ್ಯವಿರುವ ಸಂಪನ್ಮೂಲಗಳು ತಂತ್ರಜ್ಞಾನ ಸಿಬ್ಬಂದಿ ಬಳಸಿಕೊಂಡು ನಗರದಲ್ಲಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್‌ ಹೇಳಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು ‘ಬೆಳೆಯುತ್ತಿರುವ ಜನಸಂಖ್ಯೆ ಹಾಗೂ ವಾಹನಗಳ ಸಂಖ್ಯೆಯು ನಗರದ ಸಂಚಾರ ದಟ್ಟಣೆಗೆ ಪ್ರಮುಖ ಕಾರಣವಾಗಿದೆ. ಬೆಂಗಳೂರು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದು ಇದರಿಂದ ಸಂಚಾರ ದಟ್ಟಣೆ ಉಂಟಾಗುವುದು ಸಹಜ. ಬೆಳಿಗ್ಗೆ ಸಂಜೆಯಲ್ಲಿ ದಟ್ಟಣೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು.

‘ನೆದರ್‌ಲ್ಯಾಂಡ್‌ನ ‘ಟಾಮ್‌ಟಾಮ್‌’ ಸಂಸ್ಥೆ ಬಿಡುಗಡೆ ಮಾಡಿರುವ ಸಂಚಾರ ಸೂಚ್ಯಂಕದಲ್ಲಿ ಬೆಂಗಳೂರು ಎರಡನೇ ದಟ್ಟಣೆಯ ನಗರವಾಗಿದೆ ಎಂಬುದಾಗಿ ಉಲ್ಲೇಖವಾಗಿದೆ. ಈ ಸಮೀಕ್ಷೆಯ ವರದಿಯನ್ನು ವಿವರವಾಗಿ ಗಮನಿಸಲಿಲ್ಲ. ಇಲ್ಲಿನ ವಸ್ತುಸ್ಥಿತಿಯ ಅರಿವು ನಮಗಿದೆ. ಈಗಾಗಲೇ ನಮ್ಮ ಸಂಚಾರ ಪೊಲೀಸರು ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳ್ನು ಬಳಸಿ ಸಂಚಾರ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿದ್ದಾರೆ. ಹೆಚ್ಚು ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳ ಬಳಕೆಯಾದರೆ ಸಂಚಾರ ದಟ್ಟಣೆ ನಿಯಂತ್ರಿಸಬಹುದು’ ಎಂದು ಹೇಳಿದರು.

‘ಸಾರ್ವಜನಿಕ ಸಾರಿಗೆಗಳ ಬಳಕೆಗೆ ಉತ್ತೇಜನ ನೀಡಲಾಗುತ್ತಿದೆ. ಕೆಲವೊಮ್ಮೆ ಒಂದು ವಾಹನದಲ್ಲಿ ಒಬ್ಬರೇ ಪ್ರಯಾಣಿಸುವುದು ನೋಡುತ್ತೇವೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳು ಮತ್ತಷ್ಟು ವಿಸ್ತಾರವಾಗುತ್ತಿದ್ದು ಇದರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮವಾಗಿ ಸಂಚಾರ ದಟ್ಟಣೆ ನಿರ್ವಹಣೆ ಸಾಧ್ಯವಾಗಲಿದೆ. ಸಮೀಕ್ಷೆಯ ವರದಿಲ್ಲಿರುವ ಅಂಶವನ್ನು ಸಕಾರಾತ್ಮಕವಾಗಿ ಪರಿಗಣಿಸಿ ಉತ್ತಮ ಸಂಚಾರ ನಿರ್ವಹಣೆಗೆ ಆದ್ಯತೆ ನೀಡಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.